ಲಂಡನ್(ಜುಲೈ 07): ಇಟಲಿ ತಂಡ ಯೂರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ತಲುಪಿದೆ. ಯೂರೋಪ್ ಫುಟ್ಬಾಲ್ನ ಚಾಂಪಿಯನ್ ಆಗಲು ಇಟಲಿಗೆ ಇನ್ನೊಂದು ಹೆಜ್ಜೆ ಮಾತ್ರ ಉಳಿದಿದೆ. ಇಂದು ಇಲ್ಲಿಯ ವೆಂಬ್ಲೆ ಸ್ಟೇಡಿಯಂನಲ್ಲಿ ನಡೆದ ಯೂರೋ ಕಪ್ನ ಮೊದಲ ಸೆಮಿಫೈನಲ್ನಲ್ಲಿ ಪ್ರಬಲ ಸ್ಪೇನ್ ವಿರುದ್ಧ ಇಟಲಿ ರೋಚಕ ಗೆಲುವು ಪಡೆಯಿತು.
ಪೆನಾಲ್ಟಿ ಹಂತದವರೆಗೂ ಹೋದ ಈ ಪಂದ್ಯದಲ್ಲಿ ಇಟಲಿ 4-2 ಗೋಲುಗಳಿಂದ ಗೆದ್ದು ಬೀಗಿತು. ಪೆನಾಲ್ಟಿಗೆ ಮುನ್ನ ಎರಡೂ ತಂಡಗಳು ಪೂರ್ಣಾವಧಿಯಲ್ಲಿ 1-1 ಗೋಲುಗಳಿಂದ ಸರಿಸಮವಾಗಿದ್ದವು. 60ನೇ ನಿಮಿಷದಲ್ಲಿ ಫೆಡೆರಿಕೋ ಚೀಸಾ ಅವರು ಅದ್ಭುತ ಕರ್ಲಿಂಗ್ ಶಾಟ್ ಮೂಲಕ ಇಟಲಿಗೆ ಮೊದಲು ಮುನ್ನಡೆ ತಂದುಕೊಟ್ಟರು. ಆದರೆ, 80ನೇ ನಿಮಿಷದಲ್ಲಿ ಸ್ಪೇನ್ನ ಆಲ್ವರೋ ಮೊರಾಟ ಗೋಲು ಗಳಿಸಿ ಸರಿಸಮವಾಗುವಂತೆ ನೋಡಿಕೊಂಡರು. ಹೆಚ್ಚುವರಿ ಅವಧಿಯಲ್ಲಿ ಯಾವ ತಂಡವೂ ಗೋಲು ಗಳಿಸಿದ್ದರಿಂದ ಪೆನಾಲ್ಟಿ ಆಡಿಸಲಾಯಿತು.
ಮೊದಲ ಪೆನಾಲ್ಟಿ ಆಡುವ ಅವಕಾಶ ಇಟಲಿಗೆ ಸಿಕ್ಕಿತು. ಆದರೆ ಲೊಕಾಟೆಲ್ಲಿ ಒದ್ದ ಚೆಂಡನ್ನ ಸ್ಪೇನ್ ಗೋಲ್ಕೀಪರ್ ಸಿಮೋನ್ ರಕ್ಷಿಸುತ್ತಾರೆ. ಆದರೆ, ಮುಂದಿನ ಸರದಿಯಲ್ಲಿ ಸ್ಪೇನ್ನ ಓಲ್ಮೋ ಅವರು ಚೆಂಡನ್ನ ನೆಟ್ ಆಚೆ ಹೋಗುವಂತೆ ಒದ್ದು ಮುನ್ನಡೆ ಅವಕಾಶ ಕೈಚೆಲ್ಲುತ್ತಾರೆ. ನಂತರ ಇಟಲಿಯ ಬೆಲೋಟಿ ಗೋಲು ಗಳಿಸಿ ತಮ್ಮ ತಂಡಕ್ಕೆ ಮೊದಲ ಪೆನಾಲ್ಟಿ ಮುನ್ನಡೆ ತಂದುಕೊಡುತ್ತಾರೆ. ಆದರೆ, ಸ್ಪೇನ್ನ ಮೋರೆನೋ ಗೋಲು ಗಳಿಸಿ ಸರಿಸಮ ಮಾಡುತ್ತಾರೆ.
ಇದನ್ನೂ ಓದಿ: ಆಟದ ಮೈದಾನದಲ್ಲೇ ಪ್ರೇಮ ನಿವೇದನೆ ಮಾಡಿದ ಫುಟ್ಬಾಲ್ ಆಟಗಾರ..!
ನಂತರ ಇಟಲಿಯ ಬೆನುಸ್ಸಿ ಮತ್ತು ಇಂಗ್ಲೆಂಡ್ನ ಥಿಯಾಗೋ ಗೋಲು ಗಳಿಸಿ ಸ್ಕೋರು 2-2 ಆಗಿಸುತ್ತಾರೆ. ಬಳಿಕ ಬೆರ್ನಾರ್ಡೆಶಿ ಗೋಲು ಗಳಿಸಿ ಇಟಲಿಗೆ 3-2 ಮುನ್ನಡೆ ತಂದುಕೊಡುತ್ತಾರೆ. ಆದರೆ, ಕೆಲ ಹೊತ್ತಿನ ಮೊದಲು ಸ್ಪೇನ್ಗೆ ಹೀರೋ ಆಗಿದ್ದ ಮೊರಾಟೋ ನಾಲ್ಕನೇ ಪೆನಾಲ್ಟಿ ಹಂತದಲ್ಲಿ ಗೋಲು ಗಳಿಸುವಲ್ಲಿ ವಿಫಲರಾಗುತ್ತಾರೆ. ನಂತರದ ಅವಕಾಶದಲ್ಲಿ ಇಟಲಿಯ ಜೋರ್ಗಿನ್ಹೋ ಗೊಲು ಗಳಿಸಿ ತಂಡಕ್ಕೆ 4-2ರಿಂದ ಗೆಲುವು ದೊರಕಿಸಿಕೊಡುತ್ತಾರೆ.
ಈ ಪಂದ್ಯದಲ್ಲಿ ಆಕ್ರಮಣಕಾರಿ ಮುನ್ನಡೆ ಮತ್ತು ಪ್ರಬಲ ರಕ್ಷಣಾ ಪಡೆ ಹೊಂದಿರುವ ಇಟಲಿ ತಂಡ ಸ್ವಲ್ಪ ಮಟ್ಟಿಗೆ ಫೇವರಿಟ್ ಎನಿಸಿತ್ತು. ಆದರೆ, ಚೆಂಡಿನ ಮೇಲೆ ಬಹಳ ಹಿಡಿತ ಸಾಧಿಸುವ ಸ್ಪೇನ್ ತಂಡ ಪ್ರಬಲ ಸವಾಲೊಡ್ಡುವ ಎಲ್ಲಾ ನಿರೀಕ್ಷೆಯೂ ಇತ್ತು. ಸ್ಪೇನ್ ಆ ನಿರೀಕ್ಷೆ ಹುಸಿ ಮಾಡಲಿಲ್ಲ. ಆದರೆ, ಪೆನಾಲ್ಟಿಯಲ್ಲಿ ಇಟಲಿ ಮೇಲುಗೈ ಸಾಧಿಸಿ ಫೈನಲ್ ತಲುಪಿತು.
ಇನ್ನು, ಇವತ್ತು ಆತಿಥೇಯ ಇಂಗ್ಲೆಂಡ್ ಮತ್ತು ಡೆನ್ಮಾರ್ಕ್ ಮಧ್ಯೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ