HOME » NEWS » Sports » CRICKET WTC FINAL RESERVE DAY AVAILABLE FOR WORLD TEST CHAMPIONSHIP FINAL ZP

WTC Final: ವಿಶ್ವ ಟೆಸ್ಟ್ ಫೈನಲ್​ ಪಂದ್ಯ ಮಳೆಯಿಂದ ರದ್ದಾದರೆ, ಜಾರಿಯಾಗಲಿದೆ ICC ಹೊಸ ನಿಯಮ..!

5 ದಿನದಲ್ಲಿ ಪಂದ್ಯ ಪೂರ್ಣಗೊಂಡು ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇನ್ನು ಫೈನಲ್ ಪಂದ್ಯದ ವೇಳೆ ಮೂರನೇ ಅಂಪೈರ್ ಆನ್-ಫೀಲ್ಡ್ ಅಂಪೈರ್ ಕರೆಯನ್ನು ಪರಿಶೀಲಿಸಬಹುದು.

news18-kannada
Updated:June 18, 2021, 3:40 PM IST
WTC Final: ವಿಶ್ವ ಟೆಸ್ಟ್ ಫೈನಲ್​ ಪಂದ್ಯ ಮಳೆಯಿಂದ ರದ್ದಾದರೆ, ಜಾರಿಯಾಗಲಿದೆ ICC ಹೊಸ ನಿಯಮ..!
wtc final
  • Share this:
ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ಜೂನ್ 18 ರಿಂದ 22 ರವರೆಗೆ ನಡೆಯಲಿರುವ ಈ ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ಸೆಣಸಲಿದೆ. ಇದೇ ಮೊದಲ ಬಾರಿ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ನಡೆಯುತ್ತಿರುವುದರಿಂದ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಒಂದೆಡೆಯಾದರೆ, ಡ್ರಾ ಆದರೆ ಯಾರು ಚಾಂಪಿಯನ್ ಆಗಲಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿದೆ. ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸಿರುವ ಸೌಥಂಪ್ಟನ್ ಮಳೆಯಾಗುತ್ತಿರುವುದರಿಂದ ಇದೀಗ ಪಂದ್ಯ ನಿಗದಿತ ಸಮಯದಲ್ಲಿ ಆರಂಭಿಸಲಾಗಿಲ್ಲ. ಹಾಗೆಯೇ ಮೊದಲ ದಿನದ ಆಟ ಮಳೆಗೆ ಆಹುತಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಒಂದು ವೇಳೆ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದರೆ , ಡ್ರಾ ಅಥವಾ ಟೈನಲ್ಲಿ ಕೊನೆಗೊಂಡರೆ ಫಲಿತಾಂಶವನ್ನು ಹೇಗೆ ನಿರ್ಧರಿಸಲಿದ್ದಾರೆ ಎಂದು ಪ್ರಶ್ನೆ ಎಲ್ಲರಲ್ಲಿದೆ. ಈ ಎಲ್ಲಾ ಪರಿಸ್ಥಿತಿಯನ್ನು ಮನಗಂಡಿರುವ ಐಸಿಸಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅದರಂತೆ ಫೈನಲ್ ಪಂದ್ಯವು ಡ್ರಾ ಅಥವಾ ಟೈ ಆದರೆ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿ ಟ್ರೋಫಿ ಹಂಚಲಾಗುವುದು ಎಂದು ಐಸಿಸಿ ತಿಳಿಸಿದೆ.

ಅಷ್ಟೇ ಅಲ್ಲದೆ ಡ್ರಾ ಫಲಿತಾಂಶವನ್ನು ತಪ್ಪಿಸಲು ಮೀಸಲು ದಿನವನ್ನು ಕೂಡ ನೀಡಲಾಗುತ್ತದೆ. ಅಂದರೆ ಸಾಮಾನ್ಯವಾಗಿ ಟೆಸ್ಟ್ ಪಂದ್ಯವು 5 ದಿನಗಳ ಕಾಲ ನಡೆಯುತ್ತದೆ. ಒಂದು ವೇಳೆ ಮಳೆಯ ಕಾರಣ ಅಥವಾ ಇನ್ನಿತರ ಕಾರಣದಿಂದ ಪಂದ್ಯವು ಸ್ಥಗಿತಗೊಂಡಿದ್ದರೆ ಆ ಸಮಯವನ್ನು ಹೊಂದಿಸಲು ಮೀಸಲು ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಅದರಂತೆ ಮಳೆಯಿಂದ ರದ್ದಾದ ಪಂದ್ಯದ ಸಮಯವನ್ನು ಹೊಂದಿಸಲು ಹೆಚ್ಚುವರಿ ದಿನದಲ್ಲಿ (6ನೇ ದಿನ) ಪಂದ್ಯವನ್ನು ಆಡಲಾಗುತ್ತದೆ. ಇದರ ಹೊರತಾಗಿ 5 ದಿನ ಸಂಪೂರ್ಣ ಆಡಿ ಫಲಿತಾಂಶ ಬರದಿದ್ದರೆ, 6ನೇ ದಿನಕ್ಕೆ ಪಂದ್ಯವನ್ನು ಮುಂದೂಡುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಹೀಗಾಗಿ 5 ದಿನದಲ್ಲಿ ಪಂದ್ಯ ಪೂರ್ಣಗೊಂಡು ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇನ್ನು ಫೈನಲ್ ಪಂದ್ಯದ ವೇಳೆ ಮೂರನೇ ಅಂಪೈರ್ ಆನ್-ಫೀಲ್ಡ್ ಅಂಪೈರ್ ಕರೆಯನ್ನು ಪರಿಶೀಲಿಸಬಹುದು ಮತ್ತು ಅವರೊಂದಿಗೆ ಮಾತನಾಡುವ ಮೂಲಕ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಐಸಿಸಿ ತಿಳಿಸಿದೆ.
Youtube Video

ಹಾಗೆಯೇ ಫೈನಲ್ ಪಂದ್ಯವನ್ನು ಗ್ರೇಡ್ 1 ಡ್ಯೂಕ್ ಕ್ರಿಕೆಟ್ ಬಾಲ್​ನಲ್ಲಿ ಆಡಲಾಗುತ್ತದೆ. ಇದು ಭಾರತದ ಪಾಲಿಗೆ ಸವಾಲಾಗಿರಲಿದೆ. ಏಕೆಂದರೆ ಭಾರತದಲ್ಲಿ ಎಸ್​ಜಿ ಬಾಲ್​ನಲ್ಲಿ ಕ್ರಿಕೆಟ್ ಆಡಲಾಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಡ್ಯೂಕ್ ಬಾಲ್​ನಲ್ಲಿ ಹೆಚ್ಚಿನ ಅಭ್ಯಾಸವನ್ನು ನಡೆಸಬೇಕಾಗುತ್ತದೆ. ಒಟ್ಟಿನಲ್ಲಿ ಇಂಗ್ಲೆಂಡ್ ಮೈದಾನದಲ್ಲಿ ನ್ಯೂಜಿಲೆಂಡ್​ನ್ನು ಬಗ್ಗು ಬಡಿದು ವಿರಾಟ್ ಕೊಹ್ಲಿ ಚೊಚ್ಚಲ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದು, ಈ ಮೂಲಕ ಕೊಹ್ಲಿ ಮೊದಲ ಬಾರಿ ಐಸಿಸಿ ಟ್ರೋಫಿಗೆ ಮುತ್ತಿಡಲಿದ್ದಾರಾ ಕಾದು ನೋಡಬೇಕಿದೆ.
Published by: zahir
First published: June 18, 2021, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories