ವಿಂಡೀಸ್ Vs ಪಾಕ್ ಟಿ20: ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರು ಕುಸಿದುಬಿದ್ದರೂ ಮುಂದುವರಿದ ಪಂದ್ಯ

ಪಾಕ್ ವಿರುದ್ಧದ ಪಂದ್ಯದಲ್ಲಿ ವಿಂಡೀಸ್ ತಂಡ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ 10 ನಿಮಿಷಗಳ ಅಂತರದಲ್ಲಿ ಇಬ್ಬರು ಆಟಗಾರ್ತಿಯರು ಮೈದಾನದಲ್ಲೇ ಕುಸಿದುಬಿದ್ದ ಘಟನೆ ನಡೆಯಿತು. ಆದರೂ ಪಂದ್ಯ ಮುಂದುವರಿದು ಅಂತಿಮವಾಗಿ ಕೆರಿಬಿಯನ್ನರು ಗೆಲುವು ಪಡೆದರು.

ಶಿನೆಲೆ  ಹೆನ್ರಿ

ಶಿನೆಲೆ ಹೆನ್ರಿ

  • Share this:
ಆಂಟಿಗುವಾ, ವೆ. ಇಂಡೀಸ್: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಂಥದ್ದೊಂದು ನಿದರ್ಶನ ಯಾವತ್ತೂ ಇರಲಿಲ್ಲ. ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಟಿ20 ಪಂದ್ಯದಲ್ಲಿ ಈ ಘಟನೆ ನಡೆದುಹೋಯಿತು. ವಿಂಡೀಸ್ ತಂಡ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ 10 ನಿಮಿಷಗಳ ಅಂತರದಲ್ಲಿ ಇಬ್ಬರು ಆಟಗಾರ್ತಿಯರು ಮೈದಾನದಲ್ಲೇ ಕುಸಿದುಬಿದ್ದ ಘಟನೆ ನಡೆಯಿತು. ಆದರೆ, ಈ ಬೆಳವಣಿಗೆ ನಡೆದರೂ ಪಂದ್ಯ ಮಾತ್ರ ಮುಂದುವರಿಯಿತು. ಇಬ್ಬರು ಆಟಗಾರರು ಸ್ಥಳದಲ್ಲೇ ಕುಸಿದ ಘಟನೆ ನಡೆದರೆ ಸಾಮಾನ್ಯವಾಗಿ ಪಂದ್ಯವನ್ನ ಕೂಡಲೇ ನಿಲ್ಲಿಸಿಬಿಡಲಾಗುತ್ತದೆ. ಆದರೆ, ಆಂಟಿಗುವಾದಲ್ಲಿ ನಡೆದ ಈ ಪಂದ್ಯ ಆ ಎರಡು ದುರ್ಘಟನೆಗಳ ಹೊರತಾಗಿಯೂ ಮುಂದುವರಿಯಿತು. ಈ ಪಂದ್ಯದಲ್ಲಿ ಪಾಕಿಸ್ತಾನೀ ವನಿತೆಯರ ತಂಡ 7 ರನ್​ಗಳಿಂದ ಪರಾಜಯಗೊಂಡಿತು.

ಶಿನೆಲೆ ಹೆನ್ರಿ (Chinelle Henry) ಮತ್ತು ಶೆಡಿಯನ್ ನೇಶನ್ (Chedean Nation) ಅವರು ಫೀಲ್ಡಿಂಗ್ ಮಾಡುವ ಕುಸಿದುಬಿದ್ದ ವೆಸ್ಟ್ ಇಂಡೀಸ್ ಆಟಗಾರ್ತಿಯರು. ಯಾವ ಕಾರಣಕ್ಕೆ ಇವರಿಗೆ ಹೀಗಾಯಿತು ಎಂಬುದು ಗೊತ್ತಿಲ್ಲ. ಮೊದಲು ಹೆನ್ರಿ ಕುಸಿದುಬಿದ್ದರೆ, ಹತ್ತು ನಿಮಿಷಗಳ ಬಳಿಕ ಶೆಡಿಯನ್ ನೇಶನ್ ಕೂಡ ನಿತ್ರಾಣಗೊಂಡು ಕೆಳಗೆ ಬಿದ್ದರು. ಕೂಡಲೇ ಅವರಿಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸದ್ಯ ಇವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇವರ ನಿರ್ಗಮನದ ಬೆನ್ನಲ್ಲೇ ಸಬ್ಸ್​ಟಿಟ್ಯೂಟ್​ಗಳನ್ನ ಕರೆಸಿ ವೆಸ್ಟ್ ಇಂಡೀಸ್ ತಂಡ ಆಟ ಮುಂದುವರಿಸಿತು.

ಇದನ್ನೂ ಓದಿ: Sri Lanka: ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಶ್ರೀಲಂಕಾ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್​ನಲ್ಲಿ ಆರು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಶಿಡಿಯನ್ ನೇಷನ್ 28 ರನ್ ಗಳಿಸಿ ಗಮನ ಸೆಳೆದರು. ಕೈಸಿಯಾ ನೈಟ್ ಅಜೇಯ 39 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಮಹಿಳೆಯರು ಒಡ್ಡಿದ ಸಾಧಾರಣ ಮೊತ್ತದ ಗುರಿಯನ್ನ ಬೆನ್ನತ್ತಲು ಪಾಕ್ ಆಟಗಾರ್ತಿಯರು ಬಹಳ ಕಷ್ಟಪಡಬೇಕಾಯಿತು. ಕೆಟ್ಟ ಹವಾಮಾನದ ಕಾರಣ ಚೇಸಿಂಗ್ ಅನ್ನು 18 ಓವರ್​ಗೆ ಸೀಮಿತಗೊಳಿಸಲಾಯಿತು. ಪಾಕ್ 18 ಓವರ್​ನಲ್ಲಿ 111 ರನ್ ಗಳಿಸುವ ಗುರಿ ಪಡೆಯಿತು. ಆದರೆ, ಅಂತಿಮವಾಗಿ ಪಾಕಿಸ್ತಾನೀ ವನಿತೆಯರು 103 ರನ್ ಮಾತ್ರ ಗಳಿಸಲು ಶಕ್ಯರಾದರು. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡ 8 ರನ್​ಗಳಿಂದ ಗೆಲುವು ಪಡೆದು ಸರಣಿಯಲ್ಲಿ 2-0 ಮುನ್ನಡೆ ಪಡೆದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: