ಕೊಹ್ಲಿ ಶತಕ; ಇಂಗ್ಲೆಂಡ್ ಗೆಲುವಿಗೆ 522 ರನ್ ಟಾರ್ಗೆಟ್ ಕೊಟ್ಟ ಭಾರತ


Updated:August 20, 2018, 11:29 PM IST
ಕೊಹ್ಲಿ ಶತಕ; ಇಂಗ್ಲೆಂಡ್ ಗೆಲುವಿಗೆ 522 ರನ್ ಟಾರ್ಗೆಟ್ ಕೊಟ್ಟ ಭಾರತ
ವಿರಾಟ್ ಕೊಹ್ಲಿ

Updated: August 20, 2018, 11:29 PM IST
- ನ್ಯೂಸ್18 ಕನ್ನಡ

ನಾಟಿಂಗ್​ಹ್ಯಾಂ(ಆ. 20): ಮೊದಲ ಇನ್ನಿಂಗ್ಸಲ್ಲಿ ಅಲ್ಪದರಲ್ಲಿ ಶತಕವಂಚಿತರಾಗಿದ್ದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸಲ್ಲಿ ಶತಕದ ಗಡಿ ದಾಟಲು ಯಾವುದೇ ಯಡವಟ್ಟು ಮಾಡಿಕೊಳ್ಳಲಿಲ್ಲ. ಕೊಹ್ಲಿಯಂತೆ ಭಾರತ ತಂಡ ಕೂಡ ಎರಡನೇ ಇನ್ನಿಂಗ್ಸಲ್ಲಿ ಹೆಚ್ಚು ಯಡವಟ್ಟು ಮಾಡಲಿಲ್ಲ. ಪಂದ್ಯಕ್ಕೆ ಇನ್ನೂ 2 ದಿನ ಬಾಕಿ ಇರುವಂತೆ, ಹಾಗೂ ಇನ್ನೂ 3 ವಿಕೆಟ್ ಕೈಲಿರುವಂತೆಯೇ ಭಾರತ ತಂಡ 352 ರನ್ನಿಗೆ ತನ್ನ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಇಂಗ್ಲೆಂಡ್ ಗೆಲುವಿಗೆ 522 ರನ್ ಗುರಿ ಕೊಟ್ಟಿತು. 3ನೇ ದಿನಾಂತ್ಯದ ವೇಳೆ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದೆ.

ನಿನ್ನೆಯ 2ನೇ ದಿನಾಂತ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದ್ದ ಭಾರತ ಇಂದು ಮೂರನೇ ದಿನ ಎಚ್ಚರಿಕೆಯ ಆಟ ತೋರಿತು. ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಇಬ್ಬರು ನಿಧಾನಗತಿಯಲ್ಲಾದರೂ ಸ್ಥಿರವಾಗಿ ಇನ್ನಿಂಗ್ಸ್ ಕಟ್ಟಿದರು. ಇಬ್ಬರೂ 3ನೇ ವಿಕೆಟ್​ಗೆ 113 ರನ್ ಸೇರಿಸಿದರು. ಪೂಜಾರ 72 ರನ್ ಗಳಿಸಿ ನಿರ್ಗಮಿಸಿದರು. ಪೂಜಾರ ನಂತರ ವಿರಾಟ್ ಕೊಹ್ಲಿ ಶತಕ ಪೂರೈಸಿ ಔಟಾದರು. ಇದು ಕೊಹ್ಲಿ ಅವರ 23ನೇ ಟೆಸ್ಟ್ ಶತಕವಾಗಿದೆ. ಮೊದಲ ಇನ್ನಿಂಗ್ಸಲ್ಲಿ ಉತ್ತಮ ಆಟವಾಡಿದ್ದ ರಿಷಭ್ ಪಂತ್ ಇವತ್ತು ಕೇವಲ 1 ರನ್ನಿಗೆ ಔಟಾದರು. ಅದಾದ ನಂತರ ಹಾರ್ದಿಕ್ ಪಾಂಡ್ಯ ಬಿಡುಬೀಸಾಗಿ ಬ್ಯಾಟ್ ಮಾಡಿ ಕೇವಲ 52 ಬಾಲ್​ನಲ್ಲಿ 52 ರನ್ ಚಚ್ಚಿದರು. ಇವರ ಭರ್ಜರಿ ಬ್ಯಾಟಿಂಗ್ ಫಲವಾಗಿ ದಿನಾಂತ್ಯದೊಳಗೆ ಭಾರತದ ಸ್ಕೋರು 350 ರನ್ ಗಡಿ ದಾಟಲು ಸಾಧ್ಯವಾಯಿತು.

ಗೆಲ್ಲಲು 522 ರನ್ ಬೃಹತ್ ಸವಾಲು ಪಡೆದ ಇಂಗ್ಲೆಂಡ್ ತಂಡ ದಿನಾಂತ್ಯಕ್ಕೆ ಉಳಿದಿದ್ದ 9 ಓವರ್​ನಲ್ಲಿ ಯಾವುದೇ ಅವಘಡ ಕಾಣಲಿಲ್ಲ. ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್​ನಲ್ಲಿ ಕಾಡಿದ್ದ ಹಾರ್ದಿಕ್ ಪಾಂಡ್ಯ ನಾಳೆ ನಾಲ್ಕನೇ ದಿನದಂದು ಆತಿಥೇಯರ ಪಾಲಿಗೆ ಕಂಟಕವಾಗಿ ಕಾಡುವ ನಿರೀಕ್ಷೆ ಇದೆ. ಮೊದಲ ಮೂರು ದಿನಗಳೂ ಪ್ರಾಬಲ್ಯ ಮೆರೆದಿರುವ ಭಾರತ ತಂಡ ನಾಳೆಯೂ ತನ್ನ ನಿಯಂತ್ರಣ ಬಿಟ್ಟುಕೊಡದೇ ಇದ್ದಲ್ಲಿ ಗೆಲುವು ದಕ್ಕುವುದು ನಿಶ್ಚಿತವಾಗಿದೆ. ಇಂಗ್ಲೆಂಡ್ ತಂಡಕ್ಕೆ ಬರೋಬ್ಬರಿ 2 ದಿನಗಳು ಉಳಿದಿದ್ದರೂ ಗೆಲುವು ಕಷ್ಟಸಾಧ್ಯವೆಂಬಂತಹ ಸ್ಥಿತಿ ಇದೆ.

ಸ್ಕೋರು ವಿವರ(3ನೇ ದಿನಾಂತ್ಯಕ್ಕೆ):

ಭಾರತ ಮೊದಲ ಇನ್ನಿಂಗ್ಸ್ 94.5 ಓವರ್ 329/10
Loading...

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 38.2 ಓವರ್ 161/10

ಭಾರತ ಎರಡನೇ ಇನ್ನಿಂಗ್ಸ್ 110 ಓವರ್ 352/7 (ಡಿಕ್ಲೇರ್)
(ವಿರಾಟ್ ಕೊಹ್ಲಿ 103, ಚೇತೇಶ್ವರ್ ಪೂಜಾರ 72, ಹಾರ್ದಿಕ್ ಪಾಂಡ್ಯ ಅಜೇಯ 52, ಶಿಖರ್ ಧವನ್ 44, ಕೆಎಲ್ ರಾಹುಲ್ 36 ರನ್ – ಅದಿಲ್ ರಷೀದ್ 101/3, ಬೆನ್ ಸ್ಟೋಕ್ಸ್ 68/2)

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 9 ಓವರ್ 23/0
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...