ಹೇಲ್ಸ್-ಬೈರ್​​ಸ್ಟೋ ಆರ್ಭಟ: ಏಕದಿನ ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಇಂಗ್ಲೆಂಡ್

 • News18
 • Last Updated :
 • Share this:
  ನ್ಯೂಸ್ 18 ಕನ್ನಡ

  ನ್ಯಾಟಿಂಗ್​​ಹ್ಯಾಮ್ (ಜೂ. 19): ನ್ಯಾಟಿಂಗ್​​ಹ್ಯಾಮ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 50 ಓವರ್​ಗಳಲ್ಲಿ 481 ರನ್ ಗಳಿಸುವ ಮೂಲಕ ವಿಶ್ವ ದಾಖಲೆ ಬರೆದಿದೆ. ಈ ಹಿಂದೆ ಪಾಕಿಸ್ತಾನ ವಿರುದ್ಧ 444ರನ್​ ದಾಖಲಿಸಿದ್ದ ಆಂಗ್ಲಾ ಪಡೆ, ಈಗ ತನ್ನದೇ ದಾಖಲೆಯನ್ನು ಅಳಿಸಿ ಹಾಕಿದೆ. ಗೆಲ್ಲಲು ಅಸಾಧ್ಯವೆನಿಸಿದ್ದ ಆಂಗ್ಲರ ಮೊತ್ತಕ್ಕೆ ಪ್ರತಿಯಾಗಿ ಕಾಂಗರೂಗಳು ಕೇವಲ 239 ರನ್​ಗೆ ಆಲೌಟ್ ಆಗಿ ಬರೋಬ್ಬರಿ 242 ರನ್​ಗಳ ಅಂತರದಿಂದ ಸೋಲಿನ ಮುಖಭಂಗ ಅನುಭವಿಸಿತು. ಈ ಭರ್ಜರಿ ಗೆಲುವಿನ ಮೂಲಕ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 3-0 ಅಂತರದಿಂದ ಮುನ್ನಡೆ ಪಡೆದುಕೊಂಡಿತು.

  ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಇಂಗ್ಲೆಂಡ್​ಗೆ ಬ್ಯಾಟಿಂಗ್ ಆಹ್ವಾನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜಾನಿ ಬೈರ್​​ಸ್ಟೋ ಅವರು ಸ್ಪೋಟಕ ಬ್ಯಾಟಿಂಗ್​ಗೆ ಮುಂದಾದರು. ಮೊದಲ ವಿಕೆಟ್​ಗೆ ಈ ಜೋಡಿ 159 ರನ್​ಗಳ ಜೊತೆಯಾಟ ನೀಡಿತು. ಜೇಸನ್ ರಾಯ್ ಅವರು 61 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸ್​​ನೊಂದಿಗೆ 82 ರನ್ ಬಾರಿಸಿ ಔಟ್ ಆದರು. ಬಳಿಕ ನಡೆದದ್ದು ಬೈರ್​​ಸ್ಟೋ ಹಾಗೂ ಅಲೆಕ್ಸ್ ಹೇಲ್ಸ್ ಆಟ. ಆಸೀಸ್ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಮನಬಂದಂತೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. 2ನೇ ವಿಕೆಟ್​ಗೆ ಇವರು 151 ರನ್​ಗಳ ಕಾಣಿಕೆ ನೀಡಿ ತಂಡದ ಮೊತ್ತವನ್ನು 35 ಓವರ್​ ಆಗುವ ಹೊತ್ತಿಗೆ 300ರ ಗಡಿ ದಾಟಿಸಿದರು. ಜಾನಿ ಬೈರ್​​ಸ್ಟೋ ಅವರು ಕೇವಲ 92 ಎಸೆತಗಳಲ್ಲಿ 15 ಬೌಂಡರಿ ಹಾಗೂ 5 ಸಿಕ್ಸ್​​ನೊಂದಿಗೆ 139 ರನ್​ ಗಳಿಸಿ ಅಗಾರ್ಗೆ ಅವರಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಬಳಿಕ ಬಂದ ಜಾಸ್ ಬಟ್ಲರ್ ಕೇವಲ 11 ರನ್​ಗೆ ನಿರ್ಗಮಿಸಿದರು. ನಂತರ ನಾಯಕ ಮೊರ್ಗನ್ ಜೊತೆಗೂಡಿದ ಹೇಲ್ಸ್ ಮತ್ತೆ ಸ್ಪೋಟಕ ಆಟಕ್ಕೆ ಮುಂದಾದರು. ಕ್ರೀಸ್​ಗೆ ಇಳಿದಾಗಿನಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಮೊರ್ಗನ್ ಸಿಕ್ಸರ್​ಗಳ ಸುರಿಮಳೆ ಗೈದರೆ ಇತ್ತ ಹೇಲ್ಸ್ ಶತಕ ಸಿಡಿಸಿ ಸಂಭ್ರಮಿಸಿದರು. 4ನೇ ವಿಕೆಟ್​ಗೆ ಈ ಜೋಡಿ 124 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 450ಕ್ಕೆ ತಂದಿಟ್ಟರು. ಕೊನೆ ಕ್ಷಣದಲ್ಲಿ 90 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸ್​ನೊಂದಿಗೆ 147 ರನ್​ ಗಳಿಸಿದ್ದ ಅಲೆಕ್ಸ್ ಹೇಲ್ಸ್ ಔಟ್ ಆದರೆ, ಇದರ ಬೆನ್ನಲ್ಲೆ ಮೊರ್ಗನ್ ಕೇವಲ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸ್​ನೊಂದಿಗೆ 67 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಇಂಗ್ಲೆಂಡ್ 50 ಓವರ್​ಗೆ 6 ವಿಕೆಟ್ ಕಳೆದುಕೊಂಡು 481 ರನ್ ಬಾರಿಸಿತು.

  ಆಸ್ಟ್ರೇಲಿಯಾ ಪರ ರಿಚರ್ಡಸನ್ 10 ಓವರ್​ಗೆ 92 ರನ್ ನೀಡಿ 3 ವಿಕೆಟ್ ಕಿತ್ತರೆ ಅಗಾರ್ ಅವರು 70 ರನ್ ನೀಡಿ 1 ವಿಕೆಟ್ ಕಬಳಿಸಿದರು. ಈ ಮೂಲಕ ಇಂಗ್ಲೆಂಡ್​ ತಂಡ  ಏಕದಿನ ಪಂದ್ಯಾಟದಲ್ಲಿ ಗರಿಷ್ಠ ರನ್​ ಗಳಿಸಿ ವಿಶ್ವದಾಖಲೆ ಬರೆದಿದೆ.

     ಇನ್ನು, ಆಸ್ಟ್ರೇಲಿಯಾದ ಇನ್ನಿಂಗ್ಸಲ್ಲಿ ಟ್ರಾವಿಸ್ ಹೆಡ್ ಅವರು ಮಾತ್ರ ಅರ್ಧಶತಕ ಭಾರಿಸಿದರು. ಅವರನ್ನು ಬಿಟ್ಟರೆ ಮಾರ್ಕಸ್ ಸ್ಟಾಯ್ನಿಸ್ 44 ರನ್ ಗಳಿಸಿದ್ದು ಮಾತ್ರ ಗಮನಾರ್ಹವೆನಿಸಿತು. ಲೆಗ್ ಸ್ಪಿನ್ನರ್ ಅದಿಲ್ ರಷೀದ್ ಮತ್ತು ಮೊಯೀನ್ ಅಲಿ ಅವರ ಬೌಲಿಂಗ್ ದಾಳಿ ಹಾಗೂ ಅಸಾಧ್ಯ ಗುರಿಯ ಒತ್ತಡದಿಂದ ಕಾಂಗರೂಗಳು ಸ್ವಲ್ಪವೂ ಪ್ರತಿರೋಧ ತೋರದೆ ಶರಣಾದರು.
  First published: