ಭಾರತದ ಹಾಕಿ ವಿಶ್ವಕಪ್ ಕನಸು ಭಗ್ನ; ರೋಚಕ ಕ್ವಾರ್ಟರ್​ಫೈನಲ್​ನಲ್ಲಿ ನೆದರ್​ಲೆಂಡ್ಸ್ ಜಯಭೇರಿ

1975ರ ನಂತರ ಭಾರತ ತಂಡ ಯಾವುದೇ ಹಾಕಿ ವಿಶ್ವಕಪ್​ನಲ್ಲಿ ಕ್ವಾರ್ಟರ್​ಫೈನಲ್ ಹಂತ ದಾಟಿ ಹೋಗಿಲ್ಲ. ಆ ಕೊರತೆ ನೀಗಿಸುವ ಭಾರತದ ಆಸೆಗೆ ನೆದರ್ಲೆಂಡ್ಸ್ ಮಣ್ಣೆರಚಿದೆ.

ಭಾರತ ಹಾಕಿ ತಂಡ

ಭಾರತ ಹಾಕಿ ತಂಡ

  • News18
  • Last Updated :
  • Share this:
ಭುವನೇಶ್ವರ್(ಡಿ. 13): ಲೀಗ್ ಹಂತದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಭಾರತ ತಂಡ ಹಾಕಿ ವಿಶ್ವಕಪ್​ನ ಎಂಟರ ಸುತ್ತಿನಲ್ಲಿ ಶಾಕಿಂಗ್ ಸೋಲನುಭವಿಸಿ ನಿರ್ಗಮಿಸಿತು. ಇಂದು ನಡೆದ ಕ್ವಾರ್ಟರ್​ಫೈನಲ್​ನಲ್ಲಿ ನೆದರ್​ಲೆಂಡ್ಸ್ ತಂಡ ಆತಿಥೇಯ ಭಾರತವನ್ನು 2-1 ಗೋಲುಗಳಿಂದ ಸೋಲಿಸಿತು. ಈ ಮೂಲಕ 1975ರ ನಂತರ ಮೊದಲ ಬಾರಿ ಭಾರತ ತಂಡದ ವಿಶ್ವಕಪ್​ನ ಸೆಮಿಫೈನಲ್ ತಲುಪುವ ಆಸೆಗೆ ತಣ್ಣೀರು ಎರಚಿತು.

ಒಳ್ಳೆಯ ಫಾರ್ಮ್​ನಲ್ಲಿದ್ದ ಭಾರತ ತಂಡ ಈ ಕ್ವಾರ್ಟರ್​ಫೈನಲ್​ನಲ್ಲಿ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಪಂದ್ಯದ 12ನೇ ನಿಮಿಷದಲ್ಲಿ ಆಕಾಶ್​ದೀಪ್ ಸಿಂಗ್ ಗೋಲು ಗಳಿಸಿ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಆದರೆ, ಪಂದ್ಯದ ಮೊದಲ ಕ್ವಾರ್ಟರ್ ಮುಕ್ತಾಯಕ್ಕೆ ಅಂತಿಮ ಕ್ಷಣಗಳಿರುವಾಗ ನೆದರ್​ಲೆಂಡ್ಸ್ ಗೋಲು ಗಳಿಸಿ ಸರಿಸಮ ಸಾಧಿಸಿತು. ಆದರೆ, ಪಂದ್ಯದ 50ನೇ ನಿಮಿಷದಲ್ಲಿ ಮಿಂಕ್ ವಾನ್ ಡೆರ್ ವೀರ್ಡೆನ್ ಅವರು ವಿನ್ನಿಂಗ್ ಗೋಲು ಗಳಿಸಿ ಭಾರತದ ಕನಸನ್ನು ಭಗ್ನಗೊಳಿಸಿದರು.

ಅನೇಕ ಒಲಿಂಪಿಕ್ಸ್ ಚಿನ್ನಗಳನ್ನ ಬೇಟೆಯಾಡಿರುವ ಭಾರತ ಹಾಕಿ ತಂಡ 1975ರ ವಿಶ್ವಕಪ್​ನಲ್ಲಿ ಚಾಂಪಿಯನ್ ಎನಿಸಿತ್ತು. ಅದಾದ ನಂತರ ಈ 43 ವರ್ಷದಲ್ಲಿ ಒಮ್ಮೆಯೂ ಅದು ಸೆಮಿಫೈನಲ್ ಹಂತಕ್ಕೂ ಏರಲಾಗಲಿಲ್ಲ. ಈ ಬಾರಿ ಉತ್ತಮ ಫಾರ್ಮ್​ನಲ್ಲಿದ್ದ ಭಾರತವು ಈ ಸಾಧನೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಯಿತು.

ಆತಿಥೇಯ ಭಾರತವನ್ನು ಸೋಲಿಸಿದ ಸಂಭ್ರಮದಲ್ಲಿರುವ ನೆದರ್​ಲೆಂಡ್ಸ್ ತಂಡ ಸೆಮಿಫೈನಲ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇನ್ನು, ಪಾಕಿಸ್ತಾನವನ್ನು ಸೋಲಿಸಿದ ಬೆಲ್ಜಿಯಮ್ ತಂಡ ಇನ್ನೊಂದು ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಈ ಎರಡೂ ಸೆಮಿಫೈನಲ್ ಪಂದ್ಯಗಳು ಶನಿವಾರ ನಡೆಯಲಿವೆ.
First published: