Yuvraj Singh Arrest- ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ; ವಿಚಾರಣೆ ಬಳಿಕ ಬಿಡುಗಡೆ

Derogatory Remarks on Dalits- ಚಹಲ್ ಬಗ್ಗೆ ಮಾತನಾಡುವಾಗ ಅವರ ಜಾತಿ ಬಗ್ಗೆ ಅವಹೇಳನಕಾರಿ ಮಾತುಗಳನ್ನ ಆಡಿದ ಕಾರಣಕ್ಕೆ ಯುವರಾಜ್ ಸಿಂಗ್ ಮೇಲೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ಯುವಿಯನ್ನ ಬಂಧಿಸಿ ಕೆಲ ಹೊತ್ತು ವಿಚಾರಣೆ ನಡೆಸಿ ಬಿಡುಗಡೆ ಮಾಡಿ ಕಳುಹಿಸಿದ್ದಾರೆ.

ಯುವರಾಜ್ ಸಿಂಗ್

ಯುವರಾಜ್ ಸಿಂಗ್

 • Share this:
  ಚಂಡೀಗಡ: ಪರಿಶಿಷ್ಟ ಜಾತಿ ಸಮುದಾಯವನ್ನು ಅವಹೇಳನ ಮಾಡಿದ ಆರೋಪ ಇರುವ ಪ್ರಕರಣ ಸಂಬಂಧ ಮಾಜಿ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರನ್ನು ಹರಿಯಾಣದ ಪೊಲೀಸರು ಇಲ್ಲಿ ಬಂಧಿಸಿದ್ದಾರೆ. ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಲೈವ್ ಚ್ಯಾಟಿಂಗ್ ಮಾಡುವ ವೇಳೆ ಪರಿಶಿಷ್ಟ ಜಾತಿಯ ಯುಜವೇಂದ್ರ ಚಹಲ್ ಅವರನ್ನ ಜಾತಿ ಕಾರಣಕ್ಕೆ ಹೀಗಳೆದಿದ್ದರು. ಈ ವಿಚಾರ ಹೈಕೋರ್ಟ್​ನಲ್ಲಿ ವಿಚಾರಣೆಯಲ್ಲಿದೆ. ಹೈಕೋರ್ಟ್ ಆದೇಶದ ಮೇರೆಗೆ ಚಂದೀಗಡದಿಂದ ಹಿಸಾರ್​ಗೆ ಬಂದ ಯುವರಾಜ್ ಸಿಂಗ್ ಅವರನ್ನ ಅಲ್ಲಿನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ಬಳಿಕ, ಹೈಕೋರ್ಟ್​ನಲ್ಲಿ ಯುವರಾಜ್ ಸಿಂಗ್ ನಿರೀಕ್ಷಣಾ ಜಾಮೀನು ಪಡೆದದ್ದರಿಂದ ಅವರನ್ನ ಬಿಡುಗಡೆ ಮಾಡಲಾಯಿತು. ಯುವರಾಜ್ ಸಿಂಗ್ ಜೊತೆ ಭದ್ರತಾ ಸಿಬ್ಬಂದಿ ಮತ್ತು ವಕೀಲರೂ ಇದ್ದರೆನ್ನಲಾಗಿದೆ. ಬಿಡುಗಡೆಗೆ ಮುನ್ನ ಯುವರಾಜ್ ಸಿಂಗ್ ಅವರನ್ನ ಹಿಸಾರ್ ಪೊಲೀಸರು ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿರುವುದು ತಿಳಿದುಬಂದಿದೆ.

  ಏನಿದು ಪ್ರಕರಣ?: ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಸಂವಾದ ನಡೆಸುವ ಸಂದರ್ಭದಲ್ಲಿ ಯುಜವೇಂದ್ರ ಚಹಲ್ ಬಗ್ಗೆ ಮಾತನಾಡುತ್ತಾ ಅವರ ಜಾತಿ ಹಿನ್ನೆಲೆಯನ್ನ ಯುವರಾಜ್ ಹೀಗಳೆದಿದ್ದರು. ಪರಿಶಿಷ್ಟ ಜಾತಿ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪದಪ್ರಯೋಗ ಮಾಡಿದ್ದರು. ದಲಿತ ಹಕ್ಕು ಹೋರಾಟಗಾರ ರಜತ್ ಕಲ್ಸನ್ ಎಂಬುವರು ಯುವರಾಜ್ ಸಿಂಗ್ ವಿರುದ್ಧ ಹಾನ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎಸ್​ಸಿ ಎಸ್​ಟಿ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  ಇದೇ ವೇಳೆ, ಯುವರಾಜ್ ಸಿಂಗ್ ಅವರು ಹೈಕೋರ್ಟ್​ನಲ್ಲಿ ಈ ಪ್ರಕರಣ ವಜಾಗೊಳಿಸುವಂತೆ ಮನವಿ ಸಲ್ಲಿಸಿದರು. ಸದ್ಯ ಯುವರಾಜ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

  ಇದನ್ನೂ ಓದಿ: India vs Pakistan- ಭಾರತ-ಪಾಕ್ ಪಂದ್ಯದ ದಿನ ಸಾನಿಯಾ ಮಿರ್ಜಾ ಮಾಯ ಆಗೋದು ಯಾಕೆ ಗೊತ್ತಾ?

  ಪ್ರಕರಣದಲ್ಲಿ ಕ್ಷಮೆಯಾಚಿಸಿದ್ದ ಯುವರಾಜ್ ಸಿಂಗ್:

  ನಾನು ಯಾವ ಸಮುದಾಯವನ್ನೂ ತುಚ್ಛವಾಗಿ ನೋಡುವುದಿಲ್ಲ. ನನ್ನಿಂದ ತಿಳಿಯದೇ ಆಡಿದ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಯುವರಾಜ್ ಸಿಂಗ್ ಹೇಳಿದ್ದರು.


  “ಜಾತಿ, ವರ್ಣ, ಲಿಂಗ ಇತ್ಯಾದಿ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯತೆ ಮೇಲೆ ನನಗೆ ನಂಬಿಕೆ ಇಲ್ಲ. ಜನರ ಕಲ್ಯಾಣಕ್ಕಾಗಿ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಗೂ ಗೌರವ ಕೊಡುತ್ತೇನೆ. ನನ್ನ ಸ್ನೇಹಿತರೊಂದಿಗೆ ಮಾತನಾಡುವಾಗ ನನ್ನ ಮಾತುಗಳನ್ನ ಅಪಾರ್ಥ ಮಾಡಿಕೊಳ್ಳಲಾಗಿದೆ. ಆದರೂ ಒಬ್ಬ ಜವಾಬ್ದಾರಿಯುತ ಭಾರತೀಯನಾಗಿ ನನ್ನ ಮಾತಿನಿಂದ ಯಾರದಾದರೂ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತೇನೆ” ಎಂದು ಯುವರಾಜ್ ಸಿಂಗ್ ಹೇಳಿಕೆ ನೀಡಿದ್ದರು.

  ಶ್ರೇಷ್ಠ ಕ್ರಿಕೆಟಿಗ ಯುವರಾಜ್ ಸಿಂಗ್: 

  ಖ್ಯಾತ ಹಾಕಿ ಆಟಗಾರ ಯೋಗರಾಜ್ ಸಿಂಗ್ ಅವರ ಮಗನಾದ ಯುವರಾಜ್ ಸಿಂಗ್ ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರೆನಿಸಿದ್ದರು. ಆರು ಬಾಲ್​ನಲ್ಲಿ ಆರು ಸಿಕ್ಸರ್ ಭಾರಿಸಿದ ವಿಶ್ವದಾಖಲೆ ಅವರದ್ದಾಗಿದೆ. 2000ದಿಂದ ಒಟ್ಟು 17 ವರ್ಷಗಳ ಕಾಲ ಅವರು ಕ್ರಿಕೆಟ್ ಆಡಿ ಭಾರತಕ್ಕೆ ಅನೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ಧಾರೆ. ಮಧ್ಯೆ ಅವರಿಗೆ ಕ್ಯಾನ್ಸರ್ ರೋಗ ಬಂದು ಅದನ್ನ ಜಯಿಸಿ ಹೊರಬಂದ ಬಳಿಕ ಅವರ ಕ್ರಿಕೆಟ್ ವೃತ್ತಿಜೀವನ ಬಹುತೇಕ ಮಸುಕುಗೊಂಡಿತು. ಅವರಿಂದ ಮೊದಲಿನಷ್ಟು ಪ್ರಖರತೆ ಉಳಿಯಲಿಲ್ಲ. 2019ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದರು.

  ಯುವರಾಜ್ ಸಿಂಗ್ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ 40 ಟೆಸ್ಟ್, 304 ಏಕದಿನ ಮತ್ತು 58 ಟಿ20 ಪಂದ್ಯಗಳನ್ನ ಆಡಿದ್ದಾರೆ. 3 ಟೆಸ್ಟ್ ಶತಕ, 14 ಏಕದಿನ ಶತಕಗಳನ್ನ ಭಾರಿಸಿದ್ಧಾರೆ. 139 ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿರುವ ಅವರು 26 ಶತಕ ಸಿಡಿಸಿದ್ದಾರೆ.
  Published by:Vijayasarthy SN
  First published: