• Home
  • »
  • News
  • »
  • sports
  • »
  • Chamarajanagar: ಕ್ರಿಕೆಟಿಗರು ನೀಡುವ ವನ್ಯಜೀವಿ ಸೇವಾ ಪ್ರಶಸ್ತಿಗೆ ಕನ್ನಡಿಗರ ಆಯ್ಕೆ, ಅರಣ್ಯ ರಕ್ಷಕ ಸೇರಿದಂತೆ ನಾಲ್ವರಿಗೆ ಸನ್ಮಾನ

Chamarajanagar: ಕ್ರಿಕೆಟಿಗರು ನೀಡುವ ವನ್ಯಜೀವಿ ಸೇವಾ ಪ್ರಶಸ್ತಿಗೆ ಕನ್ನಡಿಗರ ಆಯ್ಕೆ, ಅರಣ್ಯ ರಕ್ಷಕ ಸೇರಿದಂತೆ ನಾಲ್ವರಿಗೆ ಸನ್ಮಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಮಾಜಿ ಕ್ರಿಕೆಟಿಗರಾದ ಸಂದೀಪ್ ಪಾಟೀಲ್, ಯೂಸುಫ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಅವರು ವನ್ಯಜೀವಿ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸಲು ವನ್ಯಜೀವಿ ಸೇವಾ ಸೇವಾ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.

  • News18 Kannada
  • Last Updated :
  • New Delhi, India
  • Share this:

ಚಾಮರಾಜನಗರ (ನ.03): ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಭಾರತೀಯ ಕ್ರಿಕೆಟಿಗರು ಸ್ಥಾಪಿಸಿರುವ ಪ್ರತಿಷ್ಠಿತ ವನ್ಯಜೀವಿ ಸೇವಾ ಪ್ರಶಸ್ತಿಗೆ ಈ ಬಾರಿ ಚಾಮರಾಜನಗರ (Chamarajanagar) ಜಿಲ್ಲೆ ಬಿ.ಆರ್.ಟಿ (BRT) ಹುಲಿ (Tiger) ಸಂರಕ್ಷಿತ ಪ್ರದೇಶದ ಅರಣ್ಯ ರಕ್ಷಕ ಫೈರೋಜ್ ಸೇರಿದಂತೆ ವನ್ಯಜೀವಿ ಸಂರಕ್ಷಣೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ರಾಜ್ಯದ ನಾಲ್ವರು ಆಯ್ಕೆಯಾಗಿದ್ದಾರೆ. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ವಲಯದ ಹರವೆ ಭಾಗದಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ  ಫೈರೋಜ್ ಅವರನ್ನು 2022ನೇ ಸಾಲಿನ ವನ್ಯಜೀವಿ ಸೇವಾ ಪ್ರಶಸ್ತಿಗೆ ಅರಣ್ಯ ಇಲಾಖೆ ಶಿಫಾರಸ್ಸು ಮಾಡಿದೆ.ಇವರಲ್ಲದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (Bandipur Tiger Reserve And National Park) ಮಾರಿಯಮ್ಮ ಚಾರಿಟಬಲ್ ಟ್ರಸ್ಟ್‌ನ ಸುನಿತಾ ಧೈರ್ಯಂ, ಪರಿಸರವಾದಿ ಶಿವಮೊಗ್ಗದ ಅಖಿಲೇಶ್ ಚಿಪ್ಲಿ ಮತ್ತು ಕೊಡಗಿ‌ ಕರ್ನಲ್ ಸಿ ಎಂ ಮುತ್ತಣ್ಣ ಅವರು ಸಹ ಈ ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಲಕ್ಷ್ಮಣ್ ಅವರಿಂದ ಪ್ರಶಸ್ತಿ ಪ್ರಧಾನ:


ಈ ನಾಲ್ವರಿಗೂ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಅವರು ನವೆಂಬರ್ 5 ರಂದು ಬೆಂಗಳೂರಿನ ರಾಜರಾಜೇಶ್ವರಿನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕ್ಯಾಂಪಸ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರಾದ ಸಂದೀಪ್ ಪಾಟೀಲ್, ಯೂಸುಫ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಅವರು ವನ್ಯಜೀವಿ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಪ್ರಶಸ್ತಿ ಸ್ಥಾಪಿಸಿದ್ದು, ಪ್ರತಿಷ್ಠಿತ ವನ್ಯಜೀವಿ ಸೇವಾ ಪ್ರಶಸ್ತಿಯೊಂದಿಗೆ ಗೌರವಿಸಲ್ಪಡುತ್ತಿರುವ ಹತ್ತನೇ ಅರಣ್ಯ ವೀಕ್ಷಕ ಫೈರೋಜ್ ಆಗಿದ್ದಾರೆ. ಅಲ್ಲದೇ ಈ ಪ್ರಶಸ್ತಿ ಜೊತೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಸಹ ನೀಡಲಾಗುತ್ತದೆ.


ಫೈರೋಜ್ ದಿಟ್ಟತನಕ್ಕೆ ಒಲಿದ ಪ್ರಶಸ್ತಿ:


ಇನ್ನು, ಫೈರೋಜ್ ಅವರ ದಿಟ್ಟತನಕ್ಕೆ ಈ ಪ್ರಶಸ್ತಿ ಬಂದಿದ್ದು, ಅವರು ಕಳ್ಳಬೇಟೆ ಪ್ರಕರಣಗಳನ್ನು ಭೇದಿಸಿ  22 ಬೇಟೆಗಾರರನ್ನು ಧೈರ್ಯದಿಂದ ಬಂಧಿಸಿದ್ದಲ್ಲದೆ, 15 ಚಿರತೆಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇದಲ್ಲದೆ 200ಕ್ಕೂ ಹೆಚ್ಚು ಹಾವುಗಳನ್ನು ಹಾಗು ಹಲವು ಪುನುಗುಬೆಕ್ಕು, ಚಿಪ್ಪು ಹಂದಿಗಳನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.


ಇದನ್ನೂ ಓದಿ: Virat Kohli: ವಿರಾಟ್ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ, ಸೋತ ನಂತ್ರ ಬಾಂಗ್ಲಾ ಆಟಗಾರರ ಹೊಸ ಕಿರಿಕ್


ವನ್ಯಜೀವಿ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅರಣ್ಯ ರಕ್ಷಕ ಫೈರೋಜ್, ಅಧಿಕಾರಿಗಳು ನಮ್ಮಂತಹ ಕೆಳ ಹಂತದ ನೌಕರರನ್ನು ಗುರುತಿಸಿ ಪ್ರಶಸ್ತಿಗೆ ಶಿಫಾರಸು ಮಾಡಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ಖ್ಯಾತ ಕ್ರಿಕೆಟಿಗರು ಕೊಡ ಮಾಡುತ್ತಿರುವ ಇಂತಹ ಪ್ರಶಸ್ತಿಯಿಂದ ತಮ್ಮ ಜವಬ್ದಾರಿ ಮತ್ತಷ್ಟು ಹೆಚ್ಚಿದೆ ಇನ್ನೂ ಹೆಚ್ಚಿನ ರೀತಿಯಲ್ಲಿ ವನ್ಯಜೀವಿ ಸಂರಕ್ಷಣೆಯ ಕೆಲಸ ಮಾಡಲು ಇದು ಪ್ರೇರಣೆಯಾಗಿದೆ ಎಂದು ನ್ಯೂಸ್ 18 ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.


ತಮ್ಮದೇ ರೀತಿಯಲ್ಲಿ ಪರಿಸರ ಕಾಪಾಡುತ್ತಿರುವ ಸಾಧಕರು:


ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಮಾರಿಯಮ್ಮ ಟ್ರಸ್ಟ್ ನ ಸುನೀತಾ ಧೈರ್ಯಂ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಹುಲಿಗಳು ಮತ್ತು ಚಿರತೆಗಳು ಕಾಡಿನಿಂದ ಹೊರಬಂದು  ರೈತರ ಜಾನುವಾರುಗಳನ್ನು ಕೊಂದರೆ ರೈತರಿಗೆ ಸ್ಥಳದಲ್ಲೇ ಪರಿಹಾರವನ್ನು ಕೊಡುತ್ತಾ ಬಂದಿದ್ದಾರೆ. ತಮ್ಮ ಜಾನುವಾರುಗಳನ್ನು ಕೊಂದ ಕಾಡು ಪ್ರಾಣಿಗಳನ್ನು ಕಾಡಂಚಿನ ಜನರು ಯಾವುದೇ ರೀತಿಯಲ್ಲಿ ಹತ್ಯೆ ಮಾಡಬಾರದು ಎಂಬುದು ಅವರ ಉದ್ದೇಶವಾಗಿದೆ.


ಇನ್ನು, ಸಾಗರದ  ಪರಿಸರವಾದಿ ಅಖಿಲೇಶ್ ಚಿಪ್ಲಿ ಅವರು ಶಿವಮೊಗ್ಗ ಜಿಲ್ಲೆಯ ಅರಣ್ಯ ಮತ್ತು ಅದರ ನಿವಾಸಿಗಳ ಧ್ವನಿಯಾಗಿದ್ದಾರೆ.  ಅಖಿಲೇಶ್ ಚಿಪ್ಲಿ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪಶ್ಚಿಮ ಘಟ್ಟದ ​​ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ರಕ್ಷಿಸಲು ಹೋರಾಟ ನಡೆಸಿ ಜನರಲ್ಲಿ ಜೀವವೈವಿಧ್ಯದ ಮಹತ್ವದ ಅರಿವು ಮೂಡಿಸಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಸುರೇಶ್ ಕುಮಾರ್ ಅವರ ಸಹಯೋಗದಲ್ಲಿ ಸಾಗರದಲ್ಲಿ  21 ಎಕರೆ ಬಂಜರು ಭೂಮಿಯನ್ನು ಯಶಸ್ವಿಯಾಗಿ ಹಸಿರಾಗಿಸಿದ್ದಾರೆ.


ಇದನ್ನೂ ಓದಿ: Gorehabba: ತಿಪ್ಪೇಗುಂಡಿಯಲ್ಲೇ ದೇಗುಲ, ಮೈಮೇಲೆ ಸಗಣಿ ಎರಚೋ ಹಬ್ಬ!


ಕೊಡಗು ಜಿಲ್ಲೆಯ ಪರಿಸರ ಸಂರಕ್ಷಣೆಯಲ್ಲಿ ಕರ್ನಲ್ ಸಿ ಎಂ ಮುತ್ತಣ್ಣ ಅವರು ಮುಂಚೂಣಿಯಲ್ಲಿದ್ದು ಅವರು ಕಳೆದ ಮೂವತ್ತು ವರ್ಷಗಳಿಂದ ವನ್ಯಜೀವಿಗಳ ಸಂರಕ್ಷಣೆಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ  ಪರಿಸರಕ್ಕೆ ಮಾರಕವಾದ ಬೃಹತ್ ಪ್ರಮಾಣದ ಯೋಜನೆಗಳನ್ನು ನಿಲ್ಲಿಸಲು ಜನರನ್ನು ಸಂಘಟಿಸಿ ಹೋರಾಟ ನಡೆಸಿದ್ದಾರೆ. ಇದಲ್ಲದೆ  4000 ಎಕರೆ  ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ಸ್ವಾಧೀನಪಡಿಸಿಕೊಳ್ಳಲು ಅರಣ್ಯ ಇಲಾಖೆಗೆ ಸಹಕರಿಸಿದ್ದಾರೆ. ಇದಲ್ಲದೆ ಅರಣ್ಯ ಇಲಾಖೆ ಹಾಗು ಕೊಡಗಿನಲ್ಲಿ ಮಾನವ ಆನೆ ಸಂಘರ್ಷ ತಗ್ಗಿಸುವ ಪರಿಸರ ಅಭಿವೃದ್ಧಿ ಸಮಿತಿಗಳೊಂದಿಗೆ ಕೈಜೋಡಿಸಿ ಸೇವೆ ಸಲ್ಲಿಸುತ್ತಿದ್ದಾರೆ.

Published by:shrikrishna bhat
First published: