ಅಬುಧಾಬಿ, ಸೆ. 22: ವೆಸ್ಟ್ ಇಂಡೀಸ್ ತಂಡದ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ ಮಾರ್ಲನ್ ಸ್ಯಾಮುಯೆಲ್ಸ್ ಅವರು ಕ್ರಿಕೆಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದಾರೆ. ಯುಎಇಯಲ್ಲಿ ನಡೆಯುವ ಟಿ10 ಕ್ರಿಕೆಟ್ ಲೀಗ್ನ ನಿಯಮಾವಳಿಗಳನ್ನ ಉಲ್ಲಂಘಿಸಿದ ಆರೋಪದ ಮೇಲೆ ಸ್ಯಾಮುಯೆಲ್ಸ್ ಅವರಿಗೆ ಐಸಿಸಿ ನೋಟೀಸ್ ಜಾರಿ ಮಾಡಿದೆ. ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ನಡೆಸುವ ಈ ಪಂದ್ಯಾವಳಿಯ ನಾಲ್ಕು ನಿಯಮಾವಳಿಗಳನ್ನ ಸ್ಯಾಮುಯೆಲ್ಸ್ ಉಲ್ಲಂಘಿಸಿದ ಆರೋಪ ಇದೆ. ಸ್ಯಾಮುಯೆಲ್ಸ್ ಅವರು ಟೂರ್ನಿ ವೇಳೆ ತಮಗೆ ಲಭಿಸಿದ ಉಡುಗೊರೆ, ಹಣದ ಲಾಭ ಇತ್ಯಾದಿಗೆ ಸರಿಯಾದ ವಿವರ ಅಥವಾ ಸ್ವೀಕೃತಿ ನೀಡದೇ ಇರುವುದು ಒಂದು ಪ್ರಮುಖ ನಿಯಮ ಉಲ್ಲಂಘನೆಯಾಗಿದೆ. ಹಾಗೆಯೇ, ತನಿಖೆಗೆ ಸರಿಯಾಗಿ ಸಹಕಾರ ಕೊಡುತ್ತಿಲ್ಲವೆಂಬ ಆರೋಪವೂ ಇದೆ.
ಸ್ಯಾಮುಯೆಲ್ಸ್ ವಿರುದ್ಧ ಎದುರಾಗಿರುವ ಇಸಿಬಿಯ ನಿಯಮಾವಳಿಗಳ ಉಲ್ಲಂಘನೆ ಆರೋಪಗಳಿವು:
1) ಆಟಗಾರ ಅಥವಾ ಕ್ರೀಡೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಉಡುಗೊರೆ, ಪಾವತಿ, ಆತಿಥ್ಯ ಅಥವಾ ಇತರ ಯಾವುದೇ ಲಾಭವಾಗಲಿ ಪಡೆದಿದ್ದರೆ ಅದರ ವಿವರಣೆ ಅಥವಾ ಸ್ವೀಕೃತಿಯನ್ನು ನಿಗದಿತ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗೆ ಸಲ್ಲಿಸಲು ವಿಫಲರಾಗಿದ್ಧಾರೆಂಬ ಆರೋಪ.
2) 750 ಡಾಲರ್ಗೂ (ಸುಮಾರು 55 ಸಾವಿರ ರೂಪಾಯಿ) ಹೆಚ್ಚು ಬೆಲೆಯ ಆತಿಥ್ಯಕ್ಕೆ ಸರಿಯಾದ ಸ್ವೀಕೃತಿ ತೋರಿಸಲು ವಿಫಲರಾಗಿದ್ದಾರೆ.
3) ಭ್ರಷ್ಟಾಚಾರ ನಿಗ್ರಹ ಅಧಿಕಾರಿಯ ತನಿಖೆಗೆ ಸಹಕಾರ ಕೊಡುತ್ತಿಲ್ಲ.
4) ತನಿಖೆಗೆ ಸಂಬಂಧಿಸಿದ ಕೆಲ ಮಾಹಿತಿಯನ್ನ ಮುಚ್ಚಿಟ್ಟು ಅಧಿಕಾರಿಯ ತನಿಖೆಗೆ ಅಡ್ಡಿಯಾಗಿದ್ದು ಅಥವಾ ವಿಳಂಬಗೊಳ್ಳುವಂತೆ ಮಾಡಲಾಗಿದೆ.
ಇದನ್ನೂ ಓದಿ: KL Rahul Record- ಪಂದ್ಯ ಸೋತರೂ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದ ಕೆಎಲ್ ರಾಹುಲ್
ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಆಗಿದ್ದ 40 ವರ್ಷದ ಮಾರ್ಲನ್ ಸ್ಯಾಮುಯೆಲ್ಸ್ ಅವರಿಗೆ ಈ ನಾಲ್ಕು ಆರೋಪಗಳಿಗೆ ಉತ್ತರ ನೀಡಲು 14 ದಿನ ಕಾಲಾವಕಾಶ ಕೊಡಲಾಗಿದೆ. 2000ದಿಂದ 18 ವರ್ಷಗಳ ಕಾಲ ಅವರು ವೆಸ್ಟ್ ಇಂಡೀಸ್ ತಂಡದ ಪರ ಆಡಿದ್ಧಾರೆ. 71 ಟೆಸ್ಟ್ ಪಂದ್ಯ, ಇನ್ನೂರಕ್ಕೂ ಹೆಚ್ಚು ಏಕದಿ ಪಂದ್ಯ, 67 ಟಿ20 ಇಂಟರ್ನ್ಯಾಷನಲ್ ಪಂದ್ಯಗಳನ್ನ ಅವರು ಆಡಿದ್ದಾರೆ. ಈ ಮೂರೂ ಮಾದರಿ ಕ್ರಿಕೆಟ್ನಿಂದ ಅವರು 11 ಸಾವಿರಕ್ಕೂ ಹೆಚ್ಚು ರನ್ಗಳು ಹಾಗೂ 152 ವಿಕೆಟ್ಗಳನ್ನ ಸಂಪಾದಿಸಿದ್ದಾರೆ. ಅವರು ಅಬುಧಾಬಿಯಲ್ಲಿ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಟಿ10 ಕ್ರಿಕೆಟ್ ಲೀಗ್ನಲ್ಲಿ ಆಡುತ್ತಿದ್ದಾರೆ.
ಏನಿದು ಟಿ10 ಕ್ರಿಕೆಟ್ ಲೀಗ್?
ಇದು ಟೆನ್10 ಕ್ರಿಕೆಟ್ ಲೀಗ್ ಆಗಿದ್ದು ಟಿ ಟೆನ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನಿಂದ ಆಯೋಜಿಸಲಾಗುತ್ತಿದೆ. ಅಬುಧಾಬಿಯಲ್ಲಿ ನಡೆಯುವ ಈ ಚುಟುಕು ಕ್ರಿಕೆಟ್ ಲೀಗ್ಗೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಮಾನ್ಯತೆ ಇದೆ. ಇದು ಹತ್ತು ಹತ್ತು ಓವರ್ಗಳ ಪಂದ್ಯವಾಗಿದೆ. ಬಾಂಗ್ಲಾ ಟೈಗರ್ಸ್, ಡೆಲ್ಲಿ ಬುಲ್ಸ್, ಡೆಕನ್ ಗ್ಲೇಡಿಯೇಟರ್ಸ್, ಮರಾಠ ಅರೇಬಿಯನ್ಸ್, ನಾರ್ಥರ್ನ್ ವಾರಿಯರ್ಸ್, ಪುಣೆ ಡೆವಿಲ್ಸ್, ಖಲಂದರ್ಸ್, ಟೀಮ್ ಅಬುಧಾಬಿ ಹೀಗೆ ಎಂಟು ತಂಡಗಳು ಈ ವರ್ಷ ಆಡಿವೆ. ಪಾಕಿಸ್ತಾನವೂ ಸೇರಿ ವಿಶ್ವದ ಪ್ರಮುಖ ಕ್ರಿಕೆಟ್ ದೇಶಗಳ ಆಟಗಾರರು ಈ ಲೀಗ್ನಲ್ಲಿ ಪಾಲ್ಗೊಳ್ಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ