ಪಾಯಿಂಟ್ ಗಳಿಸಿ ಕಪ್ಪೆಯಂತೆ ಜಿಗಿಯುತ್ತಿದ್ದ ಕಬಡ್ಡಿ ಕ್ಯಾಪ್ಟನ್ ಅಜಯ್ ಠಾಕೂರ್ ಮಂಕಾಗಿದ್ದಾರೇಕೆ?

ಏಷ್ಯನ್ ಗೇಮ್ಸ್​ನ ಕಬಡ್ಡಿ ಪಂದ್ಯಾವಳಿಯಲ್ಲಿ ತಾನು ನಾಯಕತ್ವ ವಹಿಸಿದ್ದ ಭಾರತ ತಂಡ ಸೋತಿದ್ದು ಅಜಯ್ ಠಾಕೂರ್ ಅವರನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ.

Vijayasarthy SN
Updated:November 14, 2018, 7:57 PM IST
ಪಾಯಿಂಟ್ ಗಳಿಸಿ ಕಪ್ಪೆಯಂತೆ ಜಿಗಿಯುತ್ತಿದ್ದ ಕಬಡ್ಡಿ ಕ್ಯಾಪ್ಟನ್ ಅಜಯ್ ಠಾಕೂರ್ ಮಂಕಾಗಿದ್ದಾರೇಕೆ?
ಅಜಯ್ ಠಾಕೂರ್
  • Share this:
ಬೆಂಗಳೂರು(ನ. 14): ಭಾರತದ ಕಬಡ್ಡಿ ಪ್ರೇಮಿಗಳಿಗೆ ಅಜಯ್ ಠಾಕೂರ್ ಅವರನ್ನು ಪರಿಚಯಿಸಬೇಕಿಲ್ಲ. ಭಾರತ ಕಬಡ್ಡಿ ತಂಡದ ಯಶಸ್ವಿ ಆಟಗಾರ ಮತ್ತು ಕ್ಯಾಪ್ಟನ್ ಅವರು. ಪ್ರೋಕಬಡ್ಡಿಯ ಮೊದಲ ಸೀಸನ್​ನಲ್ಲಿ ಬೆಂಗಳೂರು ಬುಲ್ಸ್ ತಂಡದ ಆಧಾರಸ್ತಂಭವಾಗಿದ್ದವರು. ಬೆಂಗಳೂರು ತಂಡದಲ್ಲಿ ಈಗ ಅವರಿಲ್ಲದಿದ್ದರೂ ಬೆಂಗಳೂರಿಗರ ಪಾಲಿಗೆ ಈಗಲೂ ಇವರು ಮೆಚ್ಚಿನ ಆಟಗಾರ. ಅಷ್ಟರಮಟ್ಟಿಗೆ ಅಭಿಮಾನಿಗಳನ್ನ ಗಿಟ್ಟಿಸಿದ್ದಾರೆ. ಇವರ ರೇಡಿಂಗ್ ನೋಡುವುದೇ ಬಲು ಸೊಗಸು. ನೋಡನೋಡುತ್ತಿದ್ದಂತೆ ಎದುರಾಳಿಯ ಒಬ್ಬ ಆಟಗಾರನನ್ನು ಟಚ್ ಮಾಡಿ ವಾಪಸ್ ಬರುವ ಚಾಕಚಕ್ಯತೆ ಅದ್ಭುತ. ಪಾಯಿಂಟ್ ಗಳಿಸಿ ಕಪ್ಪೆಯಂತೆ ಜಿಗಿದು ಸಂಭ್ರಮಿಸುವ ಇವರ ತುಂಟಾಟ ಇನ್ನೂ ಚಂದ. ಇವರ ಆ ಕಪ್ಪೆ ಜಿಗಿತವೇ ಇವರ ಟ್ರೇಡ್​ಮಾರ್ಕ್. ಆದರೆ, ಈ ಬಾರಿಯ ಪ್ರೋಕಬಡ್ಡಿ ಲೀಗ್​ನಲ್ಲಿ ಅಜಯ್ ಠಾಕೂರ್ ಅವರ ಕಪ್ಪೆ ಜಿಗಿತವನ್ನು ನೋಡಿದವರೇ ಇಲ್ಲ. ತಮಿಳು ತಲೈವಾಸ್ ತಂಡದ ಕ್ಯಾಪ್ಟನ್ ಆಗಿರುವ ಅಜಯ್ ಈ ವರ್ಷ ಬಹಳ ಗಂಭೀರವಾಗಿದ್ದಾರೆ, ಮೌನಕ್ಕೆ ಶರಣಾಗಿದ್ದಾರೆ. ನನ್ನ ಕಬಡ್ಡಿ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಟದ ಅಂಗಣದಲ್ಲಿ ನಿರುತ್ಸಾಹ ಕಾಡುತ್ತಿದೆ ಎಂದು ಸ್ವತಃ ಅಜಯ್ ಠಾಕೂರ್ ಅವರೇ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಕಾರಣವೂ ಇದೆ.

ಈ ವರ್ಷ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟವು ಅಜಯ್ ಠಾಕೂರ್ ಪಾಲಿಗೆ ಮರೆಯಲಾಗದ ಕಹಿ ಕನಸು. ಕ್ರೀಡಾಕೂಟದ ಇತಿಹಾಸದಲ್ಲಿ ಸೋಲೇ ಇಲ್ಲದ ಸರದಾರರಂತೆ ಮೆರೆಯುತ್ತಿದ್ದ ಭಾರತ ಕಬಡ್ಡಿ ತಂಡ ಎರಡು ಬಾರಿ ಸೋತು ಟೂರ್ನಿಯಿಂದಲೇ ಹೊರಬಿತ್ತು. ದಕ್ಷಿಣ ಕೊರಿಯಾ ಹಾಗೂ ಇರಾನ್ ಎದುರು ಭಾರತ ತಂಡ ಸೋಲನುಭವಿಸಿತ್ತು. ಆ ನತದೃಷ್ಟ ಭಾರತ ತಂಡದ ಕ್ಯಾಪ್ಟನ್ಸಿ ಹೊಣೆ ಹೊತ್ತಿದ್ದು ಇದೇ ಅಜಯ್ ಠಾಕೂರ್ ಅವರೆಯೇ. ಕಬಡ್ಡಿ ಇತಿಹಾಸದಲ್ಲಿ ಭಾರತವು ಪಂದ್ಯಗಳನ್ನ ಸೋತಿದ್ದು ತೀರಾ ವಿರಳ. ಒಂದೇ ಟೂರ್ನಿಯಲ್ಲಿ ಅಥವಾ ಕ್ರೀಡಾಕೂಟದಲ್ಲಿ 2 ಪಂದ್ಯಗಳನ್ನ ಸೋತಿದ್ದ ಭಾರತ ಇದೇ ಮೊದಲು. ಆ ಸೋತ ತಂಡದ ನಾಯಕನಾಗಿ ಅಜಯ್ ಠಾಕೂರ್ ಅವರಿಗೆ ಆದ ಮುಜುಗರ ಅಷ್ಟಿಷ್ಟಲ್ಲ. ತನ್ನ ವೃತ್ತಿಜೀವನದಲ್ಲಿ ಇದೊಂದು ಕಳಂಕ ಮೆತ್ತಿಕೊಂಡಿತಲ್ಲಾ ಎಂಬುದು ಠಾಕೂರ್ ಕೊರಗು. ಏಷ್ಯನ್ ಗೇಮ್ಸ್ ಸೋಲಿನ ನಂತರ ಅಜಯ್ ಠಾಕೂರ್ ಅವರ ಉತ್ಸಾಹವೇ ಉಡುಗಿಹೋಗಿದೆಯಂತೆ. ಈ ಬಾರಿಯ ಪ್ರೋಕಬಡ್ಡಿ ಲೀಗ್​ನಲ್ಲಿ ಅವರು ಪಾಯಿಂಟ್ ಗಳಿಸಿದಾಗ ಯಾವುದೇ ಸಂಭ್ರಮಾಚರಣೆ ಅಥವಾ ವೀರಾವೇಶದ ಕ್ರಿಯೆ ಅಥವಾ ಅವರ ಟ್ರೇಡ್ ಮಾರ್ಕ್ ಸ್ಟೈಲ್ ಆದ ಕಪ್ಪೆ ಜಿಗಿತ ಮಾಡಿದ್ದನ್ನು ಯಾರೂ ನೋಡಿಯೇ ಇಲ್ಲ. ಅಷ್ಟರಮಟ್ಟಿಗೆ ಏಷ್ಯನ್ ಗೇಮ್ಸ್ ಸೋಲು ಠಾಕೂರ್ ಅವರನ್ನು ಬಾಧಿಸುತ್ತಿದೆ.

ಏಷ್ಯನ್ ಗೇಮ್ಸ್​ನಲ್ಲಿ ಭಾರತ ಸೋತಿದ್ಯಾಕೆ?

ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಆಡಿದ್ದ ಭಾರತ ತಂಡಕ್ಕೆ ಅನುಭವದ ಕೊರತೆ ಇತ್ತು. ಅಜಯ್ ಠಾಕೂರ್ ಬಿಟ್ಟರೆ ತಂಡದ ಉಳಿದ ಆಟಗಾರರಿಗೆ ಅದೇ ಮೊದಲ ಏಷ್ಯನ್ ಗೇಮ್ಸ್​ ಆಗಿತ್ತು. ಅಪಾರ ನಿರೀಕ್ಷೆಗಳಿರುವ ಈ ಟೂರ್ನಿಯಲ್ಲಿ ಭಾರತೀಯ ಆಟಗಾರರ ಮೇಲೆ ಅಪರಿಮಿತ ಒತ್ತಡ ಇರುತ್ತದೆ. ಈ ಜೂನಿಯರ್ ಆಟಗಾರರಿಗೆ ಒತ್ತಡ ಎದುರಿಸುವಷ್ಟು ಪಕ್ವತೆ ಇರಲಿಲ್ಲ ಎಂದು ಅಜಯ್ ಠಾಕೂರ್ ಹೇಳುತ್ತಾರೆ. ಆದರೆ, ಆ ಭಾರತೀಯ ತಂಡದ ಯಾವ ಆಟಗಾರರೂ ಕಳಪೆಯವರಾಗಿರಲಿಲ್ಲ. ಇವರು ಭಾರತದ ಬೆಸ್ಟ್ ಪ್ಲೇಯರ್ಸ್ ಆಗಿದ್ದವರು. ನಾಲ್ಕೈದು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿ ಅನುಭವ ಗಳಿಸಿದರೆ ಈ ಹುಡುಗರನ್ನು ತಡೆಯುವವರೇ ಇಲ್ಲವಾಗುತ್ತಾರೆ. ಇವರು ಭಾರತದ ಕಬಡ್ಡಿಯನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬಲ್ಲಷ್ಟು ಪ್ರತಿಭಾನ್ವಿತರಾಗಿದ್ದಾರೆ ಎಂದು ಠಾಕೂರ್ ಅಭಿಮಾನ ಪಡುತ್ತಾರೆ.

ಹೊಸ ಆಟಗಾರನಿಗೆ ಅನುಭವ ಬರಲು ಒಂದಷ್ಟು ಪಂದ್ಯಗಳಾದರೂ ಅಗತ್ಯವಿರುತ್ತದೆ ಎಂದು ಹೇಳುವ 32 ವರ್ಷದ ಅಜಯ್ ಠಾಕೂರ್ ಅವರಿಗೆ ಮೊದಲ ಅಂತಾರಾಷ್ಟ್ರೀಯ ಪಾಯಿಂಟ್ ಪಡೆಯಲು 5 ಪಂದ್ಯ ಆಡಬೇಕಾಯಿತಂತೆ.
First published: November 14, 2018, 7:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading