ಪೊಲಾರ್ಡ್ ಆರ್ಭಟ, ಬ್ರಾವೊ ಮಿಂಚಿಂಗ್: ಸತತ ಸೋಲುಗಳ ಬಳಿಕ ಗೆದ್ದು ಬೀಗಿದ ವೆಸ್ಟ್ ಇಂಡೀಸ್

ಇದೀಗ ಈ ಸರಣಿಯ ಅಂತಿಮ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್ 8 ವಿಕೆಟ್​ಗಳಿಂದ ಗೆದ್ದು ಬೀಗಿತ್ತು. ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 16 ರನ್​ಗಳಿಂದ ಜಯ ಸಾಧಿಸಿತ್ತು.

Kieron Pollard-Dwayne Bravo

Kieron Pollard-Dwayne Bravo

 • Share this:
  ವೆಸ್ಟ್ ಇಂಡೀಸ್​ನ ಗ್ರೆನೆಡಾದ ಸೇಂಟ್ ಜಾರ್ಜ್ಸ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ದ ನಾಲ್ಕನೇ ಟಿ20 ಪಂದ್ಯದಲ್ಲಿ ವಿಂಡೀಸ್ ತಂಡ 21 ರನ್ ಜಯ ಗಳಿಸಿದೆ. ಈ ಜಯದೊಂದಿಗೆ ವೆಸ್ಟ್ ಇಂಡೀಸ್ ಐದು ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿತು.

  ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ನಡೆಸಿದ್ದ ದಕ್ಷಿಣ ಆಫ್ರಿಕಾ ಬೌಲರುಗಳು ಮೊದಲ 10 ಓವರ್​ಗಳಲ್ಲಿ ಕೇವಲ 67 ರನ್​ ನೀಡಿ 3 ವಿಕೆಟ್ ಉರುಳಿಸಿದ್ದರು. ಆದರೆ ದ್ವಿತೀಯ ಹತ್ತು ಓವರ್​ಗಳಲ್ಲಿ ಇಡೀ ಪಂದ್ಯದ ಗತಿ ಬದಲಾಯಿತು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೀರನ್ ಪೊಲಾರ್ಡ್ ಕೊನೆಯ ಓವರ್​ಗಳಲ್ಲಿ ಆರ್ಭಟಿಸಿದರು. ಅದರಂತೆ 5 ಸಿಕ್ಸರ್, 2 ಬೌಂಡರಿಗಳೊಂದಿಗೆ ಕೇವಲ 25 ಎಸೆತಗಳಲ್ಲಿ 51 ರನ್ ಚಚ್ಚಿದರು. ಪರಿಣಾಮ ನಿಗದಿತ 20 ಓವರ್​ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ತಂಡದ ಮೊತ್ತ 6 ವಿಕೆಟ್ ನಷ್ಟಕ್ಕೆ 167 ಕ್ಕೆ ಬಂದು ನಿಂತಿತು.

  ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಡಿಕಾಕ್ 2 ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿದರು. ಅಲ್ಲದೆ 43 ಎಸೆತಗಳಲ್ಲಿ 60 ರನ್ ಬಾರಿಸಿ ಅಂತಿಮವಾಗಿ ಬ್ರಾವೊಗೆ ವಿಕೆಟ್ ಒಪ್ಪಿಸಿದರು. ಆದರೆ ಉಳಿದ ಯಾವುದೇ ಬ್ಯಾಟ್ಸ್​ಮನ್​ಗಳು ವಿಂಡೀಸ್ ಬೌಲರುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು.

  ಇತ್ತ ಬೌಲಿಂಗ್​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಕೆರಿಬಿಯನ್ನರು ಅಂತಿಮವಾಗಿ ದಕ್ಷಿಣ ಆಫ್ರಿಕಾವನ್ನು 146 ರನ್​ಗಳಿಗೆ ನಿಯಂತ್ರಿಸಿ 21 ರನ್​ಗಳ ಜಯ ಸಾಧಿಸಿದರು. ವೆಸ್ಟ್ ಇಂಡೀಸ್ ಪರ ಡ್ವೇನ್ ಬ್ರಾವೊ 4 ಓವರ್​ನಲ್ಲಿ ಕೇವಲ 19 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಆಂಡ್ರೆ ರಸೆಲ್ 2 ವಿಕೆಟ್ ಕಬಳಿಸಿ ಮಿಂಚಿದರು.

  ಇದೀಗ ಈ ಸರಣಿಯ ಅಂತಿಮ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್ 8 ವಿಕೆಟ್​ಗಳಿಂದ ಗೆದ್ದು ಬೀಗಿತ್ತು. ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 16 ರನ್​ಗಳಿಂದ ಜಯ ಸಾಧಿಸಿತ್ತು. ಹಾಗೆಯೇ ತೃತೀಯ ಪಂದ್ಯದಲ್ಲಿ ಕೇವಲ 1 ರನ್​ಗಳ ರೋಚಕ ಜಯವನ್ನು ದಕ್ಷಿಣ ಆಫ್ರಿಕಾ ತನ್ನದಾಗಿಸಿಕೊಂಡಿತ್ತು. ಇದೀಗ 4ನೇ ಪಂದ್ಯವನ್ನು 21 ರನ್​ಗಳಿಂದ ವೆಸ್ಟ್ ಇಂಡೀಸ್ ಗೆಲ್ಲುವ ಮೂಲಕ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. ಹೀಗಾಗಿ ಶನಿವಾರ ನಡೆಯಲಿರುವ ಕೊನೆಯ ಟಿ20 ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:zahir
  First published: