ಕಣ್ಣೀರು ಹಾಕಬೇಡಿ, ಇಡೀ ದೇಶಕ್ಕೆ ನಿಮ್ಮ ಮೇಲೆ ಹೆಮ್ಮೆಯಿದೆ: ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನ

Indian Women Hockey Team: ಅಳುವುದನ್ನು ನಿಲ್ಲಿಸಿ, ನಿಮ್ಮ ಅಳು ನನಗೆ ಕೇಳುತ್ತಿದೆ. ದೇಶಕ್ಕೆ ನಿಮ್ಮ ಮೇಲೆ ಹೆಮ್ಮೆಯಿದೆ. ಹಲವು ದಶಕಗಳ ನಂತರ ನಿಮ್ಮ ಶ್ರಮದಿಂದ ಭಾರತ ಹಾಕಿಯಲ್ಲಿ ಮತ್ತೆ ಗುರುತಿಸಿಕೊಂಡಿದೆ. ಹಾಕಿ ಭಾರತದ ಗುರುತು, ನಿಮ್ಮ ಶ್ರಮವೇ ಅದನ್ನು ಮತ್ತೆ ಇಡೀ ಪ್ರಪಂಚಕ್ಕೆ ತೋರಿಸುವಂತೆ ಮಾಡಿದೆ, ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ಮೋದಿ.

ಪ್ರಧಾನಿ ಮೋದಿ.

  • Share this:
ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಪಡೆಯುವ ಹೊಸ್ತಿಲಲ್ಲಿ ಎಡವಿದ ಭಾರತ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಆತ್ಮಸ್ಥೈರ್ಯ ತುಂಬಿದ್ದಾರೆ. ಭಾರತದ ಗಂಡಸರ ಹಾಕಿ ತಂಡ ಬಲಿಷ್ಠ ಜರ್ಮನಿ ತಂಡವನ್ನು ಸೋಲಿಸಿ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮಹಿಳಾ ತಂಡ ಕೂಡ ಪದಕಕ್ಕೆ ಮುತ್ತಿಡಲಿದೆ ಎಂಬ ಬಯಕೆ ಇಡೀ ದೇಶಕ್ಕಿತ್ತು. ಆದರೆ ಕಡೆಯ ಪಂದ್ಯದಲ್ಲಿ ತಂಡ ಸೋಲೊಪ್ಪಿಕೊಳ್ಳಬೇಕಾಯಿತು. ಸೋತ ನಂತರ ಇಡೀ ತಂಡ ಕಣ್ಣೀರು ಹಾಕಿತ್ತು. ನಂತರ ತಂಡದ ಕೋಚ್​ಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಇಡೀ ತಂಡದ ಜತೆ ಮಾತನಾಡಿದ್ದಾರೆ. ಕಳೆದ ಐದಾರು ವರ್ಷಗಳಿಂದ ನೀವು ಬೆವರು ಹರಿಸಿದ್ದೀರಿ. ಅದರ ಪ್ರತಿಫಲ ಇಂದು ಇಡೀ ದೇಶಕ್ಕೆ ಸ್ಪೂರ್ತಿಯಾಗಿದೆ. ಪದಕ ಸಿಗದಿದ್ದರೇನಂತೆ, ದೇಶದ ಕೋಟ್ಯಂತರ ಮಹಿಳೆಯರಿಗೆ ನೀವು ಆದರ್ಶವಾಗಿದ್ದೀರಿ. ದಯವಿಟ್ಟು ಕಣ್ಣೀರು ಹಾಕಬೇಡಿ, ಇಡೀ ದೇಶಕ್ಕೆ ನಿಮ್ಮ ಮೇಲೆ ಹೆಮ್ಮಯಿದೆ ಎಂದು ಮೋದಿ ಹೇಳಿದ್ದಾರೆ. 

ಆಟದ ವೇಳೆ ಕಣ್ಣಿನ ಬಳಿ ಪೆಟ್ಟು ಮಾಡಿಕೊಂಡಿದ್ದ ನವನೀತ್​ ಕೌರ್​ ಅವರ ಆರೋಗ್ಯದ ಬಗ್ಗೆಯೂ ಮೋದಿ ವಿಚಾರಿಸಿದರು. ತಂಡದ ನಾಯಕಿ ರಾಣಿ ರಾಂಪಾಲ್​ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದರು. ನಂತರ ಮೋದಿ, ವಂದನಾ ಕಟಾರಿಯಾ ಮತ್ತು ಸಲೀಮಾ ತೆತೆ ಅವರ ಅದ್ಭುತ ಪ್ರದರ್ಶನವನ್ನು ಶ್ಲಾಘಿಸಿದರು.

ಕೊಂಚ ಸಮಯ ಸುಮ್ಮನಿದ್ದ ಪ್ರಧಾನಿ ಮೋದಿ, ತಂಡದ ಪ್ರತಿಯೊಬ್ಬರಿಗೂ ಕಣ್ಣೀರು ಹಾಕಬೇಡಿ ಎಂದು ಮನವಿ ಮಾಡಿದರು.

"ಅಳುವುದನ್ನು ನಿಲ್ಲಿಸಿ, ನಿಮ್ಮ ಅಳು ನನಗೆ ಕೇಳುತ್ತಿದೆ. ದೇಶಕ್ಕೆ ನಿಮ್ಮ ಮೇಲೆ ಹೆಮ್ಮೆಯಿದೆ. ಹಲವು ದಶಕಗಳ ನಂತರ ನಿಮ್ಮ ಶ್ರಮದಿಂದ ಭಾರತ ಹಾಕಿಯಲ್ಲಿ ಮತ್ತೆ ಗುರುತಿಸಿಕೊಂಡಿದೆ. ಹಾಕಿ ಭಾರತದ ಗುರುತು, ನಿಮ್ಮ ಶ್ರಮವೇ ಅದನ್ನು ಮತ್ತೆ ಇಡೀ ಪ್ರಪಂಚಕ್ಕೆ ತೋರಿಸುವಂತೆ ಮಾಡಿದೆ," ಪ್ರಧಾನಿ ಮೋದಿ ಹೇಳಿದರು.

ಹಾಕಿ ತಂಡದ ಕೋಚ್​ ಸೋಯೆರ್ಡ್​ ಮರೀನೆ ಅವರ ಶ್ರಮವನ್ನೂ ಕೂಡ ಗುರುತಿಸಿ ಮೋದಿ ಶ್ಲಾಘಿಸಿದರು.

"ನಿಮ್ಮೆಲ್ಲಾ ಶ್ರಮವನ್ನೂ ನೀವು ಹಾಕಿದ್ದೀರಿ. ನಮ್ಮ ದೇಶದ ಮಹಿಳಾ ತಂಡದ ಎಲ್ಲ ಆಟಗಾರರಿಗೆ ಶಕ್ತಿ ತುಂಬಿದ್ದೀರಿ. ನಿಮ್ಮ ಭವಿಷ್ಯ ಉಜ್ವಲವಾಗಿರಲಿ," ಎಂದು ಕೋಚ್​ ಮರೀನೆ ಅವರನ್ನು ಮೋದಿ ಹುರಿದುಂಬಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋಚ್​ ಮರೀನೆ, ನೀವು ಕರೆ ಮಾಡಿದ್ದಕ್ಕೆ ಧನ್ಯವಾದಗಳು, ಪಂದ್ಯ ಸೋತ ನಂತರ ಆಟಗಾರರು ಗದ್ಗದಿತರಾಗಿದ್ದರು ಎಂದು ತಿಳಿಸಿದರು.

"ನಾನು ತಂಡದ ಹುಡುಗಿಯರಿಗೆ ಹೇಳಿದ್ದೆ, ಇಡೀ ದೇಶಕ್ಕೆ ನೀವು ಮಾದರಿಯಾಗಿದ್ದೀರಿ. ಅದನ್ನು ನೀವು ನಿಮ್ಮ ಸಾಧನೆ ಎಂದು ಪರಿಗಣಿಸಬೇಕೆಂದು. ನೀವು ಕರೆ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದ, ನಮಸ್ತೆ," ಎಂದು ಕೋಚ್​ ಮರೀನೆ ಕರೆ ಅಂತ್ಯದಲ್ಲಿ ಹೇಳಿದರು.

ದೂರವಾಣಿ ಕರೆಗೂ ಮುನ್ನ ಮಹಿಳಾ ತಂಡದ ಪ್ರದರ್ಶನದ ಬಗ್ಗೆ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದರು.

The exceptional performance of the Men’s and Women’s Hockey Team has captured the imagination of our entire nation. There is a renewed interest towards Hockey that is emerging across the length and breadth of India. This is a very positive sign for the coming times. pic.twitter.com/E7HT3Gd7h5ಭಾರತ ಮಹಿಳೆ ಮತ್ತು ಪುರುಷರ ತಂಡ ಹಾಕಿ ತಂಡದ ಅಮೋಘ ಪ್ರದರ್ಶನ ಇಡೀ ದೇಶದ ಜನರ ಕಣ್ಣಿನಲ್ಲಿ ಸೆರೆಯಾಗಿದೆ. ಹಾಕಿ ಮೇಲಿನ ಅಭಿಮಾನ ಮತ್ತು ಪ್ರೀತಿ ಜನರಲ್ಲಿ ಮರುಹುಟ್ಟು ಪಡೆದಿದೆ. ಇಡೀ ದೇಶದ ಉದ್ದಗಲಕ್ಕೂ ಹಾಕಿಯ ಮೇಲಿನ ಅಭಿಮಾನ ಭರಪೂರವಾಗಿ ಹರಿದುಬರುತ್ತಿದೆ. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದ್ದು, ದೇಶದ ಕ್ರೀಡಾ ಭವಿಷ್ಯಕ್ಕೆ ಸಹಕಾರಿಯಾಗಲಿದೆ, ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದರು.

ಒಲಿಂಪಿಕ್ಸ್​ನಲ್ಲಿ ಒಂದಾದ ನಂತರ ಒಂದು ಪದಕಗಳನ್ನು ನಮ್ಮ ದೇಶದ ಕ್ರೀಡಾಪಟುಗಳು ಪಡೆಯುತ್ತಿದ್ದಾರೆ, ಜತೆಗೆ ವೀರೋಚಿತ ಸೋಲುಗಳಿಂದಲೂ ಕ್ರೀಡಾಪಟುಗಳು ಜನಮನ್ನಣೆ ಗಳಿಸುತ್ತಿದ್ದಾರೆ.
Published by:Sharath Sharma Kalagaru
First published: