Video: ಬೆಂಗಳೂರು ಬುಲ್ಸ್ ಪ್ರೋಕಬಡ್ಡಿ ಚಾಂಪಿಯನ್ ಆಗಿದ್ದು ಹೀಗೆ, ರೋಚಕ ಫೈನಲ್ ವಿಡಿಯೋ

Bengaluru Bulls winning against Gujarat: ಪ್ರೋಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್ ಒಮ್ಮೆ ಚಾಂಪಿಯನ್ ಆಗಿದೆ. 2018ರಲ್ಲಿ ನಡೆದ ಆರನೇ ಸೀಸನ್ ಪಂದ್ಯಾವಳಿಯಲ್ಲಿ ಬುಲ್ಸ್ ಅಮೋಘ ಪ್ರದರ್ಶನ ನೀಡಿ ಕಪ್ ಗೆದ್ದಿತು. ಅದರ ಹೈಲೈಟ್ಸ್ ಇಲ್ಲಿದೆ…

ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಫಾರ್ಚೂನ್ ಜೈಂಟ್ಸ್

ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಫಾರ್ಚೂನ್ ಜೈಂಟ್ಸ್

  • News18
  • Last Updated :
  • Share this:
ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ನಂತರ ಅತ್ಯಂತ ಜನಪ್ರಿಯ ಕ್ರೀಡೆ ಎಂದರೆ ನಿಸ್ಸಂಶಯವಾಗಿ ಕಬಡ್ಡಿಯೇ. ಒಂದು ಸಾಧಾರಣ ಕಬಡ್ಡಿ ಪಂದ್ಯಾವಳಿ ನಡೆದರೂ ಅಲ್ಲಿ ಜನಸಾಗರವೇ ನೆರದಿರುತ್ತದೆ. ಕರ್ನಾಟಕದಲ್ಲಿ ಎಲ್ಲೇ ಕಬಡ್ಡಿ ನಡೆದರೂ, ತಾಲೂಕು ಮಟ್ಟ ಸೇರಿ ಯಾವುದೇ ಸ್ತರದಲ್ಲೂ ಕಬಡ್ಡಿ ಪಂದ್ಯಗಳು ನಡೆದರೆ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅಷ್ಟರಮಟ್ಟಿಗೆ ಕಬಡ್ಡಿ ಜನರನ್ನ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರೋಕಬಡ್ಡಿ ಬಂದ ಬಳಿಕ ಕಬಡ್ಡಿ ಕ್ರೀಡೆಗೆ ಒಂದು ಹೊಸ ಆಯಾಮವೇ ಸಿಕ್ಕಿದೆ. ಕ್ರಿಕೆಟ್ ಪಂದ್ಯಗಳ ರೀತಿ ಟಿವಿಯಲ್ಲಿ ಕಬಡ್ಡಿ ವೀಕ್ಷಿಸಲು ಜನರಿಗೆ ಅವಕಾಶ ಸಿಕ್ಕಿದೆ. ಕ್ಷಣಕ್ಷಣಕ್ಕೂ ರೋಚಕತೆ ಹುಟ್ಟಿಸುವ ಕಬಡ್ಡಿ ಆಟ ನಿಜಕ್ಕೂ ಮನರಂಜನೆಯ ರಸದೌತಣ.

ಬೆಂಗಳೂರು ಬುಲ್ಸ್ ಪ್ರೋಕಬಡ್ಡಿ ಲೀಗ್​ನ ಅತ್ಯಂತ ಜನಪ್ರಿಯ ತಂಡಗಳಲ್ಲೊಂದು. 2014ರಲ್ಲಿ ಮೊದಲ ಸೀಸನ್​ನಲ್ಲಿ ಬುಲ್ಸ್ ತಂಡದಲ್ಲಿ ಅಜಯ್ ಠಾಕೂರ್, ಮಂಜೀತ್ ಚಿಲ್ಲರ್ ಅವರಂಥ ಮಹಾನ್ ಕಬಡ್ಡಿ ಆಟಗಾರರಿದ್ದರು. ಸಹಜವಾಗಿ ಬೆಂಗಳೂರು ಬುಲ್ಸ್ ಜನಪ್ರಿಯತೆ ಉತ್ತುಂಗಕ್ಕೇರಿತು. ಆದರೆ, ಬುಲ್ಸ್ ತಂಡ ಚಾಂಪಿಯನ್ ಆಗಲು ಸಾಧ್ಯವಾಗಿದ್ದು 2018ರಲ್ಲಿ, ಅಂದರೆ ಆರನೇ ಸೀಸನ್​ನಲ್ಲಿ. ಅಜಯ್ ಠಾಕೂರ್, ಮಂಜೀತ್ ಚಿಲ್ಲರ್ ಅವರು ತಂಡದಲ್ಲಿ ಇಲ್ಲದಾಗಲೇ ಬುಲ್ಸ್ ಚಾಂಪಿಯನ್ ಎನಿಸಿತು. ತಂಡದಲ್ಲಿ ಆಗ ಸ್ಟಾರ್ ಆಟಗಾರ ಎನಿಸಿದ್ದ ರೋಹಿತ್ ಕುಮಾರ್ ಅವರು ಫಾರ್ಮ್​ನಲ್ಲಿಲ್ಲದಿದ್ದರೂ ಬುಲ್ಸ್ ಪ್ರೋಕಬಡ್ಡಿ ಲೀಗ್ ಜಯಿಸಲು ಸಾಧ್ಯವಾಯಿತು.

ಪವನ್ ಕುಮಾರ್ ಶೆಹ್ರಾವತ್ ಮಿಂಚಿನ ಸಂಚಾರ:

ದೆಹಲಿ ನಗರದವರಾದ ಪವನ್ ಕುಮಾರ್ ಶೆಹ್ರಾವತ್ ಅವರು ಮೂರನೇ ಸೀಸನ್​ನಲ್ಲಿ ಬೆಂಗಳೂರು ತಂಡಕ್ಕೆ ಬಂದವರು. ಆಗ ರೋಹಿತ್ ಕುಮಾರ್ ನೆರಳಿನಲ್ಲೇ ಇದ್ದ ಪವನ್ ಕುಮಾರ್ ಆರನೇ ಸೀಸನ್​ಲ್ಲಿ ಪ್ರಚಂಡ ಅವತಾರ ತಾಳಿದರು. ಆ ಸೀಸನ್​ನಲ್ಲಿ 271 ಅಂಕ ಕಲೆಹಾಕಿದರು. ಆ ಸೀಸನ್​ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರೇಡರ್ ಎನಿಸಿದರು. ಪಾಟ್ನಾ ಪೈರೇಟ್ಸ್​ನ ಸೂಪರ್ ಸ್ಟಾರ್ ರೇಡರ್ ಪ್ರದೀಪ್ ನರ್ವಾಲ್ ಕೂಡ ಪವನ್ ಎದುರು ಮಂಕಾಗುವಂತಿತ್ತು.

12 ಲೆಗ್​ಗಳಲ್ಲಿ ಪಂದ್ಯಾವಳಿ:

ಪ್ರೋಕಬಡ್ಡಿ ಲೀಗ್​ನ ಆರನೇ ಸೀಸನ್​ನಲ್ಲಿ 12 ತಂಡಗಳು ಇದ್ದವು. 12 ಲೆಗ್​ಗಳಲ್ಲಿ ಪಂದ್ಯಾವಳಿಯನ್ನ ನಡೆಸಲಾಯಿತು. ಎಲ್ಲಾ 12 ತಂಡಗಳ ತವರು ನೆಲದ ಸ್ಟೇಡಿಯಂಗಳಲ್ಲಿ ಒಂದೊಂದು ಲೆಗ್ ಪಂದ್ಯಗಳು ನಡೆದವು. ಪ್ರತೀ ಲೆಗ್​ನಲ್ಲಿ 11 ಪಂದ್ಯಗಳು ನಡೆದವು. ಪ್ರತೀ ತಂಡವೂ 22 ಪಂದ್ಯಗಳನ್ನ ಆಡಿತು.

ಇದನ್ನೂ ಓದಿ: Pavan Sehrawat- ಬೆಂಗಳೂರು ಬುಲ್ಸ್​ನ ಪವನ್ ರೇಡ್​ಗೆ ಬಂದರೆ ಬೆಚ್ಚುತ್ತಾರೆ ಡಿಫೆಂಡರ್ಸ್; ಇದಕ್ಕೆ ದಾಖಲೆಗಳೇ ಸಾಕ್ಷಿ

ಎರಡು ಝೋನ್​ಗಳಾಗಿ ವಿಭಜನೆ:

ಟೂರ್ನಿಯಲ್ಲಿ ಪಾಲ್ಗೊಂಡಿದ್ದ 12 ತಂಡಗಳನ್ನ ಎರಡು ಗುಂಪುಗಳಾಗಿ ವಿಭಾಗಿಸಲಾಯಿತು. ಎ ಝೋನ್​ನಲ್ಲಿ ಗುಜರಾತ್, ಮುಂಬೈ, ಡೆಲ್ಲಿ, ಪುಣೆ, ಜೈಪುರ್, ಹರ್ಯಾಣ ತಂಡಗಳಿದ್ದವು. ಬಿ ಝೋನ್​ನಲ್ಲಿ ಬೆಂಗಳೂರು, ಬೆಂಗಾಲ್, ಯುಪಿ, ಪಟ್ನಾ, ತೆಲುಗು ಮತ್ತು ತಮಿಳ್ ತಂಡಗಳಿದ್ದವು.

ಪ್ರತೀ ಗುಂಪಿನಿಂದ ತಲಾ ಮೂರು ತಂಡಗಳು ಪ್ಲೇ ಆಫ್ ಪ್ರವೇಶ ಪಡೆದವು. ಪ್ರತೀ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಒಂದು ತಂಡ ನೇರ ಕ್ವಾಲಿಫಯರ್​ಗೆ ಅರ್ಹತೆ ಪಡೆಯಿತು. ಗುಂಪಿನ ಇತರ ಎರಡು ತಂಡಗಳು ಎಲಿಮಿನೇಟರ್ ಹಂತಕ್ಕೆ ಸೇರಿಕೊಂಡವು.

ಬುಲ್ಸ್ ಮತ್ತು ಜೈಂಟ್ಸ್ ಟಾಪರ್ಸ್:

ಬಿ ಝೋನ್​ನಲ್ಲಿ ಬೆಂಗಳೂರು ಬುಲ್ಸ್ ಮೊದಲ ಸ್ಥಾನ ಪಡೆಯಿತು. ಬಂಗಾಳ್ ವಾರಿಯರ್ಸ್ ಮತ್ತು ಯುಪಿ ಯೋದ್ಧಾ ತಂಡಗಳು 2 ಮತ್ತು 3ನೇ ಸ್ಥಾನ ಪಡೆದವು. ಎ ಝೋನ್​ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಅಮೋಘ ಆಟ ಆಡಿ ಅಗ್ರಸ್ಥಾನ ಪಡೆಯಿತು. ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ನಂತರದ ಸ್ಥಾನ ಪಡೆದವು.

ಇದನ್ನೂ ಓದಿ: Bengaluru Bulls: ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ಕಬಡ್ಡಿ ಆಟಗಾರರು ಮತ್ತು ಅವರ ಬೆಲೆ

ಪ್ಲೇ ಆಫ್​ನ ಮೊದಲ ಕ್ವಾಲಿಫೈರ್​ನಲ್ಲಿ ಗುಜರಾತ್ ವಿರುದ್ಧ ಬೆಂಗಳೂರು ಬುಲ್ಸ್ ಭರ್ಜರಿ ಗೆಲುವು ಪಡೆದು ಫೈನಲ್ ತಲುಪಿತು. ಎಲಿಮಿನೇಟರ್ ಹಂತದಲ್ಲಿ ಯುಪಿ ಯೋದ್ಧಾ ಯಶಸ್ಸು ಸಾಧಿಸಿ ಎರಡನೇ ಕ್ವಾಲಿಫಯರ್ ಹಂತಕ್ಕೇರಿತು. ಆದರೆ, ಅಲ್ಲಿ ಯುಪಿ ಯೋಧ್ಧಾವನ್ನು ಗುಜರಾತ್ ಫಾರ್ಚೂನ್ ಜೈಂಟ್ಸ್ ಪರಾಭವಗೊಳಿಸಿ ಫೈನಲ್ ತಲುಪಿತು.

ರೋಚಕ ಫೈನಲ್:

ಬೆಂಗಳೂರು ಬುಲ್ಸ್ ಮತ್ತು ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡ ಮತ್ತೊಮ್ಮೆ ಫೈನಲ್​ನಲ್ಲಿ ಮುಖಾಮುಖಿಯಾದವು. ಕ್ವಾಲಿಫೈರ್ ಪಂದ್ಯಕ್ಕಿಂತಲೂ ಇದು ಜಿದ್ದಾಜಿದ್ದಿನಿಂದ ಕೂಡಿತ್ತು. ಪವನ್ ಕುಮಾರ್ ಸೆಹ್ರಾವತ್ ಅವರು ಮತ್ತೊಮ್ಮೆ ಅದ್ಭುತ ರೇಡಿಂಗ್ ಸಾಹಸ ಪ್ರದರ್ಶಿಸಿದರು. ಹೆಚ್ಚೂಕಡಿಮೆ ಏಕಾಂಗಿಯಾಗಿಯೇ ಅವರು ಬುಲ್ಸ್ ತಂಡವನ್ನ ಗೆಲುವಿನೆಡೆ ಕರೆದೊಯ್ದರು. ಮೊದಲಾರ್ಧದಲ್ಲಿ ಬುಲ್ಸ್ ಹಿಂದಿದ್ದರೂ ಪವನ್ ಕುಮಾರ್ ಎರಡನೇ ಅವಧಿಯಲ್ಲಿ ಅಂಕಗಳ ಮೇಲೆ ಅಂಕಗಳನ್ನ ಗಿಟ್ಟಿಸಿ ಬೆಂಗಳೂರಿಗೆ ಐತಿಹಾಸಿಕ ಗೆಲುವು ತಂದುಕೊಟ್ಟರು.
Published by:Vijayasarthy SN
First published: