• Home
  • »
  • News
  • »
  • sports
  • »
  • WTC Final: ಜೇಮಿಸನ್ ಜಾದೂಗೆ ತರಗೆಲೆಯಂತೆ ಉರುಳಿದ ಟೀಮ್ ಇಂಡಿಯಾ..!

WTC Final: ಜೇಮಿಸನ್ ಜಾದೂಗೆ ತರಗೆಲೆಯಂತೆ ಉರುಳಿದ ಟೀಮ್ ಇಂಡಿಯಾ..!

WTC

WTC

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

  • Share this:

    ಸೌತಂಪ್ಟನ್​ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 217 ರನ್​ಗಳಿಗೆ ಸರ್ವಪತನ ಕಂಡಿದೆ. ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಮೂರನೇ ದಿನದಾಟದಲ್ಲಿ ಕೇವಲ 77 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಇದಕ್ಕೂ ಮುನ್ನ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನ್ಯೂಜಿಲೆಂಡ್​ ಮೊದಲ ಸೆಷನ್​ನಲ್ಲಿ ಉತ್ತಮ ದಾಳಿ ನಡೆಸಿತು.


    ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಮೊದಲ ವಿಕೆಟ್​ಗೆ 62 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಜೇಮಿಸನ್ ಎಸೆತದಲ್ಲಿ ಹಿಟ್​ಮ್ಯಾನ್ (34) ಟಿಮ್ ಸೌಥಿ ಹಿಡಿದ ಅತ್ಯುತ್ತಮ ಕ್ಯಾಚ್​ಗೆ ಬಲಿಯಾದರು. ಇದರ ಬೆನ್ನಲ್ಲೇ ವ್ಯಾಗ್ನರ್ ಎಸೆತದಲ್ಲಿ ಶುಭ್​ಮನ್ ಗಿಲ್ (28) ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.


    ಈ ಹಂತದಲ್ಲಿ ಜೊತೆಯಾದ ಚೇತೇಶ್ವರ ಪೂಜಾರ ಹಾಗೂ ನಾಯಕ ಕೊಹ್ಲಿ ಉತ್ತಮ ಜೊತೆಯಾಟವಾಡುವ ಭರವಸೆ ಮೂಡಿಸಿದರು. ಅದರಲ್ಲೂ ರಕ್ಷಣಾತ್ಮಕ ಆಟದೊಂದಿಗೆ ಎದುರಾಳಿ ಬೌಲರುಗಳನ್ನು ಕಾಡಿದ್ದ ಪೂಜಾರ 54 ಎಸೆತಗಳನ್ನು ಎದುರಿಸಿ ಗಟ್ಟಿಯಾಗಿ ನೆಲೆಯೂರುವ ಸೂಚನೆ ನೀಡಿದ್ದರು. ಆದರೆ ಈ ಹಂತದಲ್ಲಿ ಟ್ರೆಂಟ್ ಬೌಲ್ಟ್ ಎಲ್​ಬಿ ಬಲೆಗೆ ಬಿದ್ದ ಪೂಜಾರಾ (8) ಇನಿಂಗ್ಸ್ ಅಂತ್ಯಗೊಳಿಸಿದರು.


    100 ರನ್ ಗಡಿದಾಟುವ ಮುನ್ನವೇ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಆಸರೆಯಾದರು. ಅದರಂತೆ 5ನೇ ವಿಕೆಟ್​ಗೆ ಅಜೇಯ 46 ರನ್​ಗಳ ಜೊತೆಯಾಟವಾಡಿ ತಂಡವನ್ನು ಸುಸ್ಥಿತಿಗೆ ಕೊಂಡೊಯ್ಯುವ ಸೂಚನೆ ನೀಡಿದರು. ಇದೇ ವೇಳೆ ಮೋಡ ಮುಸುಕಿನಿಂದ ಮಂದ ಬೆಳಕಾದ ಹಿನ್ನೆಲೆಯಲ್ಲಿ ಅಂಪೈರ್​ಗಳು ಎರಡನೇ ದಿನದಾಟವನ್ನು ಅಂತ್ಯಗೊಳಿಸಲು ನಿರ್ಧರಿಸಿದರು.


    3 ವಿಕೆಟ್ ನಷ್ಟದೊಂದಿಗೆ 146 ರನ್​ ಬಾರಿಸಿದ್ದ ಟೀಮ್ ಇಂಡಿಯಾಗೆ ಮೂರನೇ ದಿನದಾಟದಲ್ಲಿ ಉತ್ತಮ ಆರಂಭ ದೊರೆತಿರಲಿಲ್ಲ. ತಂಡದ ಮೊತ್ತಕ್ಕೆ 3 ರನ್​ ಸೇರ್ಪಡೆಯಾಗುವಷ್ಟರಲ್ಲಿ ಒಂದು ರನ್ ಬಾರಿಸದೇ ನಾಯಕ ವಿರಾಟ್ ಕೊಹ್ಲಿ (44) ಕೈಲ್ ಜೇಮಿಸನ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಿಷಭ್ ಪಂತ್ (4) ಸಹ ಹೊರ ನಡೆದರು. ಇನ್ನು ಎಚ್ಚರಿಕೆಯ ಆಟವಾಡುತ್ತಿದ್ದ ಅಜಿಂಕ್ಯ ರಹಾನೆ 1 ರನ್​ನಿಂದ ಅರ್ಧಶತಕ ವಂಚಿತರಾಗಿ ವಾಗ್ನರ್​ಗೆ ವಿಕೆಟ್ ಒಪ್ಪಿಸಿದರು.


    ಈ ಹಂತದಲ್ಲಿ ಜೊತೆಗೂಡಿದ ಜಡೇಜಾ ಹಾಗೂ ಅಶ್ವಿನ್ ಟೀಮ್ ಇಂಡಿಯಾ ಮೊತ್ತವನ್ನು 200ರ ಗಡಿದಾಟಿಸಿದರು. ಇದೇ ವೇಳೆ ಅಶ್ವಿನ್ (22) ವಿಕೆಟ್ ಪಡೆದ ಟಿಮ್ ಸೌಥಿ ನ್ಯೂಜಿಲೆಂಡ್​ಗೆ 7ನೇ ಯಶಸ್ಸು ತಂದುಕೊಟ್ಟರು. ಇನ್ನು ಇಶಾಂತ್ ಶರ್ಮಾ (4) ಹಾಗೂ ಬುಮ್ರಾ (0) ಬಂದ ವೇಗದಲ್ಲೇ ಪೆವಿಲಿಯನ್ ಕಳುಹಿಸುವ ಮೂಲಕ ಜೇಮಿಸನ್ 5 ವಿಕೆಟ್ ಉರುಳಿಸಿದರು. ಅಂತಿಮವಾಗಿ ರವೀಂದ್ರ ಜಡೇಜಾ (15) ವಿಕೆಟ್ ಪಡೆದ ಬೌಲ್ಟ್ ಟೀಮ್ ಇಂಡಿಯಾ ಮೊತ್ತವನ್ನು 217ಕ್ಕೆ ನಿಯಂತ್ರಿಸಿದರು. ನ್ಯೂಜಿಲೆಂಡ್ ಪರ ಜೇಮಿಸನ್ 5 ವಿಕೆಟ್ ಪಡೆದರೆ, ಬೌಲ್ಟ್ ಮತ್ತು ವಾಗ್ನರ್ ತಲಾ ಎರಡು ವಿಕೆಟ್ ಉರುಳಿಸಿ ಮಿಂಚಿದರು.


    ಉಭಯ ತಂಡಗಳು ಹೀಗಿವೆ:-
    ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ನೀಲ್ ವಾಂಗ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್



    ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

    Published by:zahir
    First published: