"ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಾಳೆ (ಸೆಪ್ಟೆಂಬರ್ 10) ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಕೊನೆಯ ಮತ್ತು ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಉಪ ನಾಯಕ ಅಜಿಂಕ್ಯಾ ರಹಾನೆ (Ajinkya Rahane) ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರಿಗೆ ರೆಸ್ಟ್ ನೀಡಿ ಅವರ ಬದಲಿಗೆ ಹನುಮ ವಿಹಾರಿ (Hanuma vihari) ಮತ್ತು ಆರ್. ಅಶ್ವಿನ್ (R. Ashwin) ಅವರನ್ನು ಕಣಕ್ಕೆ ಇಳಿಸಬೇಕು" ಎಂದು ಭಾರತ ತಂಡದ ಮಾಜಿ ಮಧ್ಯಮ ಕ್ರಮಾಂಕದ ಆಟಗಾರ ವಿವಿಎಸ್ ಲಕ್ಷ್ಮಣ್ (VVS Laxman) ಅಭಿಪ್ರಾಯ ಪಟ್ಟಿದ್ದಾರೆ. ನಾಳೆ ನಡೆಯಲಿರುವ ಟೆಸ್ಟ್ (IND vs ENG) ಪಂದ್ಯ ಭಾರತದ ಪಾಲಿಗೆ ಮಹತ್ವದ್ದಾಗಿದ್ದು, ಕನಿಷ್ಟ ಡ್ರಾ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಡುವೆ ತಂಡದ ಕಾಂಬಿನೇಷನ್ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದು, ಫಾರ್ಮ್ನಲ್ಲಿ ಇಲ್ಲದ ಅಜಿಂಕ್ಯಾ ರಹಾನೆಯನ್ನು ಕೊನೆಯ ಪಂದ್ಯದಲ್ಲಿ ಹೊರಗಿಡಬೇಕು ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.
ಕ್ರಿಕ್ ಇನ್ಫೋ ಜೊತೆಗಿನ ಸಂದರ್ಶನದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, "ಜಸ್ಪ್ರೀತ್ ಬುಮ್ರಾ ತಂಡದ ವೇಗದ ಬೌಲಿಂಗ್ ಅಸ್ತ್ರ. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬುಮ್ರಾಗೆ ರೆಸ್ಟ್ ನೀಡುವ ಅಗತ್ಯ ಇಲ್ಲ. ಆದರೆ, ಉಪ ನಾಯಕ ಅಜಿಂಕ್ಯಾ ರಹಾನೆ ಫಾರ್ಮ್ ಕಳೆದುಕೊಂಡ ಕಾರಣ ಭಾರತದ ಮಧ್ಯಮ ಕ್ರಮಾಂಕ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಅವರ ಸ್ಥಾನದಲ್ಲಿ ಬ್ಯಾಟಿಂಗ್ ಆಲ್ರೌಂಡರ್ ಹನುಮ ವಿಹಾರಿಯನ್ನು ಆಡಿಸಬೇಕು.
ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಕಳೆದ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಹೀಗಾಗಿ ಹನುಮ ವಿಹಾರಿ ಅವರನ್ನು ಕಡೆಗಣಿಸುವಂತಿಲ್ಲ. ಅವರಿಗೆ ಕೊನೆಯ ಪಂದ್ಯದಲ್ಲಾದರೂ ಅವಕಾಶ ನೀಡಲೇಬೇಕು. ಆಗ ಮಾತ್ರ ಭಾರತದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗುತ್ತದೆ.
ಅಲ್ಲದೆ, ಆರ್. ಅಶ್ವಿನ್ ವಿದೇಶಿ ನೆಲದಲ್ಲೂ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಕೌಂಟಿ ಕ್ರಿಕೆಟ್ನಲ್ಲೂ ಆಡುವ ಮೂಲಕ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ದ್ದಾರೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರನ್ನು ಆಲ್ರೌಂಡರ್ ಎಂಬ ಕಾರಣಕ್ಕೆ ತಂಡದಲ್ಲಿ ಸ್ಥಾನ ನೀಡಿದ್ದರೆ, ಆ ಜವಾಬ್ದಾರಿಯನ್ನು ಶಾರ್ದೂಲ್ ಠಾಕೂರ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಹಿಗಾಗಿ ಜಡೇಜಾಗೆ ರೆಸ್ಟ್ ನೀಡಿ ಆಫ್ ಸ್ಪಿನ್ನರ್ ರವಿಚಂದ್ರನ್ ಅವರಿಗೆ ಅವಕಾಶ ನೀಡುವುದು ಉತ್ತಮ ಆಯ್ಕೆ" ಎಂದು ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ಜೋಸ್ ಬಟ್ಲರ್ ಒಳಕ್ಕೆ-ಬ್ಯಾರಿಸ್ಟೋವ್ ಹೊರಕ್ಕೆ;
ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್ಮನ್ ಜಾನಿ ಬ್ಯಾರಿಸ್ಟೋವ್ ಇಂಗ್ಲೆಂಡ್ ತಂಡದ ಉಪ ನಾಯಕನೂ ಹೌದು. ಆದರೆ, ಕಳೆದ ಒಂದು ವರ್ಷದಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಉತ್ತಮ ಫಾರ್ಮ್ ನಲ್ಲಿ ಇಲ್ಲ. ಆದರೂ ಅವರ ಅಗತ್ಯ ತಂಡಕ್ಕಿದೆ ಎಂಬುದು ನಾಯಕ ಜೋ ರೂಟ್ ಅಭಿಮತ. ಇದೇ ಕಾರಣಕ್ಕೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಇದನ್ನೂ ಓದಿ: India vs England| ಕೋಚ್ ರವಿಶಾಸ್ತ್ರಿ ಬೆನ್ನಿಗೆ ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೊರೋನಾ ಪಾಸಿಟಿವ್; ಆತಂಕದಲ್ಲಿ ಆಟಗಾರರು!
ಆದರೆ, ಭಾರತದ ವಿರುದ್ಧ ಮಹತ್ವದ ನಾಲ್ಕನೇ ಪಂದ್ಯದಲ್ಲಿ ಅವರು ತಂಡದಿಂದ ಹೊರಗುಳಿದಿದ್ದರು. ಮಗುವಿನ ನಿರೀಕ್ಷೆಯಲ್ಲಿದ್ದ ಜೋಸ್ ಬಟ್ಲರ್ ಪಿತೃತ್ವ ರಜೆ ಪಡೆದು ತೆರಳಿದ್ದರು. ಆದರೆ, ಆ ಪಂದ್ಯದಲ್ಲಿ ಆಂಗ್ಲರು ಹೀನಾಯ ಸೋಲನುಭವಿಸಿದ್ದರು. 10 ಬ್ಯಾಟ್ಸ್ಮನ್ಗಳು ಸೇರಿ ತವರು ನೆಲದಲ್ಲಿ ಒಂದು ಇಡೀ ದಿನ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ಭಾರತದ ಬೌಲರ್ಗಳ ಎದುರು ಸುಲಭಕ್ಕೆ ಮಣಿದಿದ್ದರು.
ಹೀಗಾಗಿ ಜೋಸ್ ಬಟ್ಲರ್ ಅವರನ್ನು ಕೊನೆಯ ಮತ್ತು ನಿರ್ಣಾಯಕ ಪಂದ್ಯಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಬಟ್ಲರ್ ಇಲ್ಲದ ಕಾರಣ ಕಳೆದ ಪಂದ್ಯದಲ್ಲಿ ಜಾನಿ ಬ್ಯಾರಿಸ್ಟೋವ್ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿದ್ದರು. ಆದರೆ, ಬ್ಯಾಟಿಂಗ್ನಲ್ಲಿ ಮತ್ತೆ ವೈಫಲ್ಯ ಅನುಭವಿಸಿದ್ದರು. ಬ್ಯಾರಿಸ್ಟೋವ್ ಅವರ ಸತತ ವೈಫಲ್ಯವೂ ಸಹ ಇಂಗ್ಲೆಂಡ್ ತಂಡಕ್ಕೆ ಭಾರೀ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: India vs England Test| ಸರಣಿ ಸೋಲಿನ ಭೀತಿಯಲ್ಲಿ ಆಂಗ್ಲರು; 5ನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡಕ್ಕೆ ಮರಳಲಿರುವ ಬಟ್ಲರ್
ಆದರೆ, ಬಟ್ಲರ್ ಸ್ಥಾನವನ್ನು ತುಂಬಿದ್ದ ಓಲಿ ಪೋಪ್ ಕಳೆದ ಪಂದ್ಯದ ಮೊದಲ ಇನ್ನಿಂಗ್ಸ್ 81 ರನ್ ಗಳಿಸುವ ಮೂಲಕ ತಮಗೆ ನೀಡಿದ್ದ ಅವಕಾಶವನ್ನು ದಿಟ್ಟವಾಗಿ ಬಳಸಿಕೊಂಡಿದ್ದರು. ಹೀಗಾಗಿ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಸತತ ವಿಫಲ ಅನುಭವಿಸುತ್ತಿರುವ ಜಾನಿ ಬ್ಯಾರಿಸ್ಟೋವ್ ಅವರನ್ನು ಹೊರಗಿಟ್ಟು ಓಲಿ ಪೋಪ್ಗೆ ಮತ್ತೊಂದು ಅವಕಾಶ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ