• Home
  • »
  • News
  • »
  • sports
  • »
  • Pak vs Zim - 21 ರನ್ನಿಗೆ 7 ವಿಕೆಟ್; ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಗೆ ಐತಿಹಾಸಿಕ ಗೆಲುವು

Pak vs Zim - 21 ರನ್ನಿಗೆ 7 ವಿಕೆಟ್; ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಗೆ ಐತಿಹಾಸಿಕ ಗೆಲುವು

ಜಿಂಬಾಬ್ವೆ ಪಾಕಿಸ್ತಾನ ಪಂದ್ಯದ ಒಂದು ದೃಶ್ಯ

ಜಿಂಬಾಬ್ವೆ ಪಾಕಿಸ್ತಾನ ಪಂದ್ಯದ ಒಂದು ದೃಶ್ಯ

ಹರಾರೆಯಲ್ಲಿ ನಿನ್ನೆ ನಡೆದ 2ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ 19 ರನ್​ಗಳಿಂದ ರೋಚಕ ಗೆಲುವು ಸಾಧಿಸಿದೆ. ಜಿಂಬಾಬ್ವೆಯ 118 ರನ್​ಗೆ ಉತ್ತರವಾಗಿ ಪಾಕಿಸ್ತಾನ ಕೇವಲ 99 ರನ್​ಗೆ ಆಲೌಟ್ ಆಯಿತು.

  • Share this:

    ಹರಾರೆ, ಜಿಂಬಾಬ್ವೆ: ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ನಿನ್ನೆ ಅನಿರೀಕ್ಷಿತ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ಕೇವಲ 118 ರನ್ ಗಳಿಸಿದ ಜಿಂಬಾಬ್ವೆ ತನ್ನ ಎದುರಾಳಿಯನ್ನ 99 ರನ್ನಿಗೆ ಆಲೌಟ್ ಮಾಡಿ 19 ರನ್​ಗಳಿಂದ ಜಯಭೇರಿ ಭಾರಿಸಿದೆ. ಟಿ20 ಇತಿಹಾಸದಲ್ಲೇ ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ಸಾಧಿಸಿದ ಚೊಚ್ಚಲ ಗೆಲುವು ಇದು ಎಂಬುದು ಇಲ್ಲಿ ಗಮನಾರ್ಹ. ಹಾಗೆಯೇ, ಸತತ ಒಂಬತ್ತು ಪಂದ್ಯಗಳ ಸೋಲಿನ ಸರಪಳಿಯನ್ನು ಜಿಂಬಾಬ್ವೆ ಕಡಿದುಕೊಂಡಿದೆ.


    ನಿನ್ನೆ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಲೂಕ್ ಜೋಂಗ್ವೆ. ಎಡಗೈ ವೇಗದ ಬೌಲರ್ ಅದ ಅವರು 18 ರನ್ನಿತ್ತು 4 ವಿಕೆಟ್ ಪಡೆದರು. ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದು ಬಣ್ಣಿಸಲಾಗುವ, ಹಾಗೂ ಈ ಪಂದ್ಯದಲ್ಲಿ ಜಿಂಬಾಬ್ವೆ ಗೆಲುವಿಗೆ ಅಡ್ಡಗಾಲಾಗಿದ್ದ ನಾಯಕ ಬಾಬರ್ ಅಜಂ ಅವರ ವಿಕೆಟ್ ಪಡೆದದ್ದಲ್ಲೇ ಒಂದೇ ಓವರ್​ನಲ್ಲಿ ಪಾಕಿಸ್ತಾನದ ಕೊನೆಯ ಮೂರು ವಿಕೆಟ್ ಪಡೆದ ಲೂಕ್ ಜೋಂಗ್ವೆ ಸೂಪರ್ ಸ್ಟಾರ್ ಎನಿಸಿದರು.


    ಮೊದಲು ಬ್ಯಾಟ್ ಮಾಡಿ ಜಿಂಬಾಬ್ವೆ 118 ರನ್ ಮಾತ್ರ ಗಳಿಸಿದಾಗ ಯಾರೊಬ್ಬರೂ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಮಂದಗತಿಯ ಪಿಚ್ ಆದರೂ ಇಷ್ಟು ಕಡಿಮೆ ಮೊತ್ತವನ್ನು ಪಾಕಿಸ್ತಾನ ಸುಲಭವಾಗಿ ಚೇಸ್ ಮಾಡಿಬಿಡುತ್ತದೆಂಬ ಎಣಿಕೆ ಇತ್ತು. ಆದರೆ, ಪಾಕಿಸ್ತಾನದ ಬ್ಯಾಟುಗಾರರು ರನ್ ಗಳಿಸಲು ಪರದಾಡುವ ರೀತಿ ಜಿಂಬಾಬ್ವೆ ಬೌಲರ್​ಗಳ ಪ್ರದರ್ಶನ ಇತ್ತು. 41 ರನ್ ಗಳಿಸಿದ್ದ ಬಾಬರ್ ಅಜಂ 16ನೇ ಓವರ್​ನಲ್ಲಿ ಔಟಾಗುವುದರೊಂದಿಗೆ ಪಂದ್ಯಕ್ಕೆ ಮುಖ್ಯ ತಿರುವು ಸಿಕ್ಕಿತು. ಅಲ್ಲಿಯವರೆಗೆ ಪಾಕಿಸ್ತಾನ ನಿಧಾನಗತಿಯಲ್ಲಿ ರನ್ ಗಳಿಸಿದ್ದರೂ ಬಾಬರ್ ಅಜಂ ಅವರಂಥ ಆಟಗಾರರು ಒಂದಿಷ್ಟು ಸಿಡಿಲಬ್ಬರಿಸಿದರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಪಾಕಿಸ್ತಾನದ ಪಾಳಯದಲ್ಲಿತ್ತು. ಅದರೆ, ಲೂಕ್ ಜೋಂಗ್ವೆ ಬೌಲಿಂಗ್​ನಲ್ಲಿ ಬಾಬರ್ ಅಜಂ ವಿಕೆಟ್ ಒಪ್ಪಿಸಿ ಪೆವಿಲಿಯನ್​ಗೆ ಮರಳಿದರು. ಅಲ್ಲಿಂದ ಪಾಕ್ ಪತನ ಆರಂಭವಾಯಿತು. ಕೇವಲ 21 ರನ್ನಿಗೆ ಪಾಕಿಸ್ತಾನದ ಕೊನೆಯ 7 ವಿಕೆಟ್ ಉರುಳಿದವು. ಪಾಕಿಸ್ತಾನದ ಮೊತ್ತ ಮೂರಂಕಿ ಗಡಿಯನ್ನೂ ದಾಟಲಿಲ್ಲ.


    ಇದನ್ನೂ ಓದಿ: PBKS vs MI: ಮುಂಬೈ ಇಂಡಿಯನ್ಸ್​ ವಿರುದ್ದ ಪಂಜಾಬ್ ಕಿಂಗ್ಸ್​ಗೆ ಭರ್ಜರಿ ಜಯ


    ಕಣ್ಣು ಮತ್ತು ತಲೆಗೆ ಪೆಟ್ಟು ಮಾಡಿಕೊಂಡು ಐದು ವರ್ಷ ಕ್ರಿಕೆಟ್​ನಿಂದ ದೂರವಾಗಿದ್ದ ಲೂಕ್ ಜಾಂಗ್ವೆ ನಿನ್ನೆ ಜಿಂಬಾಬ್ವೆ ಪಾಲಿನ ಹೀರೋ. ಅವರಷ್ಟೇ ಅಲ್ಲ, ನಿನ್ನೆ ಬೌಲಿಂಗ್ ಮಾಡಿದ ಜಿಂಬಾಬ್ವೆಯ ಎಲ್ಲಾ ಬೌಲರ್​ಗಳೂ ಉತ್ತಮ ಪ್ರದರ್ಶನ ನೀಡಿದ್ದು ಗಮನಾರ್ಹ. ಜಾಂಗ್ವೆ ಅವರಂತೆ ಮತ್ತೊಬ್ಬ ಎಡಗೈ ವೇಗಿಯಾಗಿರುವ ರಿಚರ್ಡ್ ಎನ್​ಗರವ ಅವರು 3 ಓವರ್​ನಲ್ಲಿ ಕೇವಲ 10 ರನ್ನಿತ್ತು ಪಾಕಿಸ್ತಾನದ ಬ್ಯಾಟುಗಾರರನ್ನ ರನ್ ಗಳಿಸದಂತೆ ಕಟ್ಟಿಹಾಕಿದ್ದೂ ಜಿಂಬಾಬ್ವೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಪಾಕಿಸ್ತಾನದ ವಿರುದ್ಧ ಜಿಂಬಾಬ್ವೆ ಗಳಿಸಿದ ಮೊದಲ ಟಿ20 ಗೆಲುವು ಇದಾಗಿದೆ. ಪಾಕ್ ವಿರುದ್ಧ ಅದೂವರೆಗೆ ಆಡಿದ್ದ 16 ಟಿ20 ಪಂದ್ಯಗಳಲ್ಲಿ ಜಿಂಬಾಬ್ವೆಗೆ ಗೆಲುವು ಗಗನಕುಸುಮವಾಗಿತ್ತು.


    ಇನ್ನು, ಜಿಂಬಾಬ್ವೆ ಮತ್ತು ಪಾಕಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಯಲ್ಲಿ ಈಗ ಎರಡೂ ತಂಡಗಳು ತಲಾ ಒಂದೊಂದು ಗೆಲುವು ಪಡೆದಿವೆ. ಮೂರನೇ ಪಂದ್ಯದಲ್ಲಿ ಸರಣಿ ವಿಜೇತರನ್ನ ನಿರ್ಣಯ ಆಗಲಿದೆ.


    ಜಿಂಬಾಬ್ವೆ – ಪಾಕ್ 2ನೇ ಟಿ20 ಪಂದ್ಯದ ಸಂಕ್ಷಿಪ್ತ ಸ್ಕೋರು ವಿವರ:


    ಜಿಂಬಾಬ್ವೆ 20 ಓವರ್ 118/9
    (ಟಿನಾಶೆ ಕಮುನುಕಾಮ್ವೆ 34, ರೆಜಿಸ್ ಚಕಬ್ವ 18, ವೆಸ್ಲೆ ಮಧೆವೆರೆ 16, ಟರಿಸಯ್ ಮುಸಕಂಡ 13 ರನ್ – ಮೊಹಮ್ಮದ್ ಹಸನೇನ್ 19/2, ದಾನಿಶ್ ಅಜೀಜ್ 29/2)


    ಪಾಕಿಸ್ತಾನ 19.5 ಓವರ್ 99/10
    (ಬಾಬರ್ ಅಜಂ 41, ದಾನಿಶ್ ಅಜೀಜ್ 22, ಮೊಹಮ್ಮದ್ ರಿಜ್ವಾನ್ 13 ರನ್ – ಲೂಕ್ ಜೋಂಗ್ವೆ 18/4, ರಯಾನ್ ಬುರಿ 21/2)

    Published by:Vijayasarthy SN
    First published: