ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹಲವು ವರ್ಷಗಳ ನಂತರ ಅದ್ಬುತವಾದ ಗೆಲುವು ದಾಖಲಿಸಿದೆ. ಈ ಮೂಲಕ ವಿರಾಟ್ ಕೊಹ್ಲಿ ಪಡೆ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಆದರೆ, ಈ ಮುನ್ನಡೆಯನ್ನು ಕಾಯ್ದುಕೊಂಡು ಸರಣಿಯನ್ನು ವಶಪಡಿಸಿಕೊಳ್ಳಲು ಲೀಡ್ಸ್ ಅಂಗಳದಲ್ಲಿ ಆಗಸ್ಟ್ .25ರಿಂದ ಆರಂಭವಾಗುವ 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅಗತ್ಯವಾಗಿದೆ. ಆದರೆ, ಮೊದಲ ಎರಡೂ ಟೆಸ್ಟ್ ಪಂದ್ಯದಲ್ಲಿ ಭಾರತ ಸ್ಪಿನ್ ಬೌಲಿಂಗ್ ಅಷ್ಟೇನು ಪರಿಣಾಮಕಾರಿಯಾಗಿರಲಿಲ್ಲ. ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ವಿಕೆಟ್ ಗಗನ ಕುಸುಮವಾಗಿದೆ. ಹೀಗಾಗಿ 3ನೇ ಪಂದ್ಯದಲ್ಲಿ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಕಣಕ್ಕಿಳಿಯುತ್ತಾರಾ? ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ನಡುವೆ, ಅವರು ಕಣಕ್ಕಿಳಿಯಲೇಬೇಕು ಎನ್ನುತ್ತಿದ್ದಾರೆ ಹಲವು ತಜ್ಞರು.
ಮುಂದಿನ ಪಂದ್ಯಕ್ಕೆ ಅಶ್ವಿನ್ ಅನಿವಾರ್ಯತೆ ಇದೆಯೇ?
ರವಿಚಂದ್ರನ್ ಅಶ್ವಿನ್ ಭಾರತ ಮಾತ್ರವಲ್ಲ ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್ಗಳಲ್ಲಿ ಒಬ್ಬರು. ಅವರು ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದಕ್ಕೂ ಮೊದಲು ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡದ ಐತಿಹಾಸಿಕ ಸರಣಿ ಗೆಲುವಿನಲ್ಲಿ ನಿರ್ಣಾಯಕರಾಗಿದ್ದರು.
ವೇಗದ ಬೌಲರ್ಗಳಿಗೆ ನೆರವಾಗುವ ಪಿಚ್‌ನಲ್ಲಿ ಪಿಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಕೆಲವೇ ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಟೆಸ್ಟ್ ಸರಣಿ ಆರಂಭವಾಗುವ ಮೊದಲು, ಕೌಂಟಿಯ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಸರ್ರೆ ಪರ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದರು. ಇದಲ್ಲದೆ, ವಿದೇಶಿ ನೆಲದಲ್ಲಿ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲೂ ಅಶ್ವಿನ್ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಪ್ರಸ್ತುತ ಉತ್ತಮ ಫಾರ್ಮ್ನಲ್ಲೂ ಇದ್ದಾರೆ.
ಅಶ್ವಿನ್ ಮೇಲಿರುವ ಸಾಮಾನ್ಯ ಆರೋಪ ಎಂದರೆ, ಅವರು ಭಾರತದ ನೆಲದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಇಲ್ಲಿ ಅವರ ದಾಖಲೆ ಅದ್ಭುತವಾಗಿದೆ. ಆದರೆ, ವಿದೇಶಿ ಪಿಚ್‌ನಲ್ಲಿ ಅವರ ದಾಖಲೆ ಕಳಪೆಯಾಗಿದೆ ಎಂಬುದು. ಇದು ಭಾಗಶಃ ಸತ್ಯವೂ ಹೌದು. ಅಶ್ವಿನ್ ಇಂಗ್ಲೆಂಡ್‌ನಲ್ಲಿ ಆಡಿದ 6 ಟೆಸ್ಟ್ ಪಂದ್ಯಗಳಲ್ಲಿ 31 ರ ಸರಾಸರಿಯಲ್ಲಿ 12 ವಿಕೆಟ್ ಪಡೆದಿದ್ದರೆ, ರವೀಂದ್ರ ಜಡೇಜಾ 7 ಟೆಸ್ಟ್‌ಗಳಲ್ಲಿ 48ರ ಸರಾಸರಿಯಲ್ಲಿ 16 ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಜೊತೆ ಹೋಲಿಸಿದರೆ, ಜಡೇಜಾ ಹೆಚ್ಚು ದುಬಾರಿಯಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಆದರೆ, ರವೀಂದ್ರ ಜಡೇಜಾ ಅಶ್ವಿನ್ಗಿಂತ ಅತ್ಯುತ್ತಮ ಬಾಟ್ಸ್ಮನ್ ಮತ್ತು ಚಾಣಾಕ್ಷ ಫೀಲ್ಡರ್ ಎಂಬ ಕಾರಣಕ್ಕೆ ತಂಡದ ಅಂತಿಮ 11ರ ಬಳಗದಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಇದನ್ನೂ ಓದಿ: India vs England :ಪ್ರತಿ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮ್ಯಾಜಿಕ್..!
ಈ ನಡುವೆ, ಸ್ಪಿನ್ ಎದುರು ಆಂಗ್ಲರ ಸ್ಟ್ರೈಕ್ರೇಟ್ ಅಷ್ಟೇನು ಉತ್ತಮವಾಗಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಡಲೇಬೇಕು. ಆಂಗ್ಲರ ನೆಲದಲ್ಲಿ ಇತ್ತೀಚೆಗೆ ಕೌಂಟಿ ಕ್ರಿಕೆಟ್ನಲ್ಲಿ ಅಶ್ವಿನ್ ಉತ್ತಮ ಸಾಧನೆ ಮಾಡಿದ್ದಾರೆ. ಹಾಗೆಂದು ಜಡೇಜಾ ಅವರಿಗೆ ವಿಶ್ರಾಂತಿ ನೀಡಿ ಅಶ್ವಿನ್ ಅವರನ್ನು ಆಡಸಬೇಕು ಎಂದೇನಿಲ್ಲ. ಆದರೆ, ಮೂರು ಜನ ವೇಗದ ಬೌಲರ್ ಮತ್ತು ಇಬ್ಬರು ಸ್ಪಿನ್ನರ್ಗಳ ಜೊತೆಗೆ ಕಣಕ್ಕಿಳಿಯುವುದು ಉತ್ತಮ ಆಯ್ಕೆಯಾಗಿರುತ್ತದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾಗನ್, ಭಾರತದ ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ ಸೇರಿದಂತೆ ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ