ಕ್ರಿಕೆಟ್ ದೇವರ ದಾಖಲೆಗಳಿಗಿಲ್ಲ ರಕ್ಷೆ; ಸಚಿನ್ ರೆಕಾರ್ಡ್​​ ಬೆನ್ನತ್ತಿದ್ದಾರೆ ಈ ಆಟಗಾರರು

news18
Updated:August 14, 2018, 7:44 AM IST
ಕ್ರಿಕೆಟ್ ದೇವರ ದಾಖಲೆಗಳಿಗಿಲ್ಲ ರಕ್ಷೆ; ಸಚಿನ್ ರೆಕಾರ್ಡ್​​ ಬೆನ್ನತ್ತಿದ್ದಾರೆ ಈ ಆಟಗಾರರು
news18
Updated: August 14, 2018, 7:44 AM IST
ಸಾಗರ್ ಕನ್ನೆಮನೆ, ನ್ಯೂಸ್ 18 ಕನ್ನಡ

ಕ್ರಿಕೆಟ್ ಅಂದಾಕ್ಷಣ ನಮಗೆ ನೆನಪಾಗುವುದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ತಮ್ಮ 24 ವರ್ಷಗಳ ಅಮೋಘ ವೃತ್ತಿ ಜೀವನದಲ್ಲಿ ನೂರಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿರುವ ಸಚಿನ್ ತೆಂಡೂಲ್ಕರ್, ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ಬ್ಯಾಟ್ಸ್​​​ಮನ್​​, ಶತಕಗಳ ಶತಕ ಬಾರಿಸಿರುವ ಏಕೈಕ ಕ್ರಿಕೆಟಿಗ. ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ದಾಖಲಿಸಬಹುದು ಎಂದು ತೋರಿಸಿಕೊಟ್ಟಿದ್ದೇ ಈ ಮಾಸ್ಟರ್ ಬ್ಲಾಸ್ಟರ್. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 34 ಸಾವಿರಕ್ಕೂ ಅಧಿಕ ರನ್ ತನ್ನ ಹೆಸರಲ್ಲಿ ಇಟ್ಟುಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಗಳಿಗೂ ಕಂಠಕ ಎದುರಾಗಿದೆ. ಸಚಿನ್​​ರ ಶತಕಗಳ ಶತಕವನ್ನು ತಲುಪುವ ಏಕೈಕ ಆಟಗಾರ ನಮ್ಮ ಟೀಂ ಇಂಡಿಯಾದಲ್ಲೇ ಇದ್ದಾನೆ. ಆತನೇ ರನ್ ಮೆಶಿನ್ ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ ವರ್ಷಕ್ಕೆ ಸಾವಿರ ರನ್​ಗಳಂತೆ 50ಕ್ಕೂ ಹೆಚ್ಚು ರನ್ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈಗಾಗಲ್ಲೇ ಕೊಹ್ಲಿ ಲೆಜೆಂಡ್ ಸ್ಟೇಟಸ್ ಗಿಟ್ಟಿಸಿದ್ದಾರೆ ಎಂದು ಇತ್ತೀಚೆಗಷ್ಟೇ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದರು. ಅಷ್ಟರ ಮಟ್ಟಿಗೆ ವಿರಾಟ್ ಸದ್ಯದ ಕ್ರಿಕೆಟ್ ಲೋಕದಲ್ಲಿ ತಮ್ಮ ಹವಾ ಎಬ್ಬಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ಯಾರೂ ಊಹಿಸಲಾರದಂತ ರೆಕಾರ್ಡ್ ಮಾಡಿದ್ದಾರೆ. 463 ಏಕದಿನ ಪಂದ್ಯವನ್ನು ಆಡಿರುವ ಸಚಿನ್ ಅವರು 49 ಶತಕ ಹಾಗೂ 96 ಅರ್ಧಶತಕಗಳ ಸಹಿತ 18,426 ರನ್ ಕಲೆಹಾಕಿದ್ದಾರೆ. ಇದು ಸಾರ್ವಕಾಲಿಕ ಶ್ರೇಷ್ಠ ದಾಖಲೆಯಾಗಿದೆ. ಆದರೆ ಕೊಹ್ಲಿ ಈಗಾಗಲೇ ಸಚಿನ್​​ರ ಬಹುತೇಕ ದಾಖಲೆಯನ್ನು ಮುರಿದಿದ್ದಾರೆ. ಚೇಸಿಂಗ್​​​ನಲ್ಲಿ 17 ಶತಕವನ್ನು ದಾಖಲಿಸಿರುವ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 35 ಶತಕ ಸಿಡಿಸಿ, ಸಚಿನ್ ನಂತರದ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಅದೂ ಕೂಡ 211 ಪಂದ್ಯಗಳಲ್ಲಿ. ಇತ್ತೀಚೆಗಷ್ಟೇ ಧೋನಿ ಅವರು 10 ಸಾವಿರ ಗಡಿ ಮುಟ್ಟಿದ್ದನ್ನ ನೋಡಿದ್ದೇವೆ. ಆದರೆ ಕೊಹ್ಲಿ ತಮ್ಮ 29ನೇ ವಯಸ್ಸಿನಲ್ಲೇ ಈ ಅಮೋಘ ದಾಖಲೆಯ ಸಮೀಪದಲ್ಲಿದ್ದಾರೆ. ವಿರಾಟ್​ಗೆ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್ ದಾಖಲಿಸಿಲು ಬೇಕಾಗಿರುವುದು ಕೇವಲ 221 ರನ್​ಗಳು ಮಾತ್ರ. ಇದು ಕೊಹ್ಲಿಯ ಸಾಮರ್ಥ್ಯ ಹಾಗೂ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬುದನ್ನು ತೋರಿಸುತ್ತಿದೆ.

ಇನ್ನು ಟೆಸ್ಟ್ ಕ್ರಿಕೆಟ್​ನಲ್ಲೂ ಸಚಿನ್ ದಾಖಲೆಗಳಿಗೆ ಕಂಠಕ ಎದುರಾಗಿದೆ. ಆದರೆ ಈ ಫಾರ್ಮೆಟ್​ನಲ್ಲಿ ಸಚಿನ್ ದಾಖಲೆ ಮುಟ್ಟೋದು ವಿರಾಟ್​ಗೆ ತುಂಬಾನೆ ಕಷ್ಟ ಸಾಧ್ಯ. ಯಾಕಂದ್ರೆ ಕೊಹ್ಲಿ ಟೆಸ್ಟ್​​ನಲ್ಲಿ 5, 754 ರನ್ ದಾಖಲಿಸಿದ್ದಾರೆ. ಆದರೆ ಸಚಿನ್ 15, 921 ರನ್ ತಮ್ಮ ಖಾತೆಯಲ್ಲಿಟ್ಟಿದ್ದಾರೆ. ಹೀಗಾಗಿ ಕೊಹ್ಲಿ ಇಷ್ಟು ತಲುಪಲು ಇನ್ನೂ ಒಂದು ದಶಕವೇ ಬೇಕಾಗುತ್ತೆ. ಹೀಗಾಗಿ ಕೊಹ್ಲಿ ಈ ರೇಸ್​ನಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್​ಮನ್​​​ ಅಲೆಸ್ಟರ್ ಕುಕ್ ಮುಂದಿದ್ದಾರೆ. ಇದಕ್ಕೆ ಕಾರಣ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ 10 ಸಾವಿರ ಗಡಿ ಮುಟ್ಟಿದ ಏಕೈಕ ಬ್ಯಾಟ್ಸ್​ಮನ್​​ ಕುಕ್​ ಆಗಿದ್ದಾರೆ. 1 ಸಾವಿರದಿಂದ 10 ಸಾವಿರದವರೆಗೂ ವೇಗವಾಗಿ ರನ್ ದಾಖಲಿಸಿದ್ದಾರೆ. ಸದ್ಯ 33 ವರ್ಷ ವಯಸ್ಸಿನ ಕುಕ್ 12 ಸಾವಿರ ರನ್ ಗಡಿ ದಾಟಿದ್ದಾರೆ. ಹೀಗಾಗಿ ಸಚಿನ್​​ರ ಟೆಸ್ಟ್ ಕ್ರಿಕೆಟ್ ದಾಖಲೆಯನ್ನ ಯಾರಾದರು ಮುರೀತಾರೆ ಅಂತಾ ಇದ್ದರೆ ಸದ್ಯ ಈ ಕ್ರಿಕೆಟರ್ ಮುಂಚೂಣಿಯಲ್ಲಿದ್ದಾನೆ. ನಂತರದಲ್ಲಿ ಇಂಗ್ಲೆಂಡ್​ನವರೇ ಆದ ಯುವ ಬ್ಯಾಟ್ಸ್​​ಮನ್​​​ ಹಾಗೂ ನಾಯಕ ಜೋ ರೂಟ್ ಮೇಲೆ ವಿಶ್ವಾಸ ಇಡಲಾಗಿದೆ.

ಒಟ್ಟಿನಲ್ಲಿ ಸಚಿನ್ ದಾಖಲೆಯು ಶಿಖರದಷ್ಟು ಎತ್ತರಕ್ಕೆ ಬೆಳೆದುನಿಂತಿದೆ. ಈ ದಾಖಲೆ ಮುಟ್ಟುವುದು ಅಷ್ಟು ಸುಲಭದ ಮಾತಲ್ಲ. ಆದರೆ ಕ್ರಿಕೆಟ್​ನಲ್ಲಿ ಯಾವ ದಾಖಲೆಗಳು ಶಾಶ್ವತವಲ್ಲ ಎಂಬುದು ಈ ಹಿಂದೆ ಅನೇಕ ಬಾರಿ ಸಾಬೀತಾಗಿದೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ