ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಚೊಚ್ಚಲ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಕಿರೀಟ ನ್ಯೂಜಿಲೆಂಡ್ ಮುಡಿಗೇರಿಸಿಕೊಂಡಿದೆ. ಇದರೊಂದಿಗೆ 8 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಟೀಮ್ ಇಂಡಿಯಾ ಕನಸು ಭಗ್ನಗೊಂಡಿದೆ. ಟೆಸ್ಟ್ ಚಾಂಪಿಯನ್ಶಿಪ್ ಆರಂಭಕ್ಕೂ ಮುನ್ನ ಭಾರತ ಚಾಂಪಿಯನ್ ಪಟ್ಟಕ್ಕೇರಲಿದೆ ಎನ್ನಲಾಗಿತ್ತು. ಆದರೆ ಎಲ್ಲರ ಲೆಕ್ಕಚಾರವನ್ನು ತಲೆಕೆಳಗಾಗಿಸಿ ನಾವೇ ಬೆಸ್ಟ್ ಟೆಸ್ಟ್ ಕ್ರಿಕೆಟಿಗರು ಎಂಬುದನ್ನು ಮತ್ತೊಮ್ಮೆ ನ್ಯೂಜಿಲೆಂಡ್ ಸಾಬೀತುಪಡಿಸಿದೆ.
ಮಳೆಯ ಕಾರಣ ಒಂದು ದಿನ ವಿಳಂಬವಾಗಿ ಆರಂಭವಾಗಿದ್ದ ಈ ಪಂದ್ಯದಲ್ಲಿ ಭಾರತ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿತ್ತು. ಆದರೆ ಟಾಸ್ ಗೆಲ್ಲುವ ಮೂಲಕ ನ್ಯೂಜಿಲೆಂಡ್ ಒಂದು ಹಂತವನ್ನು ಅದಾಗಲೇ ಗೆದ್ದುಕೊಂಡಿತ್ತು. ಏಕೆಂದರೆ ಮೀಸಲು ದಿನದಾಟವಿದ್ದ ಈ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರವಹಿಸಲಿದೆ ಎಂಬುದು ಮೊದಲೇ ಊಹಿಸಲಾಗಿತ್ತು. ಅದರಂತೆ ಟಾಸ್ ಸೋಲು ಟೀಮ್ ಇಂಡಿಯಾ ಪಾಲಿಗೆ ಮುಳುವಾಯ್ತು ಎನ್ನಬಹುದು.
ಇದಾಗ್ಯೂ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡದಿರುವುದು ಭಾರತದ ಸೋಲಿಗೆ ಪ್ರಮುಖ ಕಾರಣವಾಯ್ತು. ಹೌದು, ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಅರ್ಧಶತಕ ಬಾರಿಸಿರಲಿಲ್ಲ. ಅದರಲ್ಲೂ ರಹಾನೆ 49 ಹಾಗೂ ಕೊಹ್ಲಿ 44 ರನ್ ಬಾರಿಸಿರುವುದು ಗರಿಷ್ಠ ವೈಯುಕ್ತಿಕ ಮೊತ್ತ. ಇದರ ಹೊರತಾಗಿ ಟೀಮ್ ಇಂಡಿಯಾದ ಉಳಿದ ಬ್ಯಾಟ್ಸ್ಮನ್ಗಳು 40 ರ ಗಡಿದಾಟಿರಲಿಲ್ಲ. ಪರಿಣಾಮ ಭಾರತ ಮೊದಲ ಇನಿಂಗ್ಸ್ನಲ್ಲಿ ಕೇವಲ 217 ರನ್ಗಳಿಗೆ ಸರ್ವಪತನ ಕಂಡಿತು.
ಇದಾಗ್ಯೂ ನ್ಯೂಜಿಲೆಂಡ್ ತಂಡವನ್ನು 249 ರನ್ಗಳಿಗೆ ಕಟ್ಟಿಹಾಕುವ ಮೂಲಕ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಮಿಂಚಿದ್ದರು. ಹೀಗಾಗಿ ಭಾರತಕ್ಕೆ ಗೆಲ್ಲುವ ಅಥವಾ ಡ್ರಾ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ ಸಂಪೂರ್ಣ ಸೋಲೊಪ್ಪಿಕೊಂಡಿತು ಎನ್ನಬಹುದು. ಏಕೆಂದರೆ 2ನೇ ಇನಿಂಗ್ಸ್ನಲ್ಲಿ ಭಾರತದ ಪರ ಕೊಂಚ ಪ್ರತಿರೋಧ ತೋರಿದ್ದು ರಿಷಭ್ ಪಂತ್ ಮಾತ್ರ. 88 ಎಸೆತಗಳನ್ನು ಎದುರಿಸಿದ್ದ ಪಂತ್ 41 ರನ್ ಬಾರಿಸಿದ್ದು ಗರಿಷ್ಠ ಮೊತ್ತ. ಇದರ ಹೊರತಾಗಿ 2ನೇ ಗರಿಷ್ಠ ಮೊತ್ತ ರೋಹಿತ್ ಶರ್ಮಾ ಬಾರಿಸಿದ 30 ರನ್ ಮಾತ್ರ. ಉಳಿದ ಯಾವೊಬ್ಬ ಬ್ಯಾಟ್ಸ್ಮನ್ಗಳ ವೈಯುಕ್ತಕ 20 ರ ಗಡಿದಾಟಿರಲಿಲ್ಲ ಎಂಬುದೇ ಅಚ್ಚರಿ.
ಕೇವಲ 170 ರನ್ಗಳಿಗೆ ಸರ್ವಪತನ ಕಾಣುವ ಮೂಲಕ ಡ್ರಾ ಮಾಡಿಕೊಳ್ಳುವ ಅವಕಾಶವನ್ನು ಟೀಮ್ ಇಂಡಿಯಾ ಕೈ ಚೆಲ್ಲಿಕೊಂಡಿತು. ಅಂದರೆ ಎರಡು ಇನಿಂಗ್ಸ್ಗಳಲ್ಲಿ ಭಾರತದ ಯಾವೊಬ್ಬ ಬ್ಯಾಟ್ಸ್ಮನ್ಗೂ ಅರ್ಧಶತಕ ಸಹ ಬಾರಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ. ಇತ್ತ 53 ಓವರ್ಗಳಲ್ಲಿ 139 ರನ್ಗಳ ಗುರಿ ಪಡೆದ ನ್ಯೂಜಿಲೆಂಡ್ ಎಚ್ಚರಿಕೆಯ ಆಟದೊಂದಿಗೆ ಗುರಿ ಮುಟ್ಟಿತು.
ಅತ್ತ ಮೀಸಲು ದಿನದಾಟದಲ್ಲಿ 8 ವಿಕೆಟ್ ಇದ್ದರೂ ಭಾರತದ ಯಾವೊಬ್ಬ ಬ್ಯಾಟ್ಸ್ಮನ್ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡದೇ ಇರುವುದು ಸೋಲಿಗೆ ಪ್ರಮುಖ ಕಾರಣವಾಯಿತು. ಒಂದು ವೇಳೆ ಭಾರತ ಮೀಸಲು ದಿನದಾಟದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡಾಗ ಎಚ್ಚರಿಕೆಯ ಆಟ ಪ್ರದರ್ಶಿಸಿದ್ದರೆ ಡ್ರಾ ಮಾಡಿಕೊಳ್ಳುವ ಉತ್ತಮ ಅವಕಾಶವಿತ್ತು. ಆದರೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಟೆಸ್ಟ್ ಕ್ರಿಕೆಟನ್ನೇ ಮರೆತಂತೆ ಬ್ಯಾಟಿಂಗ್ ಮಾಡಿದ್ದೇ ಸೋಲಿಗೆ ಪ್ರಮುಖ ಕಾರಣವಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ