ದುಬೈ: ನಿನ್ನೆ ಇಲ್ಲಿ ನಡೆದ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ (T20 World Cup Semifinal 2) ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿ (Australia beat Pakistan) ಫೈನಲ್ ತಲುಪಿತು. ಪಾಕಿಸ್ತಾನೀಯರು ಟಾಸ್ ಸೋತು ಮ್ಯಾಚ್ ಸೋಲುವ ಮುನ್ನ ವೀರೋಚಿತ ಹೋರಾಟವನ್ನಂತೂ ನೀಡಿದರು. ಬಹಳ ಜಿದ್ದಾಜಿದ್ದಿನ ಹಣಾಹಣಿ ಕಂಡ ಈ ಪಂದ್ಯದಲ್ಲಿ ಎಲ್ಲಾ ಬ್ಲಾಕ್ ಬಸ್ಟರ್ ಅಂಶಗಳಿದ್ದವು. ಜೊತೆಗೆ, ಅನಾರೋಗ್ಯದ ನಡುವೆಯೂ ಮೊಹಮ್ಮದ್ ರಿಜ್ವಾನ್ (Mohammad Rizwan) ಬ್ಯಾಟಿಂಗ್ ಮಾಡಿದ್ದು, ಎರಡೂ ತಂಡಗಳ ಫೀಲ್ಡರ್ಗಳು ಕೆಲ ಕ್ಯಾಚ್ಗಳನ್ನ ಡ್ರಾಪ್ ಮಾಡಿದ್ದು, ಅಂಪೈರ್ ಪೆಟ್ಟು ತಿನ್ನುವುದರಿಂದ ಸ್ವಲ್ಪದರಲ್ಲಿ ಬಚಾವಾಗಿದ್ದು, ಇತ್ಯಾದಿ ಘಟನೆಗಳೂ ನಡೆದವು. ಅದರಲ್ಲಿ ಗಮನ ಸೆಳೆದದ್ದು ಮೊಹಮ್ಮದ್ ಹಫೀಜ್ (Mohammed Hafeez) ಎಸೆದ ಒಂದು ಚೆಂಡನ್ನು ಡೇವಿಡ್ ವಾರ್ನರ್ (David Warner) ಅಟ್ಟಾಡಿಸಿ ಹೋಗಿ ಸಿಕ್ಸರ್ ಭಾರಿಸಿದ ಘಟನೆ.
ಇನ್ನಿಂಗ್ಸ್ನ 8ನೇ ಓವರ್ ಬೌಲ್ ಮಾಡಿದ ಮೊಹಮ್ಮದ್ ಹಫೀಜ್ ಅವರ ಮೊದಲ ಎಸೆತ ಕೈತಪ್ಪಿ ಹೋಗಿತ್ತು. ಡಬಲ್ ಪಿಚ್ ಬಿದ್ದ ಚೆಂಡು ನಿಧಾನಗತಿಯಲ್ಲಿ ಲೆಗ್ ಸೈಡ್ನತ್ತ ವೈಡ್ ಆಗಿ ಹೋಗುತ್ತಿದ್ದರೂ ಬ್ಯಾಟರ್ ಡೇವಿಡ್ ವಾರ್ನರ್ ವೈಡ್ನತ್ತ ಸರಿದು ಆ ಚೆಂಡನ್ನು ಸಿಕ್ಸರ್ಗೆ ಭಾರಿಸಿದರು. ಅಷ್ಟು ಸಾಲದೆಂಬಂತೆ ಅಂಪೈರ್ ಅವರು ಈ ಎಸೆತವನ್ನು ನೋಬಾಲ್ ಕೊಟ್ಟರು. ವಾರ್ನರ್ಗೆ ಮತ್ತೊಂದು ಫ್ರೀ ಹಿಟ್ ಸಿಕ್ಕಿತು.
ಆಸ್ಟ್ರೇಲಿಯಾ ತಂಡ ಆ ಸಂದರ್ಭದಲ್ಲಿ ಬಹಳ ಒತ್ತಡದಲ್ಲಿತ್ತು. ಬೌಂಡರಿಗಳು ಬರುವುದು ದುಸ್ತರವಾಗಿದ್ದವು. ಗೆಲ್ಲಲು 177 ರನ್ ಚೇಸ್ ಮಾಡುತ್ತಿದ್ದ ಆಸ್ಟ್ರೇಲಿಯನ್ನರ ಮೇಲೆ ಪಾಕ್ ಬೌಲರ್ಗಳು ಬಹುತೇಕ ಮೇಲುಗೈ ಸಾಧಿಸಿದ್ದರು. ಇಂಥ ಹತಾಶೆಯ ಸ್ಥಿತಿಯಲ್ಲಿ ಆಸ್ಟ್ರೇಲಿಯಾಗೆ ಸಿಕ್ಸರ್ಗಳು ಅಗತ್ಯವಿದ್ದವು. ಡೇವಿಡ್ ವಾರ್ನರ್ ಮಿನಮೇಷ ಎಣಿಸದೇ ಹಫೀಜ್ ಎಸೆತವನ್ನು ಅಟ್ಟಾಡಿಸಿ ಹೋಗಿ ಸಿಕ್ಸರ್ ಅಟ್ಟಿದರು.
— Shaun (@ShaunakCric) November 11, 2021
ಆದರೆ, ವಾರ್ನರ್ ಅವರ ಈ ಹೊಡೆತವನ್ನು ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಆಕ್ಷೇಪಿಸಿದ್ಧಾರೆ. ಇದು ಕ್ರೀಡಾಸ್ಫೂರ್ತಿಗೆ (Spirit of Cricket) ವಿರುದ್ಧವಾದುದು ಎಂದು ತಮ್ಮ ಟ್ವೀಟ್ನಲ್ಲಿ ಬಣ್ಣಿಸಿರುವ ಗಂಭೀರ್ ಅವರು ಆರ್ ಅಶ್ವಿನ್ (R Ashwin) ಅವರನ್ನ ಟ್ಯಾಗ್ ಮಾಡಿ ಅವರ ಅಭಿಪ್ರಾಯವನ್ನೂ ಕೇಳಿದ್ದಾರೆ.
What an absolutely pathetic display of spirit of the game by Warner! #Shameful What say @ashwinravi99? pic.twitter.com/wVrssqOENW
— Gautam Gambhir (@GautamGambhir) November 11, 2021
ಆರ್ ಅಶ್ವಿನ್ ಯಾಕೆ?
ರವಿಚಂದ್ರನ್ ಅಶ್ವಿನ್ ಅವರು ತಮ್ಮದೇ ಸ್ವಂತ ದೃಷ್ಟಿಕೋನ ಇರುವ ಬೌಲರ್. ಕ್ರಿಕೆಟ್ನ ಅಧಿಕೃತ ನಿಯಮಗಳಿಗೆ ಮಾತ್ರ ಆಟಗಾರ ಬದ್ಧನಾಗಿರಬೇಕು. ಕ್ರೀಡಾಸ್ಫೂರ್ತಿ ಎಂಬುದಕ್ಕೆಲ್ಲಾ ಆಟಗಾರರು ತಲೆಕೆಡಿಸಿಕೊಳ್ಳಬಾರದು ಎಂಬ ತತ್ವ ಅನುಸರಿಸುವವರು. ಆರ್ ಅಶ್ವಿನ್ ಬೌಲಿಂಗ್ ಮಾಡುವಾಗ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ಬ್ಯಾಟುಗಾರ ಕ್ರೀಸ್ನಿಂದ ಆಚೆ ಇದ್ದರೆ ಅಶ್ವಿನ್ ಹೆಜ್ಜೆ ನಿಲ್ಲಿಸಿ ಬೇಲ್ ಹಾರಿಸಿ ಔಟ್ ಮಾಡಿದ ನಿದರ್ಶನಗಳು ಹಲವಿವೆ. ಅಶ್ವಿನ್ ಅವರಿಗೆ ಕ್ರೀಡಾಸ್ಫೂರ್ತಿ ಇಲ್ಲ ಎಂಬಂತಹ ಟೀಕೆಗಳು ಬಹಳಷ್ಟು ಬಂದಿವೆ. ಅದರೆ, ಇದಕ್ಕೆಲ್ಲಾ ತಾನು ಬೆಲೆ ಕೊಡುವುದಿಲ್ಲ ಎಂದು ಅಶ್ವಿನ್ ಹೇಳಿದ್ದಿದೆ.
ಈಗ ಡೇವಿಡ್ ವಾರ್ನರ್ ಅವರು ಹಫೀಜ್ ಬೌಲಿಂಗ್ನಲ್ಲಿ ಹೊಡೆದ ಈ ಶಾಟ್ಗೆ ಸ್ವತಃ ಗೌತಮ್ ಗಂಭೀರ್ ಅವರು ನೇರವಾಗಿ ಅಶ್ವಿನ್ ಅಭಿಪ್ರಾಯ ಕೇಳಿರುವುದು ಕುತೂಹಲ. ಇದಕ್ಕೆ ಅಶ್ವಿನ್ ಟ್ವಿಟ್ಟರ್ನಲ್ಲಿ ಇನ್ನೂ ಉತ್ತರ ಕೊಟ್ಟಿಲ್ಲ.
ಇದನ್ನೂ ಓದಿ: Sachin Tendulkar- ತಿಂದ್ಮೇಲೆ ಪ್ಯಾಂಟ್ ಟೈಟ್; ಪತ್ನಿ ಜನ್ಮದಿನಕ್ಕೆ ಸಚಿನ್ಗೆ ಸರಸ್ ಊಟ
ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ವಾರ್ನರ್ ಅವರ ಈ ಶಾಟ್ನ ಒಂದು ಸ್ಕ್ರೀನ್ಶಾಟ್ ಅನ್ನ ಹಂಚಿಕೊಂಡಿದ್ದಾರೆ. ಅದಾಗಲೇ ಯೂಟ್ಯೂಬ್ ವಿಡಿಯೋಗಳ ಥಂಬ್ನೇಲ್ ಇಮೇಜ್ ಆಗಿ ಈ ಚಿತ್ರ ಹರಡಿದೆ ಎಂದು ಜಾಫರ್ ಹೇಳಿದ್ದಾರೆ.
No one:
YouTube thumbnails: 😅 #AUSvPAK #T20WorldCup pic.twitter.com/MNtJAWuNfS
— Wasim Jaffer (@WasimJaffer14) November 11, 2021
ವಾರ್ನರ್ ಆಟ ಮಹತ್ವದ್ದಾಗಿತ್ತು:
ಈ ಶಾಟ್ ಹೊಡೆದ್ದು ಸರಿಯೋ ತಪ್ಪೋ ಎಂಬುದಕ್ಕಿಂತ ಡೇವಿಡ್ ವಾರ್ನರ್ ಅವರ 49 ರನ್ಗಳ ಇನ್ನಿಂಗ್ಸ್ ಆಸ್ಟ್ರೇಲಿಯಾ ಗೆಲುವಿನ ದಾರಿಯನ್ನ ಸುಗಮ ಮಾಡಿಕೊಟ್ಟಿದ್ದಂತೂ ಹೌದು. ಆವರ ಸ್ಫೋಟಕ ಬ್ಯಾಟಿಂಗ್ ಕಾರಣದಿಂದಾಗಿ ಆಸ್ಟ್ರೇಲಿಯಾ 10 ಓವರ್ನಲ್ಲಿ 89 ರನ್ ಕೂಡಿಹಾಕಲು ಸಾಧ್ಯವಾಯಿತು. ವಾರ್ನರ್ ಅವರ ಆ ಶಾಟ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯೂ ಬಂದಿರುವುದು ಗಮನಾರ್ಹ.
ಇದನ್ನೂ ಓದಿ: PAK vs AUS- ದುಬೈನಲ್ಲಿ ವೇಡ್ ಅಲೆ; ಕೆಂಗೆಟ್ಟ ಪಾಕಿಸ್ತಾನ; ಫೈನಲ್ಗೆ ಆಸ್ಟ್ರೇಲಿಯಾ
ವೇಡ್, ಸ್ಟಾಯ್ನಿಸ್ ಮಿಂಚು:
ವಾರ್ನರ್ ಔಟ್ ಆದ ಬಳಿಕ ಒಂದು ಹಂತದಲ್ಲಿ ಆಸ್ಟ್ರೇಲಿಯಾ 96 ರನ್ಗೆ 5 ವಿಕೆಟ್ ಕಳೆದುಕೊಂಡಿತು. 46 ಬಾಲ್ನಲ್ಲಿ 81 ರನ್ ಗಳಿಸುವ ಒತ್ತಡದ ಸಂದರ್ಭ ಎದುರಾಯಿತು. ಆಗ ಜೊತೆಯಾದ ಮಾರ್ಕಸ್ ಸ್ಟೋಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪಾಕಿಸ್ತಾನದ ಬೌಲಿಂಗ್ ಸೆನ್ಸೇಶನ್ ಎನ್ನಲಾದ ಶಾಹಿನ್ ಶಾ ಅಫ್ರಿದಿ ಅವರ ಬೌಲಿಂಗ್ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿ ವೇಡ್ ಅವರು ಗೆಲುವಿನ ರನ್ ಕೂಡ ಗಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ