• Home
 • »
 • News
 • »
 • sports
 • »
 • ಒಲಿಂಪಿಕ್ ಕ್ವಾಲಿಫೈರ್​ನಲ್ಲಿ ಉಜ್ಬೆಕಿಗಳಿಂದ ಭಾರೀ ಗೋಲ್ಮಾಲ್? ಧ್ವನಿ ಎತ್ತಿದ ಭಾರತೀಯ ಸ್ವಿಮ್ಮರ್

ಒಲಿಂಪಿಕ್ ಕ್ವಾಲಿಫೈರ್​ನಲ್ಲಿ ಉಜ್ಬೆಕಿಗಳಿಂದ ಭಾರೀ ಗೋಲ್ಮಾಲ್? ಧ್ವನಿ ಎತ್ತಿದ ಭಾರತೀಯ ಸ್ವಿಮ್ಮರ್

ಎಸ್ ಪಿ ಲಿಖಿತ್

ಎಸ್ ಪಿ ಲಿಖಿತ್

ಉಜ್ಬೆಕಿಸ್ತಾನ್ ಓಪನ್ ಸ್ವಿಮಿಂಗ್ ಚಾಂಪಿಯನ್​ಶಿಪ್​ನಲ್ಲಿ ಆ ದೇಶದ ಈಜುಪಟುಗಳು ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಲು ಸಾಧ್ಯವಾಗುವಂತೆ ಅವರ ಟೈಮಿಂಗ್ ಅನ್ನು ಮಾರ್ಪಾಡು ಮಾಡುತ್ತಿದ್ದ ವಿಚಾರವನ್ನು ಭಾರತೀಯ ಈಜುಪಟು ಲಿಖಿತ್ ಪತ್ತೆ ಹಚ್ಚಿದ್ದರು.

 • News18
 • Last Updated :
 • Share this:

  ನವದೆಹಲಿ: ಕ್ರೀಡೆಗಳಲ್ಲಿ ಗೆಲ್ಲಲು ಕೆಲವರು ಹಲವು ಅಡ್ಡದಾರಿಗಳನ್ನ ಹಿಡಿಯುತ್ತಾರೆ. ಉದ್ದೀಪನ ಮದ್ದು ಸೇರಿದಂತೆ ಹಲವು ವಾಮವಾರ್ಗಗಳನ್ನ ಹುಡುಕುತ್ತಲೇ ಇರುತ್ತಾರೆ. ಈಗೆಲ್ಲಾ ಬಿಗಿನಿಯಮಗಳು ಇರುವುದರಿಂದ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ತುಸು ಕಡಿಮೆ ಆಗಿವೆ. ಆದರೆ, ಉಜ್ಬೆಕಿಸ್ತಾನದಲ್ಲಿ ನಡೆದ ಈಜು ಕ್ರೀಡಾಕೂಟದಲ್ಲಿ ಭಾರೀ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಭಾರತೀಯ ಈಜುಪಟು ಎಸ್.ಪಿ. ಲಿಖಿತ್ ಅವರು ಈ ವಂಚನೆಯನ್ನ ಪತ್ತೆ ಹಚ್ಚಿದ್ದಾರೆ. ಪರಿಣಾಮವಾಗಿ ಉಜ್ಬೆಕಿಸ್ತಾನ ಓಪನ್ ಸ್ವಿಮಿಂಗ್ ಚಾಂಪಿಯನ್​ಶಿಪ್​ನ ಎಲ್ಲಾ ಫಲಿತಾಂಶವನ್ನು ವಿಶ್ವ ಸ್ಮಿಮಿಂಗ್ ಅಧಿಕೃತ ಸಂಸ್ಥೆ ಫಿನಾ (FINA) ಅಮಾನ್ಯ ಮಾಡಿದೆ.


  ಏನು ಗೋಲ್ಮಾಲ್?: ಭಾರತದ ಸ್ವಿಮ್ಮರ್ ಎಸ್.ಪಿ. ಲಿಖಿತ್ ಆರೋಪದ ಪ್ರಕಾರ ಉಜ್ಬೆಕಿಸ್ತಾನದ ಈ ಈಜು ಕ್ರೀಡಾಕೂಟದಲ್ಲಿ ಸ್ಥಳೀಯ ಆಟಗಾರರನ್ನ ಗೆಲ್ಲುವಂತೆ ಫಲಿತಾಂಶವನ್ನು ಬದಲಾಯಿಸಲಾಗುತ್ತಿತ್ತಂತೆ. ಸ್ಪರ್ಧಾಳುಗಳ ವಾಸ್ತವ ಟೈಮಿಂಗ್ ಬೇರೆ ಇದ್ದರೆ ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದ ಫಲಿತಾಂಶದಲ್ಲಿ ಬೇರೆ ಟೈಮಿಂಗ್ ಇರುತ್ತಿತ್ತು. ಸ್ಥಳೀಯ ಉಜ್ಬೆಕಿಸ್ತಾನೀಯ ಈಜುಪಟುಗಳು ವಿಜೇತರಾಗುವಂತೆ ಟೈಮಿಂಗ್ ಬದಲಾಯಿಸಲಾಗುತ್ತಿತ್ತು. ಭಾರತದ ಈಜುಪಟು ಲಿಖಿತ್ ಅವರಿಗೆ ಇದು ಗೊತ್ತಾಗಿ ಧ್ವನಿ ಎತ್ತಿದ್ದಾರೆ. ಇದರ ಬೆನ್ನಲ್ಲೇ ಈ ಕ್ರೀಡಾಕೂಟದ ಫಲಿತಾಂಶವನ್ನೇ ಫಿನಾ ಅಮಾನ್ಯಗೊಳಿಸಿದೆ.


  “FINA ಸಂಸ್ಥೆ ಈ ಕ್ರೀಡಾಕೂಟದ ಫಲಿತಾಂಶವನ್ನು ಅಮಾನ್ಯಗೊಳಿಸಿದೆ. ಟೈಮಿಂಗ್ ವಿಚಾರದಲ್ಲಿ ಕೆಲ ವಿವಾದಗಳಿದ್ದವು. ಈ ಕ್ರೀಡಾಕೂಟವು ಒಲಿಂಪಿಕ್ ಅರ್ಹತಾ ಪಂದ್ಯಾವಳಿಯೂ ಆದ್ದರಿಂದ ಫಿನಾದಿಂದ ಬಿಗಿ ನಿಯಮಗಳು ಇರುತ್ತವೆ. ಟೈಮಿಂಗ್ ವಿಚಾರದಲ್ಲಿ ಯಾವುದೇ ಅನುಮಾನ ಬಂದರೂ ಆ ಫಲಿತಾಂಶವನ್ನು ಫಿನಾ ಅಮಾನ್ಯ ಮಾಡುತ್ತದೆ. ಉಜ್ಬೆಕಿಸ್ತಾನ್ ಓಪನ್ ಸ್ವಿಮಿಂಗ್ ಚಾಂಪಿಯನ್​ಶಿಪ್ ವಿಚಾರದಲ್ಲೂ ಇದೇ ಆಗಿದೆ” ಎಂದು ಭಾರತದ ಈಜು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೋನ್ ಚೋಕ್ಷಿ ಇತ್ತೀಚೆಗೆ ಹೇಳಿದ್ದನ್ನ ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆ ವರದಿ ಮಾಡಿದೆ.


  ಇದನ್ನೂ ಓದಿ: T20 World Cup: ಅ. 17ರಿಂದ ನ. 14ರವರೆಗೆ ಟಿ20 ವಿಶ್ವಕಪ್


  ಇನ್ನೂ ಬೆಚ್ಚಿಬೀಳಿಸುವ ಅಂಶವೆಂದರೆ, ಈ ರೀತಿ ಟೈಮಿಂಗ್ ಗೋಲ್ಮಾಲ್ ಎನ್ನುವುದು ತೀರಾ ಮಾಮೂಲು ಸಂಗತಿಯಂತೆ. ಉಜ್ಬೆಕಿಸ್ತಾನದಲ್ಲಿ ಕಳೆದ 10-15 ವರ್ಷಗಳಿಂದಲೂ ಇಂಥ ಗೋಲ್ಮಾಲ್ ಮಾಡುತ್ತಾ ಬಂದಿದ್ದೇವೆ ಎಂದು ಅಲ್ಲಿನ ಅಧಿಕಾರಿಗಳು ಕೂಲ್ ಆಗಿ ಹೇಳಿದರೆಂಬುದನ್ನು ಲಿಖಿತ್ ತಮ್ಮ ಆರೋಪದಲ್ಲಿ ತಿಳಿಸಿದ್ದಾರೆ. ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೆ ಕನಿಷ್ಠ10 ಉಜ್ಬೆಕಿಸ್ತಾನೀ ಸ್ವಿಮ್ಮರ್​ಗಳನ್ನ ಕಳುಹಿಸಬೇಕೆಂಬ ಉದ್ದೇಶ ಇತ್ತಂತೆ. ಲಿಖಿತ್ ಅವರಿಗೆ ಕ್ರೀಡಾಕೂಟದ ಮೊದಲ ದಿನವೇ ಅನುಮಾನ ಬಂದಿದಂತೆ. ಸ್ಕೋರ್ ಬೋರ್ಡ್ ಸರಿಯಾಗಿ ಪ್ರದರ್ಶನಗೊಳ್ಳುತ್ತಿರಲಿಲ್ಲ. ಸ್ಪರ್ಧಾಳುಗಳ ವಾಸ್ತವ ಟೈಮಿಂಗ್​ಗಿಂತ ಸ್ಕೋರ್ ಶೀಟ್​ನಲ್ಲಿ ಪ್ರಕಟಿಸಲಾಗುತ್ತಿದ್ದ ಟೈಮಿಂಗ್ ವಿಭಿನ್ನವಾಗಿತ್ತು. ಮೊದಲ ದಿನವಾದ್ದರಿಂದ ಇದು ತಾಂತ್ರಿಕ ದೋಷವೆಂದು ಬಗೆಗೆ ಲಿಖಿತ್ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಸ್ಕೋರ್ ಶೀಟ್​ನಲ್ಲಿ ತಿದ್ದುಪಡಿ ಆಗದೇ ಇದ್ದಾಗ ಲಿಖಿತ್ ಜಾಗೃತಗೊಂಡರೆನ್ನಲಾಗಿದೆ.


  ಭಾರತದ ಮತ್ತೊಬ್ಬ ಈಜುಪಟು ಸಜನ್ ಪ್ರಕಾಶ್ ಅವರು 100 ಮೀಟರ್ ಬಟರ್​ಫ್ಲೈ ಸ್ಪರ್ಧೆಯಲ್ಲಿ ಉತ್ತಮವಾಗಿ ಪ್ರದರ್ಶನ ಮಾಡಿದರೂ ಅವರ ಟೈಮಿಂಗ್ ಅನ್ನು ಬದಲಾಯಿಸಲಾಗಿತ್ತು. ಆಗ ಲಿಖಿತ್ ಬಹಿರಂಗವಾಗಿ ಧ್ವನಿ ಎತ್ತಲು ನಿರ್ಧರಿಸಿದ್ದರು. ಈ ವೇಳೆ ಅಧಿಕಾರಿಗಳ ನಡವಳಿಕೆ ವಿಚಿತ್ರವಾಗಿತ್ತು.


  “ಇದು ರಾಜಕೀಯ. ಇದರಲ್ಲಿ ನೀವು ತಲೆ ಹಾಕಬೇಡಿ ಎಂದು ಅಧಿಕಾರಿಗಳು ಹೇಳಿದರು. ನನಗೆ ಸ್ವಲ್ಪ ಹಣ ಕೊಟ್ಟು ತೆಪ್ಪಗಿರಲು ತಿಳಿಸಿದರು… ಸ್ವಿಮಿಂಗ್ ಮಾಡದೇ ಡೈವಿಂಗ್ ಬ್ಲಾಕ್​ನಲ್ಲಿ ಸುಮ್ಮನೆ ನಿಂತುಗೊಂಡಿದ್ದಕ್ಕೆ ವಿವರಣೆ ನೀಡಬೇಕಾಗುತ್ತದೆ ಎಂದರು. ನನಗೆ ಮಾನಸಿಕ ಸಮಸ್ಯೆ ಇದೆ. ನಾನು ಕಿವಿಡ ಎಂದು ಬರೆದುಕೊಡಬೇಕಾಗುತ್ತದೆ ಎಂದರು” ಎಂದು ಲಿಖಿತ್ ಹೇಳಿದ್ದಾರೆ.


  ತಾನು ಉಜ್ಬೆಕಿಸ್ತಾನದಲ್ಲಿ ಸುಮ್ಮನಿದ್ದು ಈಗ ಇಲ್ಲಿ ಬಂದು ಅದರ ಬಗ್ಗೆ ಮಾತನಾಡಿದ್ದರೆ ಯಾರೂ ನಂಬುತ್ತಿರಲಿಲ್ಲ. ಗೆಲ್ಲಲು ಸಾಧ್ಯವಾಗದೇ ನಾನು ಸುಮ್ಮನೆ ಹಲಬುತ್ತಿದ್ದೇನೆಂದು ಜನರು ಭಾವಿಸುತ್ತಿದ್ದರು. ಆದರೆ, ಅಲ್ಲೇ ನಾನು ಆ ಬಗ್ಗೆ ಮಾತನಾಡಿದ್ದರಿಂದ ಮುಂದಿನ ದಿನಗಳಲ್ಲಿ ಇಂಥ ಗೋಲ್ಮಾಲ್ ನಡೆದಿರುವುದು ಯಾವುದೇ ಈಜುಪಟುಗಳ ಗಮನಕ್ಕೆ ಬಂದರೂ ಧ್ವನಿ ಎತ್ತಲು ಪ್ರೇರೇಪಣೆಯಾಗುತ್ತದೆ ಎಂದು ಎಸ್.ಪಿ. ಲಿಖಿತ್ ತಿಳಿಸಿದ್ದಾರೆ.

  Published by:Vijayasarthy SN
  First published: