ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನ ( Womens Premier League) ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ (Mumbai Indians Women) ತಂಡ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ (Champion) ಪಟ್ಟ ಅಲಂಕರಿಸಿದೆ. ಭಾನುವಾರ ಬ್ರಬೌರ್ನ್ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಬಳಗ ಡೆಲ್ಲಿ ಕ್ಯಾಪಿಟಲ್ಸ್ ( Delhi Capitals Women ) ತಂಡವನ್ನು 7 ವಿಕೆಟ್ಗಳಿಂದ ಮಣಿಸುವ ಮೂಲಕ ಚೊಚ್ಚಲ ಡಬ್ಲ್ಯೂಪಿಎಲ್ (WPL) ಟ್ರೋಫಿ ಎತ್ತಿ ಹಿಡಿದಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಬೌಲರ್ಗಳ ದಾಳಿಗೆ ಕುಸಿದು 131 ರನ್ಗಳ ಸಾಧಾರಣ ಮೊತ್ತ ದಾಖಲಿಸಿತ್ತು. 132 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಮುಂಬೈ ಮಹಿಳಾ ತಂಡ 19.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ ಕಳೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಹ್ಯಾಟ್ರಿಕ್ ಪಡೆದು ಮಿಂಚಿದ್ದ ಇಸ್ಸೆ ವಾಂಗ್ ಆರಂಭಿಕ ಆಘಾತ ನೀಡಿದರು. ಅವರು ಶೆಫಾಲಿ ವರ್ಮಾ, ಅಲಿಸ್ ಕ್ಯಾಪ್ಸೆ ಹಾಗೂ ಜೆಮೈಮಾ ರೋಡ್ರಿಗಸ್ ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರು. ಒಂದು ಹಂತದಲ್ಲಿ ಡೆಲ್ಲಿ ತಂಡ 79ಕ್ಕೆ 9 ವಿಕೆಟ್ ಕಳೆದುಕೊಂಡು 100 ರನ್ಗಳಿಸುವುದು ಕಷ್ಟ ಎನ್ನುವ ಸ್ಥಿತಿ ತಲುಪಿತ್ತು. ನಾಯಕಿ ಮೆಗ್ ಲ್ಯಾನಿಂಗ್ 35, ಶಿಕಾ ಪಾಂಡೆ 27 ರನ್ ಹಾಗೂ ರಾಧಾ ಯಾದವ್ ಅಜೇಯ 27 ರನ್ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ವಾಂಗ್ ಆರಂಭಿಕರನ್ನು ಪೆವಿಲಿಯನ್ಗೆ ಕಳುಹಿಸಿದರೆ, ಹೇಲಿ ಮ್ಯಾಥ್ಯೂಸ್ 5ಕ್ಕೆ3 ಹಾಗೂ ಮೆಲಿ ಕೆರ್ 18ಕ್ಕೆ 2 ವಿಕೆಟ್ ಪಡೆದು ಮಧ್ಯಮ ಕ್ರಮಾಂಕದ ಬೆನ್ನೆಲುಬು ಮುರಿದರು. ಕೊನೆಯ ವಿಕೆಟ್ಗೆ ರಾಧಾ ಯಾದವ್ ಹಾಗೂ ಶಿಖಾ 52 ರನ್ಗಳ ಜೊತೆಯಾಟ ನಡೆಸಿದ್ದರಿಂದ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 131 ರನ್ಗಳ ಗೌರವಯುತ ಮೊತ್ತ ದಾಖಲಿಸಿತು.
ಮುಂಬೈ ಇಂಡಿಯನ್ಸ್ಗೆ ಆರಂಭಿಕ ಆಘಾತ
132 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಕೇವಲ 23 ರನ್ಗಳಿಸುವಷ್ಟರಲ್ಲಿ ಯಸ್ತಿಕಾ ಭಾಟಿಯಾ(4 ) ಹಾಗೂ ಹೇಲಿ ಮ್ಯಾಥ್ಯೂಸ್ (13) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ರಾಧಾ ಯಾದವ್ ಯಸ್ತಿಕಾ ವಿಕೆಟ್ ಪಡೆದರೆ, ಜೊನಾಸೆನ್ 13 ರನ್ಗಳಿಸಿದ್ದ ಸ್ಫೋಟಕ ಬ್ಯಾಟರ್ ಮ್ಯಾಥ್ಯೂಸ್ ವಿಕೆಟ್ ಪಡದಿದ್ದರು.
ಗೆಲುವಿನ ಗಡಿ ದಾಟಿಸಿದ ಸೀವರ್-ಕೌರ್
23ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ನಾಯಕಿ ಹರ್ಮನ್ಪ್ರೀತ್ ಕೌರ್ ಹಾಗೂ ಆಲ್ರೌಂಡರ್ ನ್ಯಾಟ್ ಸೀವ್-ಬ್ರಂಟ್ 3ನೇ ವಿಕೆಟ್ಗೆ 72 ರನ್ಗಳ ಜೊತೆಯಾಟ ನಡೆಸಿದರು. ಹರ್ಮನ್ ಪ್ರೀತ್ ಕೌರ್ 39 ಎಸೆತಗಳಲ್ಲಿ 5 ಬೌಂಡರಿ ಸಹಿತ 37 ರನ್ಗಳಿಸಿ ರನ್ಔಟ್ ಆದರು. ಆದರೆ ಕೊನೆಯವರೆಗೂ ಎಚ್ಚರಿಕೆಯಿಂದ ಆಡಿದ ಸೀವರ್ 55 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 60 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದಲ್ಲದೆ, ಚೊಚ್ಚಲ ಪ್ರಶಸ್ತಿ ತಂದುಕೊಟ್ಟರು.
ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ತೋರಿದ್ದ ಡೆಲ್ಲಿ- ಮುಂಬೈ
ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿದ್ದು, ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ ತಲಾ 6 ಗೆಲುವು ಸಾಧಿಸಿದ್ದವು. ಆದರೆ ನೆಟ್ ರನ್‌ರೇಟ್ ಆಧಾರದಲ್ಲಿ ಡೆಲ್ಲಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನೇರವಾಗಿ ಫೈನಲ್ ಪ್ರವೇಶಿಸಿದರೆ, 2ನೇ ಸ್ಥಾನ ಪಡೆದ ಮುಂಬೈ ಎಲಿಮಿನೇಟರ್ನಲ್ಲಿ ಯು.ಪಿ.ವಾರಿಯರ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೇರಿತ್ತು. ಲೀಗ್ನಲ್ಲಿ ಡೆಲ್ಲಿ-ಮುಂಬೈ ಎರಡು ಬಾರಿ ಮುಖಾಮುಖಿಯಾಗಿದ್ದು, ಇತ್ತಂಡಗಳು ತಲಾ ಒಂದೊಂದು ಗೆಲುವು ಕಂಡಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ