ಫಿಫಾ ವಿಶ್ವಕಪ್ ನಡೆಯುತ್ತಿರುವ ಕತಾರ್ ಇದೀಗ ವಿಶ್ವದಾದ್ಯಂತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿ ಮಾರ್ಪಟ್ಟಿದೆ. ಗಲ್ಫ್ ಎಮಿರೇಟ್ ಫುಟ್ಬಾಲ್ ವಿಶ್ವಕಪ್ (FIFA World Cup 2022) ಅನ್ನು ಆಯೋಜಿಸಿದ ಮೊದಲ ಮುಸ್ಲಿಂ ರಾಷ್ಟ್ರವಾಗಿದೆ. ಇಸ್ಲಾಂ ಬಗೆಗಿನ ತಪ್ಪುತಿಳುವಳಿಕೆಗಳನ್ನು ನಿವಾರಿಸಲು ಹಾಗೂ ಇಸ್ಲಾಂ (Islam) ನೆಡೆಗೆ ಒಲವು ತೋರಿಸಿ ಸ್ವಯಂ ಮತಾಂತರಗೊಳ್ಳಲು ಬಯಸುವವರಿಗೆ ವಿಶ್ವಕಪ್ ವೇದಿಕೆಯಾಗಿದೆ ಎಂದೇ ಇಲ್ಲಿನ ಧರ್ಮ ಗುರುಗಳು ಅಭಿಪ್ರಾಯಪಟ್ಟಿದ್ದಾರೆ. ನೈಸರ್ಗಿಕ ಅನಿಲ ಸಂಪತ್ತಿನಿಂದ ಶ್ರೀಮಂತ ಮುಸ್ಲಿಂ ರಾಷ್ಟ್ರವಾಗಿ ಕತಾರ್ (Qatar) ಖ್ಯಾತಿಗೊಂಡಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಲು ಮಸೀದಿಗಳ ಶ್ರೇಣಿಯೇ ಇಲ್ಲಿದೆ.
ಇಸ್ಲಾಂ ಧರ್ಮದ ಆಚರಣೆ ಹಾಗೂ ಸಂಸ್ಕೃತಿ ಕುರಿತು ಮೊದಲ ಬಾರಿಗೆ ಮಾಹಿತಿ ಪಡೆದುಕೊಳ್ಳುತ್ತಿರುವ ಕೆನಡಾದ ದಂಪತಿ ಡೊರಿನೆಲ್ ಮತ್ತು ಕ್ಲಾರಾ ಪೋಪಾ ಅವರು ದೋಹಾದ ಕಟಾರಾ ಸಾಂಸ್ಕೃತಿಕ ಜಿಲ್ಲೆಯಲ್ಲಿರುವ ಒಟ್ಟೋಮನ್ ಶೈಲಿಯ ಮಸೀದಿಯಲ್ಲಿ ಪ್ರಾರ್ಥನೆಯ ಕರೆಯನ್ನು (ಬಾಂಗ್,) ಆಲಿಸಿದರು. 54 ವರ್ಷದ ಅಕೌಂಟೆಂಟ್ ಡೊರಿನೆಲ್ ಪೋಪಾ, ದಂಪತಿಗಳು ಫುಟ್ಬಾಲ್ ವೀಕ್ಷಣೆಗಾಗಿ ಕತಾರ್ಗೆ ಭೇಟಿ ನೀಡಿದ್ದಾರೆ.
ದೋಹಾಸ್ ಬ್ಲೂ ಮಸೀದಿ:
ಗೋಡೆಗಳ ಮೇಲೆ ನೀಲಿ ಮತ್ತು ನೇರಳೆ ಟೈಲ್ಸ್ಗಳ ಸುಂದರವಾದ ಮೊಸಾಯಿಕ್ಗಳಿಂದಾಗಿ ಇದನ್ನು ದೋಹಾಸ್ ಬ್ಲೂ ಮಸೀದಿ ಎಂಬ ಹೆಸರೂ ಇದೆ. ದೈತ್ಯವಾದ ನೇತಾಡುವ ದೀಪದಿಂದ ಅಲಂಕಾರಗೊಂಡಿರುವ ಒಳಾಂಗಣವನ್ನು ವೀಕ್ಷಿಸಬಹುದು. ಇಸ್ಲಾಂ ಧರ್ಮ ಹಾಗೂ ಇಲ್ಲಿನ ಜನರ ಬಗ್ಗೆ ನಾವು ಕೆಲವೊಂದು ಆಲೋಚನೆಗಳನ್ನು ಹೊಂದಿದ್ದೆವು, ಆದರೀಗ ಅವೆಲ್ಲವೂ ಬದಲಾಗಬಹುದು ಎಂದು ಡೊರಿನೆಲ್ ಮತ್ತು ಕ್ಲಾರಾ ಪೋಪಾ ತಿಳಿಸಿದ್ದಾರೆ. ಇದರ ನಡುವೆ ಬ್ಲೂ ಮಸೀದಿಯನ್ನು ಮೇಲ್ವಿಚಾರಣೆ ಮಾಡುವ ಕತಾರ್ ಅತಿಥಿ ಕೇಂದ್ರವು ಪಂದ್ಯಾವಳಿಗಾಗಿ ಪ್ರಪಂಚದಾದ್ಯಂತವಿರುವ ಸಾಕಷ್ಟು ಮುಸ್ಲಿಂ ಬೋಧಕರನ್ನು ಕತಾರ್ಗೆ ಕರೆತಂದಿದೆ.
ಇಸ್ಲಾಂ ಅನ್ನು ಪರಿಚಯಿಸುವ ಒಂದು ಸುವರ್ಣವಕಾಶ:
ಮಸೀದಿಯ ಹೊರಗೆ ಅರೇಬಿಕ್ ಕಾಫಿ ಹಾಗೂ ಖರ್ಜೂರವನ್ನು ಭೇಟಿ ನೀಡುವವರಿಗಾಗಿ ಆಯೋಜಿಸಲಾಗಿದ್ದು ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ಅವರನ್ನು ಪರಿಚಯಿಸುವ ಹಾಗೂ ವಿವರಿಸುವ ವಿವಿಧ ಭಾಷೆಗಳ ಕಿರುಪುಸ್ತಕಗಳನ್ನು ಇರಿಸಲಾಗಿದೆ. ಕತಾರ್ನಲ್ಲಿ ಆಯೋಜಿಸಿರುವ ವಿಶ್ವಕಪ್ ಲಕ್ಷಾಂತರ ಜನರಿಗೆ ಇಸ್ಲಾಂ ಅನ್ನು ಪರಿಚಯಿಸುವ ಒಂದು ಸುವರ್ಣವಕಾಶ ಎಂದು ಸಿರಿಯನ್ ಸ್ವಯಂಸೇವಕ ಜಿಯಾದ್ ಫತೇಹ್ ತಿಳಿಸಿದ್ದು, ಪಶ್ಚಿಮದಲ್ಲಿ ಹರಡಿರುವ ಧರ್ಮದ ಕುರಿತಾದ ತಪ್ಪು ಗ್ರಹಿಕೆಗಳನ್ನು ನಿವಾರಿಸಲು ಇದು ಉತ್ತಮ ವಿಧಾನವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ "ನಾವು ಜನರಿಗೆ ನೈತಿಕತೆ, ಕುಟುಂಬ ಬಾಂಧವ್ಯದ ಪ್ರಾಮುಖ್ಯತೆ ಮತ್ತು ನೆರೆಹೊರೆಯವರು ಮತ್ತು ಮುಸ್ಲಿಮೇತರರಿಗೆ ಗೌರವ ನೀಡುವ ಬಗ್ಗೆ ಹೆಚ್ಚು ವಿವರಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: IPL 2023: ಐಪಿಎಲ್ ಫ್ರಾಂಚೈಸಿಗಳಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ, ಒಬ್ಬ ಭಾರತೀಯ ಆಟಗಾರನಿಗೆ ಮಾತ್ರ ಸಿಗಲಿದೆ ಚಾನ್ಸ್?
ಮಹಿಳಾ ಹಕ್ಕುಗಳ ಕುರಿತ ಪ್ರಶ್ನೆ:
ಮಹಿಳಾ ಭೇಟಿದಾರರಿಗಾಗಿ ಪ್ರತ್ಯೇಕ ವಿಚಾರಣಾ ಸ್ಥಳಗಳನ್ನು ಸ್ವಯಂಸೇವಕರು ಕಾಯ್ದಿರಿಸಿದ್ದಾರೆ. ವಿಚಾರಿಸುವವರಿಗೂ ಕಾಫಿಯನ್ನು ಒದಗಿಸಲಾಗುತ್ತಿದ್ದು ಆತಿಥ್ಯ ನೀಡಲಾಗುತ್ತಿದೆ. ಬುರ್ಖಾ, ಬಹುಪತ್ನಿತ್ವ ಮತ್ತು ಇಸ್ಲಾಂನಲ್ಲಿ ಮಹಿಳೆಯರು ಶೋಷಣೆಗೊಳಗಾಗಿದ್ದಾರೆಯೇ ಮೊದಲಾದ ಕುರಿತು ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಪ್ಯಾಲೇಸ್ಟಿನಿಯನ್ ಸ್ವಯಂಸೇವಕ ಸೋಮಯಾ ತಿಳಿಸಿದ್ದಾರೆ. ವಿಶ್ವಕಪ್ಗೆ ಸಂಬಂಧಿಸಿದಂತೆ ಮಹಿಳಾ ಮತ್ತು LGBTQ ಹಕ್ಕುಗಳ ಕುರಿತು ಕತಾರ್ನ ದಾಖಲೆಯನ್ನು ಹೆಚ್ಚು ಪರಿಶೀಲಿಸಲಾಗಿದೆ. ಭೇಟಿ ನೀಡುವವರು ಇಸ್ಲಾಂ ಧರ್ಮದ ಐದು ನಿಮಿಷಗಳ ವರ್ಚುವಲ್ ರಿಯಾಲಿಟಿ ಪ್ರವಾಸವನ್ನು ವೀಕ್ಷಿಸಬಹುದಾಗಿದೆ. ಈ ಅಭಿಯಾನವನ್ನು ಕತಾರ್ನಾದ್ಯಂತ ನಡೆಸಲಾಗುತ್ತಿದೆ.
ಇಸ್ಲಾಂನಲ್ಲಿರುವ ಸಂತೋಷ:
ಉನ್ನತ ಮಟ್ಟದ ಶಾಪಿಂಗ್ ಮಾಲ್ಗಳು ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುವ ಜಾಹೀರಾತುಗಳನ್ನು ಹೊಂದಿವೆ. ಉತ್ತಮ ನೈತಿಕತೆಯನ್ನು ಪ್ರತಿಪಾದಿಸುವ ಪ್ರವಾದಿ ಮೊಹಮ್ಮದ್ ಅವರ ಉಲ್ಲೇಖಗಳೊಂದಿಗೆ ಭಿತ್ತಿಚಿತ್ರಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಕತಾರ್ನ ಕೆಲವು ಮುಸ್ಲಿಂ ನಾಯಕರು ಫುಟ್ಬಾಲ್ ಅಭಿಮಾನಿಗಳನ್ನು ಇಸ್ಲಾಂಗೆ ಪರಿವರ್ತಿಸುವ ಪ್ರಯತ್ನಗಳಿಗೆ ಕರೆ ನೀಡಿದ್ದಾರೆ. ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಯಾರನ್ನೂ ಪರಿವರ್ತಿಸಬಾರದು ಎಂಬ ಕರೆಯನ್ನೂ ಈ ನಾಯಕರು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ