ಕತಾರ್ ಎದುರು ಭಾರತದ ವೀರೋಚಿತ ಪ್ರದರ್ಶನ: ಭಾರತೀಯ ಫುಟ್ಬಾಲ್​ಗೆ ಇಗೋರ್ ಸ್ಟಿಮಾಚ್ ಹೊಸ ಹೀರೋ

FIFA World Cup Asian Qualifiers | ಫುಟ್ಬಾಲ್ ವಿಶ್ವಕಪ್​ಗೆ ಭಾರತ ಅರ್ಹತೆ ಗಿಟ್ಟಿಸುವ ಕಲ್ಪನೆಯೇ ಅದ್ಭುತವಾದುದು. ನೂತನ ಕೋಚ್ ಇಗೋರ್ ಸ್ಟಿಮಾಚ್ ಅವರು ಇಂಥದ್ದೊಂದು ಗುರಿಯೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ. ಭಾರತೀಯ ಫುಟ್ಬಾಲ್ ಮಟ್ಟಿಗೆ ಅವರು ಹೊಸ ನಿರೀಕ್ಷೆ ಹುಟ್ಟಿಸಿದ್ದಾರೆ.

Vijayasarthy SN | news18
Updated:September 12, 2019, 7:34 PM IST
ಕತಾರ್ ಎದುರು ಭಾರತದ ವೀರೋಚಿತ ಪ್ರದರ್ಶನ: ಭಾರತೀಯ ಫುಟ್ಬಾಲ್​ಗೆ ಇಗೋರ್ ಸ್ಟಿಮಾಚ್ ಹೊಸ ಹೀರೋ
ಇಗೋರ್ ಸ್ಟಿಮಾಚ್
  • News18
  • Last Updated: September 12, 2019, 7:34 PM IST
  • Share this:
ಕ್ರೊವೇಷಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಇಗೋರ್ ಸ್ಟಿಮಾಚ್ ಅವರು ಭಾರತ ತಂಡದ ಕೋಚ್ ಆದ ಬಳಿಕ ಮ್ಯಾಜಿಕ್ ಸ್ಪರ್ಶವಾದಂತಿದೆ. ಹಿಂದಿನ ಕೋಚ್ ಸ್ಟೀಫನ್ ಕಾನ್ಸ್​ಟೆಂಟೈನ್ ಅವಧಿಯಲ್ಲಿ ರ್ಯಾಂಕಿಂಗ್ ಗಣಿಕೆಯಲ್ಲಿ ಭಾರತ ತಂಡ ಉತ್ತುಂಗ ತಲುಪಿತ್ತು. ಈಗ ಸ್ಟಿಮಾಚ್ ಅವಧಿಯಲ್ಲಿ ತಂಡ ಹೊಸ ಲಯ ಕಂಡುಕೊಂಡಂತಿದೆ. ವಿಶ್ವಕಪ್ ಕ್ವಾಲಿಫಯರ್ ಟೂರ್ನಿಯಲ್ಲಿ ಏಷ್ಯಾ ಚಾಂಪಿಯನ್ಸ್ ಕತಾರ್ ಎದುರು ಭಾರತ ತಂಡ ಡ್ರಾ ಸಾಧಿಸಿದ್ದು ಇದಕ್ಕೆ ಒಂದು ನಿದರ್ಶನವಾಗಿದ್ದಂತಿದೆ.

ಇ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಓಮನ್ ಎದುರು 1-2 ಗೋಲಿನಿಂದ ಸೋತರೂ ಭಾರತ ತಂಡ ಬಹುತೇಕ ಅವಧಿಯಲ್ಲಿ ಗೆಲ್ಲುವ ಕುದುರೆಯಾಗಿಯೇ ಕಾಣಿಸಿತ್ತು. ಕೊನೆಯ ಕೆಲ ನಿಮಿಷಗಳಲ್ಲಿ ಎದುರಾಳಿಗಳಿಂದ ಮಿಂಚಿನಂತೆ 2 ಗೋಲು ಬರದೇಹೋಗಿದ್ದರೆ ಭಾರತಕ್ಕೆ ಅಮೂಲ್ಯ 3 ಅಂಕಗಳು ದಕ್ಕುತ್ತಿದ್ದವು. ಅದಾದ ಬಳಿಕ ಮೊನ್ನೆ ನಡೆದ ತನ್ನ ಎರಡನೇ ಪಂದ್ಯದಲ್ಲಿ ಅಪಾಯಕಾರಿ ಕತಾರ್​ಗೆ ಒಂದೂ ಗೋಲು ಬಿಟ್ಟುಕೊಡದಿದ್ದುದು ಭಾರತದ ವೀರೋಚಿತ ಪ್ರದರ್ಶನವೆಂದೇ ಬಣ್ಣಿತವಾಗುತ್ತಿದೆ. ಈ ಪಂದ್ಯದಲ್ಲಿ ಕತಾರ್ 10ಕ್ಕೂ ಹೆಚ್ಚು ಬಾರಿ ಗೋಲು ಗಳಿಸುವ ಸಮೀಪಕ್ಕೆ ಹೋಗಿತ್ತಾದರೂ ಗೋಲ್​ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಅಮೋಘ ಕೀಪಿಂಗ್ ನಮ್ಮ ತಂಡವನ್ನು ಬಚಾವ್ ಮಾಡಿದ್ದು ನಿಜ. ಆದರೆ, ಅದರ ಜೊತೆಗೆ ಭಾರತ ತಂಡದ ಆಟಗಾರರ ಎದೆಗುಂದದ ಪ್ರದರ್ಶನವೂ ಅಷ್ಟೇ ಮುಖ್ಯವಾಯಿತು ಮತ್ತು ಗಮನ ಸೆಳೆಯಿತು.

ಇದನ್ನೂ ಓದಿ: ಟೀಂ ಇಂಡಿಯಾ ಪರ ಆಡಲು ವಿದೇಶಿ ತಂಡದ ನಾಯಕತ್ವ ತೊರೆದ ಯುವ ಕ್ರಿಕೆಟಿಗ

ಇದಕ್ಕೆಲ್ಲಾ ಪ್ರಮುಖ ಕಾರಣ ಕೋಚ್ ಇಗೋರ್ ಸ್ಟಿಮಾಚ್ ಅವರು ತಂದ ತಲಸ್ಪರ್ಶಿ ಬದಲಾವಣೆಗಳು. ಕ್ವಾಲಿಫಯರ್ ಟೂರ್ನಿಗೆ ಮುನ್ನ ನಡೆದ ಎರಡು ಟೂರ್ನಿಗಳಲ್ಲಿ ಕೋಚ್ ಅವರು ಸೂಕ್ತ ಆಟಗಾರರನ್ನು ಹೆಕ್ಕಲು ಸಕಲ ರೀತಿಯ ಪ್ರಯೋಗಗಳನ್ನು ಮತ್ತು ನಿರಂತರ ಬದಲಾವಣೆಗಳನ್ನು ಮಾಡುತ್ತಲೇ ಹೋದರು. ಅದರ ಫಲವಾಗಿ ತಂಡಕ್ಕೆ ನಿರೀಕ್ಷಿತ ಗೆಲುವು ದಕ್ಕದೇ ಹೋದರೂ ಆಟದ ಲಯದಲ್ಲಿ ಪರಿವರ್ತನೆಗಳಾಗುತ್ತಿದ್ದುದು ಫುಟ್ಬಾಲ್ ಪ್ರಿಯರ ಗಮನಕ್ಕೆ ಬಾರದೇ ಹೋಗಲಿಲ್ಲ.

“ಕೋಚ್ ಎಲ್ಲವನ್ನೂ ಬದಲಾಯಿಸಿಬಿಟ್ಟಿದ್ದಾರೆ. ಆನ್ ಪಿಚ್ ಮತ್ತು ಆಫ್ ಪಿಚ್​ನಲ್ಲಿ ನಮ್ಮ ಧೋರಣೆಯನ್ನು ಅವರು ಬದಲಾಯಿಸಿದ್ದಾರೆ. ಅವರಿಗೆ ಹೆಮ್ಮೆ ತರುವಂತೆ ನಾವು ಆಡಲು ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ. ಈ ಸಾಧನೆ ಮಾಡಲು ಅವರ ಮಾರ್ಗದರ್ಶನವೇ ಕಾರಣ” ಎಂದು ಯುವ ಮಿಡ್​ಫೀಲ್ಡರ್ ಅನಿರುದ್ಧ್ ಥಾಪ ಹೇಳುತ್ತಾರೆ.

ಇದನ್ನೂ ಓದಿ: ದಕ್ಷಿಣಾ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯಕ್ಕೆ ಟೀಂ ಇಂಡಿಯಾ ತಂಡ ಪ್ರಕಟ; ಗಿಲ್​ ಇನ್​, ರಾಹುಲ್​ ಔಟ್

ಕತಾರ್ ವಿರುದ್ಧದ ಪಂದ್ಯದ ಬಳಿಕ ಅನಿರುದ್ಧ್ ಥಾಪ ವ್ಯಕ್ತಪಡಿಸಿದ ಸಂತಸದ ಮಾತುಗಳಿವು. ಅದಿಲ್ ಖಾನ್, ಸಹಾಲ್ ಅಬ್ದುಲ್ ಸಮದ್, ಮಂದಾರ್ ರಾವ್ ದೇಸಾಯಿ ಮೊದಲಾದ ಯುವ ಆಟಗಾರರೂ ಕೂಡ ಕೋಚ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಕತಾರ್ ವಿರುದ್ಧದ ಪಂದ್ಯದಲ್ಲಿ ಆಡದೇ ಹೋದರೂ ಸ್ಟಾರ್ ಆಟಗಾರ ಸುನೀಲ್ ಛೇಟ್ರಿ ಅವರೂ ಕೂಡ ತಮ್ಮ ಆಟಗಾರರು ಹಾಗೂ ಕೋಚ್ ಅವರ ಗುಣಗಾನ ಮಾಡಿದ್ದಾರೆ.ಕೋಚ್ ಇಗೋರ್ ಸ್ಟಿಮಾಚ್ ಅವರ ಫುಟ್ಬಾಲ್ ಮಂತ್ರ ಮತ್ತು ತಂತ್ರ ಭಾರತದ ಮಟ್ಟಿಗೆ ತುಸು ವಿಭಿನ್ನ. ಚೆಂಡನ್ನು ದೂರಕ್ಕೆ ಹೊಡೆದು ಫೀಲ್ಡ್ ಕ್ಲಿಯರ್ ಮಾಡುವ ಲಾಂಗ್ ಪಾಸ್ ಆಟಕ್ಕೆ ಭಾರತೀಯ ಫುಟ್ಬಾಲ್ ಒಗ್ಗಿಹೋಗಿತ್ತು. ಸ್ಟಿಮಾಚ್ ಅವರು ತಮಗೆ ಸಿಕ್ಕ ಅಲ್ಪಾವಧಿಯಲ್ಲಿ ಇದನ್ನು ಬದಲಾಯಿಸಿದ್ದಾರೆ. ಡಿಫೆಂಡಿಂಗ್ ಸ್ಥಾನದಿಂದಲೇ ಪಾಸಿಂಗ್ ಗೇಮ್ ಮೂಲಕ ಚೆಂಡನ್ನು ನಿಯಂತ್ರಿಸುತ್ತಾ ಎದುರಾಳಿ ಗೋಲುಪೆಟ್ಟಿಗೆಯತ್ತ ಕೊಂಡೊಯ್ಯುವುದು ಸ್ಟಿಮಾಚ್ ಅವರ ಫುಟ್ಬಾಲ್ ಮೂಲ ಮಂತ್ರವಾಗಿದೆ.

ಇದನ್ನೂ ಓದಿ: ಕ್ರಿಕೆಟ್ ಜಗತ್ತಿನಲ್ಲಿ ಡಬಲ್ ಹ್ಯಾಟ್ರಿಕ್: ಹೊಸ ಇತಿಹಾಸ ಬರೆದ ಆಸ್ಟ್ರೇಲಿಯನ್ ಬೌಲರ್

ಇದರ ಜೊತೆಗೆ ಇಗೋರ್ ಸ್ಟಿಮಾಚ್ ಅವರು ಆಟಗಾರರ ತಾಂತ್ರಿಕ ನೈಪುಣ್ಯತೆಗೆ ಹಾಗೂ ದೈಹಿಕ ಕ್ಷಮತೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಆಟಗಾರರ ಫಿಟ್ನೆಸ್ ಮಟ್ಟವು ಕತಾರ್ ವಿರುದ್ಧದ ಪಂದ್ಯದಲ್ಲಿ ಎದ್ದಗಾಣುತ್ತಿತ್ತು. ಹಾಗೆಯೇ ಬ್ರಾಂಡಾನ್ ಫರ್ನಾಂಡಿಸ್, ನಿಖಿಲ್ ಪೂಜಾರಿ, ಮಂದಾರ್ ದೇಸಾಯಿ, ಅನಿರುದ್ಧ್ ಥಾಪ ಮೊದಲಾದ ತಾಂತ್ರಿಕವಾಗಿ ನಿಪುಣರಾದ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು ಬದಲಾವಣೆ ಪ್ರಾರಂಭಿಸಿದ್ದಾರೆ.

ಕತಾರ್ ವಿರುದ್ಧದ ಪಂದ್ಯಕ್ಕೆ ಕೋಚ್ ಸ್ಟಿಮಾಚ್ ಸಾಕಷ್ಟು ಹೋಮ್​ವರ್ಕ್ ಮಾಡಿದ್ದೂ ಗಮನಾರ್ಹ. ಅವರೇ ಹೇಳುವಂತೆ ಕತಾರ್​ನ ಕೆಲ ಅಪಾಯಕಾರಿ ಆಟಗಾರರು ಗೋಲು ಗಳಿಸಲು ಸಾಧ್ಯವಾಗದಂತೆ ವ್ಯೂಹ ರಚಿಸಿದ್ದರು. ಇದು ಬಹುತೇಕ ವರ್ಕೌಟ್ ಆಯಿತು. ಭಾರತಕ್ಕಿಂತ ಮುಂಚೆ ಆಫ್ಘಾನಿಸ್ತಾನ ವಿರುದ್ಧ ಆಡಿದ್ದ ಪಂದ್ಯದಲ್ಲಿ ಕತಾರ್ ಬರೋಬ್ಬರಿ 6-0 ಗೋಲುಗಳಿಂದ ಸದೆ ಬಡಿದಿತ್ತು. ಈ ಹಿನ್ನೆಲೆಯಲ್ಲಿ ಭಾರತ ತಂಡ ಈ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದ್ದು ನಿಸ್ಸಂಶಯವಾಗಿ ಅಮೋಘ ಪ್ರದರ್ಶನವೇ ಆಗಿದೆ.

ಇದನ್ನೂ ಓದಿ: ಪಾಕ್ ಆಟಗಾರನ ವಿಶ್ವ ದಾಖಲೆ ಮುರಿದ 14 ವರ್ಷದ ಅಫ್ಘಾನ್ ಸ್ಪಿನ್ನರ್..!

ಇದೇ ವೇಳೆ, ಇಗೋರ್ ಸ್ಟಿಮಾಚ್ ಅವರಿಗೆ ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಷ್ಟೇ ಬದಲಾವಣೆ ತರುವ ಇಚ್ಛೆ ಅಲ್ಲ, ಇಡೀ ವ್ಯವಸ್ಥೆಯಲ್ಲಿ ತಮ್ಮ ಫುಟ್ಬಾಲ್ ಮಂತ್ರ ಅಳವಡಿಸಲು ಬಯಸಿದ್ದಾರೆ. ತಳಮಟ್ಟದಿಂದಲೇ ಆಟಗಾರರು ತಾಂತ್ರಿಕವಾಗಿ ನೈಪುಣ್ಯತೆ ಬೆಳೆಸಿಕೊಂಡರೆ ಸೀನಿಯರ್ ಮಟ್ಟದಲ್ಲಿ ಅತ್ಯುತ್ಕೃಷ್ಟ ಆಟಗಾರರಾಗಿ ರೂಪುಗೊಳ್ಳುತ್ತಾರೆ ಎಂಬುದು ಗೊತ್ತಿರುವ ಸಂಗತಿಯೇ. ಇದಕ್ಕಾಗಿಯೇ ಎಲ್ಲಾ ವಯೋಮಾನದ ಗುಂಪಿನ ತಂಡಗಳ ಕೋಚ್​ಗಳನ್ನು ಕರೆದು ಸ್ಟಿಮಾಚ್ ಅವರು ಚರ್ಚೆ ನಡೆಸಲು ಉದ್ದೇಶಿಸಿದ್ಧಾರೆ. ದೇಶದೆಲ್ಲೆಡೆ ಒಂದೇ ರೀತಿಯ ಪುಟ್ಬಾಲ್ ಆಟವನ್ನು ರೂಪಿಸುವುದು ಅವರ ಗುರಿಯಾಗಿದೆ. ಸ್ಟಿಮಾಚ್ ಅವರಿಗೆ ಈ ಕೆಲಸ ಮಾಡಲು ಅಗತ್ಯವಿರುವ ಕಾಲಾವಕಾಶವನ್ನು ಇಲ್ಲಿಯ ಫುಟ್ಬಾಲ್ ಆಡಳಿತ ಕೊಡುತ್ತದಾ ಎಂಬುದು ಯಕ್ಷ ಪ್ರಶ್ನೆ.

ಇನ್ನು, ವಿಶ್ವಕಪ್ ಕ್ವಾಲಿಫಯರ್​ನಲ್ಲಿ ಎರಡು ಪಂದ್ಯಗಳಿಂದ 1 ಪಾಯಿಂಟ್ ಕಲೆಹಾಕಿರುವ ಭಾರತ ತಂಡ ಸೆ. 15ರಂದು ತನ್ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ರ್ಯಾಂಕಿಂಗ್​ನಲ್ಲಿ ತೀರಾ ಕೆಳಗಿರುವ ಬಾಂಗ್ಲರ ವಿರುದ್ಧ ಭಾರತ ಗೆಲ್ಲುವುದು ಅಷ್ಟೇನೂ ಪ್ರಯಾಸದ ಕೆಲಸವಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ