36th National Games: ಅಮಿತ್ ಶಾರಿಂದ 36ನೇ ರಾಷ್ಟ್ರೀಯ ಗೇಮ್ಸ್‌ನ ಗೀತೆ, ಮ್ಯಾಸ್ಕಟ್ ಅನಾವರಣ

ಇಕೆಎ ಅರೆನಾ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಅಮಿತ್ ಶಾ

ಅಮಿತ್ ಶಾ

 • Share this:
  ಅಹಮದಾಬಾದ್(ಸೆ.03):  36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ (36th National Games ) ಗುಜರಾತ್ ಸಜ್ಜಾಗಿದ್ದು, ಭಾನುವಾರ ಸಂಜೆ ನಡೆಯಲಿರುವ ಇಲ್ಲಿನ ಇಕೆಎ ಅರೆನಾ ಟ್ರಾನ್ಸ್‌ಸ್ಟೇಡಿಯಾದಲ್ಲಿ (EKA Arena TransStadia) ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡಾ ಭಾಗವಹಿಸಲಿದ್ದಾರೆ. ಗುಜರಾತ್‌ನ ವಿವಿಧ ಕ್ಷೇತ್ರಗಳ ಗಣ್ಯರು ಸೇರಿ ಒಟ್ಟು 9000ಕ್ಕೂ ಹೆಚ್ಚು ಮಂದಿ ಈ ಆಕರ್ಷಕ ಸಮಾರಂಭಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

  ಈ ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್(ಲಾಂಛನ)ವನ್ನು ಅನಾವರಣಗೊಳಿಸಲಾಗುತ್ತದೆ. ಇದರ ಜೊತೆಗೆ ಕ್ರೀಡಾಕೂಟದ ವೆಬ್‌ಸೈಟ್, ಮೊಬೈಲ್ ಆ್ಯಪ್‌ಗಳೂ ಬಿಡುಗಡೆಗೊಳ್ಳಲಿವೆ. ಇದರೊಂದಿಗೆ ದೇಶದ ಅತಿದೊಡ್ಡ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

  ‘ಕ್ರೀಡಾಕೂಟವನ್ನು ಆಯೋಜಿಸಲು ನಾವು ಉತ್ಸುಕಗೊಂಡಿದ್ದು, ಆತಿಥ್ಯ ಹಕ್ಕು ಸಿಕ್ಕಿರುವುದು ಹೆಮ್ಮೆ ನೀಡಿದೆ. ಭಾರತದ ಅಗ್ರ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಆಗಮಿಸಲಿದ್ದಾರೆ ಎನ್ನುವ ವಿಚಾರ ಬಹಳ ಖುಷಿ ನೀಡುತ್ತಿದೆ. ಕ್ರೀಡಾಕೂಟಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.  ಗುಜರಾತ್‌ನ ಕ್ರೀಡಾ ಸಚಿವ ಹರ್ಷ್ ಸಾಂಗ್ವಿ, ಅಹಮದಾಬಾದ್‌ನ ಮಹಾಪೌರ ಕಿರಿಟ್‌ಕುಮಾರ್ ಜೆ. ಪರ್ಮಾರ್, ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯ ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ, ಕೇಂದ್ರ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಸುಜಾತ ಚತುರ್ವೇದಿ ಕಾರ‌್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

  36ನೇ ರಾಷ್ಟ್ರೀಯ ಕ್ರೀಡಾಕೂಟವು 7 ವರ್ಷಗಳ ಬಳಿಕ ಆಯೋಜನೆಗೊಳ್ಳುತ್ತಿದ್ದು, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರ ವರೆಗೂ ನಡೆಯಲಿದೆ. ಗುಜರಾತ್‌ನ 6 ನಗರಗಳಾದ ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರ, ರಾಜ್‌ಕೋಟ್ ಮತ್ತು ಭಾವ್‌ನಗರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್ ಸ್ಪರ್ಧೆಗಳನ್ನು ನವದೆಹಲಿಯಲ್ಲಿ ನಡೆಸಲಾಗುತ್ತದೆ.

  28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 7000ಕ್ಕೂ ಹೆಚ್ಚು ಕ್ರೀಡಾಪಟುಗಳು, 36ಕ್ಕೂ ಹೆಚ್ಚು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ದೇಸಿ ಕ್ರೀಡೆಗಳಾದ ಮಲ್ಲಕಂಭ ಮತ್ತು ಯೋಗಾಸನವನ್ನು ಸೇರ್ಪಡೆಗೊಳಿಸಲಾಗಿದೆ.

  ಕಳೆದ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟವು 2015ರಲ್ಲಿ ಕೇರಳದಲ್ಲಿ ನಡೆದಿತ್ತು.
  Published by:Precilla Olivia Dias
  First published: