ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಹಾಗೂ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಒಟ್ಟು 20 ಸದಸ್ಯರನ್ನು ಒಳಗೊಂಡಿರುವ ತಂಡದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಥಾನ ಪಡೆದಿದ್ದಾರೆ. ಅಲ್ಲದೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕೆಎಲ್ ರಾಹುಲ್ ತಮ್ಮ ಫಿಟ್ನೆಸ್ ಸಾಬೀತುಪಡಿಸಿ ತಂಡದಲ್ಲಿ ಸ್ಥಾನ ಪಡೆಯಬಹುದಾಗಿದೆ.
ಈ ಬಾರಿ ಕೂಡ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದು, ಉಪನಾಯಕನಾಗಿ ಅಜಿಂಕ್ಯ ರಹಾನೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಆರಂಭಿಕರಾಗಿ ರೋಹಿತ್ ಶರ್ಮಾ ತಂಡದಲ್ಲಿರಲಿದ್ದಾರೆ. ಉಳಿದಂತೆ ಕೆಎಲ್ ರಾಹುಲ್ ಹಾಗೂ ವೃದ್ಧಿಮಾನ್ ಸಾಹ ಅವರನ್ನು ಕೂಡ ಆಯ್ಕೆಗೆ ಪರಿಗಣಿಸಲಾಗಿದ್ದು, ಫಿಟ್ನೆಸ್ ಸಾಬೀತುಪಡಿಸಿ ತಂಡವನ್ನು ಕೂಡಿಕೊಳ್ಳಬಹುದಾಗಿದೆ.
ಇನ್ನು ಆಸ್ಟ್ರೇಲಿಯಾ ಸರಣಿ ವೇಳೆ ಗಾಯಗೊಂಡಿದ್ದ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಂಡಕ್ಕೆ ವಾಪಾಸಾಗಿದ್ದು, ವಿಕೆಟ್ ಕೀಪರ್ ಜವಾಬ್ದಾರಿ ರಿಷಭ್ ಪಂತ್ಗೆ ವಹಿಸಲಾಗಿದೆ. ಹಾಗೆಯೇ ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬಹುತೇಕ ಆಟಗಾರರನ್ನೇ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಗೂ ಉಳಿಸಿಕೊಳ್ಳಲಾಗಿದೆ.
ಅದೇ ರೀತಿ ಹೆಚ್ಚುವರಿ ಆಟಗಾರರಾಗಿ ಅಭಿಮನ್ಯು ಈಶ್ವರನ್, ಕನ್ನಡಿಗ ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಹಾಗೂ ಅರ್ಝಾನ್ ನಾಗ್ವಸ್ವಲ್ಲಾ ಭಾರತ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ.
ಟೀಮ್ ಇಂಡಿಯಾ ಹೀಗಿದೆ: ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕುರ್, ಉಮೇಶ್ ಯಾದವ್ (ಕೆಎಲ್ ರಾಹುಲ್, ವೃದ್ಧಿಮಾನ್ ಸಾಹ ಫಿಟ್ನೆಸ್ ಸಾಬೀತುಪಡಿಸಿ ತಂಡವನ್ನು ಸೇರಿಕೊಳ್ಳಲಿದ್ದಾರೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ