ಬೆಂಗಳೂರು, ಜ. 7: ಪ್ರೋಕಬಡ್ಡಿ ಲೀಗ್ನ ಅಂಕಪಟ್ಟಿಯಲ್ಲಿ ತಳದಲ್ಲಿರುವ ನಾಲ್ಕು ತಂಡಗಳ ಮಧ್ಯೆ ಇಂದು ಭರ್ಜರಿ ಕಾಳಗ ನಡೆಯಿತು. ಇದರಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಹರ್ಯಾಣ ಸ್ಟೀಲರ್ಸ್ ತಂಡಗಳು ವಿಜಯಶಾಲಿಗಳಾದರೆ ಪುಣೇರಿ ಪಲ್ಟಾನ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ನಿರಾಸೆ ಅನುಭವಿಸಿದವು. ಪುಣೇರಿ ಪಲ್ಟಾನ್ ತಂಡಕ್ಕೆ ಸೋಲಿನಲ್ಲೂ ಒಂದು ಸಮಾಧಾನ ಎಂದರೆ ಅದಕ್ಕೆ ಒಂದು ಅಂಕ ಸಿಕ್ಕಿದ್ದು. ಈ ಒಂದು ಅಂಕದಿಂದಾಗಿ ಪುಣೇರಿ ಪಲ್ಟಾನ್ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಪಾತಾಳದಿಂದ ಒಂದು ಸ್ಥಾನ ಮೇಲಕ್ಕೇರಿದೆ.
ಈಗ ಟಾಪ್ 8 ತಂಡಗಳ ಮಧ್ಯೆ ಅಂಕಗಳ ಮಧ್ಯೆ ಹೆಚ್ಚೇನೂ ವ್ಯತ್ಯಾಸ ಇಲ್ಲ. ಅಗ್ರಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ 28 ಅಂಕ ಹೊಂದಿದ್ದರೆ ಎಂಟನೇ ಸ್ಥಾನದಲ್ಲಿರುವ ಬೆಂಗಾಲ್ ವಾರಿಯರ್ಸ್ 17 ಅಂಕಗಳನ್ನ ಹೊಂದಿದೆ. ಹೀಗಾಗಿ, ಪಂದ್ಯಾವಳಿ ಸ್ಪರ್ಧೆ ಸಂಪೂರ್ಣ ಮುಕ್ತವಾಗಿದೆ.
ಹರ್ಯಾಣ ಸ್ಟೀಲರ್ಸ್ vs ಬೆಂಗಾಲ್ ವಾರಿಯರ್ಸ್ ಪಂದ್ಯ:
ಇಂದಿನ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 41-37 ಅಂಕಗಳಿಂದ ರೋಚಕ ಗೆಲುವು ಪಡೆಯಿತು. ಕರ್ನಾಟಕದ ಬಿ.ಸಿ. ರಮೇಶ್ ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡ ಈ ಪಂದ್ಯದ ಮೊದಲಾರ್ಧದವರೆಗೂ ಹಿಡಿತ ಸಾಧಿಸಿತ್ತು. ಆದರೆ, ನಂತರದ ಸಮಯದಲ್ಲಿ ಸ್ಟೀಲರ್ಸ್ ತಂಡ ಭರ್ಜರಿ ಆಲ್ರೌಂಡ್ ಪ್ರದರ್ಶನದ ಮೂಲಕ ವಾರಿಯರ್ಸ್ ತಂಡಕ್ಕೆ ಗೆಲುವಿನ ಅವಕಾಶ ನೀಡಲಿಲ್ಲ.
ಇದನ್ನೂ ಓದಿ: PKL 8: ಪವನ್ ಶೆರಾವತ್ ಮಿಂಚು; ಬೆಂಗಳೂರು ಬುಲ್ಸ್ ಜಯಭೇರಿ; ಮತ್ತೆ ಅಗ್ರಸ್ಥಾನಕ್ಕೆ
ವಾರಿಯರ್ಸ್ ತಂಡದ ಮಣಿಂದರ್ ಸಿಂಗ್ ಮತ್ತೊಮ್ಮೆ ಸ್ಟಾರ್ ಕೆಂಪೈನರ್ ಎನಿಸಿದರು. 14 ಅಂಕಗಳನ್ನ ಗಳಿಸಿದ ಅವರು ಮತ್ತು ಇರಾನಿ ಆಟಗಾರ ಮೊಹಮ್ಮದ್ ನಬಿಬಕ್ಷ್ ಇಬ್ಬರೂ ಡೇಂಜರಸ್ ಎನಿಸಿದರು. ಕರಾವಳಿ ಹುಡುಗ ಸಚಿನ್ ವಿಠಲ ಡಿಫೆನ್ಸ್ನಲ್ಲಿ ವಾರಿಯರ್ಸ್ಗೆ ಶಕ್ತಿಯಾಗಿದ್ದರು. ಮತ್ತೊಬ್ಬ ಕರಾವಳಿ ಹುಡುಗ ಸುಕೇಶ್ ಹೆಗ್ಡೆ ನಿರಾಸೆ ಮೂಡಿಸಿದರು. 7 ಬಾರಿ ರೇಡ್ ಮಾಡಿದ ಸುಖೇಶ್ ಒಂದು ಬೋನಸ್ ಅಂಕವನ್ನಷ್ಟೇ ದಕ್ಕಿಸಿಕೊಂಡರು. ಒಂದೂ ಟಚ್ ಪಾಯಿಂಟ್ ಪಡೆಯಲಿಲ್ಲ.
ಜೈಪುರ್ ಪಿಂಕ್ ಪ್ಯಾಂಥರ್ಸ್ vs ಪುಣೇರಿ ಪಲ್ಟಾನ್:
ಇಂದು ನಡೆದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ 31-26 ಅಂಕಗಳಿಂದ ಸೋಲಿಸಿತು. ಅರ್ಜುನ್ ದೇಶ್ವಾಲ್ 11 ಅಂಕಗಳ ಮೂಲಕ ಮತ್ತೊಮ್ಮೆ ಮಿಂಚೆಬ್ಬಿಸಿದರು. ಪುಣೇರಿ ಪಲ್ಟನ್ ಪರ ಅಸ್ಲಮ್ ಇನಾಮ್ದಾರ್ ಆಲ್ರೌಂಡ್ ಪ್ರದರ್ಶನ ತೋರಿ 6 ಅಂಕ ಗಳಿಸಿದರು. ಸಬ್ಸ್ಟಿಟ್ಯೂಟ್ ಆಗಿ ಬಂದ ನಿತಿನ್ ತೋಮರ್ 8 ರೇಡ್ ಮಾಡಿ 4 ಅಂಕ ಗಳಿಸಿದರು. ಆದರೆ, ಎರಡೂ ತಂಡಗಳ ಮಧ್ಯೆ ವ್ಯತ್ಯಾಸ ಇದ್ದದ್ದು ಅರ್ಜುನ್ ದೇಶವಾಲ್ ಅವರ ಅಮೋಘ ಆಟ.
ಇದನ್ನೂ ಓದಿ: PKL 8: ನವೀನ್, ರಜನೀಶ್ ಸೂಪರ್20 ರೇಡ್; ಟೈಟಾನ್ಸ್ಗೆ ವೀರೋಚಿತ ಸೋಲು; ಪುಣೇರಿಗೆ ಸುಲಭ ಗೆಲುವು
ನಾಳೆ ಟ್ರಿಪಲ್ ಧಮಾಕ:
1) ಯು ಪಿ ಯೋದ್ಧಾ vs ದಬಂಗ್ ಡೆಲ್ಲಿ, ಸಮಯ ಸಂಜೆ 7:30ಕ್ಕೆ
2) ಯು ಮುಂಬಾ vs ತೆಲುಗು ಟೈಟಾನ್ಸ್, ಸಮಯ ರಾತ್ರಿ 8:30ಕ್ಕೆ
3) ಗುಜರಾತ್ ಜೈಂಟ್ಸ್ vs ಪಟ್ನಾ ಪೈರೇಟ್ಸ್, ಸಮಯ ರಾತ್ರಿ 9:30ಕ್ಕೆ
ಅಂಕಪಟ್ಟಿ:
1) ಬೆಂಗಳೂರು ಬುಲ್ಸ್: 28 ಅಂಕ
2) ದಬಂಗ್ ಡೆಲ್ಲಿ: 26 ಅಂಕ
3) ಪಟ್ನಾ ಪೈರೇಟ್ಸ್: 24 ಅಂಕ
4) ತಮಿಳ್ ತಲೈವಾಸ್: 22 ಅಂಕ
5) ಯು ಮುಂಬಾ: 20 ಅಂಕ
6) ಹರ್ಯಾಣ ಸ್ಟೀಲರ್ಸ್: 20 ಅಂಕ
7) ಜೈಪುರ್ ಪಿಂಕ್ ಪ್ಯಾಂಥರ್ಸ್: 18 ಅಂಕ
8) ಬೆಂಗಾಲ್ ವಾರಿಯರ್ಸ್: 17 ಅಂಕ
9) ಗುಜರಾತ್ ಜೈಂಟ್ಸ್: 14 ಅಂಕ
10) ಯು ಪಿ ಯೋದ್ಧಾ: 14 ಅಂಕ
11) ಪುಣೇರಿ ಪಲ್ಟನ್: 11 ಅಂಕ
12) ತೆಲುಗು ಟೈಟಾನ್ಸ್: 10 ಅಂಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ