ಈ ವರ್ಷ ಶತಕಗಳ ಮೇಲೆ ಶತಕ ಬಾರಿಸುತ್ತಿರುವ ಗಿಲ್ (Shubman Gill) ಚೊಚ್ಚಲ ಐಪಿಎಲ್ ಶತಕವನ್ನೂ ಸಿಡಿಸಿ ಮಿಂಚಿದ್ದಾರೆ. ಹೌದು, ಐಪಿಎಲ್ 2023ರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಗಿಲ್ ಶತಕ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು. ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ (SRH vs GT) 20 ಓವರ್‌ಗಳಲ್ಲಿ 9 ವಿಕೆಟ್‌ಗೆ 188 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸುವ ಮೂಲಕ 34 ರನ್ ಗಳ ಹೀನಾಯ ಸೋಲನ್ನಪ್ಪಿತು. ಈ ಮೂಲಕ ಗುಜರಾತ್ ತಂಡ ಐಪಿಎಲ್ 2023ರ (IPL 2023) ಮೊದಲ ತಂಡವಾಗಿ ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಿದೆ.
ಕ್ಲಾಸೆನ್ ಕ್ಲಾಸಿಕ್ ಆಟ:
ಗುಜರಾತ್ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ 5 ರನ್, ರಾಹುಲ್ ತ್ರಿಪಾಠಿ 1 ರನ್, ನಾಯಕ ಏಡೆನ್ ಮಾರ್ಕ್ರಾಮ್ 10 ರನ್, ಅಬ್ದುಲ್ ಸಮದ್ 4 ರನ್, ಅನ್ಮೋಲ್ಪ್ರೀತ್ ಸಿಂಗ್ 5 ರನ್, ಸನ್ವಿರ್ ಸಿಂಗ್ 7 ರನ್, ಮಾರ್ಕೊ ಜಾನ್ಸೆನ್ 3 ರನ್, ಹೆನ್ರಿಚ್ ಕ್ಲಾಸೆನ್ 44 ಎಸೆತ 3 ಸಿಕ್ಸ್ ಮತ್ತು 4 ಫೋರ್ ಮೂಲಕ 64 ರನ್ ಮತ್ತು ಭುವನೇಶ್ವರ್ ಕುಮಾರ್ 27 ರನ್ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ.
ಪ್ಲೇಆಫ್ಗೆ ಲಗ್ಗೆಯಿಟ್ಟ ಗುಜರಾತ್:
ಇನ್ನು, ಗುಜರಾತ್ ಟೈಟನ್ಸ್ ತಂಡವು ಈ ಬಾರಿ ಐಪಿಎಲ್ನ ಮೊದಲ ತಂಡವಾಗಿ ಪ್ಲೇಆಫ್ಗೆ ಅಧಿಕೃತವಾಗಿ ಲಗ್ಗೆಯಿಟ್ಟಿದೆ. ಆದರೆ ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಬಳಿಕ ಇದೀಗ ಐಪಿಎಲ್ 2023ರಿಂದ ಹೊರಬಿದ್ದಿದೆ. ಗುಜರಾತ್ ತಂಡ ಆಡಿರುವ 13 ಪಂದ್ಯದಲ್ಲಿ 9ರಲ್ಲಿ ಗೆದ್ದು 4ರಲ್ಲಿ ಸೋಲುವ ಮೂಲಕ 18 ಅಂಕದೊಂದಿಗೆ ಪ್ಲೇಆಫ್ ಪ್ರವೇಶಿಸಿದೆ. ಆದರೆ ಹೈದರಾಬಾದ್ ತಂಡ ಆಡಿರುವ 12ರಲ್ಲಿ 4ರಲ್ಲಿ ಗೆದ್ದು 8ರಲ್ಲಿ ಸೋಲುವ ಮೂಲಕ ಕೇವಲ 8 ಅಂಕದೊಂದಿಗೆ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
ಗಿಲ್-ಸಾಯಿ ಭರ್ಜರಿ ಜೊತೆಯಾಟ:
ಟಾಸ್ ಗೆದ್ದ ಸನ್ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಲಾಯಿತು. ಗುಜರಾತ್ ಪರ ಸಹಾ (0) ಖಾತೆ ತೆರೆಯದೆ ಪೆವಿಲಿಯನ್ ತಲುಪಿದರು. ಆದರೆ ಒಂದು ತಿಂಗಳ ವಿರಾಮದ ನಂತರ ಅಂತಿಮ ತಂಡಕ್ಕೆ ಮರಳಿದ ಸಾಯಿ ಸುದರ್ಶನ್ ಅವರೊಂದಿಗೆ ಶುಭಮನ್ ಗಿಲ್ ಉತ್ತಮ ಜೊತೆಯಾಟವಾಡಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 147 ರನ್ ಸೇರಿಸಿದರು. ಆದರೆ 90 ರನ್ ಆಗುವವರೆಗೂ ಆಕ್ರಮಣಕಾರಿ ಆಟವಾಡಿದ ಶುಭಮನ್ ಗಿಲ್ ಆ ಬಳಿಕ ನಿಧಾನಕ್ಕೆ ಸಾಗಿದರು.
ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ (8), ಮಿಲ್ಲರ್ (7), ರಾಹುಲ್ ತೆವಾಟಿಯಾ (3) ಮತ್ತು ರಶೀದ್ ಖಾನ್ (0) ತಕ್ಷಣವೇ ಔಟಾದರು. ಶತಕದ ಬಳಿಕ ಗಿಲ್ ಕೂಡ ಪೆವಿಲಿಯನ್ ತಲುಪಿದರು. ಒಂದು ಹಂತದಲ್ಲಿ 147/1 ಸ್ಕೋರ್ ಮಾಡಿದ್ದ ಗುಜರಾತ್ ಟೈಟಾನ್ಸ್ ಕೊನೆಯ 8 ವಿಕೆಟ್ ಗಳನ್ನು ಕೇವಲ 41 ರನ್ ಗಳಲ್ಲಿ ಕಳೆದುಕೊಂಡಿತು. ಕೊನೆಯ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಕೇವಲ 2 ರನ್ ನೀಡಿ 4 ವಿಕೆಟ್ ಪಡೆದರು. ಅವರಲ್ಲಿ ಒಬ್ಬರು ರನ್ ಔಟ್ ಆಗಿದ್ದಾರೆ.
ಚೊಚ್ಚಲ ಶತಕ ಸಿಡಿಸಿದ ಶುಭ್ಮನ್:
ಇನ್ನು, ಹೈದರಾಬಾದ್ ವಿರುದ್ಧ ಅಹಮದಾಬಾದ್ ನಲ್ಲಿ ಗಿಲ್ ಐಪಿಎಲ್ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದರು. ಕೇವಲ 56 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದರು. ಈ ಶತಕದ ನಂತರ, ಗಿಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಯುವ ಶತಕ ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಈ ವರ್ಷ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಪರ ಶುಭಮನ್ ಗಿಲ್ ಶತಕ ಸಿಡಿಸಿದ್ದಾರೆ. ಆದರೆ ಇದೀಗ ಐಪಿಎಲ್‌ನಲ್ಲೂ ಶತಕ ಸಿಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ