ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ನಲ್ಲಿ ಶುರುವಾಗಿದೆ. ಜೂನ್ 18 ರಿಂದ ಶುರುವಾಗಬೇಕಿದ್ದ ಪಂದ್ಯವು ಮಳೆಯ ಕಾರಣ ಇಂದು ಶುರುವಾಗಿದ್ದು, ಟಾಸ್ ಗೆದ್ದಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಶುರುವಾಗಲಿದ್ದು, ಮೊದಲ ದಿನ 98 ಓವರ್ಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಅಲ್ಲದೆ ಮೊದಲ ದಿನದಾಟವು ಮಳೆಗೆ ಆಹುತಿಯಾಗಿರುವ ಕಾರಣ ದಿನದಾಟದಲ್ಲಿ ಹೆಚ್ಚುವರಿ ಓವರ್ಗಳನ್ನು ಆಡಿಸಲಾಗುತ್ತದೆ. ಈ ಮೂಲಕ ಸಮಯವನ್ನು ಹೊಂದಿಸಲು ನಿರ್ಧರಿಸಲಾಗಿದ್ದು, ಇದಾಗ್ಯೂ ನಾಲ್ಕು ದಿನಗಳಲ್ಲಿ ಫಲಿತಾಂಶ ಮೂಡಿಬರದಿದ್ದರೆ, ಜೂನ್ 23 ರಂದು ಮೀಸಲು ದಿನದಾಟವನ್ನು ಮುಂದುವರೆಸಿ ಪಂದ್ಯದ 5 ದಿನಗಳನ್ನು ಪೂರ್ಣಗೊಳಿಸಲಾಗುತ್ತದೆ.
ಇನ್ನು ಜೂನ್ 20 ರಂದು ಕೂಡ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದ್ದು, ಇದರ ಹೊರತಾಗಿಯೂ 50-70 ಓವರ್ ವರೆಗೆ ಪಂದ್ಯ ನಡೆಸುವ ವಿಶ್ವಾಸದಲ್ಲಿದೆ ಐಸಿಸಿ. ಹಾಗೆಯೇ ಜೂನ್ 21 ರಂದು ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಹವಾಮಾನ ಇಲಾಖೆ ತಿಳಿಸಿದ್ದು, ಇದಾಗ್ಯೂ 30 ರಿಂದ 50 ಓವರ್ಗಳ ಆಟ ನಡೆಸಲು ಅವಕಾಶ ದೊರೆಯಲಿದೆ ಎನ್ನಲಾಗಿದೆ. ಹಾಗೆಯೇ ಜೂನ್ 22 ರಂದು 98 ಓವರ್ ವರೆಗೆ ಪಂದ್ಯ ಆಯೋಜಿಸಲು ಅವಕಾಶ ದೊರೆಯಲಿದ್ದು, ಈ ವೇಳೆ ಫಲಿತಾಂಶ ಮೂಡಿಬರದಿದ್ದರೆ ಜೂನ್ 23 (ರಿಸರ್ವ್ ಡೇ) ನಲ್ಲಿ 98 ಓವರ್ ವರೆಗಳವರೆಗೆ ಪಂದ್ಯವನ್ನು ಆಯೋಜಿಸಲಿದೆ.
ಒಟ್ಟಿನಲ್ಲಿ ಮಳೆಯ ನಡುವೆ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯುತ್ತಿದ್ದು, ಯಾರು ಚಾಂಪಿಯನ್ ಆಗಿ ಹೊರಹೊಮ್ಮಲ್ಲಿದ್ದಾರೆ ಎಂಬುದು ಸದ್ಯ ಕುತೂಹಲವಾಗಿ ಮಾರ್ಪಟ್ಟಿದೆ.
ಉಭಯ ತಂಡಗಳು ಹೀಗಿವೆ:-
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ