ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿಂದು ಮಹಿಳಾ ಟಿ-20 ಚಾಲೆಂಜ್ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಟ್ರೈಲ್ಬ್ಲೇಜರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. 119 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಸೂಪರ್ ನೋವಾಸ್ ತಂಡವನ್ನು 102 ರನ್ಗಳಿಗೆ ನಿಯಂತ್ರಿಸುವ ಮೂಲಕ ಭರ್ಜರಿ ಗೆಲುವು ತಮ್ಮದಾಗಿಸಿಕೊಂಡರು .
ಇದಕ್ಕೂ ಮುನ್ನ ಟಾಸ್ ಗೆದ್ದ ಸೂಪರ್ ನೋವಾಸ್ ನಾಯಕಿ ಹರ್ಮನ್ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟ್ ಬೀಸಲು ಕ್ರೀಸ್ಗಿಳಿದ ಸ್ಮೃತಿ ಮಂದಾನ ಹಾಗೂ ಡಿ ಡಾಟಿನ್ ಭರ್ಜರಿ ಆರಂಭ ಒದಗಿಸಿದರು, ಆರಂಭದಲ್ಲೇ ಬಿರುಸಿನ ಆಟ ಪ್ರದರ್ಶಿಸಿದ ಸೂಪರ್ ನೋವಾಸ್ ನಾಯಕಿ, ಪವರ್ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತ 50ರ ಗಡಿ ತಲುಪಿಸಿದರು.
ಅಲ್ಲದೆ ಮೊದಲ ವಿಕೆಟ್ಗೆ 71 ರನ್ಗಳ ಜೊತೆಯಾಟವಾಡಿದರು. ಪೂನಂ ಯಾದವ್ ಎಸೆದ 12ನೇ ಓವರ್ನಲ್ಲಿ ಡಿ ಡಾಟಿನ್ (20) ಬಿಗ್ ಹಿಟ್ಗೆ ಮುಂದಾಗಿ ಕ್ಯಾಚ್ ನೀಡಿ ಹೊರ ನಡೆದರು. ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಮಂದಾನ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ 37 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಮತ್ತೆ ಸ್ಪೋಟಕ ಆಟಕ್ಕೆ ಮುಂದಾದ ಸ್ಮೃತಿ ಮಂದಾನ ಭರ್ಜರಿಯಾಗಿ ಬ್ಯಾಟ್ ಬೀಸಿದರು.
ಈ ವೇಳೆ ತಾನಿಯಾ ಭಾಟಿಯಾ ಮಾಡಿದ ಅದ್ಭುತ ಸ್ಟಂಪಿಂಗ್ನಿಂದ ಮಂದಾನ ಹೊರ ನಡೆಯಲೇಬೇಕಾಯಿತು. ಅಷ್ಟರಲ್ಲಾಗಲೇ ಸ್ಮೃತಿ 49 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 68 ರನ್ ಚಚ್ಚಿದ್ದರು. ಅಲ್ಲದೆ ತಂಡದ ಮೊತ್ತ 14.5 ಓವರ್ನಲ್ಲಿ 101 ರನ್ ಆಗಿತ್ತು. ಆದರೆ ನಾಯಕಿಯ ನಿರ್ಗಮನದೊಂದಿಗೆ ಪಂದ್ಯ ನಾಟಕೀಯ ತಿರುವು ಪಡೆದುಕೊಂಡಿತು.
ದಾಳಿಗಿಳಿದ ರಾಧಾ ಯಾದವ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿದರು. ಅದರಲ್ಲೂ 18ನೇ ಮತ್ತು 20 ಓವರ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದರು. 4 ಓವರ್ನಲ್ಲಿ 16 ರನ್ ನೀಡಿದ ರಾಧಾ 5 ವಿಕೆಟ್ ಕಬಳಿಸುವ ಮೂಲಕ ಮಿಂಚಿದರು. ಪರಿಣಾಮ ಟ್ರೈಲ್ಬ್ಲೇಜರ್ ನಿಗದಿತ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 118 ರನ್ಗಳಿಸಲಷ್ಟೇ ಶಕ್ತರಾದರು.
ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಸೂಪರ್ ನೋವಾಸ್ ಆರಂಭ ಕೂಡ ಉತ್ತಮವಾಗಿರಲಿಲ್ಲ. ಸ್ಪೋಟಕ ಆಟಗಾರ್ತಿ ಚಮರಿ ಅಟ್ಟಪಟ್ಟು 6 ರನ್ ಗಳಿಸಿ ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ತಂಡದ ಮೊತ್ತ 30 ಆಗಿದ್ದ ವೇಳೆ ದೀಪ್ತಿ ಶರ್ಮಾ ಎಸೆತದಲ್ಲಿ ತಾನಿಯಾ ಭಾಟಿಯಾ (14) ಕ್ಯಾಚ್ ನೀಡಿ ಹೊರನಡೆದರು. ಇದರ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಜೆಮಿಮಾ (13) ಚಂಥಂ ಹಿಡಿದ ಅದ್ಭುತ ಕ್ಯಾಚ್ನಿಂದ ಪೆವಿಲಿಯನ್ ಕಡೆ ಮುಖ ಮಾಡಬೇಕಾಯಿತು.
ಈ ಹಂತದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಟ್ರೈಲ್ಬ್ಲೇಜರ್ಸ್ ಬೌಲರುಗಳು ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಸೂಪರ್ ನೋವಾಸ್ಗೆ 10 ಓವರ್ಗಳಲ್ಲಿ 71 ರನ್ ಬೇಕಾಗಿತ್ತು. ಈ ಹಂತದಲ್ಲಿ ಜೊತೆಗೂಡಿದ ನಾಯಕಿ ಹರ್ಮನ್ ಹಾಗೂ ಶಶಿಕಲಾ ಸಿರಿವರ್ಧನೆ ಉತ್ತಮ ಜೊತೆಯಾಟವಾಡಿದರು. ಪರಿಣಾಮ ರನ್ ಗತಿಯಲ್ಲಿ ವೇಗ ಪಡೆದುಕೊಂಡಿತು. ಆದರೆ 15ನೇ ಓವರ್ನಲ್ಲಿ ಸಲ್ಮಾ ಶಶಿಕಲಾ ಅವರನ್ನು ಔಟ್ ಮಾಡುವ ಮೂಲಕ ಟ್ರೈಲ್ಬ್ಲೇಜರ್ಗೆ ಯಶಸ್ಸು ತಂದುಕೊಟ್ಟರು.
ಅದರಂತೆ ಕೊನೆಯ 2 ಓವರ್ಗಳಲ್ಲಿ 28 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಹರ್ಮನ್ಪ್ರೀತ್ ಕೌರ್ (30) ಹಾಗೂ ಪೂಜಾ ವಿಕೆಟ್ ಪಡೆದು ಸಲ್ಮಾ ಕೇವಲ 4 ರನ್ ಮಾತ್ರ ನೀಡಿದರು. ಕೊನೆಯ ಓವರ್ನಲ್ಲಿ 24 ರನ್ಗಳ ಟಾರ್ಗೆಟ್ ಪಡೆದ ಸೂಪರ್ ನೋವಾಸ್ ಕೇವಲ 7 ರನ್ ಮಾತ್ರ ಗಳಿಸಿತು. ಪರಿಣಾಮ ಹಾಲಿ ಚಾಂಪಿಯನ್ನನ್ನು 16 ರನ್ಗಳಿಂದ ಮಣಿಸಿ ಟ್ರೈಲ್ ಬ್ರೇಜರ್ಸ್ ಟಿ20 ಮಹಿಳಾ ಚಾಂಪಿಯನ್ ಎನಿಸಿಕೊಂಡರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ