WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಗೆಲ್ಲಲು ಉಭಯ ತಂಡಗಳು ಏನು ಮಾಡಬೇಕು..?

ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.

Team India

Team India

  • Share this:
    ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​ ನಡೆಯುತ್ತಿರುವ ಸೌತಂಪ್ಟನ್​ನಲ್ಲಿ ಇಂದು ಕೂಡ ತುಂತುರು ಮಳೆಯಾಗುತ್ತಿದೆ. ಇದಾಗ್ಯೂ ಐದನೇ ದಿನದಲ್ಲಿ ಒಂದೆರಡು ಸೆಷನ್ ಆಯೋಜಿಸುವ ಬಗ್ಗೆ ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಾಲ್ಕು ದಿನಗಳು ಮುಗಿದಿದ್ದು, ಇದರಲ್ಲಿ ಸಂಪೂರ್ಣ ಪಂದ್ಯ ನಡೆದಿರುವುದು ಒಂದು ದಿನ ಮಾತ್ರ. ಅಂದರೆ ಈ ನಾಲ್ಕು ದಿನಗಳಲ್ಲಿ ಉಭಯ ತಂಡಗಳು ಕೇವಲ 141.1 ಓವರ್‌ಗಳನ್ನು ಮಾತ್ರ ಆಡಿದ್ದಾರೆ.

    ಮೊದಲ ದಿನ ಮಳೆಗೆ ಆಹುತಿಯಾದ ಕಾರಣ ಎರಡನೇ ಪಂದ್ಯವನ್ನು ಆರಂಭಿಸಲಾಗಿತ್ತು. ಅದರಂತೆ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅಲ್ಲದೆ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 146 ರನ್ ಬಾರಿಸಿತ್ತು. ಈ ವೇಳೆ ಮಂದ ಬೆಳಕಿನ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು ಮೂರನೇ ದಿನ ಭಾರತ 217 ರನ್​ಗಳಿಗೆ ಸರ್ವಪತನ ಕಂಡರೆ, ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಕಲೆಹಾಕಿತ್ತು. ಆದರೆ ನಾಲ್ಕನೇ ದಿನ ಕೂಡ ಸಂಪೂರ್ಣ ಮಳೆಗೆ ಆಹುತಿಯಾದ ಕಾರಣ ಪಂದ್ಯ ನಡೆದಿರಲಿಲ್ಲ. ಇದೀಗ 5ನೇ ದಿನದಲ್ಲಿ ಫಲಿತಾಂಶ ಮೂಡಿಬರುವ ನಿರೀಕ್ಷೆಯಿಲ್ಲ. ಹೀಗಾಗಿ ಐಸಿಸಿ ಹೊಸ ನಿಯಮದಂತೆ ಮೀಸಲು ದಿನ ಆಟ ಮುಂದುವರೆಯಲಿದೆ. ಅಂದರೆ 6ನೇ ದಿನಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ.

    ಅದರಂತೆ ಇನ್ನು ಎರಡು ದಿನದಾಟ ಪಂದ್ಯ ನಡೆಯುವ ಸಾಧ್ಯತೆಯಿದೆ. ಭಾರತ ಮೊದಲ ಇನಿಂಗ್ಸ್​ನಲ್ಲಿ ಕೇವಲ 217 ರನ್​ಗಳನ್ನು ಕಲೆಹಾಕಿದೆ. ಸದ್ಯ ಮೊದಲ ಇನಿಂಗ್ಸ್ ಆಡುತ್ತಿರುವ ನ್ಯೂಜಿಲೆಂಡ್ ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್​ಗಳಿಸಿದ್ದು (ಪಸ್ತುತ ಸ್ಕೋರ್ ಕಾರ್ಡ್​), ಇನ್ನೂ 82 ರನ್​ಗಳ ಹಿನ್ನಡೆ ಹೊಂದಿದೆ. ಹೀಗಾಗಿ 5ನೇ ದಿನ ಬೃಹತ್ ಮೊತ್ತ ಪೇರಿಸಿದರೆ ಮಾತ್ರ ಟೀಮ್ ಇಂಡಿಯಾ ವಿರುದ್ದ ಗೆಲ್ಲುವ ಅವಕಾಶ ನ್ಯೂಜಿಲೆಂಡ್​ಗೆ ಇರಲಿದೆ. ಅಂದರೆ 5ನೇ ದಿನ ನ್ಯೂಜಿಲೆಂಡ್ 100 ರಿಂದ 200 ರನ್​ಗಳ ಮುನ್ನಡೆ ಪಡೆದು, ಡಿಕ್ಲೇರ್ ಘೋಷಿಸಬೇಕು. ಅಲ್ಲದೆ ಟೀಮ್ ಇಂಡಿಯಾವನ್ನು ಕಡಿಮೆ ಮೊತ್ತಕ್ಕೆ ಸರ್ವಪತನಗೊಳಿಸಿ ಗೆಲ್ಲುವ ಅವಕಾಶ ಪಡೆಯಬಹುದು.

    ಇದಲ್ಲದೆ, ನ್ಯೂಜಿಲೆಂಡ್ 5ನೇ ದಿನ ಉತ್ತಮ ಮೊತ್ತ ಪೇರಿಸಿ ಡಿಕ್ಲೇರ್ ನೀಡಿದರೆ, ಭಾರತ ಬಿರುಸಿನ ಬ್ಯಾಟಿಂಗ್ ಮೂಲಕ ಬೃಹತ್ ಮೊತ್ತ ಪೇರಿಸಬೇಕಾಗುತ್ತದೆ. ಅಲ್ಲದೆ 6ನೇ ದಿನದಾಟದಲ್ಲಿ ನ್ಯೂಜಿಲೆಂಡ್​ಗೆ ದ್ವಿತೀಯ ಇನಿಂಗ್ಸ್​ ಅವಕಾಶ ನೀಡಿ ಆಲೌಟ್ ಮಾಡುವ ಮೂಲಕ ಮಾತ್ರ ಗೆಲ್ಲುವ ಅವಕಾಶವಿದೆ. ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಇಂತಹದೊಂದು ಫಲಿತಾಂಶವನ್ನು ನಿರೀಕ್ಷಿಸುವಂತಿಲ್ಲ. ಇದಾಗ್ಯೂ ಸತತ ಮಳೆಯಿಂದಾಗಿ ಪಿಚ್​ ಮೇಲ್ಮೈ ಬದಲಾಗಿರುವ ಕಾರಣ 2 ದಿನದಲ್ಲಿ ಪಂದ್ಯದ ಗತಿ ಬದಲಾದರೂ ಅಚ್ಚರಿಪಡಬೇಕಾಗಿಲ್ಲ. ಇನ್ನು ಮೀಸಲು ದಿನದಾಟದ ಹೊರತಾಗಿಯೂ ಪಂದ್ಯದ ಫಲಿತಾಂಶ ಮೂಡಿಬರದೇ ಡ್ರಾ ಆದರೆ ಉಭಯ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಇದಾಗ್ಯೂ ಅಚ್ಚರಿ ಸಂಭವಿಸಲಿದೆಯಾ ಕಾದು ನೋಡಬೇಕಿದೆ.

    ಉಭಯ ತಂಡಗಳು ಹೀಗಿವೆ:-

    ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್

    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
    Published by:zahir
    First published: