Wtc Final: ಭಾರತದ ಕನಸು ಭಗ್ನ: ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್..!

WTC Final

WTC Final

New Zealand won Wtc Final: ಮೊದಲ ಇನಿಂಗ್ಸ್​ನ 32 ರನ್​ಗಳ ಮುನ್ನಡೆಯೊಂದಿಗೆ ಗೆಲ್ಲಲು 139 ರನ್​ಗಳ ಸಾಧಾರಣ ಗುರಿ ಪಡೆದ ನ್ಯೂಜಿಲೆಂಡ್​ಗೆ ಡೆವೊನ್ ಕಾನ್ವೆ ಹಾಗೂ ಟಾಮ್ ಲಾಥಮ್ ಎಚ್ಚರಿಕೆಯ ಆರಂಭ ಒದಗಿಸಿದರು.

  • Share this:

    ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾವನ್ನು ಬಗ್ಗು ಬಡಿಯುವ ಮೂಲಕ ನ್ಯೂಜಿಲೆಂಡ್​ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ 21 ವರ್ಷಗಳ ಬಳಿಕ ನ್ಯೂಜಿಲೆಂಡ್ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಈಡೇರಿಸಿಕೊಂಡಿದೆ. ಇತ್ತ 8 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾ ಕನಸು ಭಗ್ನಗೊಂಡಂತಾಗಿದೆ.


    ವರುಣನ ಅಡ್ಡಿಯೊಂದಿಗೆ ಆರಂಭವಾಗಿದ್ದ ಟೆಸ್ಟ್​ ಚಾಂಪಿಯನ್​ಶಿಪ್​ನ 5 ದಿನಗಳ ಪಂದ್ಯದಲ್ಲಿ 2 ದಿನ ಮಾತ್ರ ಸಂಪೂರ್ಣ ಆಡಲಾಗಿತ್ತು. ಅದರಲ್ಲೂ ಮೊದಲ ದಿನ ಹಾಗೂ 4ನೇ ದಿನ ಸಂಪೂರ್ಣ ಮಳೆಗೆ ಆಹುತಿಯಾಗಿತ್ತು. ಹೀಗಾಗಿ ಮೀಸಲು ದಿನದಾಟಕ್ಕೆ ಪಂದ್ಯವನ್ನು ಮುಂದೂಡಲಾಗಿತ್ತು. ಮೊದಲ ಇನಿಂಗ್ಸ್​ನಲ್ಲಿ ಭಾರತ 217 ರನ್​ ಬಾರಿಸಿದರೆ, ನ್ಯೂಜಿಲೆಂಡ್ 249 ರನ್​ಗಳಿಸಿ 32 ರನ್​ ಮುನ್ನಡೆ ಪಡೆದುಕೊಂಡಿತ್ತು.



    ಅದರಂತೆ 5ನೇ ದಿನದಾಟದಲ್ಲಿ ಭಾರತ 2ನೇ ಇನಿಂಗ್ಸ್ ಆರಂಭಿಸಿ 2 ವಿಕೆಟ್ ಕಳೆದುಕೊಂಡು 64 ರನ್​ಗಳಿಸಿತ್ತು. ಮೊದಲ 5 ದಿನಗಳಲ್ಲಿ ಫಲಿತಾಂಶ ಮೂಡಿಬರದ ಹಿನ್ನೆಲೆಯಲ್ಲಿ ಪಂದ್ಯವನ್ನು ಮೀಸಲು ದಿನಕ್ಕೆ (6ನೇ ದಿನ) ಮುಂದೂಡಲಾಯಿತು. ಅದರಂತೆ ಮೀಸಲು ದಿನದಾಟವನ್ನು ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕಿವೀಸ್ ಬೌಲರುಗಳು ಯಶಸ್ವಿಯಾಗಿದ್ದರು.


    ತಂಡದ ಮೊತ್ತಕ್ಕೆ 7 ರನ್​ ಸೇರ್ಪಡೆಯಾಗುವಷ್ಟರಲ್ಲಿ ಜೇಮಿಸನ್ ವಿರಾಟ್ ಕೊಹ್ಲಿ (13)ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದರ ಬೆನ್ನಲ್ಲೇ ಚೇತೇಶ್ವರ ಪೂಜಾರ (15) ಕೂಡ ಜೇಮಿಸನ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಅಜಿಂಕ್ಯ ರಹಾನೆ (15) ಬೌಲ್ಟ್ ಎಸೆತದಲ್ಲಿ ಔಟಾದರೆ, ರವೀಂದ್ರ ಜಡೇಜಾ (16) ರನ್ನು ಔಟ್ ಮಾಡುವಲ್ಲಿ ವಾಗ್ನರ್ ಯಶಸ್ವಿಯಾದರು.


    ಇನ್ನು ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತಿದ್ದ ರಿಷಭ್ ಪಂತ್ 41 ರನ್ ಬಾರಿಸಿ ಬೌಲ್ಟ್​ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾಗಿ ಕ್ಯಾಚ್ ನೀಡಿದರು. ಅದೇ ಓವರ್​ನಲ್ಲಿ ಅಶ್ವಿನ್ ವಿಕೆಟ್ ಪಡೆಯುವ ಮೂಲಕ ಬೌಲ್ಟ್ ಮತ್ತೊಂದು ಯಶಸ್ಸು ತಂದುಕೊಟ್ಟರು. ಇನ್ನು ಮೊಹಮ್ಮದ್ ಶಮಿ ಒಂದಷ್ಟು ಪ್ರತಿರೋಧ ತೋರಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಬುಮ್ರಾ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್​ ತಂಡ ಭಾರತವನ್ನು 2ನೇ ಇನಿಂಗ್ಸ್​ನ್ನು 170 ರನ್​ಗಳಿಗೆ ನಿಯಂತ್ರಿಸಿದರು. ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ಟಿಮ್ ಸೌಥಿ 48 ರನ್​ಗಳಿಗೆ 4 ವಿಕೆಟ್ ಉರುಳಿಸಿದರು. ಸೌಥಿಗೆ ಸಾಥ್ ನೀಡಿದ ಟ್ರೆಂಟ್ ಬೌಲ್ಟ್ 3 ಹಾಗೂ ಕೈಲ್ ಜೇಮಿಸನ್ 2 ವಿಕೆಟ್ ಪಡೆದರು.


    ಮೊದಲ ಇನಿಂಗ್ಸ್​ನ 32 ರನ್​ಗಳ ಮುನ್ನಡೆಯೊಂದಿಗೆ ಗೆಲ್ಲಲು 139 ರನ್​ಗಳ ಸಾಧಾರಣ ಗುರಿ ಪಡೆದ ನ್ಯೂಜಿಲೆಂಡ್​ಗೆ ಡೆವೊನ್ ಕಾನ್ವೆ ಹಾಗೂ ಟಾಮ್ ಲಾಥಮ್ ಎಚ್ಚರಿಕೆಯ ಆರಂಭ ಒದಗಿಸಿದರು. ಆದರೆ ತಂಡದ ಮೊತ್ತ 33 ರನ್ ಆಗಿದ್ದ ವೇಳೆ ಅಶ್ವಿನ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಬಂದ ಲಾಥಮ್ (9) ಸ್ಟಂಪ್ ಔಟಾದರು. ಇದರ ಬೆನ್ನಲ್ಲೇ ಕಾನ್ವೆ (19) ಕೂಡ ಅಶ್ವಿನ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು.


    ಈ ಹಂತದಲ್ಲಿ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ 95 ರನ್​ಗಳ ಜೊತೆಯಾಟವಾಡಿದರು. ಈ ನಡುವೆ ಕೇನ್ ವಿಲಿಯಮ್ಸನ್ (52*) ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆತ್ತಿದ್ದರು. ಮತ್ತೊಂದೆಡೆ ರಾಸ್ ಟೇಲರ್ ಅಜೇಯ 47 ಬಾರಿಸುವ ಮೂಲಕ ನ್ಯೂಜಿಲೆಂಡ್​ಗೆ 8 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು. ಇದರೊಂದಿಗೆ 2 ದಶಕದ ಬಳಿಕ ನ್ಯೂಜಿಲೆಂಡ್ ಮತ್ತೊಮ್ಮೆ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.


    ಸಂಕ್ಷಿಪ್ತ ಸ್ಕೋರ್:-


    ಭಾರತ ಮೊದಲ ಇನಿಂಗ್ಸ್​: 217/10


    ನ್ಯೂಜಿಲೆಂಡ್ ಮೊದಲ ಇನಿಂಗ್ಸ್​: 249/10


    ಭಾರತ ದ್ವಿತೀಯ ಇನಿಂಗ್ಸ್​: 170/10


    ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್​: 140/2


    ನ್ಯೂಜಿಲೆಂಡ್​ಗೆ 8 ವಿಕೆಟ್​ಗಳ ಭರ್ಜರಿ ಜಯ

    ಫೈನಲ್ ಆಡಿದ ಉಭಯ ತಂಡಗಳು ಹೀಗಿವೆ:


    ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.


    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

    Published by:zahir
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು