• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Euro 2020 Final| ಯುರೋ ಕಪ್‌ ಫೈನಲ್‌: ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ 53 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಂಡ ಇಟಲಿ

Euro 2020 Final| ಯುರೋ ಕಪ್‌ ಫೈನಲ್‌: ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ 53 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಂಡ ಇಟಲಿ

ಪ್ರಶಸ್ತಿಯೊಂದಿಗೆ ಇಟಲಿ ತಂಡ.

ಪ್ರಶಸ್ತಿಯೊಂದಿಗೆ ಇಟಲಿ ತಂಡ.

ಇಂಗ್ಲೆಂಡ್‌ ರಾಜಧಾನಿ ಲಂಡನ್‌ ನಗರದ ವೆಂಬ್ಲೆ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರೆದರು ಮೊಟ್ಟ ಮೊದಲ ಬಾರಿಗೆ ಯುರೋಪಿಯನ್‌ ಚಾಂಪಿಯನ್‌ ಆಗುವ ಇಂಗ್ಲೆಂಡ್‌ ಕನಸು ನಿನ್ನೆ ತಡರಾತ್ರಿ ಭಗ್ನಗೊಂಡಿತು.

  • Share this:

    ವಿಶ್ವ ಫುಟ್‌ಬಾಲ್‌ನ ಪವರ್‌ ಹೌಸ್‌ ಎಂದು ಗುರುತಿಸಿಕೊಂಡಿರುವ ಯುರೋಕಪ್ ಚಾಂಪಿಯನ್‌ಶಿಪ್‌ಗೆ ನಿನ್ನೆ ಮಧ್ಯರಾತ್ರಿ ತೆರೆಬಿದ್ದಿದೆ. ಅಂತಿಮ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಇಟಲಿ ಬರೊಬ್ಬರಿ 53 ವರ್ಷಗಳ ನಂತರ ಚಾಂಪಿಯನ್‌ಶಿಪ್ ಪಟ್ಟ ತನ್ನದಾಗಿಸಿಕೊಂಡಿತು. ವಿಶ್ವ ಫುಟ್ಬಾಲ್‌ನ ಪವರ್‌ ಹೌಸ್‌ ಎಂದು ಕರೆಸಿಕೊಳ್ಲುವ ಫ್ರಾನ್ಸ್‌, ಜರ್ಮನಿ, ಸ್ಪೇನ್‌, ಬೆಲ್ಜಿಯಮ್‌ ತಂಡಗಳು ಫೈನಲ್‌ ಪ್ರವೇಶಿಸಲು ವಿಫಲವಾಗಿದ್ದವು. ಈ ಸಂದರ್ಭದಲ್ಲಿ ಇಟಲಿ ಯುರೋ ಕಪ್‌ ಗೆಲ್ಲುವುದರೊಂದಿಗೆ ಮುಂದಿನ ವರ್ಷ 2022 ರ ಫುಟ್ಬಾಲ್‌ ವಿಶ್ವಕಪ್‌ಗೆ ಸಿದ್ಧವಾಗಿರುವ ಸಂದೇಶವನ್ನು ನೀಡಿದೆ.


    ಇಂಗ್ಲೆಂಡ್‌ ರಾಜಧಾನಿ ಲಂಡನ್‌ ನಗರದ ವೆಂಬ್ಲೆ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರೆದರು ಮೊಟ್ಟ ಮೊದಲ ಬಾರಿಗೆ ಯುರೋಪಿಯನ್‌ ಚಾಂಪಿಯನ್‌ ಆಗುವ ಇಂಗ್ಲೆಂಡ್‌ ಕನಸು ನಿನ್ನೆ ತಡರಾತ್ರಿ ಭಗ್ನಗೊಂಡಿತು. ಲ್ಯೂಕ್ ಶಾ ಪಂದ್ಯದ 2 ನೇ ನಿಮಿಷದಲ್ಲಿ ಸಿಡಿಸಿದ ಆರಂಭಿಕ ಗೋಲಿನ ಮುನ್ನಡೆಯ ಹೊರತಾಗಿಯೂ ಇಂಗ್ಲೆಂಡ್‌ ಆಟಗಾರರಿಗೆ ಪಂದ್ಯದಲ್ಲಿ ಮತ್ತೊಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ.


    ಇಟಲಿಯ ಸ್ಟಾರ್‌ ಆಟಗಾರ ಲಿಯೋನಾರ್ಡೊ ಬೊನುಸಿ 67 ನೇ ನಿಮಷದಲ್ಲ ಅದ್ಭುತ ಗೋಲು ಗಳಿಸಿ ಇಟಲಿ ಪಕ್ಷದಿಂದ ಜಾರುತ್ತಿದ್ದ ಪಂದ್ಯವನ್ನು ಮತ್ತೆ ಸಮ ಸ್ಥಿತಿಗೆ ತಂದರು. ಎರಡೂ ತಂಡಗಳು ಯುರೋಪಿಯನ್‌ ಫುಟ್ಬಾಲ್‌ ಕಿರೀಟಕ್ಕಾಗಿ ಅಂತಿಮ ನಿಮಿಷದವರೆಗೂ ತೀವ್ರ ಪೈಪೋಟಿ ನಡೆಸಿದವಾದರೂ ಪಂದ್ಯ ಇಕ್ವಲೈಜರ್‌ನಲ್ಲಿಯೇ ಅಂತ್ಯವಾಯಿತು. 90+ ಹೆಚ್ಚುವರಿ ಸಮಯದಲ್ಲೂ ಪ್ರಬಲ ತಡೆಗೋಡೆಗಳನ್ನು ಭೇದಿಸಿ ಗೋಲು ಗಳಿಸುವ ಇಟಲಿ ಮತ್ತು ಇಂಗ್ಲೆಂಡ್‌ ತಂಡದ ಯತ್ನ ಯಶಸ್ವಿಯಾಗಲಿಲ್ಲ. ಕೊನೆಗೆ 1-1 ಗೋಲ್‌ಗಳಿಂದ ಎರಡು ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯ ರೋಚಕ ಪೆನಾಲ್ಟಿ ಶೂಟೌಟ್‌ವರೆಗೂ ಸಾಗಿತು.


    ಚಾಂಪಿಯನ್‌ ತಂಡವನ್ನು ನಿರ್ಣಯಿಸುವ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ಮೇಲುಗೈ ಸಾಧಿಸಿ ಇಂಗ್ಲೆಂಡ್‌ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಮೊಟ್ಟ ಮೊದಲ ಬಾರಿಗೆ ಯುರೋಪಿಯನ್‌ ಚಾಂಪಿಯನ್‌ ಆಗುವ ಇಂಗ್ಲೆಂಡ್‌ ತಂಡದ ಕನಸು ನಿರ್ಣಾಯಕ ಹಂತದಲ್ಲಿ ವಿಫಲಗೊಂಡಿದ್ದಕ್ಕೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.


    ಇಂಗ್ಲೆಂಡ್‌ ತಂಡದ ನಾಯಕ ಹ್ಯಾರಿ ಕೇನ್ ಮತ್ತು ರಹೀಮ್ ಸ್ಟರ್ಲಿಂಗ್ ಮೇಲೆ ತವರಿನ ಅಭಿಮಾನಿಗಳು ಇಟ್ಟ ನಿರೀಕ್ಷೆ ಹುಸಿಯಾಗಿದೆ. ಇಬ್ಬರೂ ಆಟಗಾರರು ಟೂರ್ನಿಮೆಂಟ್‌ ಉದ್ದಕ್ಕೂ ಮಿಂಚಿನ ಪ್ರದರ್ಶನಗಳನ್ನು ನೀಡಿದ್ದರು.


    ಇದನ್ನೂ ಓದಿ: Novak Djokovic - ವಿಂಬಲ್ಡನ್ ಗೆದ್ದ ನೊವಾಕ್ ಜೋಕೊವಿಚ್; ಹೊಸ ಇತಿಹಾಸದ ಹೊಸ್ತಿಲಲ್ಲಿ ಸರ್ಬಿಯನ್ ಆಟಗಾರ


    ಯುರೋ ಚಾಂಪಿಯನ್ಶಿಪ್‌ನಲ್ಲಿ ನಾಲ್ಕು ಪಂದ್ಯಗಳಿಂದ 5 ಗೋಲುಗಳಿಸಿದ ಕ್ರಿಸ್ಟಿಯಾನೋ ರೊನಾಲ್ಡೊ ಅತಿಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನಿಡಲಾಗುವ ಗೋಲ್ಡನ್‌ ಶೂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಯುರೋ ಕಪ್‌ನಲ್ಲಿ ರೊನಾಲ್ಡೋಗೆ ದೊರೆತ ಮೊದಲ ಪ್ರಶಸ್ತಿ ಇದು. 16 ಗೋಲುಗಳನ್ನು ತಡೆದ ಇಂಗ್ಲೆಂಡ್‌ ಗೋಲ್‌ ಕೀಪರ್‌ ಜೊರ್ಡನ್‌ ಪಿಕ್‌ಫೋರ್ಡ್ ಅವರಿಗೆ ಗೋಲ್ಡನ್‌ ಗ್ಲೌಸ್‌ ಪ್ರಶಸ್ತಿಯನ್ನು ನೀಡಲಾಯಿತು.


    ಮತ್ತೊಂದೆಡೆ ಇಟಲಿ ತಂಡ ಮ್ಯಾನೇಜರ್‌ ರಾಬರ್ಟೊ ಮ್ಯಾನ್ಸಿನಿ ಮಾರ್ಗದರ್ಶನದಲ್ಲಿ ಸತತ 34ನೇ ಗೆಲುವನ್ನು ಸಾಧಿಸುವ ಮೂಲಕ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿತು. ಎರಡೂ ತಂಡಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಯುರೋ ಕಪ್‌ನಲ್ಲಿ ಇಂಗ್ಲೆಂಡ್‌ ತಂಡ ಮೊದಲ ಬಾರಿಗೆ ಫೈನಲ್ ಹಂತವನ್ನು ತಲುಪಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿತ್ತು. 2020 ರಲ್ಲೂ ಇಂಗ್ಲೆಂಡ್‌ನ ಪ್ರಶಸ್ತಿಯ ಬರ ನೀಗಲಿಲ್ಲ. 1966 ರ ಫುಟ್ಬಾಲ್‌ ವಿಶ್ವಕಪ್‌ ಗೆಲುವಿನ ನಂತರ ಇಂಗ್ಲೆಂಡ್‌ ಇದುವರೆಗೆ ಯಾವುದೇ ಮುಖ್ಯ ಕ್ರೀಡಾಕೂಟದಲ್ಲಿ ಫೈನಲ್‌ಗೇರಿರಲಿಲ್ಲ. ಹಾಗಾಗಿ ಇಂಗ್ಲೆಂಡ್‌ ಅಭಿಮಾನಿಗಳಲ್ಲಿ ಸ್ವಾಭಾವಿಕವಾಗಿ ನಿರೀಕ್ಷೆ ಗರಿಗೆದರಿತ್ತು.


    ಇದನ್ನೂ ಓದಿ: Shafali Verma: ಒಂದೇ ಓವರ್​ನಲ್ಲಿ ಸತತ 5 ಬೌಂಡರಿ ಬಾರಿಸಿ ಮಿಂಚಿದ ಶಫಾಲಿ ವರ್ಮಾ..!


    ಅತ್ತ 4 ಬಾರಿಯ ವಿಶ್ವಕಪ್‌ ಚಾಂಪಿಯನ್‌ ಇಟಲಿ ಕೂಡ 2006 ರ ವಿಶ್ವಕಪ್‌ ಗೆಲುವಿನ ನಂತರ ಸತತ 15 ವರ್ಷ ಗೆಲುವಿನ ರುಚಿ ಸವಿದಿರಲಿಲ್ಲ. 2012 ರಲ್ಲಿ ಬಲಿಷ್ಠ ಸ್ಪೇನ್‌ ತಂಡದ ವಿರುದ್ಧ ಸೋಲನುಭವಿಸುವ ಮೂಲಕ ನಿರಾಸೆ ಗೊಂಡಿದ್ದ ಇಟಲಿ ಯುರೋ ಕಪ್‌ 2020 ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಳ್ಳುವ ಮೂಲಕ 2012 ರ ನಿರಾಸೆಗೆ ಕೊನೆಹಾಡಿತು.


    ಕೊರೋನಾ ಸಾಂಕ್ರಾಮಿಕದ ನಡುವೆಯೂ ಮಿನಿ ವರ್ಡ್‌ಕಪ್ ಎಂದೇ ಖ್ಯಾತವಾಗಿರುವ ಯುರೋಪಿಯನ್‌ ಚಾಂಪಿಯನ್‌ಶಿಪ್‌ ಹಣಾಹಣಿ ಸುಖಾಂತ್ಯವಾಗಿದೆ. ಕೋವಿಡ್‌ ಕಾರಣದಿಂದ 16 ನೇ ಯುರೋ ಕಪ್‌ ಪಂದ್ಯಾವಳಿಯನ್ನು ಕೇವಲ ಒಂದು ದೇಶದಲ್ಲಿ ನಡೆಯದೇ 11 ದೇಶಗಳು ಟೂರ್ನಿಗೆ ಆತಿಥ್ಯ ವಹಿಸಿದವು. ಅಜೆರ್ಬೈಜಾನ್, ಡೆನ್ಮಾರ್ಕ್, ಇಂಗ್ಲೆಂಡ್, ಜರ್ಮನಿ, ಹಾಲೆಂಡ್, ಹಂಗೇರಿ, ಇಟಲಿ, ರೊಮೇನಿಯಾ, ರಷ್ಯಾ, ಸ್ಕಾಟ್ಲೆಂಡ್ ಮತ್ತು ಸ್ಪೇನ್ ಗಳಲ್ಲಿ ಯುರೋ ಕಪ್‌ ಪಂದ್ಯಗಳು ನಡೆದಿದ್ದು ಕೋವಿಡ್‌ ಆತಂಕದ ನಡುವೆ ಪಂದ್ಯಾವಳಿಯ ಸ್ಥಳ ಬದಲಾವಣೆಗೆ ಕೂಡ ಒತ್ತಾಯಗಳು ಕೇಳಿ ಬಂದಿದ್ದವು.

    Published by:MAshok Kumar
    First published: