Manoj Tiwary: ರಣಜಿ ಪಂದ್ಯಾವಳಿಯಲ್ಲಿ ಆಡಲಿರುವ ಕ್ರೀಡಾಮಂತ್ರಿ ಮನೋಜ್ ತಿವಾರಿ

Ranji Trophy 2022: ರಣಜಿ ಟ್ರೋಫಿ ಪಂದ್ಯಾವಳಿಗೆ ನಿನ್ನೆ ಘೋಷಿಸಲಾದ ಪಶ್ಚಿಮ ಬಂಗಾಳದ 21 ಮಂದಿ ತಂಡದಲ್ಲಿ ಕ್ರೀಡಾ ಸಚಿವ ಮನೋಜ್ ತಿವಾರಿ ಸ್ಥಾನ ಪಡೆದಿದ್ದಾರೆ. 36 ವರ್ಷದ ತಿವಾರಿ ಕ್ರಿಕೆಟ್ನಲ್ಲಿ ಸಕ್ರಿಯವಾಗಿರುವಾಗಲೇ ಚುನಾವಣೆಯಲ್ಲಿ ನಿಂತು ಸಚಿವರಾಗಿದ್ಧಾರೆ.

ಮನೋಜ್ ತಿವಾರಿ

ಮನೋಜ್ ತಿವಾರಿ

 • Share this:
  ಕೋಲ್ಕತಾ: ಕ್ರಿಕೆಟಿಗರಾಗಿ ಪಶ್ಚಿಮ ಬಂಗಾಳದ ಕ್ರೀಡಾಸಚಿವರಾಗಿ ಇತಿಹಾಸ ಬರೆದಿದ್ದ ಮನೋಜ್ ತಿವಾರಿ ಇದೀಗ ತಮ್ಮ ರಾಜ್ಯದ ರಣಜಿ ತಂಡದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಈ ಋತುವಿನ ರಣಜಿ ಪಂದ್ಯಾವಳಿಗೆ ನಿನ್ನೆ ಘೋಷಿಸಲಾದ ಪಶ್ಚಿಮ ಬಂಗಾಳ ತಂಡದ 21 ಮಂದಿ ತಂಡದಲ್ಲಿ ಮನೋಜ್ ತಿವಾರಿ ಸ್ಥಾನ ಪಡೆದಿದ್ದಾರೆ.

  ಜನವರಿ 13ರಂದು ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಕೋವಿಡ್​ನಿಂದ ಬಾಧಿತವಾಗಿರುವ ಪಶ್ಚಿಮ ಬಂಗಾಳ ತಂಡವನ್ನು ಅಭಿಮನ್ಯು ಈಶ್ವರನ್ ಅವರು ಮುನ್ನಡೆಸಲಿದ್ದಾರೆ. ಮನೋಜ್ ತಿವಾರಿ ಅವರು 21 ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮನೋಜ್ ತಿವಾರಿ ಕಳೆದ ಸೀಸನ್​ನ ರಣಜಿ ಪಂದ್ಯಾವಳಿಯಲ್ಲೂ ಆಡಿದ್ದರು. ಅಂತಿಮ ತಂಡದಲ್ಲಿ ಅವರು ಸ್ಥಾನ ಪಡೆಯಲು ಸಫಲವಾದರೆ ಹಾಲಿ ಕ್ರೀಡಾಮಂತ್ರಿಯೊಬ್ಬರು ರಣಜಿ ಟ್ರೋಫಿ ಆಡಿದ ಹೊಸ ಇತಿಹಾಸ ಪುಟ ತೆರೆದುಕೊಳ್ಳುತ್ತದೆ.

  ಮನೋಜ್ ತಿವಾರಿ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದಾಗಲೇ ರಾಜಕಾರಣಕ್ಕೆ ಧುಮುಕಿ ಕಳೆದ ವರ್ಷ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಡಪೆಯಾಗಿದ್ದರು. ಅಲ್ಲದೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಬಪುರ್ ಕ್ಷೇತ್ರದಲ್ಲಿ ಟಿಎಂಸಿ ಟಿಕೆಟ್​ನಲ್ಲಿ ಸ್ಪರ್ಧಿಸಿ ಗೆಲುವನ್ನೂ ಸಾಧಿಸಿದ್ದರು. ಸಚಿವರಾಗುವ ಮುನ್ನವಷ್ಟೇ ಅವರು ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳನ್ನ ಆಡಿದ್ದರು.

  16 ವರ್ಷ ಕಾಲ ದೇಶೀಯ ಕ್ರಿಕೆಟ್​ನಲ್ಲಿ ಆಡಿರುವ ಮನೋಜ್ ತಿವಾರಿ 125 ಪ್ರಥಮ ದರ್ಜೆ ಪಂದ್ಯಗಳನ್ನ ಆಡಿ 8965 ರನ್​ಗಳನ್ನ ಗಳಿಸಿದ್ದಾರೆ. ರಾಜಕಾರಣ ಪ್ರವೇಶಿಸಿ ಸಚಿವರಾದ ಬಳಿಕ ಅವರು ಕ್ರಿಕೆಟ್​ಗೆ ವಿದಾಯ ಹೇಳಬಹುದು ಎಂದು ನಿರೀಕ್ಷಿಸಲಾಗಿತ್ತು. ಅದರೆ, ಸಚಿವ ಸ್ಥಾನದ ಜೊತೆಗೆ ಕ್ರಿಕೆಟ್ ಆಟದಲ್ಲೂ ಮುಂದುವರಿಯುವ ಅಚ್ಚರಿ ನಿರ್ಧಾರವನ್ನು ತಿವಾರಿ ಕೈಗೊಂಡಿದ್ಧಾರೆ.

  ಇದನ್ನೂ ಓದಿ: Mohammad Hafeez: ಪಾಕಿಸ್ತಾನ್ ಆಲ್​ರೌಂಡರ್ ಮೊಹಮ್ಮದ್ ಹಫೀಜ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ

  “ನನಗೆ ಈಗಲೂ ಕ್ರಿಕೆಟ್ ಆಟದ ಬಗ್ಗೆ ಉತ್ಸಾಹ ಇದೆ. ಆಟವನ್ನ ಇಷ್ಟಪಡುತ್ತೇನೆ. ಬಂಗಾಳ ಕ್ರಿಕೆಟ್​ಗೆ ಸಾಕಷ್ಟು ಕೊಡುಗೆ ಕೊಡುವುದು ಇದೆ. ಈ ಕಾರಣಕ್ಕೆ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತಿದ್ದೇನೆ. ನಾನೇನು ಆಗಿದ್ದೇನೋ ಅದೆಲ್ಲವೂ ಕ್ರಿಕೆಟ್​ನಿಂದಲೇ” ಎಂದು ಕಳೆದ ವರ್ಷವಷ್ಟೇ ಮನೋಜ್ ತಿವಾರಿ ಮಾಧ್ಯಮವೊಂದರಲ್ಲಿ ಹೇಳಿದ್ದರು.

  ಬಂಗಾಳ ತಂಡಕ್ಕೆ ಕೋವಿಡ್ ಬಾಧೆ:

  ಪಶ್ಚಿಮ ಬಂಗಾಳ ತಂಡದಲ್ಲಿರುವ 21 ಆಟಗಾರರ ಪೈಕಿ ಆರು ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಬ್ಬ ಸಹಾಯಕ ಕೋಚ್​ಗೂ ಸೋಂಕು ಇದೆ. ಸುದೀಪ್ ಚಟರ್ಜಿ, ಅನುಸ್ತುಪ್ ಮಜುಮ್ದಾರ್, ಕಾಜಿ ಜುನೇದ್ ಸೈಫಿ, ಗೀತ್ ಪುರಿ, ಪ್ರದೀಪ್ತ ಪ್ರಮಾಣಿಕ್ ಮತ್ತು ಸುಜಿತ್ ಯಾದವ್ ಅವರು ಸೋಂಕು ದೃಢಪಟ್ಟಿರುವ ಆರು ಆಟಗಾರರು.

  ಇದರ ಬೆನ್ನಲ್ಲೇ ಬಂಗಾಳ ತಂಡದ ತರಬೇತಿ ಶಿಬಿರಗಳೆಲ್ಲವನ್ನೂ ರದ್ದುಗೊಳಿಸಲಾಗಿದೆ. ಜನವರಿ 8ರಂದು ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಿತ್ತು. ಅದೂ ಮುಂದೂಡಿಕೆ ಆಗುವ ಸಾಧ್ಯತೆ ಇದೆ.

  ಇದನ್ನೂ ಓದಿ: ಪಂತ್, ಅಯ್ಯರ್ ಬಿಟ್ಟು ಬುಮ್ರಾಗೆ ವೈಸ್ ಕ್ಯಾಪ್ಟನ್ಸಿ ಕೊಟ್ಟಿದ್ದು ಯಾಕೆ? ಇಲ್ಲಿದೆ ಕಾರಣ

  ಮುಂಬೈ ತಂಡದ ಆಟಗಾರ ಶಿವಮ್ ದುಬೇ ಅವರೂ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಬಾರಿಯ ರಣಜಿ ಟ್ರೋಫಿ ನಿಗದಿತ ಅವಧಿಯಲ್ಲಿ ನಡೆಯುತ್ತದಾ ಎಂಬುದು ಅನಿಶ್ಚಿತವಾಗಿದೆ. ಜನವರಿ 13ರಂದು ಆರಂಭವಾಗುವ ರಣಜಿ ಟ್ರೋಫಿ ಪಂದ್ಯಗಳು ಬೆಂಗಳೂರು, ಕೋಲ್ಕತಾ, ಅಹ್ಮದಾಬಾದ್, ಚೆನ್ನೈ, ಮುಂಬೈ ಮತ್ತು ತಿರುವನಂತಪುರಂನಲ್ಲಿ ನಡೆಯಲು ನಿಗದಿಯಾಗಿವೆ. ಈ ವಾರಾಂತ್ಯದೊಳಗೆ ಬಿಸಿಸಿಐ ಸಭೆ ನಡೆಸಲಿದ್ದು ಅಲ್ಲಿ ರಣಜಿ ಟ್ರೋಫಿ ಸಂಬಂಧ ಪ್ರಮುಖ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

  ಪಶ್ಚಿಮ ಬಂಗಾಳದ 21 ಆಟಗಾರರ ತಂಡ:

  ಅಭಿಮನ್ಯು ಈಶ್ವರನ್ (ನಾಯಕ), ಮನೋಜ್ ತಿವಾರಿ, ಸುದೀಪ್ ಚಟರ್ಜಿ, ಅನುಸ್ತುಪ್ ಮಜುಮ್ದಾರ್, ಅಭಿಷೇಕ್ ರಾಮನ್, ಸುದೀಪ್ ಘರಮಿ, ಅಭಿಷೇಕ್ ದಾಸ್, ಋತಿಕ್ ಚಟರ್ಜಿ, ಋತ್ವಿಕ್ ರಾಯ್ ಚೌಧುರಿ, ಅಭಿಷೇಕ್ ಪೋರೆಲ್, ಶಹಬಾಜ್ ಅಹ್ಮದ್, ಸಯನ್ ಶೇಖರ್ ಮಂಡಲ್, ಆಕಾಶ್ ದೀಪ್, ಇಶಾನ್ ಪೊರೆಲ್, ಮುಕೇಶ್ ಕುಮಾರ್, ಕಾಜಿ ಜುನೇಜ್ ಸೈಫಿ, ಶಕಿರ್ ಹಬೀಬ್ ಗಾಂಧಿ, ಪ್ರದೀಪ್ತಾ ಪ್ರಮಾಣಿಕ, ಗೀತ್ ಪುರಿ, ನೀಲಕಂಠ ದಾಸ್ ಮತ್ತು ಕರಣ್ ಲಾಲ್.
  Published by:Vijayasarthy SN
  First published: