ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಜಸ್ಥಾನ ಮತ್ತು ಗುಜರಾತ್ (GT vs RR) ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ 17.5 ಓವರ್ ಗಳಲ್ಲಿ 118 ರನ್ ಗಳಿಗೆ ಆಲೌಟಾಯಿತು. ಈ ಮೊತ್ತ ಬೆನ್ನಟ್ಟಿದ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು 13.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸುವ ಮೂಲಕ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಮತ್ತೆ ಅಗ್ರಸ್ಥಾನದಲ್ಲಿ ಉಳಿದುಕೊಂಡಿತು. ಜೊತೆಗೆ 7 ಪಂದ್ಯಗಳನ್ನು ಗೆಲ್ಲುವ ಮೂಲಕ 14 ಪಾಯಿಂಟ್ ಆಗಿದ್ದು, ಪ್ಲೇಆಫ್ ಸನಿಹಕ್ಕೆ ಬಂದು ನಿಂತಿದೆ.
ಕೊನೆಯಲ್ಲಿ ಅಬ್ಬರಿಸಿದ ನಾಯಕ ಹಾರ್ದಿಕ್:
ರಶೀದ್ ಖಾನ್ ತಮ್ಮ 4 ಓವರ್‌ಗಳಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದರು. ಇದೇ ವೇಳೆ ನೂರ್ ಅಹಮದ್ 3 ಓವರ್ ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು. 119 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್‌ಗೆ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 71 ರನ್ ಸೇರಿಸಿದರು. ಗಿಲ್ 36 ರನ್ ಗಳಿಸಿ ಔಟಾದರು. ವೃದ್ಧಿಮಾನ್ ಸಹಾ 41 ರನ್ ಗಳಿಸಿ ಮಿಂಚಿದರು. ಇದಾದ ಬಳಿಕ ಬಂದ ನಾಯಕ ಹಾರ್ದಿಕ್ ಪಾಂಡ್ಯ ವೇಗದ ಬ್ಯಾಟಿಂಗ್ ನಡೆಸಿ ಗುಜರಾತ್ ಗೆ ಜಯ ತಂದುಕೊಟ್ಟರು. ಪಾಂಡ್ಯ ಕೇವಲ 15 ಎಸೆತದಲ್ಲಿ 3 ಸಿಕ್ಸ್ ಮತ್ತು 3 ಬೌಂಡರಿಗಳ ಮೂಲಕ 39 ರನ್ ಗಳಿಸಿ ಮಿಂಚಿದರು.
A 𝐂𝐎𝐍𝐕𝐈𝐍𝐂𝐈𝐍𝐆 𝐕𝐈𝐂𝐓𝐎𝐑𝐘 for the Titans! ⚡💥#AavaDe | #RRvGT | #TATAIPL 2023 pic.twitter.com/B81TwT3D5j
— Gujarat Titans (@gujarat_titans) May 5, 2023
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ರಾಯಲ್ಸ್ ಆಘಾತಗಳ ಮೇಲೆ ಆಘಾತಗಳನ್ನು ಎದುರಿಸಿತು. ಎರಡು ಬೌಂಡರಿಗಳೊಂದಿಗೆ ಟಚ್ ನಲ್ಲಿ ಕಾಣಿಸಿಕೊಂಡ ಜೋಸ್ ಬಟ್ಲರ್ (8) ಹಾರ್ದಿಕ್ ಬೌಲಿಂಗ್ ನಲ್ಲಿ ಔಟಾದರು. ಇದರೊಂದಿಗೆ 11 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಕೆಲಕಾಲ ಮಿಂಚಿದರು. ಯಶಸ್ವಿ ಹಾಗೂ ಸಂಜು ಸ್ಯಾಮ್ಸನ್ ಅವರ ತಪ್ಪುಗಳಿಂದ ರಾಜಸ್ಥಾನ ಮತ್ತೊಂದು ವಿಕೆಟ್ ಕಳೆದುಕೊಂಡಿತು. 14 ರನ್ ಗಳಿಸಿದ್ದ ಯಶಸ್ವಿ ರನೌಟ್ ಆದರು. ಅಲ್ಲಿಂದ ಸತತ ಅಂತರದಲ್ಲಿ ರಾಜಸ್ಥಾನ ವಿಕೆಟ್ ಕಳೆದುಕೊಂಡಿತು. 20 ಎಸೆತಗಳಲ್ಲಿ 30 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಜೋಶುವಾ ಲಿಟಲ್ ಔಟ್ ಮಾಡಿದರು.
ಇದನ್ನೂ ಓದಿ: IPL 2023: ಐಪಿಎಲ್ ಯಾಕೆ ಆಡ್ತಿದ್ದಾರೆ ಅರ್ಥವಾಗ್ತಿಲ್ಲ! ದೇಶಕ್ಕಿಂತ ಹಣವೇ ಮುಖ್ಯವಾಯ್ತಾ?
ರಾಜಸ್ಥಾನ್ ಪರ ಅಶ್ವಿನ್ (2), ರಯಾನ್ ಪರಾಗ್ (4) ಮತ್ತು ಹೆಟ್ಮೆಯರ್ (7) ಅವರನ್ನು ರಶೀದ್ ಖಾನ್ ಔಟಾದರು. ದೇವದತ್ ಪಡಿಕ್ಕಲ್ (12) ಮತ್ತು ಧ್ರುವ್ ಜುರೈಲ್ (9) ರನ್ ಗಳಿಸಿ ನೂರ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ರಾಜಸ್ಥಾನ 96 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮವಾಗಿ ಬೌಲ್ಟ್ 15 ರನ್ ಗಳಿಸಿದರು. ಇದು ರಾಜಸ್ಥಾನದ ಇನ್ನಿಂಗ್ಸ್‌ನಲ್ಲಿ ಎರಡನೇ ಗರಿಷ್ಠ ಸ್ಕೋರ್ ಆಗಿದೆ.
ಪ್ಲೇಆಫ್ ಸನಿಹಕ್ಕೆ ಗುಜರಾತ್:
ಇನ್ನು, ಗುಜರಾತ್ ಟೈಟನ್ಸ್ ತಂಡವು 10 ಪಂದ್ಯದಲ್ಲಿ 7ರಲ್ಲಿ ಗೆದ್ದು 3ರಲ್ಲಿ ಸೋಲುವ ಮೂಲಕ 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಗುಜರಾತ್ ಪ್ಲೇಆಫ್ಗೆ ಎಂಟ್ರಿಕೊಡಲಿದೆ. ಉಳದಂತೆ 2ನೇ ಸ್ಥಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್, 3ನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 4ನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ