Gandhi and Football- ದಕ್ಷಿಣ ಆಫ್ರಿಕಾದಲ್ಲಿ ಫುಟ್ಬಾಲ್ ಮೂಲಕ ಬಿಳಿಯರಿಗೆ ಬಿಸಿ ಮುಟ್ಟಿಸಿದ್ದ ಗಾಂಧೀಜಿ

Fooball Clubs founded by Gandhiji- ಫುಟ್ಬಾಲ್ ಜನಸಾಮಾನ್ಯರಿಗೆ ಎಷ್ಟು ಹತ್ತಿರವಾಗಿದೆ ಎಂಬ ಸತ್ಯ ಗಾಂಧಿಜಿ ಅವರಿಗೆ ಲಂಡನ್​ನಲ್ಲಿದ್ಧಾಗ ತಿಳಿಯುತ್ತದೆ. ದಕ್ಷಿಣ ಆಫ್ರಿಕಾದಲ್ಲೂ ಫುಟ್ಬಾಲ್ ಜನಪ್ರಿಯವಿತ್ತು. ಇದನ್ನ ಬಿಳಿಯರ ದಬ್ಬಾಳಿಕೆ ವಿರುದ್ಧದ ಹೋರಾಟಕ್ಕೆ ಒಂದು ಅಸ್ತ್ರವಾಗಿ ಬಳಕೆ ಮಾಡಿದ್ದರು ಗಾಂಧೀಜಿ.

ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ

 • News18
 • Last Updated :
 • Share this:
  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಇಡೀ ದೇಶವನ್ನು ಒಗ್ಗೂಡಿಸಿದ ಮತ್ತು ಅವಿರತವಾಗಿ ಶ್ರಮಿಸಿದ ಮಹಾ ಮುಖಂಡ ಎಂದರೆ ಮೋಹನ್ ದಾಸ್ ಕರಮ್ ಚಂದ್ ಗಾಂಧಿ (Mohandas Karamchand Gandhi). ಇವರ ಜೀವನಗಾಥೆ ಬಹುಶಃ ಎಲ್ಲರಿಗೂ ಅರಿವಿರುವಂಥದ್ದು. ಅವರದ್ದು ಹಲವು ಮಗ್ಗುಲುಗಳು ಇದ್ದ ವ್ಯಕ್ತಿತ್ವ. ಮಹಾತ್ಮ ಎಂದೇ ಬಣ್ಣಿಸಲಾಗುವ ಅವರ ಜೀವದನ ಕೆಲ ವಿಚಾರಗಳು ಈಗಲೂ ಅಚ್ಚರಿ ಹುಟ್ಟಿಸುತ್ತವೆ. ಮಹಾತ್ಮ ಗಾಂಧಿ (Mahatma Gandhi) ಹೀಗೂ ಇದ್ದರಾ ಎಂದು ಉದ್ಗರಿಸುವಂತಾಗುತ್ತದೆ. ಇಂಥ ಅಂಶಗಳಲ್ಲಿ ಅವರು ಮತ್ತು ಕ್ರೀಡೆಗೂ ಇದ್ದ ನಂಟು ಕೂಡ ಒಂದು. ಅದರಲ್ಲೂ ಫುಟ್ಬಾಲ್ (Football) ಕ್ರೀಡೆಯೊಂದಿಗೆ ಗಾಂಧಿಜಿ ಸಂಬಂಧ ತುಸು ಗಾಢವಾಗಿಯೇ ಇತ್ತು. ಲಂಡನ್​ನಲ್ಲಿ ಬ್ಯಾರಿಸ್ಟರ್ ಪದವಿ (Barrister graduation in London) ಪಡೆದು ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡಲು ಹೋದ ಮಹಾತ್ಮ ಗಾಂಧಿ ಅಲ್ಲಿ ಸ್ಥಳೀಯ ಕರಿಯ ಹಾಗು ಭಾರತೀಯ ಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದಬ್ಬಾಳಿಕೆಯನ್ನ ಕಂಡು ಅದಕ್ಕೆ ಸೂಕ್ತ ಉತ್ತರ ಕೊಡಲು ಫುಟ್ಬಾಲ್ ಆಟವನ್ನು ಆಯ್ಕೆ ಮಾಡಿಕೊಂಡಿದ್ದರು.

  ಸೌಥ್ ಆಫ್ರಿಕಾದಲ್ಲಿ ಎಂಕೆ ಗಾಂಧಿ ಮೂರು ಫುಟ್ಬಾಲ್ ತಂಡಗಳನ್ನ ಕಟ್ಟಿದರು. ಜೋಹಾನ್ಸ್​ಬರ್ಗ್, ಪ್ರಿಟೋರಿಯಾ ಮತ್ತು ಡರ್ಬನ್ ನಗರಗಳಲ್ಲಿ ಗಾಂಧಿ ಅವರು “ಪಾಸಿವ್ ರೆಸಿಸ್ಟರ್ಸ್ ಸಾಕರ್ ಕ್ಲಬ್” ಹೆಸರಿನ ಮೂರು ಫುಟ್ಬಾಲ್ ತಂಡಗಳನ್ನ ಕಟ್ಟಿದರು. ಇವರ ಪ್ರೇರಣೆಯಿಂದ ದಕ್ಷಿಣ ಆಫ್ರಿಕಾದಲ್ಲಿ “ಟ್ರಾನ್ಸ್​ವಾಲ್ ಇಂಡಿಯನ್ ಫುಟ್ಬಾಲ್ ಅಸೋಷಿಯೇಶನ್” ಎಂಬ ಸಂಸ್ಥೆ ಹುಟ್ಟಿತು. ಇದು ಐತಿಹಾಸಿಕವಾದುದು. ಯಾಕೆಂದರೆ, ಇದು ಬಿಳಿಯರೇತರರ ಮೊದಲ ಫುಟ್ಬಾಲ್ ಸಂಸ್ಥೆ ಎನಿಸಿತು.

  ಫುಟ್ಬಾಲ್ ಆಡದ ಗಾಂಧಿಜಿ ತಂಡ ಕಟ್ಟಿದ್ದು ಯಾಕೆ?

  ವಿಚಿತ್ರ ಎಂದರೆ, ಮಹಾತ್ಮ ಗಾಂಧಿ ಯಾವತ್ತೂ ಜೀವನದಲ್ಲಿ ಯಾವುದೇ ಆಟ ಆಡಿದವರಲ್ಲ. ಕ್ರಿಕೆಟ್ ಆಗಲೀ, ಫುಟ್ಬಾಲ್ ಆಗಲಿ ಆಡಿ ಗೊತ್ತಿಲ್ಲ. ಆದರೆ, ಸೌಥ್ ಆಫ್ರಿಕಾದಲ್ಲಿ ಅವರು ಫುಟ್ಬಾಲ್ ತಂಡಗಳನ್ನ ಕಟ್ಟಲು ಸಕಾರಣವಿತ್ತು. ಲಂಡನ್​ನಲ್ಲಿ ಗಾಂಧಿಜಿ ಬ್ಯಾರಿಸ್ಟರ್ ಮಾಡುವಾಗ ಅಲ್ಲಿನ ಫುಟ್ಬಾಲ್ ಕ್ರೇಜ್ ಅನ್ನು ಕಣ್ಣಾರೆ ಕಂಡಿದ್ದರು. ಕ್ರಿಕೆಟ್​ಗಿಂತ ಫುಟ್ಬಾಲ್ ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾಗಿತ್ತು. ಕ್ರಿಕೆಟ್ ದೊಡ್ಡವರ ಆಟವಾದರೆ ಫುಟ್ಬಾಲ್ ಬಡವರ ಆಟ ಎಂಬುದನ್ನು ಗಾಂಧಿಜಿ ಕಂಡುಕೊಂಡಿದ್ದರು. ಲಂಡನ್​ನಿಂದ ಅವರು ದಕ್ಷಿಣ ಆಫ್ರಿಕಾಗೆ ಹೋದಾಗಲೂ ಅವರಿಗೆ ಅಲ್ಲಿನ ಬಡ ಜನರ ಜೀವನದಲ್ಲಿ ಫುಟ್ಬಾಲ್ ಅವಿಭಾಜ್ಯ ಅಂಗವಾಗಿರುವುದನ್ನೂ ಪ್ರತ್ಯಕ್ಷವಾಗಿ ಕಂಡರು. ಜೊತೆಗೆ, ಅಲ್ಲಿರುವ ಭಾರತೀಯರು ಹಾಗೂ ಕರಿಯ ಜನಾಂಗದವರ ಮೇಲೆ ಬಿಳಿಯರು ದಬ್ಬಾಳಿಕೆ ನಡೆಸುತ್ತಿರುವುದನ್ನು ನೋಡಿದರು. ಈ ದೌರ್ಜನ್ಯಕ್ಕೆ ವಿರುದ್ಧವಾಗಿ ಸಮಾಜದಲ್ಲಿ ಪ್ರತಿರೋಧ ಬೆಳೆಸುವ ಸಂಕಲ್ಪ ತೊಟ್ಟ ಗಾಂಧಿಜಿ ಮನಸಿಗೆ ಬಂದ ಹಲವು ತಂತ್ರಗಳಲ್ಲಿ ಫುಟ್ಬಾಲ್ ಕೂಡ ಒಂದು. ಬಡವರೊಂದಿಗೆ ಹೆಚ್ಚು ಜೋಡಿತಗೊಂಡಿರುವ ಫುಟ್ಬಾಲ್ ಆಟಗಳ ಮೂಲಕ ಜನರನ್ನ ಒಗ್ಗೂಡಿಸಿ ಜಾಗೃತಿ ಮೂಡಿಸಿ ಬಿಳಿಯರ ದಬ್ಭಾಳಿಕೆ ವಿರುದ್ಧ ಪ್ರತಿರೋಧ ಬೆಳೆಸುವ ಪ್ರಯತ್ನ ಮಾಡಿದರು.

  ಇದನ್ನೂ ಓದಿ: Prakash Bhagat| ಒಂದು ಕಾಲದಲ್ಲಿ ಗಂಗೂಲಿ ಜೊತೆ ಆಟವಾಡಿದ್ದ ಕ್ರಿಕೆಟರ್ ಇಂದು ಜೀವನಕ್ಕಾಗಿ ರಸ್ತೆಬದಿ ಪಾನಿಪುರಿ ವ್ಯಾಪಾರ!

  ಫುಟ್ಬಾಲ್ ಆಟಗಳ ಸ್ಥಳಕ್ಕೆ ಹೋಗಿ ಅಲ್ಲಿ ಜನಜಾಗೃತಿ ಸಂದೇಶ ಮೂಡಿಸುವುದು, ವರ್ಣಭೇದ ವಿರುದ್ಧದ ಹೋರಾಟಕ್ಕೆ ಬೇಕಾದ ಚಂದಾ ಎತ್ತುವುದು ಇತ್ಯಾದಿ ಕೆಲಸಗಳನ್ನ ಗಾಂಧಿಜಿ ಮಾಡುತ್ತಿದ್ದರು. ಮೂರು ಫುಟ್ಬಾಲ್ ತಂಡಗಳನ್ನ ಕಟ್ಟಿ ಪಂದ್ಯಗಳನ್ನ ಆಡಿಸುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಜಿ ಮಾಡಿದ ಪ್ರಯೋಗಗಳಿಂದ ಭವಿಷ್ಯದ ಸತ್ಯಾಗ್ರಹ ಆಂದೋಲನದ ಕಿಡಿ ಹೊತ್ತಿತ್ತು. ಜನರನ್ನ ಒಗ್ಗೂಡಿಸಿದರೆ ಎಂಥ ಶಕ್ತಿ ಸಿಗುತ್ತದೆ ಎಂಬುದನ್ನು ಗಾಂಧಿಜಿ ಇಲ್ಲಿ ಕಂಡುಕೊಂಡಿದ್ದರು.

  ಕ್ರೀಡೆ ಅಪ್ರಯೋಜಕ ಎಂದ ಗಾಂಧಿಯ ಬದಲಾದ ನಿಲುವು:

  ವಿಪರ್ಯಾಸ ಎಂದರೆ ಕ್ರೀಡೆಯೊಂದಿಗೆ ಗಾಂಧಿಜಿಗೆ ಇದ್ದ ಈ ರೋಮ್ಯಾನ್ಸ್ ದಕ್ಷಿಣ ಆಫ್ರಿಕಾದಲ್ಲಿ ಅಂತ್ಯವಾಗುತ್ತದೆ. ಭಾರತಕ್ಕೆ ಕಾಲಿಟ್ಟ ಬಳಿಕ ಗಾಂಧಿಜಿ ಅವರಿಗೆ ಫುಟ್ಬಾಲ್ ಬಗ್ಗೆ ಇದ್ದ ಭಾವನೆಯೇ ಬದಲಾಗಿ ಹೋಗಿರುತ್ತದೆ. ಕ್ರೀಡೆ ಬರೀ ಟೈಮ್ ಪಾಸ್ ಅಷ್ಟೇ. ಅದಕ್ಕಿಂತ ಹೆಚ್ಚೇನೂ ಅಲ್ಲ ಎಂಬ ಅಚ್ಚರಿಯ ನಿಲುವನ್ನ ತಳೆಯುತ್ತಾರೆ. ಅದಕ್ಕೆ ಸಕಾರಣವೂ ಇದೆ. ಭಾರತಕ್ಕೆ ಬಂದ ಮೇಲೆ ಅವರಿಗೆ ಒಂದು ವ್ಯವಸ್ಥೆ ವಿರುದ್ಧ ಹೋರಾಡುವುದಕ್ಕಿಂತ, ಬ್ರಿಟಿಷರನ್ನ ಭಾರತದಿಂದ ಹೊರಗೆ ಕಳುಹಿಸುವ ಮಹತ್ ಉದ್ದೇಶ ಬಂದಿರುತ್ತದೆ. ಆ ಉದ್ದೇಶಕ್ಕೆ ಕ್ರೀಡೆ ಪ್ರಯೋಜನಕ್ಕೆ ಬರುವುದಿಲ್ಲ ಎಂಬ ಸತ್ಯ ಅವರಿಗೆ ಅರಿವಾಗುತ್ತದೆ. ಹೀಗಾಗಿ, ಕ್ರೀಡೆಯೊಂದಿಗೆ ಇದ್ದ ತನ್ನೆಲ್ಲಾ ನಂಟನ್ನೂ ಅವರು ಬದಿಗೊತ್ತಿ, ಸತ್ಯಾಗ್ರಹ ಇತ್ಯಾದಿ ಹೋರಾಟಗಳನ್ನ ಗಮನ ಹರಿಸುತ್ತಾರೆ.

  ದಕ್ಷಿಣ ಆಫ್ರಿಕಾದಿಂದ ಇವರು ಹೊರಬಂದರೂ ಅಲ್ಲಿ ಇವರ ಫುಟ್ಬಾಲ್ ಚಟುವಟಿಕೆ ಅನೇಕರಿಗೆ ಪ್ರೇರಣೆಯಾಗಿತ್ತು. ದಕ್ಷಿಣ ಆಫ್ರಿಕಾದ ಮೊದಲ ವೃತ್ತಿಪರ ಫುಟ್ಬಾಲ್ ತಂಡವೆನ್ನಲಾದ ಕ್ರಿಸ್ಟೋಫರ್ಸ್ ಕಂಟಿಂಜೆಂಟ್ ರೂಪುಗೊಂಡಿದ್ದು ಇವರ ಪ್ರೇರಣೆಯಿಂದಲೇ. ಒಮ್ಮೆ ಈ ತಂಡವು ಭಾರತದಲ್ಲಿ 14 ಪಂದ್ಯಗಳ ಫುಟ್ಬಾಲ್ ಸರಣಿ ಆಡಲು ಬರುತ್ತದೆ. ಆಗ ಎಂಕೆ ಗಾಂಧಿ ಅವರು ಈ ತಂಡದ ಅನೇಕ ಪಂದ್ಯಗಳನ್ನ ವೀಕ್ಷಿಸುತ್ತಾರೆ. ಅದು ಬಿಟ್ಟರೆ ಭಾರತದಲ್ಲಿ ಗಾಂಧಿಜಿ ಅವರು ಕ್ರಿಕೆಟ್ ಅಥವಾ ಫುಟ್ಬಾಲ್ ಜೊತೆ ಜೋಡಿಸಿಕೊಂಡಿದ್ದು ತೀರಾ ಅಪರೂಪ ಮಾತ್ರ.
  Published by:Vijayasarthy SN
  First published: