ಈ ಬಾರಿಯ ಫಿಫಾ ವಿಶ್ವಕಪ್ ಅಭಿಮಾನಿಗಳಿಗೆ ರಸದೌತಣ ನೀಡಿದ್ದಂತೂ ಸುಳ್ಳಲ್ಲ. ಬರೋಬ್ಬರಿ 36 ವರ್ಷಗಳ ಬಳಿಕ ಅರ್ಜೆಂಟೀನಾ ಚಾಂಪಿಯನ್ ಪಟ್ಟಕ್ಕೇರಿದೆ. ಇದರ ಸಂಭ್ರಮವನ್ನು ಅಭಿಮಾನಿಗಳು ಅದರಲ್ಲೂ ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅಭಿಮಾನಿಗಳಂತೂ ಇನ್ನೂ ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮದ ನಡುವೆಯೇ ಬುಧವಾರ ಮೆಸ್ಸಿ (Lionel Messi) ಅಭಿಮಾನಿಗಳಿಗೆ ಕತಾರ್ ವಿಶ್ವವಿದ್ಯಾಲಯವು ಒಂದು ಗುಡ್ನ್ಯೂಸ್ ನೀಡಿದೆ. ಈ ಬಾರಿಯ ಫಿಫಾ ವಿಶ್ವಕಪ್ (FIFA World Cup) ಗೆಲ್ಲುವಲ್ಲಿ ಪ್ರಮುಖ ಸಾರಥಿಯಾದ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಲಿಯೋನೆಲ್ ಮೆಸ್ಸಿ ಅವರು 2022ರ ಫಿಫಾ ವಿಶ್ವಕಪ್ನಲ್ಲಿ ತಂಗಿದ್ದ ಕತಾರ್ನಲ್ಲಿರುವ ಹೋಟೆಲ್ ಕೋಣೆಯನ್ನು ಮ್ಯೂಸಿಯಂ (Museum) ಆಗಿ ಪರಿವರ್ತಿಸುವುದಾಗಿ ಘೋಷಿಸಿದೆ.
ಮೆಸ್ಸಿ ಇದ್ದ ಹೋಟೆಲ್ ರೂಮ್ ಮ್ಯೂಸಿಮ್:
ಫುಟ್ಬಾಲ್ ಕೊನೆಯ ಪಂದ್ಯದ ದಿನ ಅರ್ಜೆಂಟೀನಾದ ಆಟಗಾರ ಮೆಸ್ಸಿ ಮತ್ತು ಸೆರ್ಗಿಯೋ ಅಗುರೊ ಅವರು ಒಂದೇ ಕೊಠಡಿಯಲ್ಲಿ ತಂಗಿದ್ದರು. 36 ವರ್ಷಗಳ ಬಳಿಕ ಅರ್ಜೆಂಟೀನಾ ಚಾಂಪಿಯನ್ಶಿಪ್ ಗೆದ್ದಿದ್ದರ ಸವಿನೆನಪಿಗೆ ಮತ್ತು ಮೆಸ್ಸಿಯ ರೋಚಕ ಆಟಕ್ಕೆ ಗೌರವ ನೀಡಲು ಕತಾರ್ ಈ ನಿರ್ಧಾರಕ್ಕೆ ಬಂದಿದೆ. ಮೆಸ್ಸಿ ಉಳಿದುಕೊಂಡ ಕೋಣೆಗೆ ಇನ್ನುಮುಂದೆ ಉಳಿದುಕೊಳ್ಳಲು ಇತರರಿಗೆ ಪ್ರವೇಶ ನೀಡುವುದಿಲ್ಲ ಬದಲಿಗೆ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ನಿರ್ಧಾರಕ್ಕೆ ಬಂದಿದೆ.
ಮೆಸ್ಸಿ ಉಳಿದುಕೊಂಡ ಕೋಣೆಯನ್ನು ಪ್ರವಾಸಿಗರಿಗೆ ಭೇಟಿ ನೀಡುವ ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಹಾಗೆಯೇ ಕೆಲವು ಫೋಟೋಗಳನ್ನು ಸಹ ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ.
ಮೆಸ್ಸಿ ಸಾಧನೆಗಳಿಗೆ ಗೌರವ:
"ಅರ್ಜೆಂಟೀನಾ ರಾಷ್ಟ್ರೀಯ ತಂಡದ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಕೊಠಡಿಯು ಬದಲಾಗದೆ ಉಳಿಯುತ್ತದೆ ಮತ್ತು ಸಂದರ್ಶಕರಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಇಲ್ಲಿ ಬಂದು ಉಳಿಯಲು ಬಯಸುವವರಿಗೆ ಇನ್ನುಮುಂದೆ ಅವಕಾಶವಿರುವುದಿಲ್ಲ" ಎಂದು ವರದಿಯಾಗಿದೆ.
ಮೆಸ್ಸಿಯ ವಸ್ತುಗಳು ವಿದ್ಯಾರ್ಥಿಗಳಿಗೆ ಮತ್ತು ಭವಿಷ್ಯದ ಪೀಳಿಗೆಗೆ ಪರಂಪರೆಯಾಗಿರುತ್ತವೆ ಮತ್ತು ವಿಶ್ವಕಪ್ನಲ್ಲಿ ಮೆಸ್ಸಿ ಸಾಧಿಸಿದ ಮಹಾನ್ ಸಾಧನೆಗಳಿಗೆ ಸಾಕ್ಷಿಯಾಗುತ್ತವೆ." ಎಂದು ಕತಾರ್ ವಿಶ್ವವಿದ್ಯಾನಿಲಯದ ಸಂವಹನ ಮತ್ತು ಸಾರ್ವಜನಿಕ ಸಂಪರ್ಕಗಳ ನಿರ್ದೇಶಕ ಹಿತ್ಮಿ ಅಲ್ ಹಿತ್ಮಿ, ಕತಾರ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಗೆಲುವಿನ ರೂವಾರಿ ಮೆಸ್ಸಿ:
2022 ರ ಚಾಂಪಿಯನ್ಶಿಪ್ ಆಟದಲ್ಲಿ ಫ್ರಾನ್ಸ್ ವಿರುದ್ಧ ಅದ್ಭುತ ವಿಜಯದ ನಂತರ ಅರ್ಜೆಂಟೀನಾಗೆ ಇದು ಮೂರನೇ ವಿಶ್ವಕಪ್ ಆಗಿತ್ತು ಮತ್ತು ಮೆಸ್ಸಿ ಅವರ ವೃತ್ತಿಜೀವನದ ಮೊದಲ ವಿಶ್ವಕಪ್ ಇದಾಗಿದೆ. ಅರ್ಜೆಂಟೀನಾ ದೇಶ ಕಪ್ಗೆ ಮುತ್ತಿಕ್ಕುವಲ್ಲಿ ಮೆಸ್ಸಿ ಅವರದ್ದು ದೊಡ್ಡಪಾತ್ರ. ಮೆಸ್ಸಿ 2022 ರ ವಿಶ್ವಕಪ್ ಫೈನಲ್ನಲ್ಲಿ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರನಾಗಿ FIFA ವಿಶ್ವಕಪ್ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಗೆದ್ದಕೊಂಡರು.
ಇದನ್ನೂ ಓದಿ: KL Rahul: ಕನ್ನಡಿಗ ಕೆಎಲ್ ರಾಹುಲ್ಗೆ ಸಲಹೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ
ಈ ಪ್ರಶಸ್ತಿಯನ್ನು ಮೆಸ್ಸಿ ಎರಡು ಬಾರಿ ಗೆದ್ದುಕೊಂಡಿದ್ದು FIFA ವಿಶ್ವಕಪ್ನಲ್ಲಿ ಎರಡು ಗೋಲ್ಡನ್ ಬಾಲ್ಗಳನ್ನು ಗೆದ್ದ ಇತಿಹಾಸದಲ್ಲಿ ಅವರು ಏಕೈಕ ಫುಟ್ಬಾಲ್ ಆಟಗಾರರಾಗಿದ್ದಾರೆ. ಇನ್ನೂ ಎದುರಾಳಿ ತಂಡದ ಫ್ರೆಂಚ್ ಆಟಗಾರ ಕೈಲಿಯನ್ ಎಂಬಪ್ಪೆ ಪಂದ್ಯಾವಳಿಯಲ್ಲಿ ಅಗ್ರ ಸ್ಕೋರರ್ ಆಗಿದ್ದಕ್ಕಾಗಿ ಇವರಿಗೆ ಗೋಲ್ಡನ್ ಬೂಟ್ ನೀಡಲಾಯಿತು.
ಮೆಸ್ಸಿಯ ಊಟ, ನಿದ್ದೆ ಎಲ್ಲವೂ ಕಪ್ ಜೊತೆ:
ಮೆಸ್ಸಿ ಕೂಡ ಇನ್ನೂ ಈ ಸಂಭ್ರಮ, ಖುಷಿಯಿಂದ ಹೊರಬಂದಂತೆ ಕಂಡಿಲ್ಲ. ಮೊನ್ನೆ ತಾನೇ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕೆಲವು ಫೋಟೋಗಳಲ್ಲಿ ಮೆಸ್ಸಿ ಟ್ರೋಫಿಯನ್ನು ತಮ್ಮ ಪಕ್ಕದಲ್ಲಿ ಇಟ್ಟುಕೊಂಡು ಊಟ ಮಾಡುತ್ತಿರುವ ಮತ್ತು ನಿದ್ರಿಸುತ್ತಿರುವುದನ್ನು ನೋಡಬಹುದು.
ಈ ಫೋಟೋಗಳನ್ನು ಮೆಸ್ಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮೆಸ್ಸಿ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಮೆಸ್ಸಿ ಯಶಸ್ವಿ ವಿಶ್ವಕಪ್ ಗೆಲುವಿನ ನಂತರ ತಮ್ಮ ಚಳಿಗಾಲದ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ