ಕೋಪಗೊಂಡ ವ್ಯಕ್ತಿಯು ಯಾವುದರ ಬಗ್ಗೆಯೂ ಸಮಗ್ರವಾಗಿ ಯೋಚಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ವ್ಯಕ್ತಿ ಕೋಪದಲ್ಲಿ ಅಪರಾಧವನ್ನೂ ಮಾಡುತ್ತಾನೆ. ಇಂತಹದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನಲ್ಲಿ ಧರ್ಮರಾಜ್ ಎಂಬ ವ್ಯಕ್ತಿ ತನ್ನ ಸ್ನೇಹಿತ ವಿಘ್ನೇಶ್ ನನ್ನು ಕೊಲೆ ಮಾಡಿದ್ದಾನೆ. ಕೊಲೆ ಪ್ರಕರಣದ ಆರೋಪಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಯಾಗಿದ್ದು, ಮೃತರು ಹಾಲಿ ನಾಯಕ ರೋಹಿತ್ ಶರ್ಮಾ ಅಭಿಮಾನಿಯಾಗಿದ್ದಾರೆ. ಈ ಘಟನೆ ನಡೆದ ನಂತರ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಬಂಧಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಶುರುವಾಗಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.
ಕೊಹ್ಲಿ ಅಭಿಮಾನಿಯಿಂದ ರೋಹಿತ್ ಫ್ಯಾನ್ ಕೊಲೆ:
ಹೌದು, ತಮಿಳುನಾಡಿನ ಮಲ್ಲೂರಿನ ಪಿ. ಮಂಗಳವಾರ (ಅಕ್ಟೋಬರ್ 11) ರಾತ್ರಿ ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿ ವಿಘ್ನೇಶ್ ಮತ್ತು ಧರ್ಮರಾಜ್ ಎಂಬ ಇಬ್ಬರು ಸ್ನೇಹಿತರು ಕುಡಿದ ಅಮಲಿನಲ್ಲಿ ಕ್ರಿಕೆಟ್ ಬಗ್ಗೆ ಚರ್ಚಿಸುತ್ತಿದ್ದರು. ಇವರಲ್ಲಿ ಧರ್ಮರಾಜ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಐಪಿಎಲ್ ತಂಡ ಆರ್‌ಸಿಬಿ ಅಭಿಮಾನಿ. ಅದರಂತೆ ಪಿ. ವಿಘ್ನೇಶ್ ರೋಹಿತ್ ಶರ್ಮಾ ಅವರ ಅಭಿಮಾನಿಯಾಗಿದ್ದರು. ಇಬ್ಬರ ನಡುವಿನ ಚರ್ಚೆ ವಾಗ್ವಾದಕ್ಕೆ ತಿರುಗಿತು. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದ್ದು, ಧರ್ಮರಾಜ್ ಮದ್ಯದ ಬಾಟಲಿ ಹಾಗೂ ಕ್ರಿಕೆಟ್ ಬ್ಯಾಟ್ ನಿಂದ ವಿಘ್ನೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ವಿಘ್ನೇಶ್ ಮೃತಪಟ್ಟಿದ್ದಾನೆ. ಬಳಿಕ ಆರೋಪಿ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ. ಮರುದಿನ ಬೆಳಗ್ಗೆ ಸಿಡ್ಕೋ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರು ವಿಘ್ನೇಶ್ ಶವವನ್ನು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ ಧರ್ಮರಾಜ್ ಮಾತನಾಡುವಾಗ ತೊದಲುತ್ತಾನೆ. ಈ ಚಟದಿಂದ ವಿಘ್ನೇಶ್ ಗೇಲಿ ಮಾಡುತ್ತಿದ್ದ. ಘಟನೆ ನಡೆದ ದಿನ ಇಬ್ಬರು ಸ್ನೇಹಿತರು ಕ್ರಿಕೆಟ್ ಬಗ್ಗೆ ಚರ್ಚಿಸುತ್ತಿದ್ದರು. ಈ ವೇಳೆ ವಿಘ್ನೇಶ್ ಅವರು ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ತಂಡದ ಪ್ರದರ್ಶನದೊಂದಿಗೆ ಧರ್ಮರಾಜ್ ಅವರನ್ನು ಹೋಲಿಸಿದ್ದಾರೆ. ಇದರಿಂದ ಕುಪಿತಗೊಂಡ ಧರ್ಮರಾಜ್ ವಿಘ್ನೇಶನನ್ನು ಕೊಂದಿದ್ದಾನೆ.
ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್ನಲ್ಲಿ ಬಿಗ್ ಟ್ವಿಸ್ಟ್, ಭಾರತ-ಪಾಕ್ ಪಂದ್ಯ ನಡೆಯುವುದು ಡೌಟ್?
#ArrestKohli ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್:
ಈ ಘಟನೆಯ ನಂತರ ರೋಹಿತ್ ಶರ್ಮಾ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ #ArrestKohli ಎಂಬ ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ. ಇದಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾತಿನ ಚಕಮಕಿಗೆ ಕಾರಣವಾಗಿದೆ. "ಕ್ಷಮಿಸಿ ವಿಘ್ನೇಶ್, ನಿಮಗಾಗಿ ಸರಳವಾದ ಟ್ಯಾಗ್ ಅನ್ನು ಸಹ ನಾವು ಟ್ರೆಂಡ್ ಮಾಡಲು ಸಾಧ್ಯವಿಲ್ಲ, ನಾವು ಹೇಡಿಗಳು" ಎಂದು ರೋಹಿತ್ ಶರ್ಮಾ ಅಭಿಮಾನಿಗಳು ವಿಘ್ನೇಶ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗಳ ಜೊತೆಗೆ 'ಅರೆಸ್ಟ್ ಕೊಹ್ಲಿ' ಎಂಬ ಹ್ಯಾಶ್‌ಟ್ಯಾಗ್ ಅನ್ನು ಸೇರಿಸಲಾಗಿದೆ.
ಇದರಿಂದಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಕೊಹ್ಲಿಯನ್ನು ಬೆಂಬಲಿಸಿ ಟ್ವೀಟ್ ಮಾಡಲು ಆರಂಭಿಸಿದ್ದಾರೆ. "ಭಾರತದ ಹೆಮ್ಮೆಯ ವಿರಾಟ್ ಕೊಹ್ಲಿಯ ಮಾನಹಾನಿ ಮಾಡುವ ಯತ್ನ ನಡೆಯುತ್ತಿದೆ, ಈ ಘಟನೆಯಲ್ಲಿ ವಿರಾಟ್ ಕೊಹ್ಲಿಯ ತಪ್ಪೇನು? ಸಲ್ಮಾನ್ ಖಾನ್ ಅವರಂತಹ ಕ್ರಿಮಿನಲ್ ಬಂಧನಕ್ಕೆ ರೋಹಿತ್ ಶರ್ಮಾ ಅಭಿಮಾನಿಗಳು ಏಕೆ ಒತ್ತಾಯಿಸುತ್ತಿಲ್ಲ?" ಎಂದು ಕೊಹ್ಲಿ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಇದುವರೆಗೆ ಅನೇಕ ಕ್ರಿಕೆಟಿಗರನ್ನು ಪರಸ್ಪರ ಹೋಲಿಸಲಾಗಿದೆ. ಆದಾಗ್ಯೂ, ಈ ಘಟನೆಯ ನಂತರ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಘ್ನೇಶ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅರಿಯಲೂರಿನ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ