WTC final: ಎಂತಹ ಅವಿಸ್ಮರಣೀಯ ವಿದಾಯ: ದಾಖಲೆಯೊಂದಿಗೆ ಗುಡ್​ಬೈ ಹೇಳಿದ ಕಿವೀಸ್ ಕೀಪರ್..!

ಕೇನ್ ವಿಲಿಯಮ್ಸನ್ ಎಸೆದ ಥ್ರೋವನ್ನು ಹಿಡಿಯುವ ಪ್ರಯತ್ನದಲ್ಲಿ ವಾಟ್ಲಿಂಗ್ ಬೆರಳು ಮುರಿತಕ್ಕೊಳಗಾಗಿತ್ತು. ಇದಾಗ್ಯೂ ವಾಟ್ಲಿಂಗ್ ತಮ್ಮ ಕೊನೆಯ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಪಣತೊಟ್ಟಿದ್ದರು.

BJ Watling

BJ Watling

  • Share this:
    ಕ್ರಿಕೆಟ್ ಅಂಗಳದಿಂದ ಕೆಲವೇ ಕೆಲವು ಆಟಗಾರರು ಮಾತ್ರ ಸ್ಮರಣೀಯವಾಗಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ನ್ಯೂಜಿಲೆಂಡ್ ತಂಡದ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ಬಿಜೆ ವಾಟ್ಲಿಂಗ್. ಹೌದು, ಕಿವೀಸ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸುತ್ತಿದ್ದಂತೆ ಅತ್ತ ವಾಟ್ಲಿಂಗ್ ತಮ್ಮ ವಿದಾಯ ದಿನಾಂಕವನ್ನು ಕೂಡ ನಿಗದಿಪಡಿಸಿದ್ದರು. ಮಹತ್ವದ ಪಂದ್ಯವನ್ನಾಡುವ ಮೂಲಕ ವೃತ್ತಿಜೀವನಕ್ಕೆ ಗುಡ್​ ಬೈ ಹೇಳಲು ಒಂದೆಡೆ ವಾಟ್ಲಿಂಗ್ ನಿರ್ಧರಿಸಿದರೆ, ಮತ್ತೊಂದೆಡೆ ತಮ್ಮ ಸಹ ಆಟಗಾರನಿಗೆ ನಗು ಮುಖದೊಂದಿಗೆ ಬೀಳ್ಕೊಡಲು ನ್ಯೂಜಿಲೆಂಡ್ ತಂಡ ನಿರ್ಧರಿಸಿತ್ತು.

    ಅದರಂತೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನ ನೀಡಿತ್ತು. ಈ ಪಂದ್ಯದಲ್ಲಿ ವಾಟ್ಲಿಂಗ್ ಕೂಡ ವಿಕೆಟ್ ಹಿಂದೆ ಗಮನ ಸೆಳೆದರು. ಅಲ್ಲದೆ 2 ಕ್ಯಾಚ್​ಗಳನ್ನು ಹಿಡಿಯುವ ಮೂಲಕ ಕೊನೆಯ ಪಂದ್ಯದಲ್ಲೂ ಮಿಂಚಿದರು. ಇನ್ನು ಮೀಸಲು ದಿನದಾಟದ ವೇಳೆ ಗಾಯಗೊಂಡ ವಾಟ್ಲಿಂಗ್ ನೋವಿನ ನಡುವೆ ಗ್ಲೌಸ್ ತೊಟ್ಟು ವಿಕೆಟ್ ಹಿಂದೆ ನಿಂತದ್ದು ವಿಶೇಷವಾಗಿತ್ತು.

    ಕೇನ್ ವಿಲಿಯಮ್ಸನ್ ಎಸೆದ ಥ್ರೋವನ್ನು ಹಿಡಿಯುವ ಪ್ರಯತ್ನದಲ್ಲಿ ವಾಟ್ಲಿಂಗ್ ಬೆರಳು ಮುರಿತಕ್ಕೊಳಗಾಗಿತ್ತು. ಇದಾಗ್ಯೂ ವಾಟ್ಲಿಂಗ್ ತಮ್ಮ ಕೊನೆಯ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಪಣತೊಟ್ಟಿದ್ದರು. ಎಕ್ಸ್​ಟ್ರಾ ಸೇಫ್ಟಿಯೊಂದಿಗೆ ಕೀಪರ್ ಗ್ಲೌಸ್ ತೊಟ್ಟು ಕೀಪಿಂಗ್ ಮುಂದುವರೆಸಿ ಸಂಪೂರ್ಣ ಪಂದ್ಯವನ್ನಾಡಿದರು.



    ಎರಡನೇ ಇನಿಂಗ್ಸ್​ನಲ್ಲಿ 139 ರನ್​ಗಳ ಗುರಿಯನ್ನು ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಯಶಸ್ವಿಯಾಗಿ ಬೆನ್ನೆತ್ತುವ ಮೂಲಕ ತಮ್ಮ ಸಹ ಆಟಗಾರನ ನೋವನ್ನು ಮರೆಸುವ ಗೆಲುವಿನ ನಗು ತಂದುಕೊಟ್ಟರು. ಇದರೊಂದಿಗೆ ನ್ಯೂಜಿಲೆಂಡ್ ಟೆಸ್ಟ್ ತಂಡ ಕಂಡಂತಹ ಅತ್ಯುತ್ತಮ ವಿಕೆಟ್ ಕೀಪರ್ ನಗುವಿನೊಂದಿಗೆ ವಿದಾಯ ಹೇಳುವಂತಾಯಿತು.



    ಭಾರತದ ವಿರುದ್ದ 2 ಕ್ಯಾಚ್​ಗಳನ್ನು ಹಿಡಿಯುವ ಮೂಲಕ ವಾಟ್ಲಿಂಗ್ 127 ಇನ್ನಿಂಗ್ಸ್‌ಗಳಲ್ಲಿ 257 ನೇ ಟೆಸ್ಟ್ ಕ್ಯಾಚ್ ತೆಗೆದುಕೊಂಡರು. ಈ ಮೂಲಕ ಎಂಎಸ್ ಧೋನಿ ಅವರ 256 ಕ್ಯಾಚ್‌ಗಳ ದಾಖಲೆಯನ್ನು ಹಿಂದಿಕ್ಕಿದರು.



    ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯುತ್ತಮ ವಿಕೆಟ್ ಕೀಪರ್​ಗಳ ಪಟ್ಟಿಯಲ್ಲಿ ವಾಟ್ಲಿಂಗ್ ಏಳನೇ ಅತಿ ಹೆಚ್ಚು ಕ್ಯಾಚರ್ ಗುರುತಿಸಿಕೊಂಡಿದ್ದಾರೆ. ಇನ್ನು ನ್ಯೂಜಿಲೆಂಡ್ ಪರ ಟೆಸ್ಟ್​ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಹಾಗೂ ಅತ್ಯಧಿಕ (3790) ರನ್ ಬಾರಿಸಿದ ಕೀಪರ್, ದ್ವಿಶತಕ ಬಾರಿಸಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ವಾಟ್ಲಿಂಗ್ ಹೆಸರಿನಲ್ಲಿದೆ.
    Published by:zahir
    First published: