ಲಾರ್ಡ್ಸ್ ಟೆಸ್ಟ್: ಭಾರತಕ್ಕೆ ಮಾರಕವಾದ ಮಳೆ ಮತ್ತು ಆ್ಯಂಡರ್ಸನ್; ಟೀಮ್ ಇಂಡಿಯಾ 107 ರನ್​ಗೆ ಆಲೌಟ್


Updated:August 11, 2018, 8:26 AM IST
ಲಾರ್ಡ್ಸ್ ಟೆಸ್ಟ್: ಭಾರತಕ್ಕೆ ಮಾರಕವಾದ ಮಳೆ ಮತ್ತು ಆ್ಯಂಡರ್ಸನ್; ಟೀಮ್ ಇಂಡಿಯಾ 107 ರನ್​ಗೆ ಆಲೌಟ್
ಜೇಮ್ಸ್ ಆಂಡರ್ಸನ್ ಮತ್ತು ವಿರಾಟ್ ಕೊಹ್ಲಿ

Updated: August 11, 2018, 8:26 AM IST
- ನ್ಯೂಸ್18  ಕನ್ನಡ

ಲಾರ್ಡ್ಸ್: ಲಂಡನ್​ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆ ಟೀಮ್  ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್-ಭಾರತ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಇಡೀ ಮೊದಲ ದಿನದಾಟ ಮಳೆಗೆ ಆಹುತಿಯಾಯಿತು. ಎರಡನೇ ದಿನ ಟೀಮ್ ಇಂಡಿಯ ಆಹುತಿಯಾಯಿತು. ಅರ್ಧ ದಿನಕ್ಕೂ ಹೆಚ್ಚು ಆಟ ನೀರುಪಾಲಾಯಿತು. ಮಳೆ ನಿಂತು ನಿಂತು ಬರುತ್ತಿದ್ದ ನಡುವೆಯೇ ಭಾರತ ಬ್ಯಾಟುಗಾರರು ತರಗೆಲೆಗಳಂತೆ ಉದುರಿಹೋದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಕೇವ 107 ರನ್​ಗೆ ಆಲೌಟ್ ಆಯಿತು. ಮಳೆಯಿಂದ ಒದ್ದೆಯಾದ ಪಿಚ್​ನಲ್ಲಿ ರನ್ ಗಳಿಸಲು ಬ್ಯಾಟ್ಸ್​ಮನ್ ಪರದಾಡಿದರು. ಇಂಗ್ಲೆಂಡ್ ಬೌಲರ್​ಗಳು ಸರಿಯಾದ ಲೈನ್ ಮತ್ತು ಲೆಂತ್​ನಲ್ಲಿ ಬೌಲಿಂಗ್ ಮಾಡಿದ್ದು ಭಾರತ ರನ್ ಗಳಿಸಲು ತೀರಾ  ಹರಸಾಹಸಪಡಬೇಕಾಯಿತು. ಆರ್. ಅಶ್ವಿನ್ 29 ರನ್ ಗಳಿಸಿದ್ದೇ ಭಾರತದ ಪರ ಗರಿಷ್ಠ ಸ್ಕೋರು. ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಇಬ್ಬರೂ ಸೇರಿ 4ನೇ ವಿಕೆಟ್​ಗೆ 34 ರನ್ ಸೇರಿಸಿದ್ದೇ ಅತ್ಯುತ್ತಮ ಜೊತೆಯಾಟವೆನಿಸಿತು. ಕೊಹ್ಲಿ 23 ರನ್ ಗಳಿಸಲು 73 ಎಸೆತ ಆಡಬೇಕಾಯಿತು. ಅಷ್ಟರಮಟ್ಟಿಗೆ ಪಿಚ್ ಬ್ಯಾಟಿಂಗ್​ಗೆ ಕಷ್ಟಕರವಾಗಿತ್ತು.

ಪ್ರಮುಖ ಬ್ಯಾಟುಗಾರರಾದ ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ ಮತ್ತು ದಿನೇಶ್ ಕಾರ್ತಿಕ್ ಎರಡಂಕಿ ಮೊತ್ತವನ್ನೂ ಗಳಿಸಲಿಲ್ಲ. ಇಂಗ್ಲೆಂಡ್​ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. 13 ಓವರ್ ಬೌಲ್ ಮಾಡಿ 20 ರನ್ನಿತ್ತು 5 ವಿಕೆಟ್ ಕಬಳಿಸಿದರು. ಕ್ರಿಸ್ ವೋಕ್ಸ್ ಕೂಡ ಭಾರತದ ಬೆನ್ನೆಲುಬು ಮುರಿಯುವಲ್ಲಿ ಸಫಲರಾದರು. ಭಾರತೀಯ ಇನ್ನಿಂಗ್ಸ್​​ಗೆ ಚೇತರಿಕೆ ನೀಡುತ್ತಿದ್ದ ಕೊಹ್ಲಿ-ರಹಾನೆ ಜೊತೆಯಾಟ ಮುರಿದದ್ದೇ ಕ್ರಿಸ್ ವೋಕ್ಸ್.

ಲಂಡನ್​ನಲ್ಲಿ ಮಳೆ ಪೂರ್ಣವಾಗಿ ನಿಲ್ಲುವ ಲಕ್ಷಣವಿಲ್ಲ. ಒಂದು ವೇಳೆ ಮಳೆ ನಿಂತು ಸೂರ್ಯ ಮೂಡಿ ಪಿಚ್ ಒಣಗಿದರೆ ಇಂಗ್ಲೆಂಡ್​ನ ಬ್ಯಾಟಿಂಗ್​ಗೆ ಅನುಕೂಲವಾಗಲಿದೆ. ಆದರೆ, ಪಿಚ್ ಒದ್ದೆಯಾಗಿದ್ದರೆ ಭಾರತೀಯ ಬೌಲರ್​ಗಳು ಏನಾದರೂ ಕರಾಮತ್ತು ಮಾಡಿ ಎದುರಾಳಿಗಳ ಇನ್ನಿಂಗ್ಸನ್ನು ಮೂರಂಕಿ ಮೊತ್ತದೊಳಗೆ ನಿಯಂತ್ರಿಸಲು ಪ್ರಯತ್ನಿಸಬಹುದು.

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೀರೋಚಿತ ಸೋಲನುಭವಿಸಿದ ಟೀಮ್ ಇಂಡಿಯಾ ಈ ಪಂದ್ಯಕ್ಕೆ 2 ಬದಲಾವಣೆ ಮಾಡಿದೆ. ಶಿಖರ್ ಧವನ್ ಬದಲು ಚೇತೇಶ್ವರ್ ಪೂಜಾರ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹಾಗೆಯೇ, ವೇಗದ ಬೌಲರ್ ಉಮೇಶ್ ಯಾದವ್ ಬದಲು ಕುಲದೀಪ್ ಯಾದವ್​ಗೆ ಮಣೆಹಾಕಲಾಗಿದೆ. ಇದರೊಂದಿಗೆ ಈ ಪಂದ್ಯದಲ್ಲಿ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್​ಗಳು ಭಾರತದ ಬೌಲಿಂಗ್ ಅಸ್ತ್ರಗಳಾಗಲಿದ್ದಾರೆ.

ಬರ್ಮಿಂಗ್​ಹ್ಯಾಂನಲ್ಲಿ ಭಾರತ ಸೋಲುವ ಮುನ್ನ ತೀವ್ರ ಹೋರಾಟ ನೀಡುವಲ್ಲಿ ಸಫಲವಾಗಿತ್ತು. ಲೋ ಸ್ಕೋರಿಂಗ್ ಇದ್ದ ಆ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬಾಗಿದದ ವಿರಾಟ್ ಕೊಹ್ಲಿ ಅವರು ಹೆಚ್ಚೂಕಡಿಮೆ ಏಕಾಂಗಿಯಾಗಿ ಹೋರಾಡಿ ಭಾರತಕ್ಕೆ ಐತಿಹಾಸಿಕ ಗೆಲುವಿನ ಸಮೀಪಕ್ಕೆ ಕೊಂಡೊಯ್ದಿದ್ದರು. ಭಾರತದ ಬೌಲರ್​ಗಳೂ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಕೊಹ್ಲಿ ಬಿಟ್ಟು ಬೇರೆ ಬ್ಯಾಟುಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಭಾರತಕ್ಕೆ ಸೋಲಾಗಿತ್ತು.

ಭಾರತ ತಂಡ: ವಿರಾಟ್ ಕೊಹ್ಲಿ, ಮುರಳಿ ವಿಜಯ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ
Loading...

ಇಂಗ್ಲೆಂಡ್ ತಂಡ: ಜೋ ರೂಟ್, ಅಲಸ್ಟೇರ್ ಕುಕ್, ಕೀಟೋನ್ ಜೆನ್ನಿಂಗ್ಸ್, ಓಲ್ಲೀ ಪೋಪ್, ಜಾನಿ ಬೇರ್​ಸ್ಟೋ, ಕ್ರಿಸ್ ವೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರ್ರನ್, ಅದಿಲ್ ರಷೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.

ಸ್ಕೋರು ವಿವರ:

ಭಾರತ ಮೊದಲ ಇನ್ನಿಂಗ್ಸ್ 35.2 ಓವರ್ 107/10

(ವಿರಾಟ್ ಕೊಹ್ಲಿ 23, ಆರ್. ಅಶ್ವಿನ್ 29, ಹಾರ್ದಿಕ್ ಪಾಂಡ್ಯ 11, ಅಜಿಂಕ್ಯ ರಹಾನೆ 18 ರನ್ – ಜೇಮ್ಸ್ ಆ್ಯಂಡರ್ಸನ್ 20/5, ಕ್ರಿಸ್ ವೋಕ್ಸ್ 19/2)
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...