ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ನಲ್ಲಿ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ವಿಶ್ವಕಪ್ ಪ್ರಯಾಣವನ್ನು ಮುಗಿಸಿದ್ದಾರೆ. ವೃತ್ತಿ ಜೀವನದ ಕೊನೆಯ ವರ್ಲ್ಡ್ಕಪ್ ಪಂದ್ಯವಾಡಿದ ಧೋನಿಗೆ ಇದುವೇ ಕಟ್ಟಕಡೆಯ ಮ್ಯಾಚ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಕೆಲ ದಿನಗಳ ಹಿಂದೆ ಬಿಸಿಸಿಐ ಅಧಿಕಾರಿಯೊಬ್ಬರು ವಿಶ್ವಕಪ್ ಬಳಿಕ ಮಹೀ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಯಾವುದೇ ಕ್ಷಣದಲ್ಲೂ ಬೇಕಾದರೂ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.
2004 ರಲ್ಲಿ ಏಕದಿನ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದ ಧೋನಿ ಇಂದು ತಮ್ಮ 350ನೇ ಪಂದ್ಯವನ್ನಾಡಿದ್ದರು. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶೂನ್ಯಕ್ಕೆ ಔಟಾದರೆ, ಇಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು.
ಆದರೆ ಈ ಎರಡು ಪಂದ್ಯಕ್ಕೂ ಒಂದು ಸಾಮ್ಯತೆ ಇದೆ. ಅದುವೇ ರನೌಟ್. ಹೌದು, ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಧೋನಿ ಮೊದಲ ಪಂದ್ಯದಲ್ಲಿ ರನೌಟ್ಗೆ ಬಲಿಯಾಗಿದ್ದರು. ಬಾಂಗ್ಲಾ ಆಟಗಾರ ಖಾಲಿದ್ ಮಸೂದ್ ಎಸೆದ ಚೆಂಡನ್ನು ಕೀಪರ್ ವಿಕೆಟ್ಗೆ ತಾಗಿಸಿದ್ದರು. ಈ ಮೂಲಕ ಚೊಚ್ಚಲ ಏಕದಿನ ಪಂದ್ಯದಲ್ಲಿ ಧೋನಿ ರನೌಟ್ ಆಗಿ ನಿರಾಸೆಯಿಂದ ನಿರ್ಗಮಿಸಿದ್ದರು.
ಇದೀಗ ಕಾಕತಾಳೀಯ ಎಂಬಂತೆ ಧೋನಿಯ ಕೊನೆಯ ಪಂದ್ಯ ಎನ್ನಲಾಗುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಎಂಎಸ್ಡಿ ರನೌಟ್ ಆಗಿದ್ದಾರೆ. ಸಂಕಷ್ಟದ ಸಮಯದಲ್ಲಿ ವಿರೋಚಿತ ಹೋರಾಟ ನಡೆಸಿದ ಧೋನಿ ಅರ್ಧಶತಕ ಬಾರಿಸಿದ್ದರು. ಆದರೆ ಎರಡು ರನ್ಗಳನ್ನು ಕಲೆಹಾಕುವ ತವಕದಲ್ಲಿ ಗಪ್ಟಿಲ್ ಥ್ರೋಗೆ ಮಾಜಿ ನಾಯಕ ರನೌಟ್ ಆಗಿದ್ದರು.
WHAT A MOMENT OF BRILLIANCE!
Martin Guptill was 🔛🎯 to run out MS Dhoni and help send New Zealand to their second consecutive @cricketworldcup final! #CWC19 pic.twitter.com/i84pTIrYbk
— ICC (@ICC) July 10, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ