News18 India World Cup 2019

ಹಿಮಾ ದಾಸ್ ಎಂಬ ಓಟದ ತಾರೆ, ಏರೋಪ್ಲೇನ್ ಕನಸು ಹಾಗೂ ಉಜ್ವಲ ಭವಿಷ್ಯ


Updated:August 26, 2018, 7:56 PM IST
ಹಿಮಾ ದಾಸ್ ಎಂಬ ಓಟದ ತಾರೆ, ಏರೋಪ್ಲೇನ್ ಕನಸು ಹಾಗೂ ಉಜ್ವಲ ಭವಿಷ್ಯ
ಜೂನಿಯರ್ ಅಥ್ಲೆಟಿಕ್ಸ್ ವೇಳೆಯ ಹಿಮಾ ದಾಸ್

Updated: August 26, 2018, 7:56 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 26): ಕಳೆದ ತಿಂಗಳು ಐಎಎಎಫ್ ಅಂಡರ್-20 ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 18 ವರ್ಷದ ಹಿಮಾ ದಾಸ್ ಚಿನ್ನ ಗೆದ್ದಾಗ ಇಡೀ ದೇಶದ ಕ್ರೀಡಾಪ್ರೇಮಿಗಳು ಹರ್ಷೋದ್ಗಾರ ಮಾಡಿದರು. ಭಾರತಕ್ಕೆ ಹೊಸ ಓಟದ ರಾಣಿ ಉದಯವಾಗಿದ್ದಳು. ಅಸ್ಸಾಮ್ ರಾಜ್ಯದ ಈ ಹುಡುಗಿ ಓಡುವ ಪರಿ ಉಸೇನ್ ಬೋಲ್ಟನ್ನು ನೆನಪಿಸುವಂತಿತ್ತು. ಅದಾಗಿ ಒಂದು ತಿಂಗಳ ನಂತರ, ಇಂದು ಹಿಮಾ ದಾಸ್ ಮತ್ತೊಮ್ಮೆ ಮಿಂಚಿನ ಸಂಚಾರ ಮಾಡಿದರು. 400 ಮೀಟರ್ ಓಟದಲ್ಲಿ ಎರಡೆರಡು ಬಾರಿ ರಾಷ್ಟ್ರೀಯ ದಾಖಲೆ ಮುರಿದರು. ಫೈನಲ್​ನಲ್ಲಿ 50.79 ಸೆಕೆಂಡ್​ಗಳಲ್ಲಿ ಓಡಿ ಹೊಸ ದಾಖಲೆ ಬರೆದರು. 51 ಸೆಕೆಂಡ್​ಗಿಂತ ಕಡಿಮೆ ಅವಧಿಯಲ್ಲಿ ಓಡಿದ ಮೊದಲ ಭಾರತೀಯ ಮಹಿಳೆ ಅವರೆನಿಸಿದರು. ಅಷ್ಟಾದರೂ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ತವರಿನಲ್ಲಿ ಧೀಂಗ್ ಎಕ್ಸ್​ಪ್ರೆಸ್ ಎಂದೇ ಖ್ಯಾತವಾಗುತ್ತಿರುವ ಹಿಮಾ ದಾಸ್ ಅವರ ಚಿನ್ನದ ಓಟಕ್ಕೆ ಅಡ್ಡಗಾಲಾಗಿದ್ದು ಬಹ್ರೇನ್ ದೇಶದ ಅಪ್ರತಿಮ ಓಟಗಾರ್ತಿ ಸಲ್ವಾ ನಾಸರ್. ನೈಜೀರಿಯನ್ ಸಂಜಾತೆಯಾದ 20 ವರ್ಷದ ಸಲ್ವಾ ನಾಸರ್ ದಿನೇ ದಿನೇ ಉತ್ತಮಗೊಳ್ಳುತ್ತಾ ಹೋಗುತ್ತಿರುವ ಓಟಗಾರ್ತಿ. ನಾಲ್ಕು ವರ್ಷಗಳ ಹಿಂದೆ 400 ಮೀಟರ್ ಓಟವನ್ನು 55.72 ಸೆಕೆಂಡ್​ನಲ್ಲಿ ಓಡುತ್ತಿದ್ದ ಸಲ್ವಾ ಕಳೆದ ತಿಂಗಳು 49.08 ಸೆಕೆಂಡ್​ನಲ್ಲಿ ಓಡಿ ಹೊಸ ಏಷ್ಯನ್ ದಾಖಲೆ ಸ್ಥಾಪಿಸಿದ್ದರು. ಇವರನ್ನ ಹಿಮಾ ದಾಸ್ ಸೋಲಿಸುವ ನಿರೀಕ್ಷೆ ಇರಲಿಲ್ಲ. ಆದರೆ, ಸಲ್ವಾ ಅವರಂತೆ ಹಿಮಾ ದಾಸ್ ಕೂಡ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸಿದ ಅಥ್ಲೀಟ್ ಆಗಿದ್ಧಾರೆ. ಕಳೆದ ಒಂದು ವರ್ಷದಲ್ಲಿ ಆಕೆಯ ವೇಗದಲ್ಲಿ ಆಗಿರುವ ಪ್ರಗತಿ ಅದ್ವಿತೀಯ.

ಏಷ್ಯನ್ ಗೇಮ್ಸ್​ನಲ್ಲಿ ಹಿಮಾ ದಾಸ್ ಅವರದ್ದು ಈವರೆಗಿನ ಬೆಸ್ಟ್ ಪರ್ಫಾರ್ಮೆನ್ಸ್ ಆಗಿದೆ. ಈ ಟೈಮಿಂಗನ್ನ ಉತ್ತಮಪಡಿಸಿಕೊಳ್ಳುವುದು ಹಿಮಾ ದಾಸ್ ಅವರ ಮುಂದಿರುವ ಬಹುದೊಡ್ಡ ಸವಾಲಾಗಿದೆ. 49.08 ಸೆಕೆಂಡ್​ನಲ್ಲಿ ಓಡಿರುವ ದಾಖಲೆ ಹೊಂದಿರುವ ಸಲ್ವಾ ನಾಸರ್ ಅವರು ಸದ್ಯಕ್ಕೆ ಹಿಮಾ ದಾಸ್ ಅವರ ಮುಂದಿರುವ ತಡೆ. ಇವರನ್ನ ಮೀರಲು ಹಿಮಾ ಸಾಕಷ್ಟು ಬೆವರುಹರಿಸಬೇಕು. ಅತ್ಯಾಧುನಿಕ ತರಬೇತಿ ಅತ್ಯಗತ್ಯವಿದೆ. ಇವೆಲ್ಲವನ್ನೂ ಮೀರಿ ಬೆಳೆಯುವ ಛಾತಿ ಹಿಮಾ ಅವರಲ್ಲಿದೆ. ಅವರಲ್ಲಿ ಚಾಂಪಿಯನ್ ಆಗುವ ಆ್ಯಟಿಟ್ಯೂಡ್ ಇದೆ. ಮುಂದಿನ ಒಂದು ಅಥವಾ ಎರಡು ವರ್ಷದಲ್ಲಿ ಹಿಮಾ ದಾಸ್ ಭಾರತದ ಗೋಲ್ಡನ್ ಗರ್ಲ್ ಆಗಿ ರೂಪುಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಡ್ಡಿಯಿಲ್ಲ.

ಚಿಕ್ಕಂದಿನ ಏರೋಪ್ಲೇನ್ ಕನಸು:
ಅಸ್ಸಾಮ್​ನ ನಗಾವೋನ್ ಜಿಲ್ಲೆಯ ಹಿಮಾ ದಾಸ್ ಅವರು ಚಿಕ್ಕಂದಿನಿಂದಲೂ ಬಹಳ ಅಗ್ರೆಸ್ಸಿವ್ ಆಗಿ ಬೆಳೆದವರು. ಬದುಕಿನ ಬಡತನವು ಅವರ ಎದೆಗುಂದಿಸಲಿಲ್ಲ. ಹೆಣ್ಣು ಎಂಬ ಕೀಳರಿಮೆ ಇರಲಿಲ್ಲ. ಹೆಣ್ಣು ಎಂಬ ಮೇಲರಿಮೆಯೂ ಇರಲಿಲ್ಲ. ಗಂಡು ಮಗನಂತೆಯೇ ಬೆಳೆದರು. ಹುಡುಗರು ಮಾಡುವ ಕೆಲಸವೆಲ್ಲವನ್ನೂ ಮಾಡುತ್ತಿದ್ದರು. ಹುಡುಗರಂತೇ ಕನಸು ಕಾಣುತ್ತಿದ್ದರು. ತನಗೆ ವಿಮಾನದಲ್ಲಿ ಹಾರಿ ವಿದೇಶಗಳಿಗೆ ಹೋಗುವ ಬಯಕೆ ಚಿಕ್ಕಂದಿನಲ್ಲಿ ಆಕೆಗೆ ಇತ್ತು. “ನೀನು ಅಲ್ಲಿಗೆ ಹೋಗಬೇಕೆಂದ್ರೆ ಕಷ್ಟಪಟ್ಟು ಓದಬೇಕು,” ಎಂದು ಅಪ್ಪ ಹೇಳುತ್ತಿದ್ದರು. ಆದರೆ, ಕಷ್ಟಪಟ್ಟು ಓದುವ ಬದಲು ಹಿಮಾ ದಾಸ್ ಕಷ್ಟಪಟ್ಟು ಓಡಿ ತಮ್ಮ ಬಯಕೆ ಈಡೇರಿಸಿಕೊಂಡಿದ್ದಾರೆ. ಅಥ್ಲೆಟಿಕ್ಸ್ ಕೂಟಗಳಲ್ಲಿ ಪಾಲ್ಗೊಳ್ಳಲು ವಿದೇಶಗಳಿಗೆ ವಿಮಾನ ಹತ್ತಿದ್ದಾಳೆ. ಇನ್ನೇನಿದ್ದರೂ ಈಕೆಯದ್ದು ಕನಸಿನ ಸಂಚಾರ.

ಹಿಮಾ ದಾಸ್ ಅವರ ಅತ್ಯುತ್ತಮ ಪೂರಕ ಗುಣವೆಂದರೆ ಅವರ ಆ್ಯಟಿಟ್ಯೂಡ್ ಮತ್ತು ಆತ್ಮವಿಶ್ವಾಸ. ತರಬೇತಿಗೆ ಎಂದೂ ಕೂಡ ಚೌಕಾಸಿ ಮಾಡಿದವರಲ್ಲ. ಹುಡುಗರೊಂದಿಗೆ ಆಟವಾಡುತ್ತಾ ಬೆಳೆದ ಈ ಹುಡುಗಿಗೆ ಸ್ವಭಾವದಲ್ಲೇ ಅಗ್ರೆಸ್ಸಿವ್​ನೆಸ್ ಇದೆ. ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಅಪರಿಮಿತ ಆತ್ಮವಿಶ್ವಾಸವಿದೆ. ಈಕೆಯ ಕೋಚ್ ನಬಾಜಿತ್ ಮಲಾಕರ್ ಅವರಂತೂ ತಮ್ಮ ಶಿಷ್ಯೆಯ ಬಗ್ಗೆ ಬಹು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಕೆ ಏನು ಬೇಕಾದರೂ ಮಾಡಬಲ್ಲಳು, ಎಷ್ಟು ಎತ್ತರಕ್ಕೆ ಬೇಕಾದರೂ ಏರಬಲ್ಲಳು ಎಂಬುದು ಇವರಿಗೆ ಮನವರಿಕೆಯಾಗಿದೆ.
Loading...

ಕೆಲ ವರ್ಷಗಳ ಹಿಂದೆ, ಊರಿನಲ್ಲಿ ಹುಡುಗರೊಂದಿಗೆ ಈಕೆ ಫುಟ್ಬಾಲ್ ಆಡುವುದನ್ನ ನೋಡಿದ ಮಲಾಕರ್ ಅವರಿಗೆ ಏನನಿಸಿತೋ ಗೊತ್ತಿಲ್ಲ, ಈಕೆಯಲ್ಲಿರುವ ಓಟದ ಪ್ರತಿಭೆ ಕಣ್ಣಿಗೆ ಬಿದ್ದಿತ್ತು. ಅವರು ಸೀದಾ ಹಿಮಾ ದಾಸ್ ಅವರ ಮನೆಗೆ ಹೋಗಿ, ಈಕೆಯನ್ನು ಗುವಾಹತಿಗೆ ಕರೆದು ತರಬೇತಿ ಕೊಡಿಸುವುದಾಗಿ ಹೇಳುತ್ತಾರೆ. ಈ ಗಟ್ಟಿಗಿತ್ತಿ ಹುಡುಗಿ, ದೂರದ ಊರಿಗೆ ಹೋಗಿ ಅಪರಿಚಿತ ನಾಡಿನಲ್ಲಿ ಅಪರಿಚಿತರೊಂದಿಗೆ ಇರಬೇಕೆಂದು ಹೆದರಲೇ ಇಲ್ಲ. ದೇಶದ ಪುಣ್ಯಕ್ಕೆ ಅಂದು ಆಕೆ ಗುವಾಹತಿಗೆ ಹೋಗುವ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ ಇವತ್ತು ಭಾರತಕ್ಕೆ ಹೊಸ ಓಟದ ರಾಣಿ ಬೆಳೆಯುತ್ತಿರಲಿಲ್ಲವೇನೋ.

ಏನೇ ಆಗಲಿ, ಹಿಮಾ ದಾಸ್ ಅವರ ಇನ್ಮುಂದಿನ ದಾರಿ ತುಸು ಕಠಿಣವೇ. ತಮ್ಮ ಓಟವನ್ನ ಉತ್ತಮಗೊಳಿಸಲು ಅತ್ಯಾಧುನಿಕ ತರಬೇತಿಯ ಜೊತೆ ಕಠಿಣ ಪರಿಶ್ರಮ ಹಾಕಲೇಬೇಕಾಗುತ್ತದೆ. 400 ಮೀಟರ್ ಓಟದಲ್ಲಿ ಹಿಮಾ ದಾಸ್ ಅವರ ವೈಯಕ್ತಿಕ ಅತ್ಯುತ್ತಮ ಸಾಧನೆ ಎಂದರೆ 50.79 ಸೆಕೆಂಡ್ಸ್. ಆದರೆ, 47.60 ಸೆಕೆಂಡ್ ಈಗಿರುವ ವಿಶ್ವದಾಖಲೆಯ ಸಮಯವಾಗಿದೆ. ವಿಶ್ವಮಟ್ಟದಲ್ಲಿ ಹಿಮಾ ದಾಸ್ ಗೋಲ್ಡನ್ ಹುಡುಗಿ ಆಗಬೇಕಾದರೆ ಆ ಎತ್ತರಕ್ಕೆ ಹೋಗುವಷ್ಟು ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲಿ ಹಿಮಾ ದಾಸ್​ಗೆ ಆಲ್ ದ ಬೆಸ್ಟ್ ಎನ್ನಲಡ್ಡಿಯಿಲ್ಲ.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...