ದ್ರಾವಿಡ್ ದಾಖಲೆಗಳ ಆಳಕ್ಕೆ ಇಳಿದರೆ ಸಿಕ್ಕುತ್ತೆ ಇನ್ನಷ್ಟು ದಾಖಲೆ; ಹ್ಯಾಪಿ ಬರ್ತ್​​ಡೇ ರಾಹುಲ್

ಟೆಸ್ಟ್ ಕ್ರಿಕೆಟ್​ನಲ್ಲಿ ದ್ರಾವಿಡ್ 13,288 ರನ್ ಗಳಿಸಿದ್ದಾರೆಂಬುದೇನೋ ಹೌದು. ಇದು ನಾಲ್ಕನೇ ಗರಿಷ್ಠ ಮೊತ್ತವಾಗಿದೆ. ಆದರೆ, ಅವರು ಎದುರಿಸಿದ ಬಾಲ್​ಗಳು ಬರೋಬ್ಬರಿ 31,258. ದ್ರಾವಿಡ್ ಬ್ಯಾಟುಗಾರನಾಗಿ ಕ್ರಿಕೆಟ್ ಕ್ರೀಸಿನಲ್ಲಿ 44,152 ನಿಮಿಷ ಆಡಿದ್ದಾರೆ. ಇದೂ ಕೂಡ ವಿಶ್ವದಾಖಲೆಯೇ.

Vinay Bhat | news18
Updated:January 11, 2019, 1:07 PM IST
ದ್ರಾವಿಡ್ ದಾಖಲೆಗಳ ಆಳಕ್ಕೆ ಇಳಿದರೆ ಸಿಕ್ಕುತ್ತೆ ಇನ್ನಷ್ಟು ದಾಖಲೆ; ಹ್ಯಾಪಿ ಬರ್ತ್​​ಡೇ ರಾಹುಲ್
ರಾಹುಲ್ ದ್ರಾವಿಡ್ (Image: Twiiter @CricfreakTweets)
Vinay Bhat | news18
Updated: January 11, 2019, 1:07 PM IST
ಬೆಂಗಳೂರು (ಜ. 11): ರಾಹುಲ್ ದ್ರಾವಿಡ್ ಅಂದ್ರೆ ಕ್ರಿಕೆಟ್ ಜಗತ್ತಿನಲ್ಲಿ “ದಿ ವಾಲ್” ಎಂದೇ ಫೇಮಸ್. ವಿಶ್ವದ ಅತ್ಯಂತ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ರಾಹುಲ್ ಹೆಸರು ಇದ್ದೇ ಇರುತ್ತದೆ. ಜಿ. ಆರ್. ವಿಶ್ವನಾಥ್ ಬಳಿಕ ಭಾರತ ಕಂಡ ಅತ್ಯಂತ ಪರಿಪಕ್ವ ಮತ್ತು ಪರಿಶುದ್ಧ ಬ್ಯಾಟುಗಾರರೆಂದರೆ ಅದು ರಾಹುಲ್ ದ್ರಾವಿಡ್. ಎಂತಹ ಪಿಚ್ ಇದ್ದರೂ ಬೌಲರ್​ಗಳನ್ನು ಬಸವಳಿಸಿ ಬೆಂಡಾಗಿಸುವಷ್ಟು ಛಾತಿ ಅವರದ್ದು.

ರಾಹುಲ್ ದ್ರಾವಿಡ್ ಭಾರತದ ಪರ 164 ಟೆಸ್ಟ್ ಪಂದ್ಯಗಳನ್ನಾಡಿ 13,288 ರನ್ ಗಳಿಸಿದ್ದಾರೆ. 344 ಏಕದಿನ ಪಂದ್ಯಗಳನ್ನ ಆಡಿ 10,889 ರನ್ ಗಳಿಸಿದ್ದಾರೆ. 36 ಟೆಸ್ಟ್ ಶತಕ ಹಾಗೂ 12 ಏಕದಿನ ಶತಕಗಳನ್ನ ಭಾರಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ಈ ದಾಖಲೆಗಳನ್ನು ನೋಡಿದರೆ ಅಂತಹ ವಿಶೇಷತೆ ಎನಿಸದಿರಬಹುದು. ರಾಹುಲ್ ದ್ರಾವಿಡ್ ಮಹೋನ್ನತ ಕ್ರಿಕೆಟಿಗನೆಂಬುದಕ್ಕೆ ಇದು ಪಕ್ಕಾ ಸಾಕ್ಷ್ಯ ಒದಗಿಸದಿರಬಹುದು. ಕ್ರಿಕೆಟ್ ಕ್ರೀಸಿನಲ್ಲಿ ಬ್ಯಾಟುಗಾರನಾಗಿ ರಾಹುಲ್ ಎಂತಹ ದೈತ್ಯ ಎಂಬುದನ್ನು ತಿಳಿಯಬೇಕಾದರೆ ಸ್ವಲ್ಪ ಇನ್ನಷ್ಟು ಆಳಕ್ಕಿಳಿದು ದಾಖಲೆಗಳನ್ನು ಬಗೆಯಬೇಕಾಗುತ್ತದೆ.

ಇದನ್ನೂ ಓದಿ: ಪಾಂಡ್ಯ-ರಾಹುಲ್ ಹೇಳಿಕೆಗೂ ಟೀಂ ಇಂಡಿಯಾಕ್ಕೂ ಯಾವುದೇ ಸಂಬಂಧವಿಲ್ಲ: ವಿರಾಟ್ ಕೊಹ್ಲಿ

ಟೆಸ್ಟ್ ಕ್ರಿಕೆಟ್​ನಲ್ಲಿ ದ್ರಾವಿಡ್ 13,288 ರನ್ ಗಳಿಸಿದ್ದಾರೆಂಬುದೇನೋ ಹೌದು. ಇದು ನಾಲ್ಕನೇ ಗರಿಷ್ಠ ಮೊತ್ತವಾಗಿದೆ. ಆದರೆ, ಅವರು ಎದುರಿಸಿದ ಬಾಲ್​ಗಳು ಬರೋಬ್ಬರಿ 31,258. ದ್ರಾವಿಡ್ ಬ್ಯಾಟುಗಾರನಾಗಿ ಕ್ರಿಕೆಟ್ ಕ್ರೀಸಿನಲ್ಲಿ 44,152 ನಿಮಿಷ ಆಡಿದ್ದಾರೆ. ಇದೂ ಕೂಡ ವಿಶ್ವದಾಖಲೆಯೇ. ಇಷ್ಟು ಹೊತ್ತು ಮೈದಾನದಲ್ಲಿ ಬ್ಯಾಟ್ ಹಿಡಿದು ಆಟವನ್ನು ಆವರಿಸಿದ್ದು ನಿಜಕ್ಕೂ ಅದ್ಭುತವೇ.

ಎಂತಹ ಸಂದರ್ಭಕ್ಕೂ ಸೈ:

ರಾಹುಲ್ ದ್ರಾವಿಡ್ ಪಕ್ಕಾ ಜೆಂಟಲ್​ಮ್ಯಾನ್. ಜೊತೆಗೆ ಪಕ್ಕಾ ಪ್ರೊಫೆಷನಲ್. ಹಾರ್ಡ್​ಕೋರ್ ಕ್ರಿಕೆಟಿಗ. ಬ್ಯಾಟಿಂಗ್ ಅಷ್ಟೇ ಅಲ್ಲ, ಕೀಪರ್ ಆಗಿಯೂ ಜನರ ಮನದಲ್ಲಿ ನೆನಪಿನಲ್ಲಿಳಿಯುವ ಧೀಮಂತ ಕ್ರಿಕೆಟರ್. ಯಾವಾಗಲೂ ಫಸ್ಟ್ ಡೌನ್​ನಲ್ಲಿ ಬ್ಯಾಟ್ ಮಾಡುತ್ತಿದ್ದವನಿಗೆ ಇನ್ನಿಂಗ್ಸ್ ಓಪನ್ ಮಾಡಿ ಅಂದ್ರೆ ಹೇಗಿದ್ದೀತು? ಸೆಹ್ವಾಗ್ ಗಾಯಗೊಂಡಾಗ ಅಂಥದ್ದೊಂದು ಚಾಲೆಂಜನ್ನು ದ್ರಾವಿಡ್ ಮುಲಾಜಿಲ್ಲದೇ ಸ್ವೀಕರಿಸಿದರು.

ತಂಡದಲ್ಲಿ ವಿಕೆಟ್ ಕೀಪರ್ ಕೈಬಿಟ್ಟು 7 ಬ್ಯಾಟುಗಾರರನ್ನು ಆಡಿಸಬೇಕೆಂದು ಮ್ಯಾನೇಜ್ಮೆಂಟ್ ನಿರ್ಧರಿಸಿದಾಗ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ನಿಭಾಯಿಸಿದವರು ರಾಹುಲ್ ದ್ರಾವಿಡ್.
Loading...

ಕ್ಯಾಪ್ಟನ್ ತಾತ್ಕಾಲಿಕ ಅನುಪಸ್ಥಿತಿಯಲ್ಲಿ ತಂಡದ ನೊಗ ಹೊರುವವರು ದ್ರಾವಿಡ್. ಬೌಲಿಂಗ್ ಮಾಡಬೇಕೆಂದರೂ ಇವರು ರೆಡಿ. ಕೊನೆಗೆ, ತಂಡದಲ್ಲಿ ಕೆಲ ಹಿರಿಯರು ಬೇಗನೇ ರಿಟೈರ್ ಆಗಿ ಹೊಸಬರಿಗೆ ಅವಕಾಶ ಕೊಡುವಂತಹ ಸಂದರ್ಭ ಬಂದಾಗ ಮೊದಲು ನಿವೃತ್ತರಾದವರು ರಾಹುಲ್ ದ್ರಾವಿಡ್. ಅಂತಹ ಅದ್ಭುತ ಜೆಂಟಲ್​ಮ್ಯಾನ್ ಕ್ರಿಕೆಟರ್ ರಾಹುಲ್ ದ್ರಾವಿಡ್.

ಇದನ್ನೂ ಓದಿ: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಇಂದು 46ನೇ ಜನ್ಮ ದಿನ ಸಂಭ್ರಮ

ಕಾಸ್ಮೊಪೊಲಿಟಿನ್ ಮನುಷ್ಯ:

ರಾಹುಲ್ ದ್ರಾವಿಡ್ ಹುಟ್ಟಿದ್ದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ. ಅವರ ತಾಯಿ ಪುಷ್ಪಾ ದ್ರಾವಿಡ್ ಮರಾಠಿ; ತಂದೆ ಶರದ್ ದ್ರಾವಿಡ್ ತಮಿಳು ಅಯ್ಯರ್ ಬ್ರಾಹ್ಮಣರು. ಅವರು ಇಂದೋರ್​ನಲ್ಲಿ ಇದ್ದುದ್ದರಿಂದ ಅಲ್ಲಿನ ಜನ ದ್ರಾವಿಡ ಜನಾಂಗದ ರಾಹುಲ್ ಅಜ್ಜನನ್ನು ದ್ರಾವಿಡಿಯನ್ ಎಂದು ಕರೆಯುತ್ತಿದ್ದರು. ಅದೇ ದ್ರಾವಿಡ್ ಆಗಿ ಅವರ ಕುಟುಂಬದ ಹೆಸರಾಯಿತು.

ಹುಟ್ಟಿದ್ದು ಮಧ್ಯ ಪ್ರದೇಶದಲ್ಲಾದರೂ ಬೆಳೆದಿದ್ದೆಲ್ಲಾ ಕಾಸ್ಮೊಪೊಲಿಟನ್ ನಗರಿ ಬೆಂಗಳೂರಲ್ಲೇ. ಕ್ರಿಕೆಟ್ ವರಸೆ ಕಲಿತದ್ದೂ ಕರುನಾಡಿನಲ್ಲೇ. ಎಲ್ಲವನ್ನೂ, ಎಲ್ಲರನ್ನೂ ಪಕ್ಷಪಾತವಿಲ್ಲದೇ ನೋಡುವ ಕಲೆ ಬಂದಿದ್ದು ಈ ಕಾಸ್ಮೊಪೊಲಿಟನ್ ಸಂಸ್ಕೃತಿಯಿಂದಲೇ.

ಈಗ ರಾಹುಲ್ ದ್ರಾವಿಡ್ ಅತೀ ಇಷ್ಟಪಡುವ ಮತ್ತು ಅವರ ಅಭಿಮಾನಿಗಳು ಬಯಸುವ ಕೆಲಸ ಮಾಡುತ್ತಿದ್ದಾರೆ. ಜೂನಿಯರ್ ಟೀಂ ಇಂಡಿಯಾದ ಕೋಚ್ ಆಗಿ ಅವರು ಎಳೆಯ ಕ್ರಿಕೆಟಿಗರನ್ನು ರೂಪಿಸುವ ಕಾಯಕ ಮಾಡುತ್ತಿದ್ದಾರೆ. ಕ್ರಿಕೆಟ್ ಕಲಿಯಲು ರಾಹುಲ್​ಗಿಂತ ಬೇರೆ ಮಾಸ್ಟರ್ ಬೇಕಾ..? ಕ್ರಿಕೆಟ್ ಅಷ್ಟೇ ಅಲ್ಲ, ಆಟಕ್ಕೆ ಪೂರಕವಾದ ವ್ಯಕ್ತಿತ್ವ ಕಲಿಯಲೂ ಅವರಿಗಿಂತ ಬೇರಿನ್ನಾರು ಗುರುಗಳಿದ್ದಾರು..?

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ