ವಿಶ್ವಕಪ್ 2019ಕ್ಕೆ ಕ್ರಿಕೆಟ್ ದೇವರ ಎಂಟ್ರಿ : ಹೊಸ ಇನಿಂಗ್ಸ್ ಆರಂಭಿಸಿದ ಸಚಿನ್ ತೆಂಡೂಲ್ಕರ್

ಏಕದಿನ ಕ್ರಿಕೆಟ್​ನಲ್ಲಿ 62 ಬಾರಿ ಮ್ಯಾನ್​ ಆಫ್​ ದಿ ಮ್ಯಾಚ್ ತಮ್ಮದಾಗಿಸಿಕೊಂಡಿರುವ ಸಚಿನ್ ವರ್ಲ್ಡ್​ ಕಪ್​ನಲ್ಲಿ 9 ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು.

zahir | news18
Updated:May 30, 2019, 4:47 PM IST
ವಿಶ್ವಕಪ್ 2019ಕ್ಕೆ ಕ್ರಿಕೆಟ್ ದೇವರ ಎಂಟ್ರಿ : ಹೊಸ ಇನಿಂಗ್ಸ್ ಆರಂಭಿಸಿದ ಸಚಿನ್ ತೆಂಡೂಲ್ಕರ್
@Times Colonist
  • News18
  • Last Updated: May 30, 2019, 4:47 PM IST
  • Share this:
ವಿಶ್ವ ಕ್ರಿಕೆಟ್​ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 2019ರ ವಿಶ್ವಕಪ್​ಗೂ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಬಾರಿ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿಲ್ಲ ಎಂಬುದು ವಿಶೇಷ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಸಚಿನ್ ಇದೀಗ ಹೊಸ ಇನಿಂಗ್ಸ್​ ಆರಂಭಿಸಿದ್ದಾರೆ. ಹೌದು, ಸಚಿನ್ ಇಂಗ್ಲೆಂಡ್​-ವೇಲ್ಸ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಕಾಮೆಂಟ್ರಿ ನೀಡಲಿದ್ದಾರೆ.

ಫಿಲಿಪ್ಸ್ ಹ್ಯೂ ಕ್ರಿಕೆಟ್ ಲೈವ್ ಪ್ರೀ ಶೋನಲ್ಲಿ ಕಾಣಿಸಲಿರುವ ಸಚಿನ್ ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ಕಾಮೆಂಟ್ರಿ ಕೊಡಲಿದ್ದಾರೆ. ಪ್ರತಿದಿನ ಮ್ಯಾಚ್​ ಆರಂಭಕ್ಕೂ ಮುನ್ನ 1:30ಕ್ಕೆ ಈ ಕಾರ್ಯಕ್ರಮ ಇರಲಿದ್ದು, ಸಚಿನ್ ಕ್ರಿಕೆಟ್​ ಕುರಿತಾದ ವಿಶ್ಲೇಷಣೆ ನೀಡಲಿದ್ದಾರೆ.

12ನೇ ಆವೃತ್ತಿಯ ವಿಶ್ವಕಪ್​ಗೆ ಮೇ.30 ರಂದು ಚಾಲನೆ ದೊರೆತಿದ್ದು, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿದೆ. ಇದೇ ಪಂದ್ಯದೊಂದಿಗೆ ತೆಂಡೂಲ್ಕರ್ ಸಹ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

6 ಬಾರಿ ವಿಶ್ವಕಪ್ ಟೂರ್ನಿಯನ್ನು ಪ್ರತಿನಿಧಿಸಿರುವ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ವರ್ಲ್ಡ್​ಕಪ್​ನಲ್ಲಿ ಹತ್ತು ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಬಾರಿ ಸಚಿನ್ ದಾಖಲೆಗಳನ್ನು ಯಾರು ಅಳಿಸಿ ಹಾಕಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್​ ಪ್ರೇಮಿಗಳಲ್ಲಿದೆ. ಏಕೆಂದರೆ ಈಗಾಗಲೇ ವಿರಾಟ್ ಕೊಹ್ಲಿ, ವಾರ್ನರ್, ಬೇರ್​ಸ್ಟೊ, ಜೋಸ್ ಬಟ್ಲರ್​ ರೀತಿಯ ಸ್ಪೋಟಕ ಆಟಗಾರರು ತಮ್ಮ ಬ್ಯಾಟಿಂಗ್ ನೈಪುಣ್ಯತೆಯನ್ನು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ. ಹೀಗಾಗಿ ಕ್ರಿಕೆಟ್​ ದೇವರ ರೆಕಾರ್ಡ್​ ಅನ್ನು ಯಾರಾದರೂ ಮುರಿಯಬಹುದು ಎಂಬ ನಿರೀಕ್ಷೆಯೊಂದು ಹುಟ್ಟಿಕೊಂಡಿದೆ

ವಿಶ್ವಕಪ್​ನಲ್ಲಿ ಸಚಿನ ತೆಂಡೂಲ್ಕರ್ ಹೆಸರಿನಲ್ಲಿರುವ ವಿಶೇಷ ದಾಖಲೆಗಳಿವು:

1-ವಿಶ್ವಕಪ್​ನ ಅತ್ಯಂತ ಯಶಸ್ವಿ ಬ್ಯಾಟ್ಸ್​ಮನ್:
ವಿಶ್ವಕಪ್ ಪಂದ್ಯಗಳಿಂದಲೇ ಎರಡು ಸಾವಿರ ರನ್​ ಗಳಿಸಿದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. 45 ಪಂದ್ಯಗಳಲ್ಲಿ 44 ಇನಿಂಗ್ಸ್​ ಆಡಿರುವ ಸಚಿನ್ 56.95 ಸರಾಸರಿಯಲ್ಲಿ 2278 ರನ್​ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 6 ಶತಕ ಹಾಗೂ 15 ಅರ್ಧಶತಕಗಳು ಒಳಗೊಂಡಿದೆ. ಇದು ವಿಶ್ವಕಪ್​ನಲ್ಲಿ ಆಟಗಾರನೊಬ್ಬನ ಶ್ರೇಷ್ಠ ವೈಯುಕ್ತಿಕ ದಾಖಲೆಯಾಗಿ ಅಚ್ಚಳಿಯದೆ ಉಳಿದಿದೆ.2 - ವಿಶ್ವಕಪ್​ ಟೂರ್ನಿವೊಂದರಲ್ಲಿ ಅತೀ ಹೆಚ್ಚು ರನ್​:

ವಿಶ್ವಕಪ್ ಟೂರ್ನಿವೊಂದರಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ದಾಖಲೆ ಕೂಡ ಸಚಿನ್ ಹೆಸರಿನಲ್ಲಿದೆ. ವಿಶ್ವಕಪ್​ ಟೂರ್ನಿಯಲ್ಲಿ ಮೂರು ಬಾರಿ ಮಾಸ್ಟರ್ ಬ್ಲಾಸ್ಟರ್ 450ಕ್ಕಿಂತ ಹೆಚ್ಚು ರನ್ ಸಿಡಿಸಿ ಮಿಂಚಿದ್ದಾರೆ. ಅದರಲ್ಲೂ 2003ರ ವಿಶ್ವಕಪ್​ ವೇಳೆ ತೆಂಡೂಲ್ಕರ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 673 ರನ್​ಗಳು. ಇನ್ನು 1996 ರ ವರ್ಲ್ಡ್​ ಕಪ್ ವೇಳೆ 523 ಹಾಗೂ 2011 ರ ವಿಶ್ವಕಪ್​ನಲ್ಲಿ ಸಚಿನ್ 482 ರನ್​ಗಳಿಸಿದ್ದರು. ಇದು ಕೂಡ ವಿಶ್ವಕಪ್ ದಾಖಲೆಯಾಗಿ ಉಳಿದಿದೆ.

3- ಅತ್ಯಧಿಕ ವಿಶ್ವಕಪ್ ಪಂದ್ಯವಾಡಿದ ಆಟಗಾರ:
ಸಚಿನ್ ತೆಂಡೂಲ್ಕರ್ ಇಲ್ಲಿವರೆಗೆ ಆರು ವಿಶ್ವಕಪ್​ನಲ್ಲಿ ಭಾಗವಹಿಸಿದ್ದಾರೆ. 1992 ರಿಂದ ಪ್ರಾರಂಭವಾದ ವಿಶ್ವಕಪ್ ನಾಗಾಲೋಟ 2011ರ ವಿಶ್ವಕಪ್​ ಕಿರೀಟದೊಂದಿಗೆ ಅಂತ್ಯಗೊಂಡಿತು. 2011 ರ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಾಕ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ (1975-1996) ಅವರ 6 ಬಾರಿ ವಿಶ್ವಕಪ್ ಆಡಿದ ದಾಖಲೆಯನ್ನು ಸಚಿನ್ ಸರಿಗಟ್ಟಿದ್ದರು.

4- ವಿಶ್ವಕಪ್​ನಲ್ಲಿ ಅತ್ಯಧಿಕ ಶತಕ:
ವರ್ಲ್ಡ್​ಕಪ್​ನಲ್ಲಿ 45 ಪಂದ್ಯಗಳನ್ನು ಆಡಿರುವ ಮಾಸ್ಟರ್ ಬ್ಲಾಸ್ಟರ್ 6 ಭರ್ಜರಿ ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕ್ರಿಕೆಟ್​ ದೇವರ ನಂತರ ಸ್ಥಾನಗಳನ್ನು ತಲಾ 5 ಶತಕ ಸಿಡಿಸಿ ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) ಹಾಗೂ ಕುಮಾರ ಸಂಗಾಕ್ಕರ (ಶ್ರೀಲಂಕಾ) ಜಂಟಿಯಾಗಿ ಅಲಂಕರಿಸಿದ್ದಾರೆ.

5-ಅರ್ಧಶತಕ ದಾಖಲೆ:
ವಿಶ್ವಕಪ್​ನಲ್ಲಿ ಶತಕದ ಸಾಧನೆ ಮಾತ್ರವಲ್ಲದೇ ಅರ್ಧಶತಕದ ದಾಖಲೆಯಲ್ಲೂ ಸಚಿನ್ ಹೆಸರು ಮುಂಚೂಣಿಯಲ್ಲಿದೆ. 44 ಇನಿಂಗ್ಸ್​ನಲ್ಲಿ ಮಾಸ್ಟರ್ ಬ್ಲಾಸ್ಟರ್ ಒಟ್ಟು 15 ಅರ್ಧಶತಕ ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ.

6- ಒಂದು ವಿಶ್ವಕಪ್​ನಲ್ಲಿ ಗರಿಷ್ಠ ರನ್:
2003 ರ ವಿಶ್ವಕಪ್​ನಲ್ಲಿ ಸಚಿನ್ ತೆಂಡೂಲ್ಕರಗ್ 11 ಪಂದ್ಯಗಳಿಂದ 61.18 ಸರಾಸರಿಯಲ್ಲಿ 673 ರನ್​ಗಳಿಸಿದ್ದರು. ಇದು ವಿಶ್ವಕಪ್ ಟೂರ್ನಿಯಲ್ಲಿ ಆಟಗಾರೊಬ್ಬರು ಬಾರಿಸಿದ ಗರಿಷ್ಠ ರನ್​ ಎಂಬ ದಾಖಲೆಗೆ ಪಾತ್ರವಾಗಿದೆ.

7- ಅತೀ ಹೆಚ್ಚು ಇನಿಂಗ್ಸ್ ಆಡಿದ ದಾಖಲೆ:
ಸಚಿನ್ ತೆಂಡೂಲ್ಕರ್ 45 ಪಂದ್ಯಗಳಲ್ಲಿ 44 ಬಾರಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಬಾರಿ ಕಣಕ್ಕಿಳಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

8- ಅತೀ ಹೆಚ್ಚು ಬಾರಿ ಮ್ಯಾನ್​ ಆಫ್ ದಿ ಮ್ಯಾಚ್​:
ವಿಶ್ವ ಕ್ರಿಕೆಟ್​ನಲ್ಲೇ ಅತೀ ಹೆಚ್ಚು ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ದಾಖಲೆಯಲ್ಲಿ ಸಚಿನ್ ಹೆಸರು ಮುಂಚೂಣಿಯಲ್ಲಿದೆ. ಏಕದಿನ ಕ್ರಿಕೆಟ್​ನಲ್ಲಿ 62 ಬಾರಿ ಮ್ಯಾನ್​ ಆಫ್​ ದಿ ಮ್ಯಾಚ್ ತಮ್ಮದಾಗಿಸಿಕೊಂಡಿರುವ ಸಚಿನ್ ವರ್ಲ್ಡ್​ ಕಪ್​ನಲ್ಲಿ 9 ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು. ಇದು ಕೂಡ ದಾಖಲೆ ಪಟ್ಟಿಯಲ್ಲಿ ಹಾಗೆಯೇ ಉಳಿದಿದೆ.

9- ಚೆಂಡನ್ನು ಬೌಂಡರಿ ದಾಟಿಸಿದ ದಾಖಲೆ:
ವಿಶ್ವಕಪ್ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ 241 ಬಾರಿ ಚೆಂಡನ್ನು ಬೌಂಡರಿಗಟ್ಟಿದ್ದಾರೆ. ಇದು ಕೂಡ ವಿಶ್ವದಾಖಲೆಯಾಗಿದೆ. ಇಲ್ಲಿ ಮತ್ತೊಂದು ವಿಷಯವೆಂದರೆ, ಇದುವರೆಗೆ ಯಾವುದೇ ಆಟಗಾರ ವರ್ಲ್ಡ್​ಕಪ್​ಗಳಲ್ಲಿ 150 ಕ್ಕಿಂತ ಹೆಚ್ಚು ಬೌಂಡರಿ ಬಾರಿಸಿಲ್ಲ ಎಂಬುದು.

10-ಮೂರನೇ ವಿಕೆಟ್ ಪಾರ್ಟ್ನರ್​ಶಿಪ್:
1999ರ ವಿಶ್ವಕಪ್​ನಲ್ಲಿ ಕೀನ್ಯಾ ವಿರುದ್ಧ ರಾಹುಲ್ ದ್ರಾವಿಡ್​ ಜತೆಗೂಡಿ ಸಚಿನ್ ತೆಂಡೂಲ್ಕರ್ 237 ರನ್​ಗಳ ಜೊತೆಯಾಟ ಆಡಿದ್ದರು. ಇದು ವಿಶ್ವಕಪ್​ನ 3ನೇ ವಿಕೆಟ್​ನ ದಾಖಲೆಯ ಜೊತೆಯಾಟವಾಗಿ ಉಳಿದಿದೆ.

ಇದನ್ನೂ ಓದಿ: ಭಾರತ ತಂಡದ ಡ್ರೆಸ್ಸಿಂಗ್ ರೂಂ ರಹಸ್ಯವನ್ನು ಬಹಿರಂಗ ಪಡಿಸಿದ ರೋಹಿತ್ ಶರ್ಮಾ..!
First published:May 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ