ಐಪಿಎಲ್ 2022ರ (IPL 2022) 15ನೇ ಆವೃತ್ತಿಯು ಅರ್ಧದಷ್ಟು ಮುಗಿದಿದೆ. ಇನ್ನೇನು ಕೆಲ ತಂಡಗಳು ಪ್ಲೇ ಆಫ್ ಹಂತಕ್ಕೆ ಏರಲು ಆಲೋಚಿಸುತ್ತಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ (DC), ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳಲ್ಲಿ ಆಡಿದ ಟೀಂ ಇಂಡಿಯಾದ ಅಂಡರ್-19 ತಂಡದ ಮಾಜಿ ಸದಸ್ಯ ಹರ್ಪ್ರೀತ್ ಸಿಂಗ್ ಭಾಟಿಯಾ (Harpreet Singh Bhatia) ವಿರುದ್ಧ ಪ್ರಕರಣ ದಾಖಲಾಗಿದೆ. ಹರ್ಪ್ರೀತ್ ಪ್ರಸ್ತುತ ಛತ್ತೀಸ್ಗಢ ರಣಜಿ ಕ್ರಿಕೆಟ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಈತನ ವಿರುದ್ಧ ರಾಯಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹರ್ಪ್ರೀತ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ನಕಲಿ ಅಂಕಪಟ್ಟಿ ನೀಡಿದ್ದ ಹರ್ಪ್ರೀತ್ ಸಿಂಗ್:
ಹರ್ಪ್ರೀತ್ ಸಿಂಗ್ ನಕಲಿ ಅಂಕಪಟ್ಟಿ ಬಳಸಿ ಕೆಲಸ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಭಾರತೀಯ ಲೆಕ್ಕ ಪರಿಶೋಧನಾ ಇಲಾಖೆ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಸಂಬಂಧ ಸಿಕ್ಕಿರುವ ಮಾಹಿತಿ ಪ್ರಕಾರ ಹರ್ಪ್ರೀತ್ ಸಿಂಗ್ 2014ರಲ್ಲಿ ಕ್ರಿಕೆಟ್ ಕೋಟಾದಿಂದ ಆಡಿಟರ್, ಅಕೌಂಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಸಮಯದಲ್ಲಿ, ಅವರಿಂದ ಸರಿಯಾದ ಶೈಕ್ಷಣಿಕ ಪ್ರಮಾಣಪತ್ರವನ್ನು ಕೇಳಲಾಯಿತು. ಹರ್ಪ್ರೀತ್ ಕೂಡ ಕೇಳಲಾದ ಎಲ್ಲಾ ದಾಖಲೆಗಳನ್ನು ನೀಡಿ ಈ ಹುದ್ದೆಗೆ ಆಯ್ಕೆಯಾಗಿದ್ದರು.
ನಕಲಿ ಪದವಿ ಎಂದು ಸಾಬೀತು:
ಇನ್ನು, ಹರ್ಪ್ರೀತ್ ಬಳಿ ಮೂಲ ಪ್ರಮಾಣ ಪತ್ರ ಕೇಳಿದ್ದರಂತೆ. ಬಳಿಕ ಕಛೇರಿಯಿಂದ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳನ್ನು ಪರಿಶೀಲಿಸಲಾಯಿತು. ಅದರಲ್ಲಿ ಹರ್ಪ್ರೀತ್ ಮಂಡಿಸಿದ ಬುಂದೇಲ್ಖಂಡ ವಿಶ್ವವಿದ್ಯಾಲಯದ ಪದವಿ ನಕಲಿ ಎಂಬುದು ಸಾಬೀತಾಗಿದೆ. ಹೀಗಾಗಿ ಆತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ರಾಯಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲೇ ವಿಚಾರಣೆಗೆ ಒಳಪಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಹರ್ಪ್ರೀತ್ ಐಪಿಎಲ್ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಟವಾಡಿದ್ದರು. ಇವರು 71 ಟಿ20 ಪಂದ್ಯಗಳಲ್ಲಿ 15 ಅರ್ಧಶತಕ ಸೇರಿದಂತೆ 2006 ರನ್ ಗಳಿಸಿದ್ದಾರೆ. ಅವರು 70 ಪ್ರಥಮ ದರ್ಜೆ ಪಂದ್ಯಗಳಲ್ಲಿ 47.75 ಸರಾಸರಿಯಲ್ಲಿ 4489 ರನ್ ಗಳಿಸಿದ್ದಾರೆ ಮತ್ತು 14 ಶತಕ ಮತ್ತು 12 ಅರ್ಧಶತಕಗಳನ್ನು ಗಳಿಸಿದ್ದಾರೆ.
ಇತ್ತ, ಐಪಿಎಲ್ 2022ರ ಅಂಕಪಟ್ಟಿ ಪ್ರತಿ ಪಂದ್ಯದ ನಂತರ ಬದಲಾಗುತ್ತಿದೆ. ಈಗಾಗಲೇ ಗುಜರಾತ್ ಟೈಟನ್ಸ್ ತಂಡವು 18 ಅಂಕಗಳೊಂದಿಗೆ ಪ್ಲೇ ಆಫ್ ಗೆ ತಲುಪಿದ ಮೊದಲ ತಂಡವಾಗಿದೆ. ಉಳಿದಂತೆ ಲಕ್ನೋ ಸೂಪರ್ ಜೈಂಟ್ಸ್ 16 ಅಂಕಗಳೊಂದಿಗೆ 2ನೇ ಸ್ಥಾನ, 14 ಅಂಕಗಳೊಂದಿಗೆ ರಾಜಸ್ಥಾನ್ ರಾಯಲ್ಸ್ 3ನೇ ಸ್ಥಾನ, 14 ಅಂಕದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4ನೇ ಸ್ಥಾನದಲ್ಲಿದೆ. ಟಾಪ್ 4ರ ನಂತರ ಡೆಲ್ಲಿ ಕ್ಯಾಪಿಟಲ್ಸ್ 5ನೇ ಸ್ಥಾನ, ಸನ್ ರೈಸರ್ಸ್ ಹೈದರಾಬಾದ್ 6ನೇ ಸ್ಥಾನ, ಕೋಲ್ಕತ್ತಾ ನೈಟ್ ರೈಡರ್ಸ್ 7ನೇ ಸ್ಥಾನ, ಪಂಜಾಬ್ ಕಿಂಗ್ಸ್ 8ನೇ ಸ್ಥಾನ, ಚೆನ್ನೈ ಸೂಪರ್ ಕಿಂಗ್ಸ್ 9ನೇ ಸ್ಥಾನ ಮತ್ತು ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ