ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಬೌಲರ್‌ಗಳು ಉತ್ತಮ ದಾಳಿ ನಡೆಸಿದರು. ಐಪಿಎಲ್ 2023 (IPL 2023) ಸೀಸನ್‌ನ ಅಂಗವಾಗಿ ನಡೆಯುತ್ತಿರುವ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷೆಗಿಂತ ಕಡಿಮೆ ಸ್ಕೋರ್ ಮಾಡಿದೆತು. ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 144 ರನ್ ಗಳಿಸಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 18.3 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಚೆನ್ನೈ ಪ್ಲೇಆಫ್ ಹಾದಿಯೂ ಸಂಕಷ್ಟಕ್ಕೆ ತಲುಪಿದೆ.
ರಿಂಕು-ರಾಣಾ ಭರ್ಜರಿ ಬ್ಯಾಟಿಂಗ್:
ಇನ್ನು, ಚೆನ್ನೈ ನೀಡಿದ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ ಆರಂಭದಲ್ಲಿ ದೀಪಕ್ ಚಹಾರ್ ಬೌಲಿಂಗ್ಗೆ ತತ್ತರಿಸಿತು. ದೀಪಕ್ ಸತತ 3 ವಿಕೆಟ್ ಪಡೆದು ಮಿಂಚಿದರು. ಆದರೆ ಬಳಿಕ ರಿಂಕು ಸಿಂಗ್ ಮತ್ತು ನಾಯಕ ನಿತೀಶ್ ರಾಣಾ ಉತ್ತಮ ಜೊತೆಯಾಟವಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಕೋಲ್ಕತ್ತಾ ಪರ ಜೇಸನ್ ರಾಯ್ 12 ರನ್, ಗರ್ಬಾಜ್ 1 ರನ್, ವೆಂಕಟೇಶ್ ಅಯ್ಯರ್ 9 ರನ್ ಗಳಿಸಿದರು. ಬಳಿಕ ಬಂದ ರಿಂಕು ಸಿಂಗ್ 43 ಎಸೆತದಲ್ಲಿ 3 ಸಿಕ್ಸ್ 4 ಬೌಂಡರಿ ಮೂಲಕ 54 ರನ್ ಗಳಸಿದರು. ಇತ್ತ ನಾಯಕನ ಆಟವಾಡಿದ ನಿತೀಶ್ ರಾಣಾ 57 ರನ್ ಗಳಿಸಿದರು.
ಶಿವಂ ದುಬೆ ಏಕಾಂಗಿ ಹೋರಾಟ:
ಇನ್ನು, ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಿಚ್ ನಿಧಾನವಾಗಿರುವುದರಿಂದ ಎರಡನೇ ಬಾರಿ ಬ್ಯಾಟಿಂಗ್ ಮಾಡುವುದು ಕಷ್ಟ ಎಂದು ಧೋನಿ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದರು. ಆರಂಭದಲ್ಲಿ ಚೆನ್ನೈ ಆರಂಭಿಕರಾದ ರುತುರಾಜ್ (17) ಮತ್ತು ಡೆವೊನ್ ಕಾನ್ವೆ ನಿಧಾನವಾಗಿ ಆಡಿದರು. ಅವರು ಚೆನ್ನೈ ಸೂಪರ್ ಕಿಂಗ್ಸ್‌ಗೆ ಉತ್ತಮ ಆರಂಭ ನೀಡಿದರು.
ಇದನ್ನೂ ಓದಿ: IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್ ಲೆಕ್ಕಾಚಾರ
ಮೊದಲ ವಿಕೆಟ್‌ಗೆ 31 ರನ್ ಸೇರಿಸಿದರು. ಈ ವೇಳೆ ಪವರ್ ಪ್ಲೇನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕಳೆದುಕೊಂಡು 52 ರನ್ ಗಳಿಸಿತು. ಆದರೆ, ಪವರ್ ಪ್ಲೇ ಬಳಿಕ ಚೆನ್ನೈ ಇನಿಂಗ್ಸ್ ದಿಢೀರ್ ಕುಸಿತ ಕಂಡಿತು. ಅಜಿಂಕ್ಯ ರಹಾನೆ (16), ಅಂಬಟಿ ರಾಯುಡು (4), ಮೊಯೀನ್ ಅಲಿ (1) ಹಾಗೆ ಬಂದು ಹಾಗೆಯೇ ಹೋದರು. ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಉತ್ತಮ ಬೌಲಿಂಗ್ ಮಾಡಿದ್ದರಿಂದ ಚೆನ್ನೈಗೆ ಮಧ್ಯಮ ಓವರ್‌ಗಳಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ.
ಆದರೆ ಶಿವಂ ದುಬೆ ತಮ್ಮ ಫಾರ್ಮ್ ಅನ್ನು ಮುಂದುವರೆಸಿದರು. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆರಂಭದಲ್ಲಿ ನಿಧಾನವಾಗಿ ಆಡಿದ ಅವರು ನಂತರ ಅಬ್ಬರಿಸಿದರು. ಜಡೇಜಾ ಜೊತೆ 6ನೇ ವಿಕೆಟ್‌ಗೆ 68 ರನ್ ಸೇರಿಸಿದರು. ಶಿವಂ ದುಬೆ ಎರಡು ರನ್‌ಗಳಿಂದ ತಮ್ಮ ಅರ್ಧಶತಕವನ್ನು ತಪ್ಪಿಸಿಕೊಂಡರು. ಅವರು ಸಿಎಸ್‌ಕೆ ಪರ 34 ಎಸೆತಗಳಲ್ಲಿ 48 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ದುಬೆ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ್ದರು.
ಐಪಿಎಲ್ 2023 ಅಂಕಪಟ್ಟಿ:
ಇನ್ನು, ಇಂದಿನ ಪಂದ್ಯದ ಗೆಲುವಿನ ಮೂಲಕ ಕೋಲ್ಕತ್ತಾ ತಂಡವು ಆಡಿರುವ 13ರಲ್ಲಿ 6ರಲ್ಲಿ ಗೆದ್ದು 7ರಲ್ಲಿ ಸೋತಲುವ ಮೂಲಕ 12 ಅಂಕ ಪಡೆದಿದೆ. ಇತ್ತ ಚೆನ್ನೈ ತಂಡ ಸಹ 13 ಪಂದ್ಯದ ಮೂಲಕ 7ರಲ್ಲಿ ಗೆದ್ದು 4ರಲ್ಲಿ ಸೋತು 1 ಪಂದ್ಯ ರದ್ದಾಗುವ ಮೂಲಕ 15 ಅಂಕ ಹೊಂದಿದ್ದು 2ನೇ ಸ್ಥಾನದಲ್ಲಿದೆ. ಆದರೆ ಚೆನ್ನೈ ರನ್ರೇಟ್ ಕುಸಿತವಾಗಿದೆ. ಉಳಿದಂತೆ ಗುಜರಾತ್ ತಂಡವು 16 ಅಂಕಗಳಿಂದ ಅಗ್ರಸ್ಥಾನದಲ್ಲಿದೆ. ಇತ್ತ ಮೂರನೇ ಸ್ಥಾನದಲ್ಲಿ 14 ಅಂಕದ ಮೂಲಕ ಮುಂಬೈ ಇಂಡಿಯನ್ಸ್ ಹಾಗೂ 13 ಅಂಕದಿಂದ ಲಕ್ನೋ ತಂಡ 4ನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಭರ್ಜರಿ ಜಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ಅಂಕದಿಂದ 5ನೇ ಸ್ಥಾನದಲ್ಲಿದೆ. ಆದರೆ ಅಚ್ಚರಿ ಎಂಬಂತೆ ಈ ಬಾರಿ ಈವರೆಗೂ ಯಾವುದೇ ಒಂದು ತಂಡ ನಿರ್ಧಿಷ್ಟವಾಗಿ ಪ್ಲೇಆಫ್ ತಲುಪಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ