MS Dhoni: ಮಹೇಂದ್ರ ಸಿಂಗ್ ಧೋನಿ ಎಂಬ ಭಾರತೀಯ ಕ್ರಿಕೆಟ್​ನ ದಶಾವತಾರ!

90 ಟೆಸ್ಟ್ ಪಂದ್ಯಗಳಿಂದ 6 ಶತಕ, 33 ಅರ್ಧಶತಕ, 350 ಏಕದಿನ ಪಂದ್ಯಗಳಿಂದ 10 ಶತಕ, 73 ಅರ್ಧಶತಕ, ಕ್ರಿಕೆಟ್ನ ಮೂರೂ ಮಾದರಿ ಸೇರಿ 15 ಸಾವಿರಕ್ಕೂ ಹೆಚ್ಚು ರನ್ಗಳು, ವಿಕೆಟ್ ಹಿಂದೆ 550ಕ್ಕೂ ಹೆಚ್ಚು  ಕ್ಯಾಚ್​ಗಳು, 180ಕ್ಕೂ ಹೆಚ್ಚು ಸ್ಟಂಪೌಟ್. ಬರೀ ಅಂಕಿ-ಸಂಖ್ಯೆಗಳಿಂದಲೇ, ದಾಖಲೆಗಳಿಂದಲೇ  ಧೋನಿ ಗ್ರೇಟ್ ಆದ್ರಾ? ಇಲ್ಲ, ಅದಕ್ಕೆ ಬೇರೆಯದೇ ಕಾರಣವಿದೆ.

news18-kannada
Updated:January 19, 2020, 1:08 PM IST
MS Dhoni: ಮಹೇಂದ್ರ ಸಿಂಗ್ ಧೋನಿ ಎಂಬ ಭಾರತೀಯ ಕ್ರಿಕೆಟ್​ನ ದಶಾವತಾರ!
ಎಂಸ್​ ಧೋನಿ
  • Share this:
ಸೈಯದ್ ಕಿರ್ಮಾನಿ, ಕಿರಣ್ ಮೋರೆ, ನಯನ್ ಮೋಂಗಿಯಾ… ಇವರು ಆಯಾ ಕಾಲಘಟ್ಟದಲ್ಲಿ ಮಿಂಚಿ ಮರೆಯಾದ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್​ಗಳು. ಇವರನ್ನೆಲ್ಲಾ ನೋಡಿದ ಮೇಲೂ ಒಬ್ಬ ಆಡಂ ಗಿಲ್ಕ್ರಿಸ್ಟ್, ಒಬ್ಬೇ ಒಬ್ಬ ಬ್ರೆಂಡನ್ ಮೆಕಲಮ್​ನಂತಹ ಡೈನಾಮಿಕ್ ಪ್ಲೇಯರ್, ಸಂಗಕ್ಕಾರ, ಮಾರ್ಕ್ ಬುಚರ್​ನಂತಹ ಆಪತ್ಪಾಂಧವರು ನಮ್ಮಲ್ಲಿ ಯಾಕೆ ಬರುವುದಿಲ್ಲ ಎನ್ನುವ ಹೊಸ ತಲೆಮಾರಿನ ನೋವು ಅದೊಂದು ದಿನದವರೆಗೂ ನೀಗಿರಲೇ ಇಲ್ಲ! ಆದರೆ ಗಂಗೂಲಿ ಮಾಡಿದ ಅದೊಂದು ಗ್ಯಾಬ್ಲಿಂಗ್​ನಿಂದಾಗಿ ಕೋಟ್ಯಂತರ ಕಂಗಳ ನಿರೀಕ್ಷೆ ಸಾಕಾರವಾಯಿತು. ಮಹೇಂದ್ರ ಸಿಂಗ್ ದೋನಿ ಬ್ಯಾಟ್​​ನಿಂದ ಸಿಡಿದ ಆ ಸ್ಫೋಟಕ ಶತಕ, ಉಳಿದೊಂದು ದಶಕ ಇಡೀ ವಿಶ್ವಕ್ರಿಕೆಟ್​​ಅನ್ನು ನಿಬ್ಬೆರಗಾಗಿಸುತ್ತಲೇ ಹೋಯಿತು.

90 ಟೆಸ್ಟ್ ಪಂದ್ಯಗಳಿಂದ 6 ಶತಕ, 33 ಅರ್ಧಶತಕ, 350 ಏಕದಿನ ಪಂದ್ಯಗಳಿಂದ 10 ಶತಕ, 73 ಅರ್ಧಶತಕ, ಕ್ರಿಕೆಟ್ನ ಮೂರೂ ಮಾದರಿ ಸೇರಿ 15 ಸಾವಿರಕ್ಕೂ ಹೆಚ್ಚು ರನ್ಗಳು, ವಿಕೆಟ್ ಹಿಂದೆ 550ಕ್ಕೂ ಹೆಚ್ಚು  ಕ್ಯಾಚ್​ಗಳು, 180ಕ್ಕೂ ಹೆಚ್ಚು ಸ್ಟಂಪೌಟ್. ಚೊಚ್ಚಲ ಟಿ-20 ವಿಶ್ವಕಪ್, ಮತ್ತೊಂದು ಏಕದಿನ ವಿಶ್ವಕಪ್​​. ಮಹೇಂದ್ರ ಸಿಂಗ್ ಧೋನಿ! ಅಬ್ಬಾ, ಹೆಸರೊಂದೇ ಸಾಕು. ಭಾರತೀಯ ಕ್ರಿಕೆಟ್​​ ಸೂಪರ್ ಸ್ಟಾರ್ಸ್​​ ಎನ್ನುವುದರಲ್ಲಿ ಡೌಟೇ ಇಲ್ಲ. ಆದರೆ ಬರೀ ಅಂಕಿ-ಸಂಖ್ಯೆಗಳಿಂದಲೇ, ದಾಖಲೆಗಳಿಂದಲೇ  ಧೋನಿ ಗ್ರೇಟ್ ಆದ್ರಾ? ಇಲ್ಲ, ಅದಕ್ಕೆ ಬೇರೆಯದೇ ಕಾರಣವಿದೆ.

ಧೋನಿ ಎಂದರೆ ಕ್ರಿಕೆಟ್ ಬುಕ್​ನಲ್ಲಿರೋ ಕಲಾಕೌಶಲ್ಯದ ಹೊರತಾದ ಅಪ್ಪಟ ‘ಗಲ್ಲಿ ಕ್ರಿಕೆಟಿಗ’ನೊಬ್ಬನ ವಿಶ್ವಗೆಲ್ಲೋ ದೇಸಿ ಮಹತ್ವಾಕಾಂಕ್ಷೆ. ತಂಡದಲ್ಲಿರೋ ಅತಿರಥರನ್ನೇ ಕೆಣಕಿದರೂ ಸರಿ, ಭವಿಷ್ಯದ ಟೀಮ್ ಕಟ್ಟಬೇಕೆಂಬ ಗೆಲುವಿನ ‘ಫಾರ್ಮುಲಾ’. ಒತ್ತಡದ ನಡುವೆಯೂ ಎದುರಾಳಿಗಳ ಸೈಕಾಲಜಿ ಗೆಲ್ಲುವ ತಂತ್ರ ಹೇಳಿಕೊಟ್ಟ ಲೈಫ್ ಗುರು! ಏನೇ ಸಂದರ್ಭವಿರಲಿ ಹಿಡಿದ ಕೆಲಸ ಮುಗಿಸಿಬಿಡಬೇಕು, ಅದೂ ನೆನಪಿನಲ್ಲುಳಿಯುವಂತೆ ಎಂದು ಹೇಳಿಕೊಟ್ಟ ಬೆಸ್ಟ್ ‘ಫಿನಿಶರ್’. ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದಾಗಲೂ ಕನಸಿಗೆ ಕೊಳ್ಳಿ ಇಡದ ಅದ್ಭುತ ಕನಸುಗಾರ. ಮಾತೃಭಾಷೆಯಷ್ಟೇ ಗೊತ್ತಿದ್ದವನೊಬ್ಬ ಪಟ್ಟುಹಿಡಿದು ಕಲಿತು  ಟೆಲಿವಿಷನ್ ಪರದೆ ಗುಡುಗಿಸಬಲ್ಲ ‘ಸ್ಪೋಕನ್ ಇಂಗ್ಲೀಷ್’. ಉದ್ದುದ್ದ ಕೂದಲು ಬಿಟ್ಟರೇನು, ನುಣ್ಣಗೆ ಬೋಳಿಸಿದರೇನು ನನ್ನ ದುನಿಯಾ- ನನ್ನ ಸ್ಟೈಲ್ ಎಂದು ಹೇಳುತ್ತಲೇ ಬಂದ ‘ಕ್ಯಾಪ್ಟನ್’ ಕೂಲ್.

ಇದನ್ನೂ ಓದಿ: ಐಪಿಎಲ್​ಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಧೋನಿ; ಆದ್ರೆ ಭಾರತ ಪರ ಅಲ್ಲ!

ಮಗಳ ಮುದ್ದು ವೀಡಿಯೋಗಳನ್ನ ಶೇರ್ ಮಾಡುತ್ತಾ, ನಾನು ನನ್ನ ಕನಸು ಅನ್ನುತ್ತಾ ವ್ಯಕ್ತಿಯೊಬ್ಬ ತನ್ನ ಕುಟುಂಬಕ್ಕೆ ಕೊಡಬೇಕಾದ ಮಹತ್ವದ ಬಗ್ಗೆ ಹೇಳುತ್ತಾ ಬಂದಿರೋ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್. ಸೇನೆ ಕೊಟ್ಟ ಗೌರವವನ್ನ ಬರೀ ಧಿರಿಸಿಗಷ್ಟೇ ಸೀಮಿತಗೊಳಿಸದೆ ಗಡಿಗಳಿಗೆ ಹೋಗಿ ಸೈನಿಕರ ಮಧ್ಯೆ ನಿಂತು ಮೆಸೇಜ್ ಕೊಟ್ಟ ಸಮಾಜಮುಖಿ ಸೆಲೆಬ್ರಿಟಿ. ಜಾಹೀರಾತುವೊಂದರಲ್ಲಿ ವಿಷ್ಣುವಿನ ದಶಾವತರದ ಕ್ರಿಯಾಶೀಲ ಚಿತ್ರಕ್ಕೆ ವಿವಾದ ಸ್ಫೋಟವಾಗಿದ್ದು ನಿಮಗೆಲ್ಲಾ ನೆನಪಿರಬಹುದು. ವಿವಾದ ಏನೇ ಇರಲಿ, ವಿಷ್ಣುವಿನ ಆ ಸಾಂದರ್ಭಿಕ ಚಿತ್ರದ ಹೊರತಾಗಿಯೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದಶಾವತರ ತೋರಿದ ಶಕ್ತಿ ಎಂದು ಕರೆದರೆ ವಾಸ್ತವಕ್ಕೇನೂ ಮೋಸವಿಲ್ಲ ಬಿಡಿ.

ಕಳೆದ ವಿಶ್ವಕಪ್​ನ ನ್ಯೂಜಿಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯದ ರೋಚಕ ಘಟ್ಟದಲ್ಲಿ ರನೌಟ್ ಆಗಿದ್ದರ ಬಗ್ಗೆ ಧೋನಿ ಬೇಸರಿಸಿಕೊಂಡಿದ್ದರು. ಕಣ್ಣುಮಿಟುಕಿಸೋದಕ್ಕೆ ‘ಪಾಯಿಂಟ್ 10 ಸೆಕೆಂಡ್’ ಬೇಕು ಅನ್ನೋದು ಸತ್ಯವಾದ್ರೆ , ದೋನಿ ‘ಪಾಯಿಂಟ್ 9 ಸೆಕೆಂಡ್’ನಲ್ಲೇ ಸ್ಟಂಪೌಟ್ ಮಾಡಿದ್ರು ಅನ್ನೋದು ಕ್ರಿಕೆಟ್ನ ರೋಚಕ ಇತಿಹಾಸ. ಇಂತಹ ಶರವೇಗದ ಧೋನಿ ಕಳೆದುಹೋದ್ರಾ? ಇದೇ ಕಾರಣಕ್ಕೆ ಪದೇ ಪದೇ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯ ನೆನೆದು ಕುಸಿದುಹೋದ್ರಾ? ಹೀಗಾಗೇ ಸುದೀರ್ಘ ಅವಧಿಗೆ ಯಾವುದೇ ಪಂದ್ಯವಾಡದೆ ದೂರವೇ ಉಳಿದುಬಿಟ್ರಾ?

ಈ ಎಲ್ಲಾ ಪ್ರಶ್ನೆಗಳು ಮೂಡಿರುವಾಗಲೇ ಬಿಸಿಸಿಐ ತನ್ನ ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಧೋನಿಯನ್ನ ಕೈಬಿಡ್ತು. ಅಲ್ಲಿಗೆ ಮಹೇಂದ್ರ ಸಿಂಗ್ ದೋನಿ ಅನ್ನೋ ಮಹೋನ್ನತ ಯುಗವೊಂದು ಭಾರತೀಯ ಕ್ರಿಕೆಟ್​​ನಿಂದ ಮರೆಯಾಗೋ ಕಾಲ ಸನ್ನಿಹಿತವಾದಂತಿದೆ. ದುಡಿದಷ್ಟೂ ದುಡಿತವಿದೆ ಎಂದು ತೋರಿಸಿರೋ ಧೋನಿಯೀಗ ನಿವೃತ್ತಿಯ ಅಘೋಷಿತ ಗುಡ್ಡದ ಮೇಲಿದ್ದಾರೆ. ಗುಡ್ಡದ ಈ ತುದಿ ಮತ್ತೊಂದು ಆರಂಭ ಅನ್ನೋದು ಅಷ್ಟೇ ನಿಜ.(ವಿಶೇಷ ಲೇಖನ: ಮಧು ಎಂ ಉತ್ತುವಳ್ಳಿ)

First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ