ಫುಟ್ಬಾಲ್ ಆಟಕ್ಕಿರುವಷ್ಟು ಕ್ರೇಜ್ ಮತ್ಯಾವ ಆಟಕ್ಕೂ ಇಲ್ಲ ಎಂದರೆ ತಪ್ಪಾಗಲ್ಲ. ವಿಶ್ವದಾದ್ಯಂತ ಫಿಫಾ (FIFA) ಫೀವರ್ ಜೋರಾಗಿದ್ದು, ಆಟ ಕೂಡ ರಂಗು ಪಡೆದುಕೊಳ್ಳುತ್ತಿದೆ. ಪ್ರಪಂಚದ ಪ್ರತಿಯೊಬ್ಬ ಫುಟ್ಬಾಲ್ (Football) ಅಭಿಮಾನಿಗಳು ಕತಾರ್ನಲ್ಲಿ ನಡೆಯುತ್ತಿರುವ ಫಿಫಾ 2022 ವಿಶ್ವಕಪ್ (FIFA World Cup 2022) ಅನ್ನು ಮತ್ತು ಆ ಮೂಲಕ ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳೋ ಬಯಕೆಯನ್ನು ಖಂಡಿತ ಹೊಂದಿರುತ್ತಾರೆ. ಭಾರತದಲ್ಲಿಯೂ ಸಹ ಫುಟ್ಬಾಲ್ ಕ್ರೇಜ್ ಜೋರಾಗಿದ್ದು, ಪಂದ್ಯ ವೀಕ್ಷಣೆಗೆ ಹಲವಾರು ಜನ ಕತಾರ್ಗೆ ಪ್ರಯಾಣ ಬೆಳೆಸಿದ್ದಾರೆ.
ಕೇರಳದಿಂದ ಕತಾರ್ಗೆ ಕಾರಿನಲ್ಲೇ ಪ್ರಯಾಣ:
ಕೇರಳದ ನಾಜಿ ನೌಶಿ ಎಂಬ ಮಹಿಳೆ 2022ರ FIFA ವಿಶ್ವಕಪ್ನಲ್ಲಿ ನಡೆಯುವ ಅರ್ಜೆಂಟೀನಾದ ಪಂದ್ಯವನ್ನು ವೀಕ್ಷಿಸಲು ಕಸ್ಟಮೈಸ್ ಮಾಡಿದ ಮಹೀಂದ್ರ ಥಾರ್ ಎಸ್ಯುವಿಯಲ್ಲಿ ಭಾರತದಿಂದ ಕತಾರ್ಗೆ ತೆರಳಿದ್ದಾರೆ. ಭಾರತದಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ರೊನಾಲ್ಡೊಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ನಾಜಿ ಕೂಡ ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿಯ ದೊಡ್ಡ ಅಭಿಮಾನಿಯಾಗಿದ್ದು, ಅವರ ಆಟವನ್ನು ನೋಡಲು ಕೇರಳದಿಂದ ಕತಾರ್ಗೆ ತನ್ನ ಕಾರಿನಲ್ಲಿಯೇ ಒಬ್ಬರೇ ಪ್ರಯಾಣ ಮಾಡಿದ್ದಾರೆ.
ಐದು ಮಕ್ಕಳ ತಾಯಿ ಮೆಸ್ಸಿ ಅಭಿಮಾನಿ:
ಇನ್ನೊಂದು ಅಚ್ಚರಿ ಏನಪ್ಪಾ ಅಂದರೆ 33 ವರ್ಷದ ಈ ನಾಜಿ ನೌಶಿ ಐದು ಮಕ್ಕಳ ತಾಯಿ. ನಾಜಿಗಿರುವ ಫುಟ್ಬಾಲ್ ಮೇಲಿನ ಮತ್ತು ಮೆಸ್ಸಿ ಮೇಲಿನ ಪ್ರೀತಿ ಅವಳನ್ನು ಇಂತದ್ದೊಂದು ಸಾಹಸಕ್ಕೆ ಕೈಹಾಕುವಂತೆ ಮಾಡಿದೆ. ಅಕ್ಟೋಬರ್ 15 ರಂದು ಕೇರಳದಿಂದ ಪ್ರಯಾಣ ಆರಂಭಿಸಿದ ನೌಶಿ ಸದ್ಯ ಯುಎಇ ತಲುಪಿದ್ದಾರೆ.
ಹೇಗಿತ್ತು ನಾಜಿ ನೌಶಿ ಜರ್ನಿ?:
ತನ್ನ ಎಸ್ಯುವಿ ಕಾರಿನಲ್ಲಿ ಕೇರಳದಿಂದ ಮುಂಬೈಗೆ ಪ್ರಯಾಣ ಬೆಳೆಸಿದ ನೌಶಿ ಅಲ್ಲಿಂದ ಹಡಗಿನ ಮೂಲಕ ಒಮಾನ್ ತಲುಪಿದ್ದಾರೆ. ನಂತರ ಮಸ್ಕತ್ನಿಂದ ತನ್ನ ಪ್ರಯಾಣವನ್ನು ಮುಂದುವರೆಸಿದ ನೌಶಿ, ಹಟಾ ಗಡಿ ಮೂಲಕ ಯುಎಇ ತಲುಪಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಜಿ ನೌಶಿ ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲಿಫಾದ ಬಳಿ ಕಾರಿನ ಮೇಲೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಕೇರಳದಿಂದ ಫಿಫಾ ಕತಾರ್ ವಿಶ್ವಕಪ್ ಎಂದು ಬರೆದುಕೊಂಡ ನಾಜಿ ನನ್ನ ಗುರಿಯನ್ನು ಸಾಧಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕಸ್ಟಮೈಸ್ ಮಾಡಿದ ಎಸ್ಯುವಿ ಇದು ದೇಶಕ್ಕೆ ರವಾನೆಯಾದ ಮೊದಲ ಭಾರತೀಯ ನೋಂದಾಯಿತ ವಾಹನ ಕೂಡ ಹೌದು.
ಇದನ್ನೂ ಓದಿ: IND vs BAN: ಟೀಂ ಇಂಡಿಯಾ ಮುಂದಿನ ಸರಣಿ ಯಾರ ವಿರುದ್ಧ? ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ
ತನ್ನ ಪ್ರಯಾಣವನ್ನು ಸುಗಮಗೊಳಿಸಲು ಕಾರನ್ನು ಮನೆಯಂತೆ ಬದಲಿಸಿಕೊಂಡಿದ್ದಾರೆ. ನೌಶಿ ತನ್ನ ಕಾರಿನಲ್ಲಿಯೇ ಪುಟ್ಟ ಅಡುಗೆಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಡುಗೆ ತಯಾರಿಗಾಗಿ ಅಕ್ಕಿ, ನೀರು, ಹಿಟ್ಟು, ಮಸಾಲೆ ಮತ್ತು ಇತರ ಒಣ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲದೆ ವಿಶ್ರಾಂತಿ ಪಡೆದುಕೊಳ್ಳುವ ಸಲುವಾಗಿ ಕಾರಿನ ಮೇಲ್ಛಾವಣಿ ಮೇಲೆ ಟೆಂಟ್ ಕೂಡ ಅಳವಡಿಸಿಕೊಂಡಿದ್ದಾರೆ. ಹಣ ಉಳಿಸುವ ಪ್ರಯತ್ನದಿಂದಾಗಿ ನಾನು ಸಾಧ್ಯವಾದಷ್ಟು ಅಡುಗೆ ಮಾಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಕಾರಿಗೆ ನಿಕ್ ನೇಮ್:
ಈ ಅತ್ಯದ್ಭುತ ಪ್ರಯಾಣಕ್ಕೆ ತಯಾರಿ ನಡೆಸುತ್ತಿರುವಾಗ ಸಮಯಕ್ಕೆ ಸರಿಯಾಗಿ ತನ್ನ ಕಾರನ್ನು ಸಿದ್ಧಪಡಿಸಿ ನೀಡಿದ್ದಕ್ಕೆ ಮಹೀಂದ್ರಾ ಕಂಪನಿಯ ಪ್ರಯತ್ನವನ್ನು ನಾಜಿ ಶ್ಲಾಘಿಸಿದ್ದಾರೆ. ಈ ಕಾರಿಗೆ ಮಲಯಾಳಂನಲ್ಲಿ "ಊಲು" ಎಂದು ಸುಂದರವಾದ ಅಡ್ಡಹೆಸರನ್ನು ಸಹ ಇಟ್ಟಿದ್ದಾರೆ. ಕನ್ನಡದಲ್ಲಿ ಊಲು ಎಂದರೆ ಅವಳು ಎಂದರ್ಥ ಬರುತ್ತದೆ.
ಲಿಯೋನೆಲ್ ಮೆಸ್ಸಿ ಆಡುವುದನ್ನು ನಾನು ನೋಡಲೇಬೇಕು:
ಈ ನಡುವೆ ನಡೆದ ಅರ್ಜೆಂಟೀನಾ ಹಾಗೂ ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಅರ್ಜೆಂಟೀನಾ ಸೋತಾಗ ನೌಶಿಯಗೆ ತುಂಬಾ ಬೇಸರವಾಗಿತ್ತಂತೆ. ಭರವಸೆ ಕಳೆದುಕೊಳ್ಳದ ಫುಟ್ಬಾಲ್ ಪ್ರೇಮಿ ಮುಂದಿನ ಪಂದ್ಯದಲ್ಲಿ ತನ್ನ ನೆಚ್ಚಿನ ತಂಡ ಗೆಲ್ಲುತ್ತದೆ ಎಂಬ ಭರವಸೆಯಿಂದ ಪ್ರಯಾಣವನ್ನು ಮುಂದುವರೆಸಿದರು. ಈ ವೇಳೆ ಪತ್ರಿಕೆಗೆ ಹೇಳಿಕೆ ನೀಡಿರುವ ನೌಶಿ, "ನನ್ನ ಹೀರೋ ಲಿಯೋನೆಲ್ ಮೆಸ್ಸಿ ಆಡುವುದನ್ನು ನಾನು ನೋಡಲೇಬೇಕು ಎಂಬುದು ನನ್ನ ಮಹದಾಸೆ. ಈ ನಡುವೆ ಸೌದಿ ಅರೇಬಿಯಾ ವಿರುದ್ಧದ ಸೋಲು ನನಗೆ ನಿರಾಸೆಯನ್ನುಂಟು ಮಾಡಿತ್ತು. ಆದರೆ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಇದೆಲ್ಲಾ ಸಣ್ಣ ಒಂದು ಅಡ್ಡಿ ಎಂದು ನನಗೆ ಖಾತ್ರಿಯಿದೆ" ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ