• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಶಾಲೆಗಳಿಂದ ಭವಿಷ್ಯದ ಒಲಿಂಪಿಕ್ ಸ್ಟಾರ್​ಗಳನ್ನ ಹೆಕ್ಕಿ ತೆಗೆಯಲು ಸರ್ಕಾರ ಯೋಜನೆ

ಶಾಲೆಗಳಿಂದ ಭವಿಷ್ಯದ ಒಲಿಂಪಿಕ್ ಸ್ಟಾರ್​ಗಳನ್ನ ಹೆಕ್ಕಿ ತೆಗೆಯಲು ಸರ್ಕಾರ ಯೋಜನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕ್ರೀಡಾಪಟುಗಳು ಅಂತರರಾಷ್ಟ್ರೀಯವಾಗಿ ಮಿಂಚಬೇಕಾದರೆ ಎಳೆವಯಸ್ಸಿನಿಂದಲೂ ನುರಿತ ತರಬೇತಿ ಪಡೆಯುವುದು ಅಗತ್ಯ. ಹೀಗಾಗಿ, ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯು ಅಕಾಡೆಮಿಕ್ ಜೊತೆಗೆ ಕ್ರೀಡೆಗೂ ಪ್ರಾಮುಖ್ಯತೆ ಕೊಡುತ್ತಿದೆ.

  • News18
  • 5-MIN READ
  • Last Updated :
  • Share this:

ಕ್ರೀಡೆ ದೈಹಿಕ ಜೊತೆಗೆ ಮಾನಸಿಕ ಸದೃಢತೆಯನ್ನೂ ಬೆಳೆಸುತ್ತದೆ. ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಯಲೂ ಸಹಕಾರಿಯಾಗುತ್ತದೆ. ಅಕಾಡೆಮಿಕ್ ಓದಿನ ಜೊತೆಗೆ ಕ್ರೀಡೆಯೂ ಬೆರೆತರೆ ಮಕ್ಕಳ ಮಾನಸಿಕವಾಗಿ ಬೆಳವಣಿಗೆ ಅದ್ಭುತವಾಗಿ ಇರುತ್ತದೆ ಎಂಬುದು ಶಿಕ್ಷಣ ತಜ್ಞರ ಅನಿಸಿಕೆ. ಅತ್ಯುತ್ತಮ ಕ್ರೀಡಾಪಟುಗಳನ್ನ ತಯಾರಿಸಬೇಕೆಂದರೆ ಚಿಕ್ಕಂದಿನಲ್ಲೇ ಅವರನ್ನ ಕ್ರೀಡೆಯತ್ತ ಉತ್ತೇಜಿಸಿ ಪ್ರತಿಭಾನ್ವಿತರನ್ನ ಗುರುತಿಸಿ ಸೂಕ್ತ ತರಬೇತಿ ನೀಡುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲೂ ಕ್ರೀಡಾಪಟುಗಳನ್ನ ಮೊಳಕೆಯಲ್ಲೇ ಗುರುತಿಸಲು ಶಾಲೆಗಳ ಪಾತ್ರ ಮಹತ್ವದ್ದಿರುತ್ತದೆ. ಇಂಥ ಅನೇಕ ಅಂಶಗಗಳನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಮುಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP – National Education Policy) ರೂಪಿತವಾಗಿದೆ. ಈ ನೀತಿ ಪ್ರಕಾರವಾಗಿ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಶಾಲಾ ಪಠ್ಯಕ್ರಮದಲ್ಲಿ ಕ್ರೀಡೆಯೂ ಇರಲಿದೆ. ವೃತ್ತಿಪರ ಅಥ್ಲೀಟ್​ಗಳು ಶಾಲೆಗಳಲ್ಲಿ ಈ ಮಕ್ಕಳಿಗೆ ತರಬೇತಿ ನೀಡಿ ಪ್ರತಿಭೆಗಳನ್ನ ಗುರುತಿಸಲು ಸಹಕಾರ ನೀಡುತ್ತಾರೆ. ಸರ್ಕಾರವು ಇಂಥ ಪ್ರತಿಭಾನ್ವಿತ ಎಳೆಯ ಮಕ್ಕಳನ್ನ ಹೆಕ್ಕಿ ತೆಗೆದು ಉನ್ನತ ಮಟ್ಟದ ತರಬೇತಿಯ ವ್ಯವಸ್ಥೆ ಮಾಡುತ್ತದೆ. ಒಲಿಂಪಿಕ್ಸ್ ಇತ್ಯಾದಿಗೆ ಈ ಮಕ್ಕಳನ್ನ ಆರಂಭದಿಂದಲೇ ಅಣಿಗೊಳಿಸುವ ಉದ್ದೇಶದಿಂದಲೇ ತರಬೇತಿ ನೀಡಲಾಗುತ್ತದೆ. ತರಬೇತಿ ಜೊತೆಗೆ ಸಾಂಪ್ರದಾಯಿಕ ಶಿಕ್ಷಣವೂ ಮುಂದುವರಿಯುತ್ತದೆ. ಹೀಗಾಗಿ, ಮಕ್ಕಳ ಭವಿಷ್ಯ ಎಂದೂ ಮಸುಕಾಗುವುದಿಲ್ಲ.


ಈಗ ಶಿಕ್ಷಣ ಮತ್ತು ಕ್ರೀಡೆಯನ್ನ ಯಾವ ಹದದಲ್ಲಿ ಬೆರೆಸುವುದು ಎಂಬುದರ ರೂಪುರೇಖೆಯನ್ನ ಕೇಂದ್ರ ಶಿಕ್ಷಣ ಇಲಾಖೆ ತಯಾರಿಸುತ್ತಿದೆ. ಇನ್ನು ಮೂರು ತಿಂಗಳಲ್ಲಿ ಈ ಸಂಬಂಧ ಮಾರ್ಗಸೂಚಿಗಳನ್ನ ಪ್ರಕಟಿಸುವ ಸಾಧ್ಯತೆ ಇದೆ. ಸದ್ಯ ಶಾಲೆಗಳಲ್ಲಿ ಕ್ರೀಡೆಗಳನ್ನ ಆಡಿಸಲಾಗುತ್ತಿದೆಯಾದರೂ ವೃತ್ತಿಪರತೆಯನ್ನ ಗಮನದಲ್ಲಿಟ್ಟುಕೊಂಡು ಎಳೆಯ ಪ್ರತಿಭಾನ್ವಿತ ಅಥ್ಲೀಟ್​ಗಳನ್ನ ಗುರುತಿಸುವ ಕೆಲಸ ಆಗುತ್ತಿಲ್ಲ. ಹೊಸ ಶಿಕ್ಷಣ ನೀತಿಯಿಂದ ಮಕ್ಕಳ ಪ್ರತಿಭೆಯನ್ನ ಬಹಳ ಮೊದಲೇ ಗುರುತಿಸಲು ಸಾಧ್ಯವಾಗುತ್ತದೆ. ಯಾವುದಾದರೂ ಕ್ರೀಡೆಗಳಲ್ಲಿ ಮಕ್ಕಳಿಗಿರುವ ಆಸಕ್ತಿಯನ್ನ ಗುರುತಿಸಿ ಅವರ ಪ್ರತಿಭೆಯನ್ನೂ ಅವಲೋಕಿಸಬಹುದು.


ಇದನ್ನೂ ಓದಿ: ಅತಿ ಹೆಚ್ಚು ಓದಿದ ಭಾರತೀಯ ಕ್ರಿಕೆಟಿಗ ಯಾರು ಗೊತ್ತಾ? ಎಂಜಿನಿಯರ್ಸ್ ಕುಂಬ್ಳೆ, ಶ್ರೀನಾಥ್ ಅಂತೂ ಅಲ್ಲ


ಹೊಸ ಶಿಕ್ಷಣ ನೀತಿ ಪ್ರಕಾರ ಶಾಲೆಗಳಲ್ಲಿ ಪ್ರತೀ ವಾರವೂ ಕ್ರೀಡೆಗಳಿಗೆಂದು ನಿರ್ದಿಷ್ಟ ಅವಧಿಯನ್ನ ಮೀಸಲಾಗಿರಿಸಲಾಗುತ್ತದೆ. ಮಕ್ಕಳು ಯಾವುದಾದರೂ ಕ್ರೀಡೆಯನ್ನ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ದೈಹಿಕ ದೃಢತೆ ಮತ್ತು ಆರೋಗ್ಯ ವೃದ್ಧಿಗೂ ಕ್ರೀಡೆಯನ್ನ ಬಳಸಬಹುದು. ಶಾಲೆಗಳು ಕ್ರೀಡೆಗಳಿಗೆ ಬೇಕಾದ ಉಪಕರಣ ಮತ್ತು ಸೌಕರ್ಯ ಸ್ಥಾಪಿಸಲು ಕ್ರೌಡ್ ಫಂಡಿಂಗ್ ಆಹ್ವಾನಿಸಲು ಸ್ವತಂತ್ರವಾಗಿರುತ್ತವೆ. ನುರಿತ ತರಬೇತಿ ಪಡೆದ ಹಾಗೂ ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದ ಅಥ್ಲೀಟ್​ಗಳ ಜಾಲ ರೂಪಿಸಿ ಶಾಲಾ ಮಕ್ಕಳಿಗೆ ತರಬೇತಿ ಕೊಡಿಸುವ ವ್ಯವಸ್ಥೆಯನ್ನ ಸರ್ಕಾರ ಮಾಡಲಿದೆ.


ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕೇವಲ 13 ವರ್ಷದ ಬಾಲಕಿಯೊಬ್ಬಳು ಚಿನ್ನದ ಪದಕ ಗೆದ್ದಿದ್ದಳು. ಜಿಮ್ನಾಸ್ಟಿಕ್ಸ್, ಡೈವಿಂಗ್ ಇತ್ಯಾದಿ ಕ್ರೀಡೆಗಳಲ್ಲಿ ಎಳೆಯ ವಯಸ್ಸಿನವರೇ ಹೆಚ್ಚು ಸೂಕ್ತವಾಗಿರುತ್ತಾರೆ. ಇವಷ್ಟೇ ಅಲ್ಲ ಯಾವುದೇ ಕ್ರೀಡೆಯಾದರೂ ಅದರಲ್ಲಿ ಪರಿಣಿತಿ ಸಾಧಿಸಬೇಕಾದರೆ ನಾಲ್ಕೈದು ವರ್ಷದ ಪ್ರಾಯದಿಂದಲೇ ಪ್ರತಿಭೆ ಗುರುತಿಸಿ ಪೋಷಿಸುವ ಅಗತ್ಯ ಇರುತ್ತದೆ. ಭಾರತದಲ್ಲಿರುವ ಸದ್ಯದ ವ್ಯವಸ್ಥೆಯಲ್ಲಿ ಈ ರೀತಿಯ ವ್ಯವಸ್ಥೆ ವಿರಳ. ಮಕ್ಕಳು 10-12 ವರ್ಷವಿದ್ದಾಗ ಕ್ರೀಡೆಗೆ ಪರಿಚಯವಾಗುತ್ತಾರೆ. ಅವರು ತರಬೇತಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸಲು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ, ಎಳವೆಯಲ್ಲೇ ಕ್ರೀಡಾಪಟುಗಳನ್ನ ಗುರುತಿಸುವ ಕೆಲಸ ಆಗಬೇಕು. ಆಗ ಮಾತ್ರ ಭಾರತ ಒಲಿಂಪಿಕ್ಸ್​ನಲ್ಲಿ ಪದಕಗಳ ಬೇಟೆಯಾಡಲು ಸಾಧ್ಯ.


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

First published: