ಕಾನಪುರ್, ನ. 28: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ (India vs New Zealand First Test Match) ಬಹಳ ಕುತೂಹಲ ಹಂತದಲ್ಲಿದೆ. ನಾಲ್ಕನೇ ದಿನದಂದು ಮೊದಲ ಸೆಷನ್ ನ್ಯೂಜಿಲೆಂಡ್ ತಂಡಕ್ಕೆ ಸೇರಿದರೆ, ಎರಡನೇ ಸೆಷನ್ನಿಂದ ಟೀಮ್ ಇಂಡಿಯಾ ಬ್ಯಾಟುಗಾರರು ಭರ್ಜರಿ ಕಂಬ್ಯಾಕ್ ಮಾಡಿದರು. ಶ್ರೇಯಸ್ ಅಯ್ಯರ್, ಆರ್ ಅಶ್ವಿನ್, ವೃದ್ಧಿಮಾನ್ ಸಾಹಾ ಪ್ರತಿಹೋರಾಟ ನಡೆಸಿ ಭಾರತದ ಇನ್ನಿಂಗ್ಸ್ಗೆ ಜೀವ ತುಂಬಿದರು. ಮೊನ್ನೆ ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿತ್ತು. ನಿನ್ನೆ ಮೂರನೇ ದಿನ ನ್ಯೂಜಿಲೆಂಡ್ ಅದೇ ಲಯದಲ್ಲಿ ಬ್ಯಾಟ್ ಮಾಡಿದ್ದರೆ ದೊಡ್ಡ ಮೊತ್ತ ಕಲೆಹಾಕುವ ಸಾಧ್ಯತೆ ಇತ್ತು. ಆದರೆ, ಅಕ್ಷರ್ ಪಟೇಲ್ ಅಮೋಘ ಬೌಲಿಂಗ್ ಕಿವೀಸ್ ತಂಡದ ಬ್ಯಾಟಿಂಗನ್ನು ಹಳಿತಪ್ಪಿಸಿತು. ನಿನ್ನೆ ಆರ್ ಅಶ್ವಿನ್ ಮೂರು ವಿಕೆಟ್ ಪಡೆದರಾದರೂ ಅಕ್ಷರ್ ಪಟೇಲ್ (Axar Patel) ನಿಜವಾದ ಡೆಮಾಲಿಶನ್ ಮ್ಯಾನ್ ಎನಿಸಿದರು.
ನಿನ್ನೆ ದಿನದಾಟದ ಬಳಿಕ ಆಟಗಾರರ ಮಧ್ಯೆ ನಡೆದ ಕ್ಯಾಷುವಲ್ ಸಂವಾದದಲ್ಲಿ ಆರ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ಶ್ರೀಕರ್ ಭರತ್ ಮಾತನಾಡಿದರು. ಈ ವೇಳೆ, ಆರ್ ಅಶ್ವಿನ್ ಅವರು ರಾಸ್ ಟೇಲರ್ ಅವರನ್ನ ಅಕ್ಷರ್ ಪಟೇಲ್ ಔಟ್ ಮಾಡಿದ ಎಸೆತವನ್ನು ಉಲ್ಲೇಖಿಸಿದರು. ತಮ್ಮ ಬೌಲಿಂಗ್ನಲ್ಲಿ ಯಾಕೆ ಬ್ಯಾಟುಗಾರ ಎಡ್ಮ್ ಮಾಡೋದಿಲ್ಲ ಎಂದು ಕೇಳಿದರು. ಅದಕ್ಕೆ ಒಂದು ಟಿಪ್ಸ್ ಕೂಡ ಕೊಟ್ಟ ಅಕ್ಷರ್ ಪಟೇಲ್, ಕಡಿಮೆ ಸ್ಪಿನ್ ಕೊಡಬೇಕೆಂದು ಸಲಹೆ ನೀಡಿದರು.
“ಇವತ್ತು ನನ್ನ ಮನಸಿಗೆ ಇಷ್ಟವಾದ ಆ ವಿಷಯದ ಬಗ್ಗೆ ಕೇಳಬೇಕೆನಿಸುತ್ತಿದೆ. ರಾಸ್ ಟೇಲರ್ ಅವರು ಔಟ್ ಆದ ಆ ಬಾಲ್ ಸ್ವಲ್ಪ ಮಾತ್ರವೇ ತಿರುಗಿತ್ತು. ಆದರೆ ನಾನು ಸ್ಪಿನ್ ಮಾಡಿದರೆ ಅದು ಬ್ಯಾಟ್ನಿಂದ ಆಚೆ ಹೋಗುತ್ತದೆ. ನಿಮ್ಮ ಬಾಲ್ನಲ್ಲಿ ಎಡ್ಜ್ ಆಗುತ್ತದೆ. ಇದು ಹೇಗೆ ಎಂದು ತಿಳಿಯಬೇಕೆನಿಸುತ್ತಿದೆ. ನನ್ನ ಬಾಲ್ನಲ್ಲಿ ಬ್ಯಾಟರ್ ಬ್ಯಾಟಿಂದ ಚೆಂಡು ಎಡ್ಜ್ ಆಗಿ ವಿಕೆಟ್ ಕೀಪರ್ ಗ್ಲೌಸ್ಗೆ ಬೀಳಬೇಕು” ಎಂದು ಹಗುರವಾಗಿ ನಡೆದ ಸಂಭಾಷಣೆಯಲ್ಲಿ ಅಶ್ವಿನ್ ಕೇಳುತ್ತಾರೆ.
ಅದಕ್ಕೆ ಅಕ್ಷರ್ ಪಟೇಲ್, “ನೀವು ಚೆಂಡನ್ನ ತುಂಬಾ ಸ್ಪಿನ್ ಮಾಡುತ್ತೀರಿ. ಅದಕ್ಕೆ ಅದು ಬ್ಯಾಟ್ ಆಚೆ ಸ್ಪಿನ್ ಆಗಿ ಹೋಗಿಬಿಡುತ್ತದೆ. ನನ್ನ ಬಾಲ್ ಹೆಚ್ಚು ಸ್ಪಿನ್ ಆಗೋದಿಲ್ಲ. ಅದಕ್ಕೆ ಎಡ್ಜ್ ಆಗುತ್ತದೆ” ಎಂದು ತಿಳಿಸುತ್ತಾರೆ.
ಇದನ್ನೂ ಓದಿ: Pakistan- ಭಾರತೀಯರು ಹಿಂದೆಂದೂ ಆ ರೀತಿ ಇರಲಿಲ್ಲ, ಅಂದು ಆ ಸ್ಥಿತಿ ಕಂಡು ಅಚ್ಚರಿ ಆಯಿತು: ಇಂಜಮಮ್
ನಿನ್ನೆ ದೊಡ್ಡ ಮೊತ್ತ ಕಲೆಹಾಕುವತ್ತ ಸಾಗುತ್ತಿದ್ದ ನ್ಯೂಜಿಲೆಂಡ್ ತಂಡದ ಪತನಕ್ಕೆ ಮೊದಲ ಅಡಿಪಾಯ ಹಾಕಿದ್ದು ಅಶ್ವಿನ್ ಅವರೇ. ವಿಲ್ ಯಂಗ್ ಮತ್ತು ಟಾಮ್ ಲಾತಮ್ ಅವರ 151 ರನ್ ಓಪನಿಂಗ್ ಪಾರ್ಟ್ನರ್ಶಿಪ್ ಅನ್ನು ಅಶ್ವಿನ್ ಮುರಿದರು. ಅದಾದ ಬಳಿಕ ಕಿವೀಸ್ ಪಡೆ ಪತನ ಆರಂಭವಾಯಿತು. ಅಕ್ಷರ್ ಪಟೇಲ್ 5 ವಿಕೆಟ್ ಪಡೆದು ಕಿವೀಸ್ ಬ್ಯಾಟಿಂಗ್ನ ಬೆನ್ನೆಲುಬು ಮುರಿದರು. ನ್ಯೂಜಿಲೆಂಡ್ ಅಂತಿಮವಾಗಿ 296 ರನ್ಗೆ ಆಲೌಟ್ ಆಯಿತು. ಭಾರತಕ್ಕೆ 49 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ದೊರೆಯಿತು.
ಇವತ್ತು ನಾಲ್ಕನೇ ದಿನದಾಟದಲ್ಲಿ ಭಾರತ 51 ರನ್ಗೆ 5 ವಿಕೆಟ್ ಕಳೆದುಕೊಂಡಿತು. ಆದರೆ, ಶ್ರೇಯಸ್ ಅಯ್ಯರ್, ಆರ್ ಅಶ್ವಿನ್, ವೃದ್ಧಿಮಾನ್ ಸಾಹಾ ಮತ್ತು ಅಕ್ಷರ್ ಪಟೇಲ್ ಅವರು ಉತ್ತಮ ಬ್ಯಾಟಿಂಗ್ ಮಾಡಿ ಭಾರತಕ್ಕೆ ಉತ್ತಮ ಮೊತ್ತ ಸಿಗುವಂತೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ